ಒಟ್ಟು 599 ಕಡೆಗಳಲ್ಲಿ , 83 ದಾಸರು , 562 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಮವೆ ಗತಿಯೆನಗೇ ಕೇಶವ ನಿನ್ನ ಪ್ರೇಮವೆ ಗತಿಯೆನಗೇ ಪ ರಾಮ ನಿನ್ನಯ ನಾಮವ ಸುಮತಿ ಸ್ಮರಿಸಲು ಭೂಮಿಗಭಯವಿತ್ತ ಸ್ವಾಮಿಯೇ ನಿನ್ನ ಅ.ಪ. ತರುಣ ಪ್ರಹ್ಲಾದ ನನೀಲ ದ್ರೌಪದಿ ಮತ್ತೆ ದುರುಳ ವಾಲ್ಮೀಕ ವಿಭೀಷಣರನ್ನು ಕಿನ್ನರ ಮರುತಾತ್ಮಜ ಋಷಿಗಳ ಪೊರೆದಂಥ ನರಹರಿ ಕೇಶವನೆಂಬ 1 ಇಂತೀ ಭಕ್ತರ ಸಲಹಿದ ಪರಿಯ ಸತತ ಭಜಕರ ಪೊರೆವ ಶ್ರೀಧರನ ಕಂತುಪಿತನ ನಾಮ ಸ್ಮರಿಸುವ ದಾಸರ ಅಂತಾರಾತ್ಮವ ಶುದ್ಧಿಗೊಳಿಸುವ ಹರಿಯ 2 ಅಂತ್ಯಕಾಲದಲಿ ಬಂದೊದಗುವ ಪರಿಯ ಕುಂತಿಯ ಸುತರನ್ನು ಸಲಹಿದ ಪರಿಯ ಸಂತತ ದೂರ್ವಾಪಟ್ಟಣದಲ್ಲಿ ಮೆರೆಯುವ ಅಂತ್ಯಾದಿರಹಿತ ಶ್ರೀ ಚನ್ನಕೇಶವನ 3
--------------
ಕರ್ಕಿ ಕೇಶವದಾಸ
ನಾರದ ದೇವಋಷಿಗಳ ನೋಡಿದೆ ಹರಿಪಾದ ಸೇವಕರ ಕೊಂಡಾಡಿದೆ ದೇವಋಷಿ ಹರಿಪಾದ ಸೇವಕರು ನಮ್ಮಾ ್ವಸು- ದೇವಸುತನಂಕದಲ್ಲುದಿಸಿದುತ್ತಮರಿವರು ಪ ವಾಣಿಪತಿಪಿತನ ಚರಣಾಂಬುಜ ಸೇವೆ ಮಾಡೋ ಜನರಲ್ಲೆ ಕರುಣ ಜಾಣ ನಾರಂದ ಜಗದೀಶನ ಗುಣಮಹಿಮೆ ವೀಣಾಪಾಣಿಗಳಿಂದ ಸ್ತುತಿಸಿ ಕೊಂಡಾಡುವರು 1 ಪ್ರೀತಿಯಿಂದ್ಹರಿಯ ನೋಡಿ ಸುರಪಾರಿ- ಜಾತವನು ತಂದು ನೀಡಿ ಮಾತುಳಾಂತಕನ ಮಡದಿ(ಯ)ರಿಗೆ ಕಲಹವನ್ಹೂಡಿ ಭೂತಳಕೆ ಸುರತರುವ ತರಿಸಿದರ್ಹರಿಕರಗಳಿಂದ2 ದಾಸಿಯಲ್ಲುದಿಸಿ ವಿಷಯಗಳು- ದಾಶ(ಸೀ?)ನವ ಮಾಡಿ ಬ್ಯಾಗ ಅಸುರಾಂತಕನ ಅತಿಭಕ್ತಿಯಿಂದಲಿ ಭಜಿಸಿ ಭೀ- ಮೇಶಕೃಷ್ಣನ ಗುಣವ ಪಾಡಿ ಕೊಂಡಾಡುವರು3
--------------
ಹರಪನಹಳ್ಳಿಭೀಮವ್ವ
ನಾರಾಯಣ ನರಹರಿ ನಾರದಪ್ರಿಯ ನರಸುರಮುನಿ ವರದಾಯಕ ಧ್ರುವ ವೇದ ಕದ್ದೊಯ್ದವನ ಮರ್ದಿಸಲಿಕ್ಕೆ ಸಾಧಿಸಿ ಬಂದ್ಯೊ ಮಚ್ಛರೂಪನೆ ಮಾಧವ ನೀ ಬಂದು ಕೂರ್ಮನಾಗಿ ನಿಂದು ಮೇದಿನಿಯ ಭಾರವ ತಾಳಿದೆ 1 ಧರೆಯ ಕದ್ದಸುರನ ಕೋರದಾಡಿಂದ ಸೀಳಿ ವರಾಹರೂಪಬಂದು ದೋರಿದೆ ಹಿರಣ್ಯಕಶ್ಯಪ ವಿದಾರಣ ಮಾಡಿ ನೀ ತರಳ ಪ್ರಲ್ಹಾದನ ರಕ್ಷಿಸಿದೆ 2 ವಾಮನ ರೂಪವದೋರಿದೆ ನೇಮದಿಂದಲಿ ಪಿತನಾಜ್ಞೆಯ ನಡೆಸಲು ಸ್ವಾಮಿ ಭಾರ್ಗವರೂಪ ತಾಳಿದೆ 3 ದೇವತೆಗಳ ಸ್ಥಾಪಿಸಲಿಕ್ಕೆ ಬಂದು ದೈತ್ಯ ರಾವಣನ ಕೊಂದ್ಯೊ ಶ್ರೀರಾಮ ನೀ ದೇವಕಿ ಉದರದಲಿ ಜನಿಸಿ ಬಂದು ಕೃಷ್ಣ ಗೋವಳರನ್ನು ಪ್ರತಿಪಾಲಿಸಿದೆ 4 ಪತಿವ್ರತೆಗಳ ವ್ರತ ಅಳಿಯಲಿಕ್ಕಾಗಿ ಬಂದು ಸುಳಹುದೋರಿದೂ ಬೌದ್ದ್ಯರೂಪನೆ ಹತ್ತಿ ಕುದರಿಯ ಒತ್ತಿ ಆಳಲಿಕ್ಕೆ ಮತ್ತೆ ಬಂದೆಯ ಕಲ್ಕಿರೂಪನೆ 5 ಹತ್ತವತಾರ ಧರಿಸಿ ಬಂದು ಕ್ಷಿತಿಯೊಳ ಪತಿತರ ಪಾವನಗೈಸಿದೆ ಭಕ್ತಜನರುದ್ದರಿಸಲಿಕ್ಕೆ ಬಂದು ಶಕ್ತಿಪರಾಕ್ರಮದೋರಿದೆ 6 ಸಾವಿರ ನಾಮದೊಡೆಯ ಸ್ವಾಮಿ ನೀ ಬಂದು ಭಾವಿಸುವರೊಡನೆ ಕೂಡಿದೆ ಭವಭಂಧನ ತಾರಿಸಿ ಮಹಿಪತಿಯ ಪ್ರಾಣ ಪಾವನ ನೀ ಮಾಡಿದೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾರಾಯಣಯೆಂಬೊ ನಾಮವನು ನೆನೆದರೆ ಹಾರಿ ಹೋಹುದು ಜನ್ಮಜನ್ಮದ ಪಾಪಗಳು ಮುಕ್ತಿದೋರಿಸು ಮುರಾರಿ ಪ. ಸಕಲವೇದ ಪುರಾಣ ಶಾಸ್ತ್ರಗಳ ತಿಳಿದೋದಿ ಭಕ್ತಿಯಲಿ ತಾಯತಂದೆಯ ಚಿತ್ತವಿಡಿದವರ ಸುಕುಮಾರನೆನಿಸಿಕೊಂಡು ಪ್ರಕೃತಿಯಲಿ ಹೋಮಕ್ಕೋಸ್ಕರ ಸಮಿದೆ ತರಹೋಗಿ ದುಷ್ಕøತ್ಯದ ಫಲದಿಂದ ಅಂತ್ಯಜಳನು ಕಂಡು ಕಾ- ಅರಿತರಿಯದೆ 1 ನಿಲ್ಲು ನಿಲ್ಲೆಲೆ ಕಾಂತೆ ನಿನಗೊಲಿದೆ ನೀನಾರು ಸೊಲ್ಲಿಸೆನ್ನೊಡನೆ ಸತಿಯರ ಕುಲಕೆ ಕಟ್ಟಾಣಿ ಹುಲ್ಲೆನೋಟದ ಭಾವಕಿ ಸಲ್ಲಿಲಿತ ಗಾತ್ರೆ ಸೊಕ್ಕಾನೆ ಮೆಲ್ಲಡಿಯವಳೆ ಮಲ್ಲಿಗೆಗಂಧಿ ಮದನನ ಕೈಯ ಮಸೆದಲಗೆ ಸೆರಗ ಪಿಡಿದ 2 ವಿಪ್ರ ಕೇಳು ನಾವು ಕುಲಹೀನರೆಮ್ಮನೆಯ ಹೊಲಸಿನ ಮಾಂಸ ಗೋವಿನ ಚರ್ಮದ್ಹಾಸಿಕೆಯು ಹಿಂಡು ಬಲು ಘೋರ ಎನಿಸಿಪ್ಪುದು ಬಲೆಗೆ ಸಿಕ್ಕಿದ ಪಕ್ಷಿ ಬೇಂಟೆಯವಗಲ್ಲದೆ ಕುಲವ ಕೂಡುವದೆ ಕಾಮಿನಿ ಕೇಳು ನಿನ್ನೊಡನೆ ಛಲವೊಂದೆ ಎನಗೆ ಎಂದ3 ವ್ಯರ್ಥ ಎನ್ನೊಡನೆ ಮಾತ್ಯಾಕೆಲೊ ವಿಪ್ರ ಚಿತ್ತವೆನ್ನಲ್ಲಿ ಇದ್ದರೆ ಹೋಗಿ ನೀ ಎನ್ನ ನಿನಗೊಲಿವೆನೆಂ[ದಳು] ಅತ್ತ ಕಾಮಿನಿಯ ಒಡಗೂಡಿ ಆಕೆಯ ಪಿತನ ಹತ್ತಿರಕೆ ಹೋಗಿ ಕೇಳಿದರಾತನಿಂತೆಂದ ಇಂಥ ಮೊತ್ತಕೊಳಗಾಗದಿರೊ 4 ಆಗದಾಗದು ಎನ್ನ ಕುಲಬಂಧು ಬಳಗವÀನು ನೀಗಿ ನಿಮ್ಮೊಡನೆ ಕೂಡುವೆನೆಂಬ ಮತವೆನಗೆ ನಾಗಭೂಷಣನ ಪಣೆಗಣ್ಣಿಂದ [ಲುರಿದನ] ಬಾಣತಾಗಿತೆನ್ನೆದೆಯನೆಂದ ಕೂಗಿ ಹೇಳಿದೆ ನಿನ್ನ ಕುಲವಳಿಯದಿರೆಂದು ಹೋಗಿ ಕೂಡೊ ಹೆತ್ತ ತಾಯಿತಂದೆಗಳ ಅದು ಆಗದಿದ್ದರೆ ಆಚೆ ಮನೆಯೊಳಗೆ ನೀವಿಬ್ಬರಲ್ಲಿರಿ ಹೋಗ್ಯೆಂದನು 5 ಹಾಲಂತ ಕುಲವ ನೀರೊಳಗದ್ದಿಪೂರ್ವದ ಶೀಲವನಳಿದು ಸತಿಯೊಡಗೂಡಿ ತಾನು ಚಾಂ- ಡಾಲತಿಗೆ ಹತ್ತುಮಕ್ಕಳ ಪಡೆದು ತಾನವರ ಲೀಲೆಯನು ನೋಡಿ ಹಿಗ್ಗಿ ಆಲಂಬನದಲಿ ಅಜಾಮಿಳನು ಇರುತಿರಲಾಗ ಕಾಲ ಬಂದೊದಗಿ ಕರೆಯಿರೊ ಪಾತಕಿಯನೆಂದು ಯಮನಾಳುಗಳು ಇಳಿದರಾಗ 6 ಎಡೆಗೈಯ ಪಾಶಗಳು ಹಿಡಿದ ಚಮ್ಮಟಿಗಳು ಒಡನೊಡನೆ ಚವುರಿಗಳು ವಜ್ರದ ಮೋತಿಯ [ಕಾಗಡಿ] ಘುಡು‌ಘುಡಿಸುತಲಿ ನಿಂತರು ಕಡುಹಸುಳೆ ಕಂದನಿವನೆಷ್ಟು ಅಂಜುವನೆಂದು ಗಡಗಡನೆ ನಡುಗಿ ಕಂಗೆಟ್ಟು ಅಜಾಮಿಳ ತಾನು ಲಾಲಿಸಿದ ಸ್ವಾಮಿ 7 ಮರಣಕಾಲದಿ ಶ್ರೀಹರಿಯೆಂಬ ನಾಮವನು ಹರಿವುದಾಕ್ಷಣದಲ್ಲಿ ಕರುಣದಿಂದಜಮಿಳನ ಕರೆತನ್ನಿರಿಲ್ಲಿಗೆಂದ ಉರದೊಳೊಪ್ಪುವ ತುಳಸಿದಂಡೆ ಪೀತಾಂ- ಬರವು ಗದೆ ಶಂಖ ಚಕ್ರ ದ್ವಾದಶನಾಮವನು ಧರಿಸಿ ಕರವೆತ್ತಿ ಅಂಜ ಬ್ಯಾಡೆಲೊ ಎಂದು ಹರಿದಾಸರೈ ತಂದರು 8 ಪುಂಡರೀಕಾಕ್ಷನ ಭೃತ್ಯನ ಭಾಧಿಸುವ ಲಂಡರಿವರ್ಯಾರು ನೂಕಿ ನೂಕಿರೊ ಎಂದು ಯಮನ ದಂಡವನು ಮುರಿದು ಬಿಸಾಡಿ ನಿಮ್ಮಸುವ ಹಿಂಡುವೆವು ಎಂದರಾಗ ಕಂಡ ಹರಿದೂತರಿಗೆ ಯಮನಾಳುಗಳೆರಗಿ ಭೂ- ಮಂಡಲದೊಳಗೆ ಎಮ್ಮೊಡೆಯ ಯಮಧರ್ಮನ ಉದ್ದಂಡರಹುದೆಂದರಾಗ 9 ತಂದೆ ಕೇಳೆಮ್ಮ ಬಿನ್ನಪವ ಲಾಲಿಸಿ ನೀವು ಒಂದು ದಿನ ಹರಿಯೆಂಬ ಧ್ಯಾನವನರಿಯನು ನಾವು ಬಂದೆಳೆಯಲಾತ್ಮಜನ ನಾರಗಾ ಎನಲು ಕುಂದಿತೆ ಇವನ ಪಾಪ ಹಂದಿಕುರಿಗಳಿರ ನಿಮಗಿಷ್ಟು ಮಾತುಗಳ್ಯಾಕೆ ನಿಂದಿರದೆ ಹೋಗ್ಯೆಂದು ನೂಕಿ ಯಮನಾಳ್ಗಳನು ತಂದಪೆವು ದಿವ್ಯ ಪುಷ್ಪಕವನೆಂದೆನುತ ಬಂದರಾ ವೈಕುಂಠಕೆ 10 ಎದ್ದು ಅಜಾಮಿಳನು ಮೂರ್ಛೆಯ ತಿಳಿದು ಎಚ್ಚೆತ್ತು ಬಿದ್ದ ಕಾಯವನು ಭಾದಿಸಿದವರ್ಯಾರು ಉ- ಪದ್ರವನು ಬಿಡಿಸಿದ ದಿವ್ಯ ಸ್ವರೂಪ[ದ] ಸುಧಾತ್ಮರಾರು ಎಂದ ಮದ್ಯಪಾನವ ಮಾಳ್ಪ ಹೆಂಗಸಿನ ಒಡನಾಡಿ ಅದ್ದಿದೆ ನೂರೊಂದು ಕುಲವ ನರಕದೊಳೆಂದು ತಾನತಿ ಮರುಗುತ 11 ವಿಪ್ರ ಕುಲದಲ್ಲಿ ಪುಟ್ಟಿ ವೇದಶಾಸ್ತ್ರವನೋದಿ ಮುಪ್ಪಾದ ತಾಯಿ-ತಂದೆಯ ಬಿಟ್ಟು ಬುಧÀ ಜನರು ಮದನ ಬಾಧೆಗೆ ಸಿಲುಕಿ ದುಷ್ಟ ತಾಪವ ಪೊತ್ತೆ ಜನನಿಂದಕನಾದೆ ಅಪ್ರತಿಮ ಅನಂತಪಾತಕಿ ಭುವನದಲಿ ತಪ್ಪಲಿಲ್ಲವೆ ಪಣೆಯ ಬರದ ಬರಹಗಳು ಇನ್ನು ಭಾಪುರೆ ವಿಧಿ ಎಂದನು 12 ಇಷ್ಟು ದಿನ ಹರಿಯೆಂಬೊ ನಾಮವರಿಯೆನು ನಾನು ದುಷ್ಟಯವÀುದೂತರನು ಕಂಡು ಚಂಡಾಲತಿಗೆ ಪುಟ್ಟಿದ ಮಗನ ನಾರಗನೆಂದು ಕರೆದರೆ ಮುಟ್ಟಿದವೆ ನಿಮಗೆ ದೂರು ಇಷ್ಟು ಅವಗುಣಗಳನು ಎಣಿಸಲಿಲ್ಲವೆ ಸ್ವಾಮಿ ಎಷ್ಟು ಕರುಣಾಕರನೊ ಎಂದು ಸ್ನಾನವ ಮಾಡಿ ಬಿಟ್ಟು ತಾಪತ್ರಯವ ಭಯ ನಿವಾರಣ ಹರಿಯ ಗಟ್ಯಾಗಿ ಧ್ಯಾನಿಸಿದನು 13 ತನ್ನ ನಾಮವ ನೆನೆವ ಭಕ್ತರಾದವರೆಲ್ಲ ಧನ್ಯರಿವರಹುದೆಂದು ಜಗವರಿಯಬೇಕೆಂದು ಉನ್ನತವಾದ ಪುಷ್ಪಕವ ತಾ ಕಳುಹಿದ ಪನ್ನಗಾರಿವಾಹನ ಅನ್ಯಾಯ ಇವಗಿಲ್ಲ ಅವನಿಯೊಳಗುತ್ತಮನು ಎನ್ನಯ್ಯ ಏಳೆಂದು ಕೈಲಾಗವÀನು ಕೊಡಲು ಉನ್ನತವಾದ ಪುಷ್ಪಕವೇರಿ ಅಜಮಿಳನು ಹರಿಯ . ಸನ್ನಿಧಿಗೆ ನಡೆದ 14 ಜಲಜನಾಭನ ದಿವ್ಯನಾಮವನು ನೆನೆದರೆ ಕುಲಕೋಟಿ ದೋಷಗಳಿಲ್ಲ ಕುಂದುಗಿಂದುಗಳಿಲ್ಲ ಸಲುವರಲ್ಲೆಂದ ಯಮನು ನಲವಿಂದ ಹೆಳವನಕಟ್ಟೆ ಶ್ರೀ ವೆಂಕಟನ ನೆಲೆಯರಿತು ನೆನೆದವರ್ಗೆಮನ ಭಾದೆಗಳಿಲ್ಲ ಸಾಯುಜ್ಯ ಪದವೀವ ಬಲು ನಂಬಿ ಭಜಿಸಿ ಜನರು 15
--------------
ಹೆಳವನಕಟ್ಟೆ ಗಿರಿಯಮ್ಮ
ನಿಜ ದೇವನೇ ಕೇಶವಾ ತ್ರಿಜಗಧೀಶಾ ಭಜಿಸುವೆ ತರಳ ದಾಸಾ ಪ ಅಜಸುರಾರ್ಚಿತ ಸುಗುಣರೂಪನೇ ನಿಜ ಶ್ರೀ ಲಕ್ಷ್ಮೀ ಸೇವಿತ ಹರಿಯೆ 1 ಸುಜನ ಪಾಕನಿಂದ ಚರಣವ ಭಜಿಸುವೆನು ಶ್ರೀ ಜಾನ್ಹಕಿ ರಮಣಾ 2 ನಿರುತ ದಾಸರ ಕಾಯೋಪಿತನೇ ಸಿರಿ ಚನ್ನಕೇಶವ ಮಾದವನೇ 3
--------------
ಕರ್ಕಿ ಕೇಶವದಾಸ
ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ನಿಂತ ಕಾರಣ ಪೇಳು ಹಣುಮಂತರಾಯಾ ಪ ಶಾಂತನಾಗಿ ವಿಶ್ರಾಂತಿಯಗೋಸುಗಕಂತುಪಿತನ ಮಹಮಂತ್ರವ ಜಪಿಸುತಅ.ಪ. ದಾಶರಥಿಯ ದೂತಾ ದಶಮುಖಪುರವಸ್ವಾಹೇಶಗೆ ದಾತಾ ಗುರುತು ಕೊಟ್ಟು ದಾತನ ಎದುರಿಗೆ ಬಂದು1 ಶಂಖ ಕುಲದಲಿ ಜನಿಸಿ ನಿಃಶಂಖದಿ ಖಳರನು ವರಿಸಿ ಶಂಕರಾದಿನುತ ಪದ ಶಂಬಧರನ ಕಾಜಲ್ಕದಿ ಸ್ಮರಿಸುತ 2 ಮೂರನೇ ರೂಪವ ಧರಿಸಿ ಧರೆಯೊಳು ಬಂದು ಅವತರಿಸಿ ಬೋಧಿಸಿ ಮಾರ್ಗವ ತೋರಿಸಿ ತಂದೆವರದಗೋಪಾಲವಿಠ್ಠಲನಸೇವಿಸಿ 3
--------------
ತಂದೆವರದಗೋಪಾಲವಿಠಲರು
ನಿಂತು ಲಾಲಿಸಲಿ ರಾಧಾ ಕಂತುಪಿತನ ಪದನಾದ ಪ ಬಲದ ಕಾಲೆಡದೊಳಿಟ್ಟು ಇಳೆಗೆ ಎಡದ ಪದ ಕೊಟ್ಟು ಒಲಿದು ಮುರಲಿ ಮುಖವಿಟ್ಟು ಉಲಿಯೆ ಮಧುರ ರವ ಪುಟ್ಟಿ ಬಲಬಾಲರೆಲ್ಲ ನಲಿಯುತಲಿಗೋ ಪೂರ್ವ ಮಳೆಗರೆವುತಲಿ ನಾನೆಂತು ಬಣ್ಣಿಸಲಿ ಹರಿಯ ಲೀಲೆಗಳ ಉಲಿಯುವ ಶ್ರುತಿನಾದ ಬಲದ ಸಿಂಹದ ನಾದ ಸಲೆ ವಟುವಿನ ನಾದ ಬಲವಾದ ಪರಶುವಿನತಿನಾದವು ಯಶೋಜಿತ ನಾದವು ಬಲು ವಾಜಿನಾದಗಳ್ ಕೊಳಲಲಿ ಕೇಳುತ ನಿಂದು 1 ಪಾಲು ಮೊಸರುಗಳನುಂಡು ಲೀಲೆಯಾಡುತಿರೆ ಕಂಡು ಬಾಲೆಯರತಿ ಖತಿಗೊಂಡು ಗೋಳಿಡುತಲೆ ಹಿಂಡಿಂಡು ಎಮ್ಮಾಲಯದೊಳು ಬೆಣ್ಣೆ ಮೆಲುತಲಿ ಸಣ್ಣ ಬಾಲೆರಿಟ್ಟ ಪಾಲ್ ಕುಡಿವುತಲಿ ಕೆಳಮೇಲಾಗಿ ಧದಿಯನು ಸುರಿವುತಲಿ ಜಲದೊಳು ಧುಮುಕಿದ ಕಲಕದ ಚಲವಿಡಿದ ಬಲುಬೇರ ಕೋರೆಯಿಂದಗಿದು ತಿಂದಾ ಒಲಿದು ಕಂಬವ ನೋಡಿದಾ ಬಲಿಗೆ ಬಾಯಿ ತೆರೆದಾ ಮೊಲೆ ಕೊಟ್ಟ ಜನನಿಯ ಶಿರಕಡಿದಾ ಕುಲಹೀನೆಂಜಲ ತಿಂದಾ ಖಳಪೂತನಿಯಳಿದಾ ತಿಳಿಗೆಟ್ಟು ಮೈಬಟ್ಟೆ ಕಳೆದೊಗೆದಾ ಬಲು ಮಿಂದೇರಿ ವಾಜಿ ಭಟರ ಬೆನ್ನಟ್ಟಿದಾ ನಿಂತು 2 ಸುರಿವುತಿರಲು ಮಳೆ ಭಾರಿ ಚರಿವಾವ್ಗಳು ಹೌಹಾರಿ ಮರೆಯ ಕಾಣದೆಲೆ ಹೋರಿ ಕರವುತಿರಲು ಮುರವೈರಿ ಕಿರಿಬೆರಳಲಿ ಕೊಡೆವಿಡಿವುತಲಿ ಸಣ್ಣ ಕರಗಳಾವುಗಳ್ ಸಲಹುತಲಿ ಮುದ ಗೋವುಗಳ ನೋಡುತಲಿ ನಾನೆಂತು ಬಣ್ಣಿಸಲಿ ಶಿರಿವರನಾನಂದ ಭರದಿ ವೇದವ ತಂದ ನೆರೆಶೈಲನೆಗಹಿದ ಧರಾಲಲನೀಯ ನಾಸದಿ ಪಿಡಿದ ಸುರನದಿ ದ್ವಿಜರಿಗೆ ದಾನವ ಮಾಡಿದಾ ಹರಿಗೆ ಯಜಪದ ನೀಡ್ದಾ ಗುರುಪುತ್ರರನೆ ಪಡಿದಾ ಹರಿಯೇರಿ ಮೆರೆವುದು ನಿಂತು 3
--------------
ನರಸಿಂಹವಿಠಲರು
ನಿತ್ಯ ಭೂತಗಳಟ್ಟಿ ಕಿಂಕರರನು ಸಲಹುತಲಿ ಪಂಕಜಾಕ್ಷನ ಪಾಡಿ ಪೊಗಳುವೆ ಕೊಡಗಿಯ ಶಂಕರನಾರಾಯಣರ ಪ ಪಡುವಿನ ಗಡಲಿನ ತಡಿಯಲಿ ವಿಪ್ರನ ಗಡಣದ ನಡುವೆ ಕಾನನದಿ ಒಡೆದುಮೂಡಿದ ದೇವರೊಡೆಯನ ಕೊಡಗಿಯ ಮೃಡನಾರಾಯಣರ ವರ್ಣಿಸುವೆ1 ದರ್ಪನ ವೈರಿಯಪಿತನ ತಪ್ಪದೆ ನಂದಿ ಗರುಡವಾಹನನಾ- ಗಿಪ್ಪದೇವನ ಕಂಡೆನಿಂದು 2 ಮಂಜುಳ ಸರ್ಪಾಭರಣನ ಕಂಡೆನು ಮಂಜುಳ ಹಾರಪದಕನ ಕುಂಜರ ಚರ್ಮವು ಪೊಂಬಟ್ಟೆವಸನವು ಕೆಂಜೆಡೆ ಮಕುಟದ ಪ್ರಭೆಯು 3 ಪುರಹರ ಗೌರೀಶಲಕ್ಷ್ಮೀಶ ಗಿರಿವಾಸ ವೈಕುಂಠವಾಸ ವರಚಕ್ರ ತ್ರಿಶೂಲಧರ ತ್ರಾಹಿಯೆಂಬ ಮ- ತ್ರ್ಯರ ಮನ್ನಿಸುವ ಕರುಣದಲಿ 4 ವ್ರತದಿಂದ ನೋಡುವ ಯತಿಗಳ ಸಂದಣಿ ಶ್ರುತಿ ಪುರಾಣಗಳರ್ಥಿ ಕೊಡಗಿಯ ದೇವನ ಮತಿಗೆ ಮಂಗಳವೀವುತಿದಿದಕೊ 5 ರಂಗಪೂಜೆಗಳ ಸಂದಣಿ ಒಂದು ಕಡೆಯಲ್ಲಿ ಮಂಗಳಾರತಿಯ ಸಂಭ್ರಮವು ತುಂಗವಿಕ್ರಮನ ಸ್ತುತಿಸಿ ಪಾಡಿ ಪೊಗಳುವ ಹಿಂಗದೆ ನೋಡುವ ಜನರು 6 ಅಯನದ ಶ್ರೀಬಲಿ ದೀಪದುತ್ಸಹಗಳು ಭುವನದ ನಡುವೆ ಕಾನನದಿ ಹಯವದನನೆಂಬ ಕೊಡಗಿಯ ದೇವನ ನಯದಿ ನರರಿಗೆ ತುತಿಸಲಿನ್ನಳವೆ 7
--------------
ವಾದಿರಾಜ
ನಿನ್ನ ನಾ ಬಿಡುವನಲ್ಲಾ ಗೋಪಾಲಾ ನಿನ್ನ ಬಿಡುವನಲ್ಲ ಎನ್ನ ರಕ್ಷಿಸದಿರೆ ಪನ್ನಗಾದ್ರಿಯವಾಸ ಪರಮಪುರುಷರಂಗಾ ಪ ನಾಗಾರಿ ರೂಪನಾದ ಪರಮಾನಂದ ಭೋಗಿಶಯನ ವಿನೋದ ಭಕ್ತವತ್ಸಲ ಸಾಗರನಳಿಯ ಭೂಸುರಧೇನು ಪೋಷಕ ಭಾಗವತರ ಪ್ರಿಯಾ ಯೋಗಿಗಳರಸ1 ಜಲಜಾಕ್ಷ ನಳಿನನಾಭ ಜಾನಕೀರಮಣ ಜಲನಿಧಿಶಯನ ದೇವಾ ಜಗದೋದ್ಧಾರ ಜಲಜಬಾಂಧವ ಕುಲ ಶ್ರೇಷ್ಠಾದಿ ಮೂರುತಿ ಒಲಿದೆನ್ನ ದುಷ್ಕರ್ಮನಳಿದು ಪೋಷಿಸದಿರೆ 2 ಶಂಬರಾರಿಯ ಪಿತನೆ ಜಗನ್ನುತ ಕುಂಭಿನೀಧವನಾದನೇ ಗೋವಿಂದ ಶ್ರೀ ಕಂಬುಕಂಧರ ಕೃಷ್ಣಾ ಅಂಬುಧಿ ಬಂಧಿಸಿ ಅಂಬುಜಾಕ್ಷಿಯ ತಂದ ಹರಿ 'ಹೆನ್ನ ವಿಠ್ಠಲಾ’ 3
--------------
ಹೆನ್ನೆರಂಗದಾಸರು
ನಿನ್ನ ಬಗೆ ಬಗೆ ರೂಪಗಳ ಉರಗ ಶಯ್ಯ ರಂಗಯ್ಯಾ ಪ ದಿತಿಸುತ ಸೋಮಕ ಶ್ರುತಿತತಿ ಕದ್ದೊಯ್ಯೆ ಶತಧೃತಿ ತಲೆವಾಗಿ ಚತುರತೆÉಯಿಂದಲಿ ಮತಿಪತಿ ಮತ್ಪಿತಾ ಪ್ರತಿಪತಿ ಕಲ್ಪಕ್ಕೆ ಗತಿಸ್ಥಿತಿ ನೀನೆಂದು ಅತಿ ತುತಿಸಲು ಸಂ ತತ ಹಿತ ಹಿರಿದಾಗಿ ಪ್ರತಿಯಿಲ್ಲವೆನಿಸಿದ್ದು ರಿತ ಪುಂಜದಾನವನ ತರಿದೊಟ್ಟಿ ಮತ್ಸ್ಯಾಕೃತಿಯಾ ಜಯ ಜಯವೆನುತಿರೆ ತ್ರಿಭುವನಾ 1 ಕೃತು ಭುಕು ದೇವಾರಿತತಿ ಸಂಗತಿಯಿಂದ ಮತಿ ಏಕರಾಗಿ ಸಂಮತದಿಂದ ನಡೆದು ಪ ರ್ವತವ ಕಿತ್ತಿ ತಂದು ಉ ನ್ನತವಾದ ಕ್ಷೀರೋದ ಪತಿಯೊಳಗಿಟ್ಟು ಅತಿಬಲದಿಂದ ನಗುತ ಮಥಿಸಲು ಮಹಾ ಕ್ಷಿತಿಧರ ಮುಣಗಿ ಪೋಗೆ ಹಾಹೋ ಎಂದು ಗತಿಗೆಟ್ಟ ಯೆಲ್ಲ ಕೂಗೆ ಕೇಳುತ ಬಂದು ಅತುಳ ಕಮಠನಾಗಿ ಪೊತ್ತೆ ಭಳಿರೆ ಮಿಗೆ2 ಗತಮಂದ ಮಾರೀಚ ಸುತ ಹೇಮನೇತುರಾ ಕ್ಷಿತಿಯ ಕದ್ದೌಯಿದು ದುರ್ಮತಿಯಿಂದ ವಿಬುಧÀರ ಖತಿಗೊಳಾಗೈಸಿ ಹಿಗ್ಗುತಲವ ತಿರುಗುತ್ತ ಪ್ರತಿಕೂಲನಾಗಿ ಸುವ್ರತಗಳ ಕೆಡಿಸುತ್ತ ಮಿತಿ ಮೀರಿ ಪಾತಾಳ ವಾಸವಾಗಿರಲು ಅದ್ಭುತ ಕಿಟಿ ರೂಪವಾಗಿ ರುತಲಿರೆ ಸತತಮರರು ಪಾಡೆ ಏನೆಂಬೆ ಶಿರವಾಗಿ 3 ಚತುರ ಮೊಗನವರನುತಿಸಿ ಪಡೆದು ಪ್ರಾಗ ರ್ವಿತನಾಗಿ ನೀಲಲೋಹಿತನ ಭಕುತಿಯಿಂದ ತತುವೇಶಜನರ ಶಕುತಿ ಕುಂದಿಸಿ ತಾನೆ ರತುನ ಗರ್ಭದೊಳು ದೇವತಿಯೆಂದು ಸಾರಿ ಬಾ ಳುತ್ತ ತನ್ನಾತ್ಮಜ ಭಾಗವತನ ಭಾಧಿಸಿ ಶಿರಿ ಗತಿಯೆಂದು ವಂದಿಸಲೆ ಕಂಭದಿ ಬಂದು ಸುರರು ಪೂಮಳೆ ಚೆಲ್ಲೆ 4 ಸುತಳ ಲೋಕಕ್ಕೀಶ್ವರ ಶತಕೃತ ಕವಿಯ ರಚಿಸಿ ಸಿತನಾಗಿ ರಥ ನನ್ನ ಚ್ಯುತ ಪದಸ್ಥನ ಮಾಡಿ ಸತುವ ಮಾರ್ಗದಲಿ ಪೂರಿತ ಭಾಗ್ಯತನದಲ್ಲಿ ಕೃತಕಾರ್ಯನಾಗಿರೆ ರಿತಮದದಲಿ ತಾ ನುತಿಸಲಾದಿತಿಯ ಗರ್ಭದಲ್ಲಿ ಜ ವಿತರಣೆ ನೆವದಿ ನಿಂದು ಭೂಮಿಯ ಕೊಂಡಜ ತತಿ ವಿಕ್ರಮತೀರಿತವಾದ ದಯಾಸಿಂಧು 5 ಸೂನು ಪೂಜಿತನಾಗಿ ಮುನಿಯಿಂದ ಪಿತನಗೋಸುಗ ಉಗ ಳುತ ರೋಷ ಕಿಡಿಗಳಾದ ಈರೈದು ಬಾಹೋ ದ್ವಿತೀಯ ಜಾತಿಯವನ ಹುತವ ಮಾಡಿದ ಗಂಭೀರಾ ನಿ ರುತ ಸತ್ಯವತಿ ನಂದನಕುವರ ಪರುಶ ಪಾಣಿ ಮೃತ ಜೀವಿಗಳ ಬದುಕಿಸಿದ ಮಹಾಧೀರಾ 6 ಚತುರಾತ್ಮ ಹರಿದೈವ ವೈವಸ್ವತ ಮನುಕುಲೋಧ್ಭವನಾ ಅನುಜ ಸಹಿತ ಪೋಗಿ ಮುನಿಯ ವಾ ರುತಿಯ ಮನ್ನಿಸಿ ಶಿಲಿ ಸತಿಯಳ ಮಾಡಿ ಭೂ ಪುರವಸಾರಿ ಪಿತನಾಜ್ಞ ತಿಳಿದು ಮಾ ರುತಿಯಿಂದ ಕಪಿಯ ವಿಗತಸಂತಾಪನ ಮಾಡಿ ಸೇತುವೆ ಕಟ್ಟಿ ಪತಿತರ ಶಿರ ಚೆಂಡಾಡಿ ಲಂಕಾನಗರ ಹಿತದಿಂದ ಭಕ್ತಗೆ ಪಟ್ಟಗಟ್ಟಿದÀ ನೋಡಿ 7 ಶತ್ರಪತ್ರಾರುಣ ದಳಾಯುತ ನಯನಾದೇವ| ತತಿ ವಂದ್ಯ ಗೋಕುಲ ಸ್ಥಿತಿ ಉದ್ಧಾರಕ | ಭಂಗ ಬಲಾ | ಚರಿತಪೂರ್ಣ ಕಂಸಾರಿ ಯುತ ಷೋಡಶಾಖ್ಯ ಯುವತಿಯರ ತಂದ ಅ| ಪ್ರತಿಮಲ್ಲ | ರತಿಪತಿ ಪಿತ ಫಲ್ಗುಣಗೆ ಭಾ | ಸಾರಥಿ ಎನಿಸಿ ಕಾಳಗದೊಳು | ಧೃತರಾಷ್ಟ್ರಜರ ಕೊಲ್ಲಿಸೆ ಸಭಯಲ್ಲಿ ಪರೀ | ಕ್ಷಿತಿನ ಉಳಿಹಿ ಕೀರುತಿ ಪೊತ್ತ ಗುಣರಾಶಿ 8 ವ್ರತದಿಂದ ಖಳರು ಧರಿತ ಸತ್ಕರ್ಮವ ಮಾಡೆ | ಗತಿಗೆಟ್ಟು ಸುರರ ಉಕುತಿಯಿಂದ ಕೈಮುಗಿದು | ಅಪ್ರಾಕೃತ ಕಾಯ ಶಿಶುವಾಗಿ || ಶ್ರುತಿ ಸರ್ವದಲಿ ಅನೃತವೆಂದು ತಿಳುಪಿ ಉ | ಚಿತ ಮಾರ್ಗದ ಬಿಡಿಸಿ ನಿ | ರ್ಜೀತ ಕಾರು ಪಾರ್ವತಿ ಪತಿಗೆ ಮಾರ್ಗಣವೆನಿಸಿ ತ್ರಿಪುರಾರಿಗೆ ಹುತಗೈಸಿ ಶಿವನ ಗೆಲಿಸಿ ವಿವಶಳನೆ ಪತಿವ್ರತೆಯರ ಲಜ್ಜೆಗೊಳಿಸಿದೆ ವಂಚಿಸೀ 9 ವಿಹಿತ ಧರ್ಮ ಮರೆದು | ಮಮತೆ ಜಾತಿ ಸಂಕರ | ವ್ರತದಲ್ಲಿ ನಾನಾ ದುಷ್ಕøತ ತುಂಬಿರಲು ದೇವತೆಗಳು ಮರುಗಿ ಅ | ರತರಾಗಿ ತುತಿಸಿ ತ್ವರಿತ ಸ್ವಭಾವದಲ್ಲಿ ನಿ | ಸಿತ ಖಡ್ಗಧರಿಸಿ ರಾ ಶೌರಿ | ಸುಕೃತ ನೆನೆವವರಿಗೆ ಭವಸಾಗರ ತಾರಿ10 ಶ್ರುತಿ ಶೀರ್ಷ ಶ್ರುತಿ ಉಪ | ಕೃತಿನಯ ಪಂಚಮ ಶ್ರುತಿ ಪಂಚರಾತ್ರಾ ಸಂ | ವತ ಮೂಲ ರಹಸ್ಯ | ತತುವಾದಿನಾಮನು | ಶ್ರುತಿಕಲ್ಪ ಕಥೆ ಸರ್ವ ಪ್ರತಿಪ್ರತಿ ವರ್ಣ ಸಂತತಿಯಲ್ಲಿ ನೀನೆ ವ್ಯಾ | ಪುತಮೂರ್ತಿ ಸಪ್ತ ಸಪುತ ಭುವನೇಶನೆಂದು ಅಚೌಧ್ಯರೊ ಪ್ಪುತ ಕೊಂಡಾಡುವರು ನಿಂದು | ಭಕುತಪೂ ಜಿತ ಕಾಯಾ ವಿಜಯವಿಠ್ಠಲನೆ ಪಾಲಿಸೊ ಇಂದು11
--------------
ವಿಜಯದಾಸ
ನಿನ್ನ ಮಹಿಮೆಗಿಂಥವರು ಹೊಣೆಯೆ ? ಪ ಚಿನ್ಮಯನೆ ಸಕಲಭುವನಾಧಾರವೆಂಬುದನುಬಣ್ಣಿಸಲು ಎನ್ನಳವೆ ಪನ್ನಗೇಂದ್ರನು ಹೊಣೆಯೆ ? ಅ ವಿಧಿ ಕೌಸ್ತುಭ ರತ್ನವರ ಪೀತ ವಸನ ಕ್ಷೀರಾಬ್ಧಿ ಹೊಣೆಯೊಶರಣರಿಚ್ಛೆಯಲಿ ನೀನಿದ್ದುದಕೆ ದ್ರೌಪದಿಯುಕರಿರಾಜ ಶಂಭು ಅಂಬರೀಷ ಹೊಣೆಯೊಕರುಣಿಯು ಉದಾರಿ ನೀನೆಂಬುದಕೆ ಧ್ರುವರಾಯಮರುತಸುತ ಸಾಂಧೀಪ ಹೊಣೆಯೊ ಕೃಷ್ಣ 1 ಸುಲಭ ಭಕುತರ ಕಾಯ್ವನೆಂಬುದಕ್ಕೆಲೊ ದೇವಫಲುಗುಣನು ವಿದುರ ಅಕ್ರೂರ ಹೊಣೆಯೊಛಲದಂಕನೆಂಬುದಕೆ ಬಾಣನು ಹಿರಣ್ಯಕನುಜಲಧಿ ದಶಮುಖ ಕಾರ್ತವೀರ್ಯ ಹೊಣೆಯೊಒಲಿಸಿ ನಿನ್ನನು ತುತಿಸಿ ಮುಕುತಿಯನು ಪಡೆದುದಕೆಸಲೆ ಶ್ರುತಿಯು ಗಿರಿಜೆ ಅಜಮಿಳನು ಹೊಣೆಯೊನಳಿನಾಕ್ಷ ಸತ್ತ್ವಗುಣ ನಿನಗೆ ಉಂಟೆಂಬುದಕೆಸಲಿಲಜೋದ್ಭವ ಭೃಗುಮುನೀಂದ್ರ ಹೊಣೆಯೊ 2 ವಾತ ಸತ್ತ್ವಗುಣ ಹೊಣೆಯೊಶ್ರೀಕಾಂತ ನೀನಿತ್ತ ವರವು ಸ್ಥಿರವೆಂಬುದಕೆನಾಕೇಶಜಿತನ ಪಿತನನುಜ ಹೊಣೆಯೊಲೋಕದೊಳು ಕಾಗಿನೆಲೆಯಾದಿಕೇಶವ ಭಕ್ತಸಾಕಾರನೆಂಬುದಕೆ ಸಕಲ ಭುವನವೆ ಹೊಣೆಯೊ 3
--------------
ಕನಕದಾಸ
ನಿಶಿಕಾಂತನು ತೆರಳಿದ ಸುಸೀಲ ಪುರದಿಂದ ಪುರಕೆ ಪ ಪತಿ ಪಿತನ ಪದಸನ್ನಿಧಿಗೆ ಅ.ಪ. ಮಂಗಳಾಂಗ ಮಹ ಮಂಗಳ ಮಹಿಮನು ಮಂಗಳಾಂಗ ಕೊಂಡು ಮಂಗಳವರವನುಮಂಗಳವಾರದಿಗರೆಯುತಮಂಗಳ ಪುರವನು ಬಿಟ್ಟು ಮಂದಗಮನದಿಂದ 1 ರಘುಕುಲ ಯತಿವರ ಪಾದದ್ವಯ ರಾಗದಿಂದಲಿ ಸರನದಿ ಪತಿಪುರ ವರದಾತಟ ಅನುರಾಗದಿ ಹರಣವ ತ್ಯಜಿಶ್ಯಕ್ಷಹರ ಫಲಶರಣರಿಗೀವುತ 2 ಸುಮನಸರೆಲ್ಲರು ಸುಮಮಳೆಗರೆಯುವ ಸಮಯ ಕುಸುಮರ ರಥವೇರಿ ಸೋಮಧರನ ಪದ ಸುಮ್ಮನದಲಿ ಅರ್ಚಿಸುತಲಿ ಸುಸ್ವರ ಮ್ಯಾಳಂಗಳಿಂದಲಿ ಸೋಮವಾರದಿ ತಂದೆವರದಗೋಪಾಲವಿಠಲನ ಸೇವೆಗೆ 3
--------------
ತಂದೆವರದಗೋಪಾಲವಿಠಲರು
ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ ಪ ಸತತ ಮಾತಾ ಪಿತರ ವಚನ ಹಿತದಿ ನೀನು ಆಲಿಸುತ | ಪತಿಯು ಪರದೈವವೆಂದು ನೇಮದಿ ತಿಳಿದು ನೀ ಮಾಡುವುದು ವ್ರತ 1 ನಿರುತ ಗೋವು ಭೂಸುರರ ಸೇವಾ ಹರುಷದಲಿ ಶ್ರೀ ಗೌರಿ ಪೂಜಾ ತರುಣಿ ಗೈದು ಜಗದಿ ನೀನು ಪಾದ ಸುಕುಮಾರ ಪಿತನಪಾದ ಭಜಿಸೆ 2 ಕೋಮಲಾಂಗಿ ಸೋಮವದನೆ ಆ ಮಹಾತ್ಮ ಶೀಲೆ ರಾಧಾ ಭಾಮೆ ತಾರಾಸೀತೆಯಂತೆ ಶಿರಿಶಾಮಸುಂದರ ದಯ ಪಡೆಯೆ ನೀ 3
--------------
ಶಾಮಸುಂದರ ವಿಠಲ
ನೀನಲ್ಲದಿನ್ನಾರು ಸಲಹುವರೊ ಎನ್ನ ಪ ನಾನು ನನ್ನದು ಎಂಬ ದುರಭಿಮಾನಿಯನ್ನಅ.ಪ. ಶ್ರೀಮದಾಚಾರ್ಯರ ಪುಸ್ತಕ ಭಂಡಾರವನು ಪ್ರೇಮದಿಂ ಧರಿಸುತ ವೃಷಭನಾಗಿರ್ದು ಚರಿಸಿ ಕಾಮಪಿತನೊಲಿಮೆಯಿಂ ಮರಳಿ ಜನಿಸಿ ಗುರುಗಳ ಆ ಮಹಾಭಾಷ್ಯವರುಹಿದ ಜಯತೀರ್ಥ ಗುರುವೆ 1 ಬಾಲತನದಲಿ ಸಕಲ ಲೀಲೆಗಳ ತೊರೆದು ಕಾಲುಂಗುಟಾಗ್ರದಿ ನಿಂದು ತಪವಗೈದು ಶ್ರೀಲೋಲನ ಮೆಚ್ಚಿದಂಥ ಧೀರ ದೈವ ಭೂ- ಪಾಲನಂಶದ ಶ್ರೀಪಾದರಾಜ ಗುರುವೆ2 ಪಿತನ ಮತ ಧಿಕ್ಕರಿಸಿ ಶ್ರೀಪತಿಯೆ ಪರನೆಂಬ ಮತಿಪÉೂಂದಿ ಶಿಶುತನದಲಿ ನರಹರಿಯ ಒಲಿಸಿ ಅತಿಹಿತನಾದ ಪ್ರಹ್ಲಾದದೇವನಂಶದಿಂ ಕ್ಷಿತಿಯೊಳುದ್ಭವಿಸಿದ ವ್ಯಾಸರಾಜ ಗುರುವೆ 3 ಈ ಧರೆಯೊಳೆಸೆಯುತಿಹ ಉಡುಪಿಯೊಳು ನೆಲಸಿರ್ಪ ಯಾದವ ತೀರ್ಥಾಯ ಪದ ಸರಸಿರುಹ ಭೃಂಗ ಮೋದ ತೀರ್ಥಾರ್ಯರ ಪದಕರುಹನಾದಂಥ ಸೋದೆಯೊಳ್ರಾಜಿಸುವ ವಾದಿರಾಜ ಗುರುವೇ 4 ಕಂತುಜನಕನಿಗತ್ಯಂತ ಪ್ರಿಯನಾದ ಮತಿ ವಂತನಾ ವ್ಯಾಸಮುನಿಯೆ ನೀನಾಗಿ ಬಂದು ಸಂತಸದಲಿ ಸಾಧು ಜನರಿಷ್ಟ ಪೂರೈಸುತ ಮಂತ್ರಾಲಯದಿ ಮೆರೆವ ರಾಘವೇಂದ್ರ ಗುರುವೆ 5 ಜಲಜಭವನೂರುಭವನಂಶದಲಿ ಜನಿಸಿ ಕಲಿಯುಗದಿ ಹರಿನಾಮವೆ ಗತಿಯೆಂದು ಸಾರಿ ಹಲವು ಪದ ಸುಳಾದಿಗಳ ರಚಿಸಿ ಸಜ್ಜನರ ಕಲುಷಗಳ ಕಳೆದ ಪುರಂದರದಾಸರಾಯ 6 ಸಕಲ ಋಷಿಗಳ ಸಂಶಯವ ಪರಿಹರಿಸಿ ವೇದ ಉಕುತಿಗಳಿಂದ ಹರಿಯೆ ಪರನೆಂದು ಸ್ಥಾಪಿಸಿ ಭಕುತಿ ವೈರಾಗ್ಯನಿಧಿ ಭೃಗುಮುನಿಯೆಂದೆನಿಸಿದ ಮುಕುತಿಪಥ ತೋರಿಸಿದ ವಿಜಯದಾಸರಾಯ 7 ಸೂತ್ರ ಪುರಾಣಗಳ ರಚಿಸೆ ದಾಸತ್ವವಹಿಸಿ ಸಕಲ ಗ್ರಂಥಗಳ ಬರೆದು ಶ್ರಿಶಗರ್ಪಿಸುತ ಲೇಸು ಜಗಕೆಗೈದಂಥ ಗ ಣೇಶಾವತಾರಿ ಗೋಪಾಲದಾಸರಾಯ 8 ಸಿರಿ ರಂಗೇಶವಿಠಲನ ಕಾಂಬ ತೃಷೆಯಲಿ ಹರಿಗೆ ಹರಿಕಥಾಮೃತಸಾರ ಪಾನಗೈಯಲಿತ್ತ ನರಹರಿಯ ಕೃಪಾಪಾತ್ರ ಸಹ್ಲಾದನಂಶದ ಗುರುವರ ಶ್ರೀ ಜಗನ್ನಾಥದಾಸರಾಯ 9
--------------
ರಂಗೇಶವಿಠಲದಾಸರು