ಒಟ್ಟು 403 ಕಡೆಗಳಲ್ಲಿ , 69 ದಾಸರು , 322 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಾಮ ಶ್ರೀರಾಮ ಶ್ರೀರಾಮ ಶ್ರೀರಾಮ ಸರಸಿಜಾಸನ ಪುರಹರನನ್ನು ಮೊದಲು ನೀ ಶರೀರದಿ ಪಡೆದೆ ಸರ್ವೇಶ | ಕೇಶವ ಪರಮಪುರುಷನೆ ಕೈಪಿಡಿಯೊ1 ಅರಿವಿಗಾಶ್ರಯನೀನೆ ಸರ್ವಶಬ್ದವಾಚ್ಯ ದುರಿತವಿದೂರ ಪರಮಾತ್ಮ | ನಾರಾಯಣ ಕರುಣವಾರಿಧಿಯೆ ಕೈಪಿಡಿಯೊ 2 ಮಾಧವ ರಾಯನೀ ಒಲಿದು ಕೈಪಿಡಿಯೊ 3 ಸೂರ್ಯ ನೀವೊಲಿದೆಲ್ಲರ ಸಲಹುವೆ | ಎನ್ನಯ್ಯ ಗೋವಿಂದ ನೀನೆ ಕೈಪಿಡಿಯೊ 4 ಆಪತ್ಭಾಂಧವನೇ ಕೈಪಿಡಿಯೊ 5 ಕಲುಷ ಪನ್ನಗಶಯನ ಕೈಪಿಡಿಯೊ 6 ಶಕ್ರಗೋಸುಗ ನೀನೆ ಶುಕ್ರ ಶಿಷ್ಯನ ಬೇಡಿ ವಿಕ್ರಮದಿಂ ಭೂಯಳದೆ | ಅದ್ಭುತತ್ರಿ ವಿಕ್ರಮ ಮೂರುತಿಯೆ ಕೈಪಿಡಿಯೊ 7 ಆಮಹಾವಟುರೂಪದಿಂದಲದಿತಿಯೊಳು ವಾಮನ ಮೂರ್ತಿಯೆ ಕೈಪಿಡಿಯೊ 8 ತ್ವರಿತದಿ ಎನ್ನ ಕೈಪಿಡಿಯೊ 9 ಹೃಷಿಕೇಶ ನಿನ್ನ ಕಾಣರೊ | ಪಾಮರರು ಋಷಿಗಣವಂದ್ಯ ಕೈಪಿಡಿಯೊ 10 ಶೋಭನಚರಿತಾಮರವಿನುತ | ನೆ ಪದ್ಮ ನಾಭನೆ ಒಲಿದು ಕೈಪಿಡಿಯೊ 11 ನೀ ದಯದಲಿ ಯಶೋದಾದೇವಿಯಿಂದಲಿ ಬೋಧರೂಪನೆ ಕಟ್ಟಿಸಿಕೊಂಡೆ | ಸ್ವಾಮಿ ದಾಮೋದರ ಎನಗೊಲಿದು ಕೈಪಿಡಿಯೊ 12 ಹರನಲ್ಲಿ ನಿಂತು ಸಂಹರಿಸುವೆ ಜಗವನ್ನು ಪರಮ ನಿಷ್ಕರುಣದಲಿ | ನೀ ಸಂ ಕರ್ಷಣ ಮೂರುತಿಯೆ ಕೈಪಿಡಿಯೊ 13 ಭಾಸುರಗಾತ್ರ ದೇವಾಸುರ ಮನುಜರೆಂ- ಬೀಸಮುದಾಯದೊಳಗಿರ್ಪೆ | ಸರ್ವಾತ್ಮ ವಾಸುದೇವಾಖ್ಯ ಕೈಪಿಡಿಯೊ 14 ಸೂರಿ ಜನಾಶ್ರಯ ವಿದ್ವದ್ಭೀರೀಡ್ಯಾ ಸುಗುಣಾಢ್ಯ | ನೀನೆ ಶ್ರೀ ಪ್ರದ್ಯುಮ್ನ ಒಲಿದು ಕೈಪಿಡಿಯೊ 15 ಮುನಿಜನವಂದಿತ ಅನಿಮಿಷಸನ್ನುತ ಖಗವಾಹ | ಗತ ಮೋಹ ಅನಿರುದ್ಧ ಎನ್ನ ಕೈಪಿಡಿಯೊ 16 ಸರಸಿಜಭವ ಮೊದಲು ತೃಣಪರಿಯಂತವು ಪುರುಷೋತ್ತಮ ನೀನೆ ಕೈಪಿಡಿಯೊ 17 ಮೋಕ್ಷದಾಯಕ ಸರ್ವಾಧ್ಯಕ್ಷ ಜೀವರಿಗೆಲ್ಲ ಸಾಕ್ಷಿಯಾಗಿರುವೆಯೊ ಹೊರ ಒಳಗೆ | ಸ್ವಾಮಿ ಅ- ಧೋಕ್ಷಜ ನೀನೆ ಕೈಪಿಡಿಯೊ 18 ಪರಮಸತ್ಪುರುಷನಾಗಿಹ ಪ್ರಹ್ಲಾದನ ನರಸಿಂಹ ಮೂರುತಿಯೆ ಕೈಪಿಡಿಯೊ19 ಇಚ್ಛಾಮಾತ್ರದಿ ಸೃಷ್ಟಿ ಸ್ಥಿತಿಲಯಗೈಯ್ಯುವೆ ನಿಚ್ಛಲನಾಗಿ ಜಗವನ್ನು | ನುಂಗುವೆ ಅಚ್ಯುತ ಎನ್ನ ಕೈಪಿಡಿಯೊ 20 ನಿರ್ದಯನಾಗಿ ಕೊಲ್ಲುವೆ | ನೀನೆ ಜ- ನಾರ್ಧನಸ್ವಾಮಿ ಕೈಪಿಡಿಯೊ 21 ವಿಧಿ ಚಂದ್ರಶೇಖರ ಮುಖ್ಯ ಸಂದೋಹ ನಿನ್ನ ಪೊಗಳುವರು | ಅಯ್ಯ ಉ- ಪೇಂದ್ರ ಮೂರುತಿಯೆ ಕೈಪಿಡಿಯೊ 22 ಕರುಣಸಾಗರ ನೀನೆ ಶರಣ ಜನೋದ್ಧಾರ ಸಿರಿದೇವಿಯರಸ ಸರ್ವೇಶ | ಸರ್ವಗ ಸ್ವಾಮಿ ಹರಿಯೆ ನೀ ಒಲಿದು ಕೈಪಿಡಿಯೊ 23 ಕಷ್ಟ ಎಂಬುವ ಬಲು ಉಷ್ಣ ಜಲದಿ ಬಿದ್ದು ವಿಷ್ಣುವೆ ನಾನು ಮೊರೆಯಿಡುವೆ | ಕಾದುಕೊ ಕೃಷ್ಣ ನೀ ಒಲಿದು ಕೈಪಿಡಿಯೊ 24 ವರಬಿಂಬಮೂರ್ತಿ ನೀನಯ್ಯಾ | ಸ್ವಾಮಿ ಶ್ರೀ ಗುರುರಾಮವಿಠ್ಠಲಾನತಪಾಲ 25
--------------
ಗುರುರಾಮವಿಠಲ
ಶ್ರೀಲೋಲ ಶ್ರೀನರಸಿಂಹ ಬಲಗೋಂಬೆನು ನಿನ್ನ ಪ. ಸಾರರಹಿತವಹ ಘೋರತರ ಸಂಸಾರದಿ ತೊಳಲುತ ಗಾರುಗೊಂಡಿಹೆನೈ ಶ್ರೀಲೋಲ ಅ.ಪ. ಚಿಣ್ಣನು ತಾ ಬಣ್ಣಿಸಿ ಕರೆಯೆ ಮನಕದ ತಂದು ಅನ್ಯದೈವಗಳ ಮರೆದು ತನ್ನನೆ ನೆನೆವ ಚಿಣ್ಣನಿಗಾಗಿ ಕಂಬದಿ ಬಂದು ಘನ್ನ ರೋಷದಿ ದೈತ್ಯನ ಸೆಳೆದು ಕುನ್ನಿಯ ಮುಡಿಯನು ಪಿಡಿದೆತ್ತಿ ಜಡಿದು ತನ್ನ ತೊಡೆಯೊಳಗಿರಿಸಿ ಖಳನುರ ವನ್ನು ಬಗೆದು ಕರುಳನು ಕೊರಳೊಳು ಧರಿಸಿದ 1 ಘೋರರೂಪಕೆ ನಡುಗುತಲಂದು ಸುರಗಣನಿಂದು ಶರಣೆಂದಾಕಂದನ ಕರೆದು ಪರಮಾದರದಿಂ ಶ್ರೀದೇವಿಯನೊಡಗೊಂಡು ಪರತರಾಭಯ ಹಸ್ತವ ನೀಡಿ ಸರಸದಿ ಕರೆದಾದರಗೂಡಿ ತರಳನೆ ಭಕ್ತಾಗ್ರೇ ಸರ ನೆನ್ನಿಸಿ ನೆರೆಸುಖಿಸೆಂದೊದವಿದ 2 ಚಾರು ಚರಿತ ಪ್ರಹ್ಲಾದನ ಆಲಿಸಿ ನಲವಿಂ ಸಾರಿತನ್ನನೇ ನೆನೆವರನೆಂದೆಂದು ಕೋರಿಕೆಗಳ ಸಲ್ಲಿಸಿ ಸಲಹುವನೆಂದು ಸಾರೆಬಂದಿಹೆ ನಿನ್ನೆಡೆಗಿಂದು ಸಾರಸಾಕ್ಷನೆ ನೀ ಕೃಪೆದೋರೆಂದು ಕೋರಿಭಜಿಪೆ ಶ್ರೀಶೇಷಗಿರಿವರ ದಯಾಸಿಂಧು 3
--------------
ನಂಜನಗೂಡು ತಿರುಮಲಾಂಬಾ
ಶ್ರೀವೆಂಕಟೇಶಾ ಶ್ರಿತಜನಪೋಷಾ ಪ ದೇವ ದೇವ ಮಹದೇವ ವಿನುತಸುಜ | ನಾವನ ಶ್ರೀ ಭೂದೇವಿಯರರಸನೆ ಅ.ಪ ಅಂಬರರಾಜನಳಿಯನೆ ತ್ರಿಭುವನ ಕು | ಟುಂಬಿ ನಿನ್ನ ನೆರೆ ನಂಬಿದೆನಯ್ಯ 1 ಸ್ವಾಮಿ ಪುಷ್ಕರಣಿ ತಟದಿ ನೆಲಸಿ ಸುರ | ಓಲಗ ಕೈಗೊಂಬ 2 ಉರಗಗಿರಿನಿಲಯ ಗುರುರಾಮವಿಠಲ 3
--------------
ಗುರುರಾಮವಿಠಲ
ಶ್ರೀಶೈಲದೊಳಗಿಪ್ಪ ಸ್ವಾಮಿ ಪುಷ್ಕರಣಿ ಇತಿ ಹಾಸವ ದಿಲೀಪನೃಪ ಬೆಸಗೊಳಲು ಕೇಳಿ ದು ಕೇಳಿ ಸಂತೋಷಿಸುವುದು ಪ ಮುನಿಕುಲೋತ್ತಮ ನೆನಿಸಿ ದುರ್ವಾಸಋಷಿ ದಿಲೀ ಪನ ಸದನವೈದಿರಲು ಕೇಳಿ ಸಂತೋಷದಲಿ ಮುಗಿದು ವಿಜ್ಞಾಪಿಸಿದನು ಋಷಿಗೆ ಅನಿಮಿಷೇಶಾ ವೆಂಕಟನ ನಾಮಧೇಯ ಕುಂ ಭಿಣಿ ಯೊಳಿಪ್ಪಾಖ್ಯಾನ ತೀರ್ಥಗಳ ವೈಭವಗ ದುರ್ವಾಸ ಪೇಳೊದಗಿದಿ 1 ಕೇಳು ರಾಜೇಂದ್ರ ವೆಂಕಟ ಪರ್ವತನು ಮೇರು ಶೈಲಾತ್ಮಜನು ವಾಯು ಶೇಷರ ಸುಸಂವಾದ ಸ್ವರ್ಣ ಮುಖರೀ ತೀರದಿ ಬೀಳಲ್ಕೆ ನೊಂದು ಪ್ರಾರ್ಥಿಸಿದ ಶೇಷನು ಎನ್ನ ಮ್ಯಾಲೆ ಮಲಗಿಪ್ಪ ತೆರದಂತೆ ದಯದಿಂ ನೀನೆ ಶೇಷಾದ್ರಿಯೆನಿಸುತಿಹುದು 2 ಈ ನಗೋತ್ತಮದಾದಿ ಮಧ್ಯಾವಸಾನ ಪ್ರ ಸೂನು ಫಲ ಸಂಯುಕ್ತ ಸಾನುಗಳ ಸುರುಚಿಕೋ ಪುಷ್ಕರಣಿ ತೀರ್ಥದ ತಟದಲಿ ಶ್ರೀನಿವಾಸನು ಬಂದು ನಿಂತ ಕಾರಣವೆನಗೆ ನೀನರುಪುವುದು ಯೆಂದು ಬೆಸಗೊಳಲು ದುರ್ವಾಸ ನೃಪಗೆ ಹರುಷೋದ್ರೇಕದಿ 3 ತೀರ್ಥೋತ್ತಮತ್ವ ಸಾಪೇಕ್ಷಿಯಿಂದಲಿ ಬ್ರಹ್ಮ ಪತ್ನಿ ಪೂರ್ವದಲಿ ಬ್ರಹ್ಮಾವರ್ತ ದೇಶದೊಳ ಪುಲಸ್ತಾಖ್ಯ ಮುನಿಪ ತತ್ತೀರದಲಿ ತಪವಗೈವೆನೆಂದೆನುತ ಬರೆ ಪುತ್ರನೆಂದರಿದು ಮನ್ನಿಸದಿರಲು ಕೋಪದಲಿ ನಿಷ್ಫಲವಯೈದಲೆಂದು ನುಡಿದ 4 ನದ್ಯೋತ್ತಮತ್ವ ಜಾಹ್ನವಿಗಿರಲಿ ಗುಣಗಳಿಂ ಸ್ವರ್ಧುನಿಯು ನೀಚಳಾದರೆಯು ಸರಿ ಲೋಕ ಪ್ರ ಪಾದ ಪ್ರಸಾದದಿಂದ ವಾಗ್ದೇವಿ ನುಡಿಗಳು ಭ ವದ್ವಂಶರೆಲ್ಲ ರಾಕ್ಷಸರಾಗಿ ಬಹಳ ವಿ ಪದಕೆರಗಿ ಬಿನ್ನೈಸಿದ 5 ಅನಭಿಜ್ಞ ಲೋಕೋಪಕಾರ ತಪವೆಂದರಿಯ ದನುಚಿತೋಕ್ತಿಗಳನಾಡಿದೆ ಮಯಾಕೃತದೋಷ ಮುನಿವರನು ಸಂಪ್ರಾರ್ಥಿಸೆ ಪುನರಪಿ ವಿಶಾಪವಿತ್ತಳು ಪ್ರಸನ್ಮುಖಳಾಗಿ ಜನಿಸಲೀ ಭವದ ಪ್ರಾಂತಕ್ಕೆವರ ವಿಭೀ ಭಗವದ್ಧ್ಯಾನಪರಳಾದಳು 6 ತೀರ್ಥೋತ್ತಮತ್ವ ಸಾಪೇಕ್ಷಯಿಂ ವಾಗ್ದೇವಿ ಮತ್ತು ತಪದಿ ಪ್ರೀತಿಗೊಳಿಸಲ್ಕೆ ದೇವದೇ ಬಿನ್ನೈಸಿದಳು ವಾಂಛಿತವನು ವ್ಯರ್ಥವಾಯಿತು ತಪವು ಬಹ್ಮ ಶಾಪದಲಿ ತೀ ರ್ಥೋತ್ತಮತ್ವವು ಕರುಣಿಸೆಂದು ಕೇಳ್ದುದಕೆ ಪ್ರ ಇನಿತೆಂದು ಕಾರುಣ್ಯಸಿಂಧು 7 ನದಿಯರೂಪಕೆ ಬ್ರಹ್ಮಶಾಪ ನಿನಗಾಯಿತ ಲ್ಲದೆ ಸರೋವರಕೆ ಬ್ಯಾರಿಲ್ಲ ಪುಷ್ಕರಣಿಗಳೊ ಸ್ವಾಮಿ ಪುಷ್ಕರಣಿ ಎನಿಸಿ ವಿಧಿಪತ್ನಿ ಶೇಷನೋದ್ದೇಶ ತ್ವತ್ ಸನ್ನಿಧಾ ನದಿ ವಾಸವಾಹೆ ಸಂದೇಹವಿಲ್ಲಿದಕೆ ಸ ಸಜ್ಜನರಿಗಖಿಳಾರ್ಥವೀವೆನೆಂದ 8 ಮೂರುವರೆ ಕೋಟಿ ತೀರ್ಥಗಳು ಭುವನತ್ರಯದೊ ಳಾರಾಧಿಸಿದರೆಯೆನ್ನ ಸ್ವಸ್ವ ಪಾಪೌಘ ಪರಿ ಧನುರ್ಮಾಸ ಸಿತಪಕ್ಷದ ಈರಾರುದಿನದಲರುಣೋದಯಕೆ ತೀರ್ಥ ಪರಿ ವಾರನೈದಿರಿ ಶುದ್ಧರಾಗುವಿರಿಯೆಂದು ತ ಪ್ರೇಷ್ಯತ್ವ ವಾಣಿಗಿತ್ತ 9 ವಾಣಿದೇವಿಯು ತೀರ್ಥರೂಪಳಾಗಲು ಕೃಷ್ಣ ವೇಣಿಸಮ ಬಕುಳ ಮಾಲಿಕೆ ತೀರ್ಥ ಭೂಮಾಭಿ ಹರಿಗೆ ನೈವೇದ್ಯರಚಿಸಿ ಪಾನೀಯ ಧೀ ಭೋಗ ಪತ್ನಿ ಪೂರ್ವದಿ ಸನ್ನಿ ಧಾನದಲ್ಲಿಪ್ಪೆನೆಂದೆನುತ ಪ್ರಾರ್ಥಿಸೆ ಶೇಷ ತಾನಿತ್ತ ಕಮಲಾಕಾಂತನು 10 ಸ್ವಾಮಿ ಪುಷ್ಕರಣಿ ನವತೀರ್ಥಮಾನಿಗಳಿಗೆ ಸು ಧಾಮವೆನಿಸುವಳು ತತ್ತನ್ನಾಮಗಳು ಪೇಳ್ವೆ ಅಗ್ನಿಯನು ಋಣವಿಮೋಚನಿ ಈ ಮಹಾ ವಾಯು ತೀರ್ಥಗಳ ಸುಸ್ನಾನಲ ಕ್ಷ್ಮೀ ಮನೋಹರನ ದರುಶನ ತತ್ವ್ರಸಾದಾತ್ರ ಅಲ್ಪಾಧಿಕಾರಿಗಳಿಗೆ 11 ಕವಿಭಿರೀಡಿತ ಪೂಜ್ಯನೆನಿಸುವನು ಪದ್ಮಸಂ ಭವನು ಪೂಜಕನೆನಿಪ ನೈವೇದ್ಯಕರ್ತೃ ಭಾ ಶರ್ವಶಕ್ರಾರ್ಕ ಮುಖ್ಯ ದಿವಿಜಗಣವಿಹರೆಂದು ಚಿಂತಿಸದೆ ಮರೆದು ಮಾ ನವರೆ ವರ್ತಿಪರೆಂದು ತಿಳಿವವನು ಘೋರ ರೌರವ ಧರಾತಳದೊಳೆಂದ 12 ಮೇರುನಂದನ ವೈಕುಂಠಾದ್ರಿಶತಯೋಜನದ ಮೇರೆಯೊಳು ಪುಣ್ಯತೀರ್ಥಗಳಿಪ್ಪವಲ್ಲೆಲ್ಲ ಮುಖ್ಯಾಮುಖ್ಯ ಭೇದದಿಂದ ನೂರೆಂಟು ತೀರ್ಥಗಳು ಮುಖ್ಯವೆನಿಸುವುವಿದರೊ ಳಾರುತ್ತಮೋತ್ತಮವುಗಳ ನಾಮ ಪೇಳ್ವೆನು ಕು ತುಂಬರ ಆಕಾಶಗಂಗ 13 ವಸುರುದ್ರ ಕಾಣ್ವಗ್ನಿ ಮನ್ವಿಂದ್ರಯಮ ಸೋಮ ಬಿಸರುಹ ಪ್ರೀಯ ನವಪ್ರಜ ಆಶ್ವಿನಿಗಳು ಶುಕ ಜಗಜ್ಜಾಡ್ಯಹರ ಬಾರ್ಹಸ್ವತಿ ದಶಪ್ರಚೇತಸ ಗರುಡ ಶೇಷವಾಸುಕಿಯು ಹೈ ಬ್ಬಸುರ ನಾರದ ವೈಶ್ವದೇವ ಸ್ವಾಹಾಸ್ವಧಾ ಹಸ್ತಿ ನಾರಾಯಣಾದಿ ಪಂಚ 14 ಶಿವರೂಪಿ ದೂರ್ವಾಸ ಪೇಳ್ದನಿನಿತೆಂದು ಜಾ ಹ್ನವಿಯೊಳಬ್ದ ಸ್ನಾನಫಲ ಧನುರ್ಮಾಸದೊಳು ವಾಗ್ದೇವಿ ಶುಕ್ಲಪಕ್ಷ ದ್ವಾದಶಿ ದಿವಸದಿ ಶುಚಿರ್ಭೂತನಾಗಿ ಸಂತೋಷದಲಿ ವಿವರಾಗ್ರಜೋದಯದಿ ಸ್ನಾನವನು ಮಾಡೆ ಐ ಶಿಷ್ಯನೆಂದರಿದು ದಯದಿ 15 ನಾರದ ಮುನೀಂದ್ರನುಪದೇಶದಿಂ ದಕ್ಷನ ಕು ಮಾರಕರು ಸಾಹಸ್ರ ತಮ್ಮ ತಮ್ಮಾಶ್ರಮದ ದಾಕ್ಷಣ್ಯವೆನಿಸುತಿಹ್ಯದು ಭೈರವಾಷ್ಟ ತೀರ್ಥ ಸಿದ್ಧಿಪ್ರದಾಯಕ ಕು ಮಾರಧಾರಿಕ ಪಶ್ಚಿಮದಲಿಹವು ಎಂಟಧಿಕ ತೀರ್ಥಾದ್ರಿಯೆನಿಸುತಿಹುದು 16 ತಾ ತಿಳಿ ಪುದಿತಿಹಾಸ ಶೌನಕಾದ್ಯರಿಗೆ ವರ ಪುಷ್ಕರಣಿಮಹಿಮೆ ಪ್ರೀತಿಯಿಂದಲಿ ತಿಳಿದು ಪಠಿಸುವವರಿಗೆ ಜಗ ನ್ನಾಥ ವಿಠಲ ಮನೋವಾಂಛಿತಗಳಿತ್ತು ಪುರು ಹೂತ ಲೋಕದಲಿ ಸುಖಬಡಿಸಿ ಪ್ರಾಂತಕೆ ತನ್ನ ಪುರವನೈದಿಪ ಕೃಪಾಳು17
--------------
ಜಗನ್ನಾಥದಾಸರು
ಶ್ರೀಹರಿ ನಿನ್ನನ್ನೆ ಪಡೆವುದು ಭಾಗ್ಯ ಬಾಹಿರನೆನಿಸದೆ ಸೇರಿಸು ಯೋಗ್ಯ ಪ ಹೃದಯಾರವಿಂದದೆ ದೇವಿಯರುಸಹಿತ ಸದಯ ಸನ್ನಿಧಿ ಮಾಡು ಅದು ನನಗೆ ವಿಹಿತ 1 ಭಾಗವತ ಕೈಕಂರ್ಯ ಹಗಲಿರುಳು ಇರಲಿ ನಿತ್ಯ ಸಿದ್ಧಿಸಲಿ 2 ಇಡುದೇವ ಪದಕಮಲ ನನ್ನ ತಲೆಮೇಲೆ ಅನುದಿನ ಲೀಲೆ 3 ಕೊನೆಗಾಲದಲಿ ಬಂದು ನೆನೆವಂತೆ ನೀಡೈ ಮನಕೆ ಮಂಗಳರೂಪ ಧ್ಯಾನ ದಯಮಾಡೈ 4 ಅವತಾರಫಲಗಳ ಸ್ಮರಣೆ ಬರುತಿರಲಿ ಭವವೆಲ್ಲ ಕರಣಗಳು ನಿನ್ನ ಸೇವಿಸಲಿ 5 ದಾಸನ್ನ ಚರಣಾಂಬುಜದÀಡಿಯಿರಿಸು ಶ್ರೀಶನೆ ಪ್ರೇಮದ ಸವಿಯನುಣಬಡಿಸು 6 ಎಲ್ಲವು ನಿನ್ನದೆ ನನ್ನದೇನಿಲ್ಲ ಬಲ್ಲವನೆ ನೀನಾಗಿ ಮುಕ್ತಿಕೊಡು ನಲ್ಲ 7 ಹಿಂದೇಳು ಮುಂದೇಳು ತಲೆಮಾರಿನವರು ತಂದೆ ನಿನ್ನಂಘ್ರಿ ಶೇಷಾಂಕಮುದ್ರಿತರು 8 ಕುಲಧನವೆ ನೀನಮ್ಮಕುಲಕೋಟಿಯನ್ನ ಒಲಿದು ಕಾಪಾಡಯ್ಯ ಕರುಣಿ ಪ್ರಸನ್ನ 9 ಹೆಜ್ಜಾಜಿ ಕೇಶವ ಇದು ನಮ್ಮ ಮೋಕ್ಷ ಅರ್ಜುನಸಾರಥಿ ಕಾಣು ಪ್ರತ್ಯಕ್ಷ10
--------------
ಶಾಮಶರ್ಮರು
ಶ್ರೀಹರಿಸ್ತುತಿ ಅಪ್ಪವೆಂಕೋಬನ ನೇತ್ರದಲಿ ನೋಡಿ ಪವಿತ್ರಳಾದೆನೋ ಇಂದಿಗೆ ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ ಒಪ್ಪಿಕೋಬೇಕೋ ತಿಮ್ಮಪ್ಪ ಕರುಣಾನಿಧಿಯೆ ಹೆದÀರದೆ ಭೃಗುಋಷಿಯು ಒದೆಯೆ ಪಾದಗಳಿಂದ ಎದೆಯ ಮೇಲಿರುವ ಲಕ್ಷ್ಮಿ ಕದನಮಾಡುತವೆ ಕೊಲ್ಲಾಪುರಕೆ ನಡೆತರಲು ಒದಗಿ ವೈಕುಂಠ ಬಿಟ್ಟು ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ ಇದು ನಿನಗೆ ಸದನಾಯಿತೊ ದೇವ 1 ಹುತ್ತಿನೊಳಗಡಗಿ ನೀ ಗುಪ್ತದಿಂದಿರುತಿರಲು ಉತ್ತಮ ಗೋವು ಬಂದು ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದೆ ನೆತ್ತಿಯನೊಡೆದುಕೊಂಡು ಸಿಟ್ಟಿನಿಂದಲಿ ಚೋಳರಾಯಗೆ ಶಾಪವನು ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವ 2 ಮಾಯಾರಮಣನೆ ನಿನ್ನ ಗಾಯದೌಷಧಕ್ಹೋಗಿ ಭೂರಮಣನ್ವರಾಹನಿಂದ ನೂರುಪಾದ ಭೂಮಿಕೊಟ್ಟರೆ ಸಾಕೆಂದು- ಪಾಯದಿಂದದನ್ವ್ಯಾಪಿಸಿ ತಾಯಿ ಬಕುಳಾದೇವಿಯಿಂದ ಪೂ ಜೆಯಗೊಂಬೊ ಶ್ರೀಯರಸು ನಿನಗೆ ಸರಿಯೆ ದೇವ 3 ನಾಟಕಧಾರಿ ಕಿರಾತರೂಪವ ಧರಿಸಿ ಬೇಟೆಗೆನುತಲಿ ಪೋಗಲು ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ ನೋಟದಲಿ ಮನಸೋಲಿಸಿ ಬೂಟಕತನದಿ ಜಗಳಾಟವನ್ನೆ ಮಾಡಿ ಪಾಟುಬಟ್ಟು ಕಲ್ಲಲೇಟುತಿಂದೆಯೋ ದೇವ 4 ಗದಗದನೆ ನಡುಗುತಲಿ ಕುದುರೆಯನು ಕಳಕೊಂಡು ಪದ್ಮಾವತಿ ವಾರ್ತೆಯನ್ನು ಬಳಿಯ ಲಿದ್ದ ಬಕುಳಮಾಲಿಕೆಗೆ ಬೋಧಿಸಿ ಕಳಿ ಸಿದಾಕಾಶನಲ್ಲಿ ಚದುರಮಾತಿನ ಚಪಲ ಕೊರವಂಜಿ ನೀನಾಗಿ ಕಣಿಯ ಹೇಳಲು ಎಲ್ಲಿ ಕಲಿತೆಯೊ ಮಹದೇವ5 ಬಂಧುಬಳಗವ ಕೂಡಿ ಭಾರಿ ಸಾಲವ ಮಾಡಿ ಕರ ವೀರದಿಂದೆ ಅಂಡಲೆದು ಕರೆಸಿ ಕಾಣುತಲಿ ಲಕ್ಷ್ಮಿಯನಪ್ಪಿ ಕೊಂಡು ಪರಮ್ಹರುಷದಿಂದ ಮಂದಗಮನೆಯೆ ನಿನ್ನ ಮಾತುಲಾಲಿಸಿ ಮಾಡಿ ಕೊಂಡೆ ಪದ್ಮಾವತಿಯ ಅಂದೆಯೊ ಎಲೆ ದೇವ 6 ಆಕಾಶರಾಜ ಅನೇಕ ಹರುಷದಿ ಮಾಡೆ ತಾ ಕನ್ಯಾದಾನವನ್ನು ಹಾಕಿದ ರತ್ನಮಾಣಿಕ್ಯದ ಕಿರೀಟವನು ಬೇಕಾದಾಭರಣ ಭಾಗ್ಯ ಸಾಕಾಗದೇನೊ ಬಡವರ ಕಾಡಿ ಬೇಡುವುದು ಶ್ರೀಕಾಂತ ನಿನಗೆ ಸರಿಯೆ ದೇವ 7 ಹೇಮಗೋಪುರದಿ ವಿಮಾನ ಶ್ರೀನಿವಾಸ ದೇವರನು ನೋಡಿ ನಮಿಸಿ ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡ ಗಂಬದ ಸುತ್ತ ಪ್ರಾಕಾರವೊ ಸ್ವಾಮಿಪುಷ್ಕರಣಿಯಲಿ ಸ್ನಾನ ಪಾನವ ಮಾಡಿ ನೋಡಿದೆನು ನಿನ್ನ ಭಕುತರ ದೇವ 8 ಪÀನ್ನಗಾದ್ರಿ ವೆಂಕಟನ್ನ ರಥ ಶೃಂಗಾರ ವರ್ಣಿಸಲಳವೆ ನಮಗೆ ಕಣ್ಣಾರೆಕಂಡೆ ಗರುಡೋತ್ಸವದಲಂಕಾರ ಇನ್ನೆಲ್ಲು ಕಾಣೆ ಜಗದಿ ಎನ್ನ ಕಿವಿಗಾನಂದವೊ ದೇವ 9 ಪಾದದಲ್ಲೊಪ್ಪೋ ಪಾಗಡ ರುಳಿ ಕಿರುಗೆಜ್ಜೆ ಮೇಲಲೆವೊ ಪೀತಾಂಬರ ಮಾಲೆ ಶ್ರೀವತ್ಸದ್ಹಾರ ಮೇಲಾದ ಸರಿಗೆ ಸರ ಪದಕವೊ ಕಮಲ- ದಳಾಯತಾಕ್ಷನ ನೋಡಿದೆ ದೇವ 10 ಕರಗಳಲ್ಲಿಟ್ಟು ಕಂಕಣ ಕಡಗ ಭುಜಕೀರ್ತಿ ವರ ಶಂಖ ಚಕ್ರಧಾರಿ ಗಿರಿಯ ಭೂವೈಕುಂಠವೆಂದು ತೋರುತ ನಿಂತ ಶಿರದಿ ಕಿರೀಟ ಧರಿಸಿ ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ ಹೊಳೆವ ಮೂರ್ತಿಯ ನೋಡಿ ಹೇ ದೇವ11
--------------
ಹರಪನಹಳ್ಳಿಭೀಮವ್ವ
ಷಷ್ಠಿಯ ದಿವಸ (ಶ್ರೀ ವೆಂಕಟೇಶನ ಅವಭೃಥ ಸ್ನಾನ) ರಂಭೆ :ಸಖಿಯೆ ಕೇಳೀಗ ಸಲುಗೆವಂತಳೆ ಮುಕುತಿದಾಯಕ ಮೂಲಪುರುಷಗೆ1 ಭೇರಿಶಬ್ದವು ನಗಾರಿಘರ್ಜನೆ ಮೌರಿತಾಳವು ಮೃದಂಗಶಬ್ದವು 2 ಉದಯಕಾಲದಿ ಒದಗಿ ಭಕುತರು ಪದುಮನಾಭನ ಪಾಡಿ ಪೊಗಳ್ವರು3 ಭೂರಿಮಂಗಲಕರದ ಶಬ್ದವು ಸೇರಿ ಕಿವಿಯೊಳು ತೋರುವುದಲ್ಲೆ4 ನಿದ್ದೆಬಾರದು ನಿಮಿಷಮಾತ್ರಕೆ ಎದ್ದು ಪೇಳೆಲೆ ಏಣಲೋಚನೆ5 ಸುಮ್ಮನೀನಿರು ಸುಳಿಯಬೇಡೆಲೆ ಎಮ್ಮುವುದು ನಿದ್ರೆ ಏನ ಪೇಳಲಿ6 ಬೊಮ್ಮಸುರರಿಗು ಪೊಗಳತೀರದು ತಿಮ್ಮರಾಯನ ಮಹಿಮೆ ದೊಡ್ಡಿತು7 ನಿನ್ನೆ ದಿವಸದ ನಿದ್ರೆವಿಹುದೆಲೆ ಕಣ್ಣಿಗಾಲಸ್ಯ ಕಾಂಬುವದಲ್ಲೇ8 ಬಣ್ಣಿಸುವದೆಲೆ ಬಹಳವಿಹುದಲೆ ಪನ್ನಗವೇಣಿ ಪವಡಿಸೆ ನೀನು9 ಏಳು ಏಳಮ್ಮ ಅಲಸ್ಯವ್ಯಾತಕೆ ಕಾಲಿಗೆರಗುವೆ ಹೇಳಬೇಕಮ್ಮ10 ಜಯಜಯ ವಾಧಿಶಯನ ಜಯಜಯ ದೈತ್ಯವಿನಾಶ ಜಯಜಯ ಶ್ರೀನಿವಾಸ1 ಗಂಧಕಸ್ತೂರಿಪುಣುಗಚಂದನಪನ್ನೀರುಗಳ ಹೊಂದಿಸಿ ತೋಷದಿ ಮಂದರಧರಗೆ2 ಆಕಾಶರಾಯನ ಮಗಳು ಹರುಷದಿಂದೊಡಗೂಡಿ ಶ್ರೀಕರ ವೆಂಕಟಪತಿಯು ಸರಸವಾಡಿ3 ಮಾಧವ ಸಹಿತಲಿ ಸಾದರದಿಂದಲಿ ಸರಸವಾಡಿ4 ಬಡನಡು ಬಳುಕುತಲಿ ಎಡಬಲದಲಿ ಸುಳಿದು ಕಡಲೊಡೆಯಗೆ ಲಕ್ಷ್ಮಿ ಚೆಲ್ಲಿದಳಾಗ5 ಛಲದಿ ಪದ್ಮಾವತಿಯು ಜಲಜನಾಭನ ಮೇಲೆ ಒಲವಿನಿಂದಲಿ ಬಂದು ಚೆಲ್ಲಿದಳಾಗ6 ಭರದಿ ಶ್ರೀದೇವಿಯು ಸರಸಿಜಮುಖದಲ್ಲಿ ಪರಮ ಸುಸ್ನೇಹದಿ ಬೆರಸಿದಳಾಗ7 ಭೂದೇವಿ ಭುಲ್ಲವಿಸಿ ಮಾಧವನ ಮುಖದೊಳಗೆ ಮೋದದಿಂದಲಿ ಬಂದು ಚೆಲ್ಲಿದಳಾಗ8 ಸುತ್ತುಮುತ್ತಲು ಇವರ ಆರ್ತಿಯಿಂದಲಿ ಹರಿಯು ವೃತ್ತಕುಚವ ನೋಡಿ ಚೆಲ್ಲಿದನಾಗ 9 ಝಣಝಣಾಕೃತಿಯಿಂದ ಮಿನುಗುವಾಭರಣದ ಧ್ವನಿಯ ತೋರುತ ಬಲು ಸರಸವಾಡಿ10 ಓಕುಳಿಯಾಡಿದ ನೀರಾನೇಕಭಕ್ತರು ಮಿಂದು ಏಕಮಾನಸರಾಗಿ ಪೊರಟರು ಕಾಣೆ11 * * * ಆಡಿದರೋಕುಳಿಯ ಶರಣರೆಲ ಆಡಿದರೋಕುಳಿಯಪ. ಕಾಡುವ ಪಾಪವ ಓಜಿಸಿ ಹರಿಯೊಳ- ಗಾಡಿ ನಿತ್ಯಸುಖ ಬೀಡಿನ ಮಧ್ಯದಿ1 ಅಬ್ಬರದಿಂದಲಿ ಉಬ್ಬಿ ಸಂತೋಷದಿ ಒಬ್ಬರ ಮೈಗಿನ್ನೊಬ್ಬರು ಚೆಲ್ಲುತ 2 ಚೆಂಡು ಬುಗರಿನೀರುಂಡೆಗಳಿಂದಲಿ ಹಿಂಡು ಕೂಡಿ ಮುಂಕೊಂಡು ಪಿಡಿಯುವರು3 ಸುತ್ತುಮುತ್ತ ಒತ್ತೊತ್ತಿ ಮುತ್ತಿ ಜಲ- ವೆತ್ತಿ ಚಿತ್ತತನುನೆತ್ತಿಗೆ ಸೂಸುತ್ತ4 ರಂಭೆ : ನಾರಿ ಕೇಳೀಗ ಭೂರಿಭಕುತರು ಶ್ರೀರಮಾಧವ ಸಹಿತ ಬಂದರು1 ಭಾವ ಶ್ರೀಹರಿ ಪ್ರತಿರೂಪದೋರುತ ದೇವ ತಾನೆ ನಿದ್ರ್ವಂದ್ವನೆನ್ನುತ 2 ಹೇಮಖಚಿತವಾದಂದಣವೇರಿ ಪ್ರೇಮಿಯಾಗುತ ಪೊರಟು ಬರುವನು 3 ವಲ್ಲಭೆಯರ ಕೂಡಿ ಈ ದಿನ ಫುಲ್ಲನಾಭನು ಪೊರಟನೆತ್ತಲು4 ಊರ್ವಶಿ : ನಾರಿ ನೀ ಕೇಳಿದರಿಂದ ಈಗ ಭೂರಿಭಕುತರಾನಂದ ಶ್ರೀರಮಾಧವ ಮಿಂದ ನೀರಿನೊಳಾಡುತ್ತ ಓರಂತೆ ತುಳಸಿಮಾಲೆಯ ಧರಿಸುತ್ತ ಭೇರಿಡಂಕನಗಾರಿಶಬ್ದ ಗಂ- ಭೀರದೆಸಕವ ತೋರಿಸುತ್ತ ವೈ- ಯಾರದಿಂದಲಿ ರಾಮವಾರ್ಧಿಯ ತೀರದೆಡೆಗೆಲೆ ಸಾರಿ ಬಂದರು1 ವರದಭಿಷೇಕವ ರಚಿಸಿ ಬಕು- ತರ ಸ್ನಾನವನನುಕರಿಸಿ ಭರದಿಂದ ಪೂಜಾಸತ್ಕಾರ ಸೇವೆ ಕೈಗೊಂಡು ತ್ವರಿತದಿ ನಗರಾಂತರಕನುವಾದನು ಬರುತ ದಿವ್ಯಾರತಿಗೊಳ್ಳುತ ಚರಣ ಸೇರಿದ ಭಕ್ತರಿಷ್ಟವ ನಿರುತ ಪಾಲಿಸಿ ಮೆರೆವ ಕರುಣಾ- ಕರ ಮನೋಹರ ಗರುಡವಾಹನ2 ರಂಭೆ : ಸರಸಿಜಾನನೆ ಈ ಸೊಲ್ಲ ಲಾಲಿಸೆ ಕರವ ಮುಗಿಯುತ್ತಕೈಯ ತೋರುತ1 ಪರಮಪುರುಷ ಗೋವಿಂದ ಎನುತಲಿ ಹೊರಳುತುರಳುತ ಬರುವದೇನಿದು2 ಊರ್ವಶಿ :ಅಂಗದಾಯಾಸವೆಲ್ಲವನು ಪರಿ- ಭಂಗಿಪ ಸೇವೆಯೆಂಬುದನು ಅಂಗಜಪಿತಚರಣಂಗಳ ರಜದಲಿ1 ಹೊಂಗಿ ಧರಿಸಿ ಲೋಟಾಂಗಣ ಎಂಬರು ರಂಗನಾಥನ ಸೇವೆಗೈದ ಜ- ನಂಗಳಿಗೆ ಭಯವಿಲ್ಲವದರಿಂ- ದಂಗವಿಪ ಲೋಲೋಪ್ತಿ ಕೋಲಾ- ಟಂಗಳನು ನೀ ನೋಡು ಸುಮನದಿ2 ಕೋಲು ಕೋಲೆನ್ನಿರೊ ರನ್ನದ ಕೋಲು ಕೋಲೆನ್ನಿರೊಪ. ಪಾಲಾಬ್ಧಿಶಯನ ನಮ್ಮಾಲಯಕೆದ್ದು ಬಂದ ಲೀಲೆಗಳಿಂದ ಜನಜಾಲಗಳೆಲ್ಲರು1 ಗುಂಗಾಡಿತಮನನ್ನು ಕೊಂದು ವೇದವ ತಂದು ಬಂಗಾರದೊಡಲನಿಗಿಟ್ಟನು ನಮ್ಮ ದೇವ2 ಅಡ್ಡಿಮಾಡದೆ ಸುರವಡ್ಡಿಗೆ ಸುಧೆಯಿತ್ತು ಗುಡ್ಡೆಯ ಬೆನ್ನಿಲಿ ಧರಿಸಿದ ನಮ್ಮ ದೇವ3 ರೂಢಿಯ ಕದ್ದನ ಓಡಿಸಿ ತನ್ನಯ ದಾಡೆಯಿಂದಲೆ ಸೀಳ್ದ ಕಾಡವರಾಹನಮ್ಮ4 ಸಿಂಗನ ರೂಪತಾಳಿ ಹೊಂಗಿ ಕಂಬದಿ ಬಂದು ಬಂಗಾರಕಶ್ಯಪುವಂಗವ ಕೆಡಹಿದ5 ಗಿಡ್ಡನಾಗುತ ಕೈಯೊಡ್ಡಿ ದಾನಕೆ ಮನ- ಸಡ್ಡಿಮಾಡದೆ ಮೇಣು ದೊಡ್ಡವನಾದನಮ್ಮ6 ಕಾಮಧೇನುವಿಗಾಗಿ ಕಾರ್ತವೀರ್ಯನ ಕೊಂದು ಭೂಮಿಯ ಬುಧರಿಗೆ ಪ್ರೇಮದಿನಿತ್ತನಮ್ಮ7
--------------
ತುಪಾಕಿ ವೆಂಕಟರಮಣಾಚಾರ್ಯ
ಸಚ್ಚಿದಾನಂದಮಯಗೆಚ್ಚರಿಕೆ ಪ ನಿಶ್ಚಯದ ನಿರುಪಮಂಗೆಚ್ಚರಿಕೆ ಅಚ್ಚರಿಯ ಸಚ್ಚಿತ್ರಂಗೆಚ್ಚರಿಕೆ ಅ.ಪ ಕಾಂತೆಯರ ಮನೆಗೆ ಶ್ರೀಕಾಂತ ಪೊರಮಡುತಿಹನು ಕಾಂತೆಯರು ಕಟ್ಟುಮೆಟ್ಟದವೊಲೆಚ್ಚರಿಕೆ 1 ಸಂಚಿತಾಭರಣಗಳ ಮಿಂಚುಗುರುಚರಣಗಳ ಕುಂಚ ಕಾಳಂಜಿಯವರೆಲ್ಲವೆಚ್ಚರಿಕೆ 2 ನೀಡೆಸೆವ ಸೆಳ್ಳುಗುರು ಮೂಡುತಿಹ ಮೊಲೆಹೊಗರು ಆಡಿಸುವ ಹಡಪದವರೀಗ ಎಚ್ಚರಿಕೆ 3 ಬಿಂಬಾಧರಂ ಪೊಳೆಯೆ ಕಂಬುಕಂಠವು ಹೊಳೆಯೆ ಪೊಂಬಾಳ ದೀವಿಗೆಯ ಜನರು ಎಚ್ಚರಿಕೆ 4 ಚೆನ್ನಸಿರಿಯರಮನೆಯ ಚಿನ್ನವಾಗಿಲ ಕೊನೆಯ ರನ್ನದೋರಣ ತಡಿಯವರೆಚ್ಚರಿಕೆ 5 ಇಂದಿರಾದೇವಿಯರ ಮಂದಿರದ ಬೀದಿಯೊಳು ಸಂದಣಿಯಲತಿ ಜತನವಿರಲಿ ಯೆಚ್ಚರಿಕೆ 6 ದೇವಿಯರ ಮನೆಗೆ ವಿವಾಹ ತಾಬೇಡಿ ಬಂದ ದೇವಪುರ ಲಕ್ಷ್ಮೀಶಗೆಚ್ಚರಿಕೆ 7
--------------
ಕವಿ ಲಕ್ಷ್ಮೀಶ
ಸಂಜೀವರಾಯ ಸಾಧುಜನಪ್ರಿಯ ಪ ಭುಂಜಿಪ ಸದ್ಭಕ್ತರ ಸೇವೆಯೊಳಿರಿಸೆನ್ನನು ಅ.ಪ ರಾಮನಾಜ್ಞೆಯಲಿ ಶರಧಿಯದಾಟುತಲಿ | ರಾವಣನ ಪಟ್ಟಣದಿ ಭೂಮಿಜಾತೆಗುಂಗುರವನು ನೀಡುತಲಿ ಆ ಮಹಾಶಿರೋ ಮಾಣಿಕ್ಯವ ಸೀ- ತಾ ಮಹಾದೇವಿಯಿಂದ ಕೈಕೊಂಡ 1 ವನವ ಕೀಳುತಕ್ಷಾದಿ ರಾಕ್ಷಸರನು ವಧಿಸಿ | ಮುದದಿ ದಶಕಂ- ಠನ ತೃಣೀಕರಿಸಿ ವರಪುರವನುದಹಿಸಿ ಇನಕುಲಂಗೆ ವಾರ್ತೆಯ ತಿಳುಹಿಸಿ ನೀ ವನಜ ಸಂಭವನ ಪಟ್ಟವ ಪಡೆದೆ 2 ಕೋಲಾಹಲನಗರ ನಿವಾಸವಗೈಯ್ವೆ ಕುಜನರನು ತರಿವೆ | ಕರು- ಣಾಲವಾಲ ಭಕ್ತರಿಗೀಪ್ಸಿತವೀವೆ ಶ್ರೀಲತಾಂಗಿಪತಿ ಗುರುರಾಮವಿಠಲ ನೋಲಗಿಸುವ ಭಾಗ್ಯವಂತರೊಡೆಯನೆ 3
--------------
ಗುರುರಾಮವಿಠಲ
ಸಡಿಲ ಬಿಡದೆ ಕೈಯ ಪಿಡಿದು ಉದ್ಧರಿಸಯ್ಯ ಬಡವನು ನಾನೈಯ್ಯ - ಕೊಡು ನಿನ್ನ ಸೇವೆಯ ಪ ಒಡಲಿಗೋಸುಗ ಪರರಡಿಗಳ ಪಿಡಿಯುತೆ ಭವ ಕಡಲಿನೊಳಗೆ ಅ.ಪ. ಪಡೆದು ವರಗಳನು ಕಡು ಖೂಳ ರಾವಣ ನಡುಗಿಸಿ ಸುರನರ ಭುಜಗರೊಡೆಯರನ್ನು ಹಿಡಿದು ಮುನೀಶರ ಹೊಡೆದು ಬಡಿದು ಹಿಂಸೆ - ಪಡಿಸುತ್ತ ಯುವತೇರ ದುಡುಕು ಮಾಡುತ್ತಲಿರೆ ಗಡಣೆಗಾರದೆ ಪಾಲ ಕಡಲ ತಡಿಗೆ ಬಂದು ದೃಢ ಭಕ್ತಿಯಲಿ ನಿಂದು ಜಡಜ ಭವಾದ್ಯರು ಪೊಡಮಟ್ಟು ಬೇಡಲು ಕೊಡುತೆ ಅಭಯವನು ಮಡದಿಯನೊಡಗೂಡಿ ಪೊಡವಿಗಿಳಿದು ಬಂದೆ 1 ಸತಿ ಕೌಸಲ್ಯದೇವಿಯ ಬಸುರೊಳು ಸಂಜನಿಸಿ ದಶದಿಶದೊಳು ಯಶ ಪಸರಿಸಿ ಅಸುರೆಯ ಅಸುವನು ಹಾರಿಸಿ ಕುಶಿಕ ಸುತನ ಯಜ್ಞ ಹಸನಾಗಿ ಪಾಲಿಸಿ ನಸುನಗುತಲಿ ಪದಸರಸಿಜ ಸೋಕಿಸಿ ಅಶಮವಾಗಿದ್ದ ಮುನಿಸತಿಯನುದ್ಧರಿಸಿ ಪಶುಪತಿ ಧನುಭಂಗವೆಸಗಿ ಸೀತೆಯ ಕರ ಬಿಸಜವ ನೊಶಗೈದ ಅಸಮ ಸಮರ್ಥ 2 ಚಂದದಿಂ ಶಾಙ್ರ್ಞವನೊಂದಿ ಅಯೋಧ್ಯೆಗೆ ಬಂದು ಪತ್ನಿಯಗೂಡಿ ನಂದದಿಂದಿರುತಿರ್ದು ಬಂದ ಕಾರ್ಯಕೆ ನೆವ ತಂದು ವನಕೆ ಬಂದು ನಿಂದಿರೆ ಜಾನಕಿ ಲಕ್ಷ್ಮಣರೊಡಗೊಂಡು ನೊಂದು ನೃಪನು ದಿನವನ್ನು ಹೊಂದಲು ಕರೆ- ತಂದು ಭರತನಿಗೆ ಅಂದು ರಾಜ್ಯವನೀಯೆ ಬಂದೊಲ್ಲದೆ ಬೇಗ ಬಂದು ವಂದಿಸೆ ಪದ ದ್ವಂದ್ವದ ಪಾದುಕವಂದದಿಂದೊಲಿದಿತ್ತೆ 3 ಚಿತ್ರಕೂಟಾದ್ರಿಯಿಂದತ್ತ ನಡೆದು ನೆಲ ಕೊತ್ತಿ ವಿರಾಧನ್ನ ವತ್ಸ ಲಕ್ಷ್ಮಣ ಸೀತಾ ಯುಕ್ತನು ನೀನಾಗಿ ಪೊರೆಯಲು ಇತ್ತು ಅಭಯವನ್ನು ಉತ್ತಮ ದಂಡಕದಿ ಸ್ತುತ್ಯ ಕುಂಭಜ ಮುನಿಯಿತ್ತ ಧನುವನಾಂತು ಕುತ್ಸಿತ ದನುಜೆಯ ಶಿಕ್ಷಿಸಿ ಖರ ಬಲ ಕತ್ತರಿಸುತೆ ಬೆನ್ಹತ್ತಿ ಮಾರೀಚನ್ನ ತುತ್ತು ಮೂರಾಗಿಸಿದತ್ಯಂತ ಶಕ್ತ 4 ಮೈಥಿಲಿಯಾಡಿದ ಮಾತಿಗೆ ಸೌಮಿತ್ರಿ ಪಾತಕಿ ದಶಮುಖ ಸಾತ್ವೀಕ ವೇಷದಿ ಸೀತೆಯ ನೊಯ್ದೆನೆಂದು ಆರ್ತ ಸ್ವರದಿ ಪೇಳಿ ಮೃತಿಯೊಂದೆ ಖಗಪತಿ ಆತಗೆ ಸದ್ಗತಿಯಿತ್ತು ನಡೆದು ಖಳ ಪೋತಕ ಬಂಧನ ತೋಳ್ಗಳ ಖಂಡಿಸಿ ಪ್ರೀತಿಲಿ ಶಬರಿಗೆ ಮುಕ್ತಿಯ ಪಾಲಿಸಿ ವಾತಸುತನ ಮನ ಪ್ರಾರ್ಥನೆ ಸಲಿಸಿದೆ 5 ಚರಣದಿಂದೊಗೆದು ದುಂದುಭಿಯ ಶರೀರವನ್ನು ತರುಗಳೇಳನು ಒಂದೇ ಸರಳಿನಿಂದುರುಳಿಸಿ ತರಣಿಸುತನ ಭಯ ಹರಿಸಿ ವಾಲಿಯ ಗರ್ವ ಮುರಿಸಿ ವಾನರ ರಾಜ್ಯ ದೊರೆತನ ಸಖಗಿತ್ತೆ ತರುಚರ ತತಿಗಳ ಕೆರಳಿಸಿ ಹರುಷದಿ ಪರನು ಭಕುತನನ್ನು ಕರೆದು ಕುರುಹುಗಳ ನೊರೆದು ಮುದ್ರಿಕೆಯಿತ್ತೆ ಕರುಣವಾರಿಧಿಯೆ 6 ತಿಂಗಳು ಮೀರಿತೆಂದು ಅಂಗದ ಪ್ರಮುಖರು ಕಂಗೆಟ್ಟು ಕುಳಿತಿರೆ ಭಂಗನ ಕಳೆದು ತ - ರಂಗಿಣಿ ಪತಿಯನ್ನು ಲಂಘಿಸಿ ಹನುಮನು ಕಂಗೊಳಿಸುವ ಲಂಕಾ ಪ್ರಾಂಗಣದಲಿ ನಿಂದು ಭಂಗಿಸಿ ಲಂಕಿಣಿಯನು ಸೀತಾಂಗನೆ - ಗುಂಗುರವಿತ್ತುತ್ತಮಾಂಗದ ಮಣಿಯಾಂತು ಕಂಗೆಡಿಸ್ಯಸುರರ ಜಂಗುಳಿಯನು ಭಕ್ತ ಪುಂಗವ ಬರೆ ನಿನ್ನಂಗ ಸಂಗವನಿತ್ತೆ 7 ಹರಿವರರನು ಕೂಡಿ ಶರಧಿಗೆ ಪಯಣಮಾಡಿ ಶರಣ ವಿಭೀಷಣನಿಗೆ ಸ್ಥಿರ ಪಟ್ಟವನು ನೀಡಿ ಭರದಿ ಸೇತುವೆಗಟ್ಟಿ ಅರಿಯ ಪಟ್ಟಣ ಮುಟ್ಟಿ ಧುರಕೆ ದೂತನ್ನ ಅಟ್ಟಿ ಪರಬಲವನು ಕುಟ್ಟಿ ಪುರಕೆ ಉರಿಯನಿಕ್ಕಿ ಶರವರ್ಷಂಗಳ ಕರಿ ರಥಾ ತುರಗ ಪದಾತಿಗ- ಳುರುಳಿಸಿ ದಶಶಿರನುರವನು ಇರಿದು ಪರಮ ಸಾಧ್ವಿಯ ಕರಸರಸಿಜ ಪಿಡಿದೆ 8 ಭಕ್ತ ವಿಭೀಷಣಗೆ ದೈತ್ಯಾಧಿಪತ್ಯವಿತ್ತು ಕೃತ್ತಿವಾಸನ್ನ ಸೇತು ಹತ್ತಿರ ಸ್ಥಾಪಿಸಿ ಪತ್ನಿ ಸಹೋದರ ಮಿತ್ರ ಭೃತ್ಯರ ಕೂಡಿ ಉತ್ತಮ ಪುಷ್ಪಕದಿ ಚಿತ್ರಕೂಟಕೆ ಬಂದೆ ಭಕ್ತನ ಕಳುಹಿ ಸದ್ವøತ್ತವ ಭರತಗೆ ಬಿತ್ತರಿಸಿ ಮಹದುತ್ಸವದಿ ಪುರ ಮತ್ತೆ ಪ್ರವೇಶಿಸಿ ರತ್ನ ಸಿಂಹಾಸನ ಹತ್ತಿ ಶ್ರೀಕಾಂತನೆ ನಿತ್ಯದಿ ಸಲಹುವೆ 9
--------------
ಲಕ್ಷ್ಮೀನಾರಯಣರಾಯರು
ಸಂತೆಯ ಬಿದನೂರು ಹನುಮಂತ ಎನ್ನ ಅಂತರಂಗದಲಿ ಹರಿಯ ತೋರು ಹನುಮಂತ ಪ. ಎನ್ನ ಮೇಲೆ ಪಂಥ ಬೇಡ ನಿಂತು ಬೇಡುವೆ ಹನುಮಂತ ಅ.ಪ. ಅಂಜನಾದೇವಿಯ ಕುಮಾರ ಅಂಜಿಸುವ ಈ ಘೋರ ಸಂಸಾರ ಅಂಜಿಕೆಯ ಬಿಡಿಸೆನ್ನ ಕಾಯೊ ಬಲು ಧೀರ ಸುಗುಣ ಗಂಭೀರ ಸಂಜೀವನನ ಕಂಡ ಶೂರ ಅಂಜನಾದೇವಿಯ ಕುಮಾರ 1 ಕುಂತಿಯಾ ಸುತನಾಗಿ ನೀ ಜನಿಸಿ ಬಂದೇ ಪಂಥದಲಿ ಕೀಚಕನ ಸೋಲಿಸಿ ನಿಂತು ಕಂತುಪಿತನಿಗೆ ದುರ್ಯೋದನನ ಶಿರವ ಒಪ್ಪಿಸಿದೆ 2 ಮದ್ದಿಗೆ ಭಟ್ಟರಲಿ ನೀ ಜನಿಸೀ ಮಧ್ವಮತವನೆ ಉದ್ಧರಿಸಿ ನೀ ಬದರಿಯಲಿ ನಿಂದಿ ಮುದ್ದು ಕೃಷ್ಣನ ಪೂಜಿಸಿ ಉಡುಪಿಲಿ ಸ್ಥಾಪಿಸಿ 3 ಸಂತೆಬಿದನೂರಿನಲಿ ನಿಂತು ಬಂದ ಜನಕೆ ಆನಂದ ಪಡಿಸಿ ಸಂತೋಷದಿಂದ ವರಗಳ ಬೇಡಿದವರಿಗೆ ನೀಡುತ್ತ ಕಂತುಪಿತನ ಧ್ಯಾನದಲಿ ಅನವರತ ಸೇವಿಸುತ 4 ರಾಮ ಸೇವೆ ನೀ ಸಂಭ್ರಮದಲಿ ಮಾಡಿ ರಾಮರ ಧ್ಯಾನ ಮಾಡುತ ಪೂಜಿಸುತಿರುವಿ ರಮಾವಲ್ಲಭವಿಠಲನ ಧ್ಯಾನದಿ ಪಟ್ಟಕೆ ಬರಲಿರುವಿ 5
--------------
ಸರಸಾಬಾಯಿ
ಸತ್ಯಬೋಧ ಯತಿಗಳ ಸ್ತೋತ್ರ ಯಾವನೆದುರು ಮೂರ್ಜಗದೊಳು ಲೋಕಪಾವನ್ನ ಗುರು ಸತ್ಯಬೋಧ ಯತೀಂದ್ರಗಿನ್ನು ಪ ಬಲು ಸುಂದರ ಸೀತಾ ರಘುಪತಿ - ಪಾದನಳಿನಯುಗ್ಮವ ಪೂಜಿಪ ಯತಿ - ಎಮಗೊಲಿದು ಪಾಲಿಸುವನು ಸನ್ಮತಿ - ಈಜಲಜ ಭವಾಂಡದೊಳ್ ತುಂಬಿರೆ ಕೀರುತಿ 1 ಕೂರ್ಮ - ಕಮಲಾಲಯ ದೇವಿಯ ಸಿರಿನಾಮ - ದಿಂದವಾಲಗವೀಯುವ ಗುರು ಸಾರ್ವಭೌಮಗೆ2 ಭವ ಮಾರ್ಗಣ ಗೆದ್ದ ಗಂಭೀರ - ರತಿಪತಿ ಪಿತ ಮೋಹನ ವಿಠ್ಠಲ ಕಿಂಕರಗೆ 3
--------------
ಮೋಹನದಾಸರು
ಸಂಪ್ರದಾಯದ ಹಾಡು ವೆಂಕಟೇಶನ ಉರುಟಣೆಯ ಹಾಡು ಭಾರ್ಗವಿ ರಮಣಾ | ಜಗದಾಭಿ ರಮಣಾ ಪ ಲೋಕನಾಯಕ ಸ್ವಾಮಿ | ವೈಕುಂಠಾದಿಂದ ಬಂದೂಏಕಾಂತವಾನಾಡಿದಾ | ಲಕ್ಷೀಯರೊಡನೆ 1 ಧರೆಗೆ ವೈಕುಂಠಾದ | ಚರ್ಯವ ತೋರುವೆನೆಂದುಶಿರಿ ಮಹಾಲಕ್ಷೀಯೊಡನೆ | ಸಂಧಿಸಿದಾನೂ 2 ಸ್ವಾಮಿ ಕಾಸಾರದಲೀ | ಧಾಮಾವ ರಚಿಸೂವೆಆ ಮಹಾ ವೈಕುಂಠಾವ | ಅಗಲೀ ಬಂದೂ 3 ವತ್ಸರ ಕಾಲದಲೊಂದು | ಉತ್ಸವ ಮಾಡುವೆನೆಂದುಇಚ್ಛೆ ಮಾಡಿದನೂ ವೆಂಕಟ ಇಂದಿರೆಗೂಡಿ 4 ನವರಾತ್ರಿ ದಿವಸದಲೀ | ವಿವಾಹ ಲಗ್ನವ ರಚಿಸೀಅವನಿಯೊಳು ಡಂಗುರವನ್ನು ಹೊಯಿಸೀದ ಸ್ವಾಮೀ 5 ಕಾಶಿ ಕರ್ನಾಟಕದ | ದೇಶಾ ದೇಶದ ಜನರುಶ್ರೀಶಾನುತ್ಸವಕೇ ಜನರು ಒದಗೀದರಾಗಾ 6 ಹದಿನಾಲ್ಕು ಲೋಕಾದ | ಪದುಮಜಾದಿಗಳೆಲ್ಲಾ ಮದುವೆಯಾ ದಿಬ್ಬಣದಾ | ಜನರು ಬಂದರಾಗಾ 7 ಗರುಡಾ ಕಂಬದ ಸುತ್ತಾ | ಪರಿಪರಿ ವೈಭವದಿಂದಗಿರಿಯಾ ವೆಂಕಟಗೇ | ಕಂಕಣ ಕಟ್ಟಿದರಾಗಾ 8 ಆಗಮಾ ಪುರಾಣ | ರಾಗ ಮದ್ದಳೆ ತಾಳಭಾಗವತರೂ ಸುತ್ತ ಮಾಡುತಿರಲೂ 9 ತಾಳ ತಮ್ಮಟೆ ಕಾಳೆ | ಭೋರೆಂಬೋ ವಾದ್ಯಗಳೂವರ ನಾರಿಯರು ಸುತ್ತಾಗ್ಹಾಡುತಿರಲೂ 10 ಚಿನ್ನದ ಕರಿಮಣಿ | ರನ್ನ ಮಂಗಳಸೂತ್ರಹಿರಿಯಾ ವೆಂಕಟನೂ ಲಕ್ಷ್ಮೀಗೆ ಕಟ್ಟಿದ ನಗುತಾ 11 ಮುತ್ತಿನಾ ಕರಿಮಣಿ | ರತ್ನ ಮಂಗಳಸೂತ್ರಾಸ್ವಾಮಿ ವೆಂಕಟ ಲಕ್ಷ್ಮೀಗೆ ಕಟ್ಟಿದ ನಗುತಾ 12 ಅಂತರಾ ಮಾರ್ಗದೊಳೂ | ನಿಂತು ದೇವತೆಗಾಳು ಸಂತೋಷದಿಂದಲಿ ಜಯ ಜಯವೆಂದು ಪಾಡಿದರಾಗ 13 ಅಂಗಾನೆ ಶ್ರೀ ಭೂಮಿ | ರಂಗಾಮಂಟಪದೊಳಗೆಬಂಗಾರ ಗಿರಿಯಾ ವೆಂಕಟ ಒಪ್ಪಿದ ಸ್ವಾಮೀ 14 ಅತಿರಸಾ ಮನೋಹರ | ಮಿತಿಯಿಲ್ಲದ ಪದಾರ್ಥಗಳೂಸತಿಯರೆಲ್ಲರು ಭೂಮಕೆ ತಂದು ಬಡಿಸಿದರಾಗ 15 ಬೆರದ ನಾರಿಯರೆಲ್ಲ | ಹರಿಭೂಮಾ ನಂತರದೀಭರದಿ ಉರುಟಣಿಗೆ ಅಣಿ ಮಾಡಿದರಾಗಾ 16 ಮಿತ್ರೆ ಲಕ್ಷ್ಮೀಗೆ ತಕ್ಕ | ಹಿರಿಯರು ಪೇಳಲುಛಂದದಿಂದಲಿ ಅರಿಷಿನ ಕಲಸಿ ನಿಂತಳಾಗ 17 ಪನ್ನಗ ನಗವಾ | ಸೇರಿದ ಮಹರಾಯದುಡ್ಡು ದುಡ್ಡಿಗೆ ಬಡ್ಡಿಯನ್ನು ದುಡಿವಾ ಲೋಭಿ 18 ವಂಚಿಸಿ ಜನರನ್ನು | ಲಂಚಾ ಲಾವಣಿ ತೆಗೆದುಹಿಂಚಾಸಿ ವರ ಕೊಡುವಾ ಹಿತದಾ ದೇವಾ 19 ಬಡವಾ ಬಲ್ಲಿದರೆಂದು | ಬಿಡದಾಲೆ ಅವರಿಂದಮುಡುಪು ಹಾಕಿಸಿಕೊಂಡು (ಮುಂದಕೆ) ಬಿಡುವೋ ದೇವಾ 20 ಅನ್ನವೆಲ್ಲವ ಮಾರಿ | ಹೊನ್ನು ಕಟ್ಟುವೆಯಲ್ಲೊಅನ್ನದಾನವ ಮಾಡಲೊಲ್ಲಿ ಅನ್ಯಾಕಾರಿ 21 ಹೊನ್ನು ಸಾಲವ ತೆಗೆದು | ಎನ್ನಾ ಕಟ್ಟಿಕೊಂಡುಮನೆ ಮನೆಗೆ ಭಿಕ್ಷವ ಬೇಡುವ ಮಾನವಂತಾ 22 ಹೊನ್ನು ಸಾಲದು ಎಂದು | ಎನ್ನ ಸಾಕುವೆ ಹೇಗೋನಿನ್ನಾ ಕೃಪಣತನಕೆ ನಾನು ಎಣೆಗಾಣೆನೋ 23 ಇಪ್ಪತ್ತು ದುಡ್ಡೀಗೆ | ಸೇರು ತೀರ್ಥವ ಮಾರಿದುಡ್ಡು ಕಟ್ಟಿ ಜಾಳಿಗೆ ಗಳಿಸುವ ಜಾಣ ನೀನೂ 24 ಅಟ್ಟಾ ಮಡಿಕೆಯಲ್ಲಾ | ಕುಟ್ಟಿ ನಾಮವ ಮಾಡಿಗಟ್ಟಿಯಾಗಿ ಗಂಟು ಗಳಿಸುವ ಘನವಂತಾ 25 ದೇಶದೊಳು ನಿಮ್ಮಂಥಾ | ಆಸೆ ಉಳ್ಳವರಿಲ್ಲಕಾಸು ಕಟ್ಟಿ ಕವಡೆ ಗಂಟು ದುಡಿವ ಲೋಭಿ 26 ಮಡದಿ ನಾನಿರಲಿಕ್ಕೆ | ಕಡಿಮೆ ಏನಾಗೋದುಬಡತನ ನಿನಗೆ ಯಾತಕೆ ಬಂತೂ ಸ್ವಾಮೀ 27 ನಾರೀಯಾ ನುಡಿ ಕೇಳಿ | ವಾರೆ ನೋಟದಿ ನೋಡಿಮೋರೆ ತಗ್ಗಿಸಿ ವೆಂಕಟ ಮುನಿದು ನಿಂತಾ 28 ಕಡುಕೋಪಾ ಮಾಡುವರೆ | ಹುಡುಗನಂತಾಡುವರೆಕೊಡಲೀಯ ಪಿಡಿವಾರೆ ನಾನು ನುಡಿದಾ ನುಡಿಗೇ 29 ಕಣ್ಣಾನೆ ಬಿಡಬ್ಯಾಡ | ಬೆನ್ನ ತೋರಲಿ ಬ್ಯಾಡಾಇನ್ನು ಮುಖವಾ | ತಗ್ಗಿಸಬ್ಯಾಡ ಇತ್ತ ನೋಡೂ 30 ಎನ್ನರಸಾ ಹೊನ್ನರಸಾ | ಚೆನ್ನಿಗ ವೆಂಕಟರಾಯಾನಿನ್ನ ಪೋಲುವರ್ಯಾರೊ | ಜಗದೊಳು ನೀಲಗಾತ್ರಾ 31 ಎನ್ನರಸಾ ಚೆನ್ನರಸಾ | ಚೆನ್ನಿಗ ವೆಂಕಟರಮಣಾನಿನ್ನ ಮುದ್ದು ಮುಖವ ತೋರೊ ಅರಿಷಿಣ ಹಚ್ಚೇನು 31 ಎನ್ನುತ ಅರಿಷಿಣ | ಹಚ್ಚಿ ಕುಂಕುಮವಿಟ್ಟುರನ್ನ ಹಾರವ ಹಾಕಿ ತಾನು ಕುಳಿತಾಳಾಗ 33 ಮಂದರಧರ ತಾನೂ | ಛಂದದರಿಶಿನ ಪಿಡಿದೂಇಂದಿರಾದೇವಿಯನ್ನು ಮಾತನಾಡಿಸಿದಾ 34 ಎನ್ನರಸಿ ಹೊನ್ನರಸಿ | ಚೆನ್ನಿಗ ಮಾಯಾದೇವಿನಿನ್ನ ಮುದ್ದು ಮೊಗವಾನೆ ತೋರು ಅರಿಷಿನ ಹಚ್ಚೇನು 35 ಭಿಡೆಯಾ ನೋಡದೆ ಇಂಥಾ | ನುಡಿಗಳಾಡಿದ ಮ್ಯಾಲೆನಡುಗಿ ಮೋರೆಯ ತಗ್ಗಿಸಲಿಹುದೆ ನಾಚಿಕೆ ಯಾಕೆ 36 ಭಾಗ್ಯಾದ ಮೊಬ್ಬಿಲಿ | ಬಾಗಿ ನೀ ನಡೆಯಾದೇಅಗ್ಗಳಿಕೆ ಮಾತುಗಳನ್ನು ಆಡಿದೆಯಲ್ಲೇ 37 ಮಿಂಚಿನಂದದಿ ಬಹಳಾ | ಚಂಚಲ ಬುದ್ಧ್ಯವಳೇವಂಚಿಸೂವಳೆ ಜಗವಾ ವಾರಿಜಾಕ್ಷೀ 38 ಬಂಗಾರಾ ಮುಡುಪಿಗೆ | ಎನ್ನ ಕಂಗೊಳಿಸೀಗಾ ಹಿಂಗಾದೆ ಮಂಕು ಮಾನವರ ಮಾಡುವುದರಿದೇ 39 ಕಂಚುಕ ವೆಂಕಟ ಬಿಗಿದಾ ನಗುತಾ 40 ತಾಂಬೂಲವನೆ ಮೆದ್ದು | ಮಡದಿಯಾ ಮುಖ ಸೂಸೆಇಂಬೀಲ್ಹಚ್ಚೆ ಬರೆದರಾಗ ಅತಿ ಸಂಭ್ರಮದೀ 41 ತಿರುಮಲೇಶನು ತನ್ನ | ಮಡದೀಯನು ಎತ್ತಿಭರದಿಂದಾ ತನ್ನರಮನೆಗಾಗಿ ತೆರಳಿದಾನು 42 ದ್ವಾರದಾದಡಿಯಲ್ಲಿ | ನಾರೇರೆಲ್ಲರು ನಿಂತುವಾರಿಜಾಕ್ಷಿ ಪತಿಯ ಹೆಸರಾ ಹೇಳೆಂದರು 43 ಕಿರುನಗೆಯಿಂದ ಲಕ್ಷ್ಮೀ | ಗಿರಿಯಾ ವೆಂಕಟನೆನಲೂಹರಿಯೆ ನಿನ್ನ ರಮಣಿ ಹೆಸರಾ ಹೇಳೆಂದರೂ 44 ಜಾತಿ ನಾಚಿಕೆ ತೊರೆದು | ಶ್ರೀ ತರುಣಿ ಎನುತಾಲೆಪ್ರೀತಿಯಿಂದಲಿ ಸಿಂಹಾಸನದಿ ಕುಳಿತರಾಗಾ 45 ಮತ್ತೆ ನಾರಿಯರೆಲ್ಲಾ | ಮುತ್ತಿನಾರತಿ ಪಿಡಿದೂಸತ್ಯಾಭಾಮೆಗೆ ಜಯ ಜಯವೆಂದರಾಗ 46 ವಿಭುವಿನ ಗುಣವನ್ನು ವಿಸ್ತರ ಪೇಳಿದ ಜನಕೆಸಮಯದಂಥ ಭಾಗ್ಯವನಿತ್ತು ಸಲಹುವ ಸ್ವಾಮಿ 47 ಮಂಗಳ ವೆಂಕಟರಾಯಾ | ಮಂಗಳ ಮಾಧವರಾಯಾಮಂಗಳ ಮಾನಸಗೇಯಾ | ಮಂಗಳ ಮಾಧವರಾಯಾ 48 ಧರೆಯೊಳಧಿಕನಾದ | ದೊರೆ ವ್ಯಾಸವಿಠಲಾನುಪರಮ ಭಕ್ತಿ ಸುಜ್ಞಾನವನು ಪಾಲಿಸೂವಾ 49
--------------
ವ್ಯಾಸವಿಠ್ಠಲರು
ಸಂಪ್ರದಾಯದ ಹಾಡುಗಳು ಆರತಿಯೆತ್ತಿರೆ ನಾರಿಯರೆಲ್ಲರು ಶಾರದದೇವಿಗೆ ಭೂರಿಸಂಭ್ರಮದೆ ಪ. ಬೊಮ್ಮನ ರಾಣಿಯ ನೆಮ್ಮಿಭಜಿಸುವ ಸುಮ್ಮಾನದಿಂ ಪರಬೊಮ್ಮನ ಪಾಡುವ 1 ಕರಗಳ ಜೋಡಿಸಿ ಶಿರವನು ಬಾಗಿಸಿ ಸರಸತಿಗೊಂದಿಸಿ ಪರಮನ ಧ್ಯಾನಿಸಿ 2 ಪರಮೇಷ್ಟಿದಯಿತೆಗೆ ವರಗುಣಭರಿತೆಗೆ ಸುರಮುನಿ ಮಾತೆಗೆ ಶರಣಸಂಪ್ರೀತೆಗೆ 3 ಪಾಡಿರಿ ಗುಣಗಳ ಮೂಡಿದ ಭಕ್ತಿಯಿಂ ನೋಡಿರಿ ದೇವಿಯ ಬೇಡಿರಿ ವರಮಂ 4 ವರಶೇಷಗಿರೀಶನ ಹಿರಿಯಸೊಸೆಗಿಂದು ಮರಕತದಾರತಿ ಹರುಷದಿಂದೆತ್ತಿ 5
--------------
ನಂಜನಗೂಡು ತಿರುಮಲಾಂಬಾ
ಸಂಪ್ರದಾಯದ ಹಾಡುಗಳು ಕೋಲು ಹಾಡು ಆಕಾಶಕಭಿಮಾನಿ ಶ್ರೀಕಂಠ ವರಪುತ್ರಏಕದಂತನೆ ವಿಘ್ನೇಶ ಕೋಲೆಏಕದಂತನೆ ವಿಘ್ನೇಶ ನಿನ್ನ ಪದಏಕ ಚಿತ್ತದಲಿ ಬಲಗೊಂಬೆ ಕೋಲೆ 1 ನೆನೆಯಕ್ಕಿ ನೆನೆಗಡಲೆ ಗೊನೆಯ ಬಾಳೆಯ ಹಣ್ಣುಘನವಾದ ಚಿಗುಳಿ ತಂಬಿಟ್ಟು ಕೋಲೆಘನವಾದ ಚಿಗುಳಿ ತಂಬಿಟ್ಟು ತಂದೀವೆಗಣಪತಿ ಮತಿಯ ಕರುಣಿಸು ಕೋಲೆ 2 ಜಾಹ್ನವಿ ಜಾಹ್ನವಿ ಜನಕ ನಾರಾಯಣನಗಧರನ ಮುನ್ನ ಬಲಗೊಂಬೆ ಕೋಲೆ 3 ಮಚ್ಛ ಕೂರುಮ ವರಹ ನರಸಿಂಹ ವಾಮನಸ್ವಚ್ಛ ಭೃಗುರಾಮ ರಘುರಾಮ ಕೋಲೆಸ್ವಚ್ಛ ಭೃಗುರಾಮ ರಘುರಾಮ ಕೃಷ್ಣ ಬೌದ್ಧಅಚ್ಛ ಕಲ್ಕಿಯ ಬಲಗೊಂಬೆ ಕೋಲೆ 4 ಈಶ ಬ್ರಹ್ಮರಿಗೆ ನಿಯಾಮಕನಾಗಿದ್ದುಪೋಷಿಸುತಿಪ್ಪ ಪರಮಾತ್ಮ ಕೋಲೆಪೋಷಿಸುತಿಪ್ಪ ಪರಮಾತ್ಮನಾದ ಶ್ರೀಕೇಶವನ ಮೊದಲೆ ಬಲಗೊಂಬೆ ಕೋಲೆ 5 ನೀರಿಗಾಶ್ರಯನಾಗಿ ನೀರೊಳು ಮಲಗಿಪ್ಪನೀರಜ ನೇತ್ರ ನಿಗಮಾತ್ಮ ಕೋಲೆನೀರಜ ನೇತ್ರ ನಿಗಮಾತ್ಮನಾದ ಶ್ರೀನಾರಾಯಣನ್ನ ಬಲಗೊಂಬೆ ಕೋಲೆ 6 ಯಾದವ ಕುಲಜನೆ ಸಾಧುಗಳರಸನೆಮಾದೇವಿಗಾಶ್ರಯನಾಗಿಪ್ಪ ಕೋಲೆಮಾದೇವಿಗಾಶ್ರಯನಾಗಿ ಪಾಲಿಸುವಮಾಧವನ್ನ ಮೊದಲೆ ಬಲಗೊಂಬೆ ಕೋಲೆ 7 ಚಂದದಿಂದ ವೇದ ವೃಂದ ಪ್ರತಿಪಾದ್ಯನೆಇಂದಿರಾದೇವಿ ರಮಣನೆ ಕೋಲೆಇಂದಿರಾದೇವಿ ರಮಣನಾದ ಗೋ-ವಿಂದನ್ನ ಮೊದಲೆ ಬಲಗೊಂಬೆ ಕೋಲೆ 8 ಸೃಷ್ಟಿಯೊಳಗೆಲ್ಲ ವ್ಯಾಪ್ತನಾಗಿರುತಿಪ್ಪವೈಷ್ಣವಕುಲಕೆ ತಿಲಕನೆ ಕೋಲೆವೈಷ್ಣವ ಕುಲಕೆ ತಿಲಕನಾದ ಶ್ರೀವಿಷ್ಣುವಿನ ಮೊದಲೆ ಬಲಗೊಂಬೆ ಕೋಲೆ 9 ಅಧಮನಾಗಿದ್ದಂಥ ಅಸುರನ ಸಂಹರಿಸಿಮುದವ ಬೀರಿದನೆ ಸುರರಿಗೆ ಕೋಲೆಮುದವ ಬೀರುತ ಸುರರ ಪಾಲಿಸುವಂಥಮಧುಸೂದನನ್ನ ಬಲಗೊಂಬೆ ಕೋಲೆ 10 ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿಆಕ್ರಮಿಸಿದನೆ ತ್ರಿಲೋಕವ ಕೋಲೆಆಕ್ರಮಿಸಿ ತ್ರಿಲೋಕವನಳೆದ ತ್ರಿ-ವಿಕ್ರಮನ್ನ ಮೊದಲೆ ಬಲಗೊಂಬೆ ಕೋಲೆ 11 ಭೂಮಿಯೊಳಗೆ ಅತಿ ಸಂಭ್ರಮನಾಗಿದ್ದಕಾಮಿತಾರ್ಥಂಗಳ ಕರೆವನೆ ಕೋಲೆಕಾಮಿತಾರ್ಥಂಗಳ ಕರೆದು ಭಕ್ತರ ಪೊರೆವವಾಮನನ್ನ ಮೊದಲೆ ಬಲಗೊಂಬೆ ಕೋಲೆ 12 ವೇದಾಭಿಮಾನಿಗೆ ಸಾದರವಾಗಿಪ್ಪಬೌದ್ಧ ಮೂರುತಿಯೇ ಭವದೂರ ಕೋಲೆಬೌದ್ಧ ಮೂರುತಿಯೇ ಭವದೂರನಾದ ಶ್ರೀಶ್ರೀಧರನ್ನ ಮೊದಲೆ ಬಲಗೊಂಬೆ ಕೋಲೆ 13 ಸಾಕಾರ ಮೂರುತಿ ಸರ್ವೇಂದ್ರಿ ನಿಯಾಮಕನಾಕೇಶ ವಂದ್ಯ ನಳಿನಾಕ್ಷ ಕೋಲೆನಾಕೇಶ ವಂದ್ಯ ನಳಿನಾಕ್ಷನಾದ ಹೃಷಿ-ಕೇಶ ಹರಿಯ ಬಲಗೊಂಬೆ ಕೋಲೆ 14 ಪದುಮ ಸಂಭವ ಪಿತ ಪದುಮಿನಿ ವಲ್ಲಭಪದುಮ ಪೊಕ್ಕುಳಲಿ ಪಡೆದನೆ ಕೋಲೆಪದುಮ ಪೊಕ್ಕುಳಲ್ಲಿ ಪಡೆದು ಪಾಲಿಸುವಂಥಪದುಮನಾಭನ ಮುನ್ನ ಬಲಗೊಂಬೆ ಕೋಲೆ 15 ಕಾಮಿನಿ ಯಶೋದೆ ಒರಳಿಗೆ ಕಟ್ಟಲುಶ್ರೀ ಮನೋಹರ ಶೆಳೆದೊಯ್ದ ಕೋಲೆಶ್ರೀ ಮನೋಹರ ಶೆಳೆದು ಪಾಪವ ಕಳೆದದಾಮೋದರನ್ನ ಬಲಗೊಂಬೆ ಕೋಲೆ 16 ಕಿಂಕರರ ಚಿತ್ತ ದುರ್ವಿಷಯಕ್ಕೆರಗಲುಪಂಕಜನಾಭ ಶಳೆದನೆ ಕೋಲೆಪಂಕಜನಾಭ ಶಳೆದು ತನ್ನಲ್ಲಿಡುವಸಂಕರುಷಣನ್ನ ಬಲಗೊಂಬೆ ಕೋಲೆ 17 ಏಸು ಬ್ರಹ್ಮಾಂಡದೊಳು ವಾಸವಾಗಿರುತಿಪ್ಪದಾಸವರ್ಗವನೆ ಪೊರೆವನೆ ಕೋಲೆದಾಸ ವರ್ಗವನೆ ಪೊರೆವನೆ ನಮ್ಮ ಶ್ರೀವಾಸುದೇವನ್ನ ಬಲಗೊಂಬೆ ಕೋಲೆ 18 ಅದ್ವೈತ ಮಹಿಮನೆಸದ್ವೈಷ್ಣವರ ಪೊರೆವನೆ ಕೋಲೆಸದ್ವೈಷ್ಣವರ ಪೊರೆವನೆ ಅಜನಯ್ಯಪ್ರದ್ಯುಮ್ನ ಹರಿಯ ಬಲಗೊಂಬೆ ಕೋಲೆ 19 ಅನಿಮಿಷ ದೈತ್ಯರ ಮನಕೆ ಸಿಲುಕದಿಪ್ಪಸನಕಾದಿ ವಂದ್ಯ ಸಕಲೇಶ ಕೋಲೆಸನಕಾದಿ ವಂದ್ಯ ಸಕಲೇಶನಾಗಿಪ್ಪಅನಿರುದ್ಧ ಹರಿಯ ಬಲಗೊಂಬೆ ಕೋಲೆ 20 ಕ್ಷರಾಕ್ಷರದೊಳು ಪರಮೋತ್ತಮನಾದಕರಿರಾಜ ವರದ ಕವಿಗೇಯ ಕೋಲೆಕರಿರಾಜ ವರದ ಕವಿಗೇಯನಾದ ಶ್ರೀಪುರುಷೋತ್ತಮನ್ನ ಬಲಗೊಂಬೆ ಕೋಲೆ 21 ಅಕ್ಷಯ ಮೂರುತಿ ಮೋಕ್ಷದಾಯಕ ಸ್ವಾಮಿಕುಕ್ಷಿಯೋಳ್ ಜಗವ ರಕ್ಷಿಪ ಕೋಲೆಕುಕ್ಷಿಯೋಳ್ ಜಗವ ಪಾಲಿಪ ನಮ್ಮ ಅ-ದೋಕ್ಷಜ ಹರಿಯ ಬಲಗೊಂಬೆ ಕೋಲೆ 22 ಕ್ರೂರ ಖಳನುದರ ಸೀಳಿ ಪ್ರಹ್ಲಾದನಕಾರುಣ್ಯದಿಂದ ಕಾಯ್ದನ ಕೋಲೆಕಾರುಣ್ಯದಿಂದ ಕಾಯ್ದನ ನಮ್ಮ ಶ್ರೀನಾರಸಿಂಹನ್ನ ಬಲಗೊಂಬೆ ಕೋಲೆ 23 ಸಚ್ಚಿದಾನಂದನೆ ಸಕಲಗುಣ ಪರಿಪೂರ್ಣಮುಚುಕುಂದ ವರದ ಮುನಿನುತ ಕೋಲೆಮುಚುಕುಂದ ವರದ ಮುನಿನುತನಾದ ಶ್ರೀಅಚ್ಯುತನ ಮೊದಲೆ ಬಲಗೊಂಬೆ ಕೋಲೆ 24 ದುರ್ಧರ್ಷರಾಗಿದ್ದ ಖಳರ ಸಮುದಾಯವಮರ್ದನ ಮಾಡಿದ ಮಹಮಹಿಮ ಕೋಲೆಮರ್ದನ ಮಾಡಿದ ಮಹಮಹಿಮನಾದ ಜ-ನಾರ್ದನ್ನ ಮೊದಲೆ ಬಲಗೊಂಬೆ ಕೋಲೆ 25 ಇಂದ್ರಾನುಜನಾಗಿ ಸ್ವರ್ಗದೊಳಿರುತಿದ್ದುಸಾಂದ್ರ ಸುಖವೀವೆ ಸುರರಿಗೆ ಕೋಲೆಸಾಂದ್ರ ಸುಖವಿತ್ತು ಸುರರ ಪಾಲಿಸುವ ಉ-ಪೇಂದ್ರನ ಮೊದಲೆ ಬಲಗೊಂಬೆ ಕೋಲೆ 26 ಪರಮ ಭಕ್ತರ ಪಾಪ ಪರಿಹಾರವನೆ ಮಾಡಿಪರಮ ಪದವಿಯ ಪಾಲಿಪ ಕೋಲೆಪರಮ ಪದವಿಯ ಪಾಲಿಪ ನಮ್ಮ ಶ್ರೀ-ಹರಿಯ ಮೊದಲೆ ಬಲಗೊಂಬೆ ಕೋಲೆ 27 ಶಿಷ್ಟ ಪಾಲಕ ಉತ್ಕøಷ್ಟ ಜ್ಞಾನಾನಂದಕೃಷ್ಣೆಯ ಕಷ್ಟ ಬಿಡಿಸಿದ ಕೋಲೆಕೃಷ್ಣೆಯ ಕಷ್ಟ ಬಿಡಿಸಿದ ನಮ್ಮ ಶ್ರೀ-ಕೃಷ್ಣನ್ನ ಮೊದಲೆ ಬಲಗೊಂಬೆ ಕೋಲೆ 28 ಅನಿರುದ್ಧಾದಿ ರೂಪ ವಿಶ್ವಾದಿ ಅಜಿತಾದಿಸನತ್ಕುಮಾರಾದಿ ಅಜಾದಿ ಕೋಲೆಸನತ್ಕುಮಾರಾದಿ ಅಜಾದಿ ರೂಪನಾದಘನ ಮಹಿಮನ್ನ ಬಲಗೊಂಬೆ ಕೋಲೆ 29 ಹಯಗ್ರೀವ ದತ್ತ ಋಷಭ ಸಂಕರ್ಷಣಭಯರಹಿತ ಬಾದರಾಯಣ ಕೋಲೆಭಯರಹಿತ ಬಾದರಾಯಣ ಮಹಿದಾಸವಯಿಕುಂಠ ಹರಿಯ ಬಲಗೊಂಬೆ ಕೋಲೆ 30 ಆತ್ಮಾದಿ ವಾಸುದೇವಾದಿ ಮೂರುತಿಶ್ರೀ ತರುಣೇಶ ವಿಶ್ವೇಶ ಕೋಲೆಶ್ರೀ ತರುಣೇಶ ವಿಶ್ವೇಶ ರೂಪನಾದಜ್ಯೋತಿರ್ಮಯನ ಬಲಗೊಂಬೆ ಕೋಲೆ 31 ಮುನಿ ವೇದವ್ಯಾಸ ಸನತ್ಕುಮಾರ ಮೂರ್ತಿಮಿನಗುವ ದತ್ತಾತ್ರೇಯನೆ ಕೋಲೆಮಿನಗುವ ದತ್ತಾತ್ರೇಯ ಹಯಗ್ರೀವದನುಜಾಂತಕನ್ನ ಬಲಗೊಂಬೆ ಕೋಲೆ 32 ಕಂಗಳಾಪಾಂಗದಿಂ ಕಮಲಾಸನಾದಿಗಳಸಂಗಾತ ಸೃಷ್ಟಿಪ ಮಹಲಕ್ಷ್ಮೀ ಕೋಲೆಸಂಗಾತ ಸೃಷ್ಟಿಪ ಮಹಲಕ್ಷ್ಮೀ ನಿನ್ನ ಪಾ-ದಂಗಳಿಗೆರಗಿ ಬಲಗೊಂಬೆ ಕೋಲೆ 33 ಮಾಯಾ ಜಯಾಕೃತಿ ಶಾಂತಿ ಇಂದಿರಾದೇವಿಕಾಮನ ಜನನಿ ಜಯಂತಿ ಕೋಲೆಕಾಮನ ಜನನಿ ಜಯಂತಿ ಜಾನಕಿ ಸತ್ಯ-ಭಾಮಾ ರುಕ್ಮಿಣಿಯ ಬಲಗೊಂಬೆ ಕೋಲೆ 34 ಪರಮೇಷ್ಠಿ ಪರಮೇಷ್ಠಿ ನಿನ್ನ ಪದಪದುಮವ ಮುನ್ನ ಬಲಗೊಂಬೆ ಕೋಲೆ 35 ಹನುಮ ಭೀಮ ಮಧ್ವ ಮುನಿರಾಯ ಮಾರುತಿದನುಜಾರಿ ಭಕ್ತ ವಿರಕ್ತ ಕೋಲೆದನುಜಾರಿ ಭಕ್ತ ವಿರಕ್ತ ನಿನ್ನ ಪಾದವನಜವ ಮುನ್ನ ಬಲಗೊಂಬೆ ಕೋಲೆ 36 ವಾಣಿ ಅಜನ ಮುದ್ದು ರಾಣಿ ಪಲ್ಲವ ಪಾಣಿಜಾಣೆ ಕೊಡೆಮಗೆ ಮತಿಗಳ ಕೋಲೆಜಾಣೆ ಕೊಡೆಮಗೆ ಮತಿಗಳ ನಿನ್ನ ಪಾದರೇಣುವಿನ ಮುನ್ನ ಬಲಗೊಂಬೆ ಕೋಲೆ 37 ಭಾರತಿದೇವಿ ನಿನ್ನ ವಾರಿಜ ಚರಣವಬಾರಿ ಬಾರಿಗೆ ಭಜಿಸುವೆ ಕೋಲೆಬಾರಿ ಬಾರಿಗೆ ಭಜಿಸುವೆ ಎಮಗೆ ಶ್ರೀನಾರಾಯಣನಲ್ಲಿ ರತಿ ಕೊಡು ಕೋಲೆ 38 ಇಂದ್ರನ ಗೆದ್ದು ಸುಧೆ ತಂದು ಮಾತೆಯಬಂಧನ ಕಡಿದ ಬಲುಧೀರ ಕೋಲೆಬಂಧನ ಕಡಿದ ಬಲುಧೀರನಾದ ಖ-ಗೇಂದ್ರನ್ನ ಮುನ್ನ ಬಲಗೊಂಬೆ ಕೋಲೆ 39 ಸಾಸಿರ ಮುಖದಿಂದ ಶ್ರೀಶನ್ನ ತುತಿಸಿ ಶ್ರೀವಾಸುದೇವಂಗೆ ಹಾಸಿಕೆ ಕೋಲೆವಾಸುದೇವಂಗೆ ಹಾಸಿಕೆಯಾದ ಮಹ-ಶೇಷನ್ನ ಮುನ್ನ ಬಲಗೊಂಬೆ ಕೋಲೆ 40 ಅಪರಿಮಿತ ಕಾರ್ಯ ತ್ರಿಪುರ ದಹನನೆಚಪಲ ಮೂರುತಿ ಚಂದ್ರಚೂಡ ಕೋಲೆಚಪಲ ಮೂರುತಿ ಚಂದ್ರಚೂಡ ಭಜಕರಅಪಮೃತ್ಯು ಹರನ ಬಲಗೊಂಬೆ ಕೋಲೆ 41 ಖಗ ಶೇಷಶಂಭು ರಾಣಿಯರ ಬಲಗೊಂಬೆ ಕೋಲೆ 42 ಶಕ್ರ ಕಾಮಾದಿ ದೇವರ್ಕಳ ಚರಣಕ್ಕೆಅಕ್ಕರದಿಂದ ಅಭಿನಮಿಪೆ ಕೋಲೆಅಕ್ಕರದಿಂದ ಅಭಿನಮಿಸಿ ಪೇಳ್ವೆ ದೇ-ವಕ್ಕಿ ನಂದನನ ಚರಿತೆಯ ಕೋಲೆ 43 ಪದ್ಮನಾಭ ನರಹರಿತೀರ್ಥಶ್ರೀ ಮಾಧವಾರ್ಯ ಅಕ್ಷೋಭ್ಯ ಕೋಲೆಶ್ರೀ ಮಾಧವಾರ್ಯ ಅಕ್ಷೋಭ್ಯ ಜಯತೀರ್ಥಸ್ವಾಮಿಗಳ ಮೊದಲೆ ಬಲಗೊಂಬೆ ಕೋಲೆ 44 ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆನ್ಯಾಯ ಗ್ರಂಥಗಳ ರಚಿಸಿದ ಕೋಲೆನ್ಯಾಯ ಗ್ರಂಥಗಳ ರಚಿಸಿದ ನಮ್ಮ ವ್ಯಾಸ-ರಾಯರ ಮುನ್ನ ಬಲಗೊಂಬೆ ಕೋಲೆ 45 ಜನನಿ ಗರ್ಭದಿಂದವನಿ ಸ್ಪರ್ಶಿಸದೆಜನಿಸಿ ಬ್ರಹ್ಮಣ್ಯ ಮುನಿಗಳ ಕೋಲೆಜನಿಸಿ ಬ್ರಹ್ಮಣ್ಯ ಮುನಿಗಳ ಮೃದು ಹಸ್ತವನಜ ಸಂಭವನ ಬಲಗೊಂಬೆ ಕೋಲೆ 46 ಶ್ರೀಪಾದರಾಯರಲಿ ಸಕಲ ವಿದ್ಯವನೋದಿಶ್ರೀಪತಿ ಪ್ರೀತಿ ಪಡಿಸಿದ ಕೋಲೆಶ್ರೀಪತಿ ಪ್ರೀತಿ ಪಡಿಸಿದ ವ್ಯಾಸಮುನಿಭೂಪನ ಮೊದಲೆ ಬಲಗೊಂಬೆ ಕೋಲೆ 47 ದೇಶಾಧಿಪತಿಗೆ ಬಂದ ಕುಯೋಗವನೆ ನೂಕಿತಾ ಸಿಂಹಾಸನವೇರಿ ಮೆರೆದನೆ ಕೋಲೆತಾ ಸಿಂಹಾಸನವೇರಿ ಮೆರೆದನೆ ವ್ಯಾಸ ಮು-ನೀಶನ್ನ ಮೊದಲೆ ಬಲಗೊಂಬೆ ಕೋಲೆ 48 ದಂಡ ಕಮಂಡಲು ಧರ ಪಂಡಿತಾರಾಧಾರಕುಂಡಲಿಶಯನನ ಭಜಕರ ಕೋಲೆಕುಂಡಲಿ ಶಯನನ ಭಜಕ ರಾಘವೇಂದ್ರರಕೊಂಡಾಡಿ ಪದನ ಗುಣಿಸುವೆ ಕೋಲೆ 49 ತಂತ್ರ ಸಾರಗಳಿಗೆ ಅರ್ಥವನ್ನು ಸ್ವ-ತಂತ್ರದಿಂದಲಿ ರಚಿಸಿದ ಕೋಲೆ ಸ್ವ-ತಂತ್ರದಿಂದಲಿ ರಚಿಸಿದ ರಾಘವೇಂದ್ರರಪಂಥವಿದ್ದಲ್ಲಿ ಬಲಗೊಂಬೆ ಕೋಲೆ 50 ವೇದಶಾಸ್ತ್ರಾಮೃತ ಸಾರಬಲ್ಲ ರಾಮವೇದವ್ಯಾಸರ ಭಜಕರ ಕೋಲೆವೇದವ್ಯಾಸ ಭಜಕ ರಾಘವೇಂದ್ರರಪಾದವಿದ್ದಲ್ಲಿ ಬಲಗೊಂಬೆ ಕೋಲೆ 51 ತುಂಗಭದ್ರಾ ತೀರ ಮಂತ್ರಾಲಯದಲ್ಲಿಮಂಗಳ ಮಹಿಮರೆನಿಪರೆ ಕೋಲೆಮಂಗಳ ಮಹಿಮರೆನಿಪ ರಾಘವೇಂದ್ರ-ರಂಘ್ರಿ ಕಮಲವ ಬಲಗೊಂಬೆ ಕೋಲೆ 52 ಗುರು ರಾಘವೇಂದ್ರರ ಚರಣ ಪಂಕಜವನ್ನುಸ್ಥಿರ ಬುದ್ಧಿಯಿಂದ ಸ್ಮರಿಸುವೆ ಕೋಲೆಸ್ಥಿರ ಬುದ್ಧಿಯಿಂದ ಸ್ಮರಿಸಿ ನಾ ಪೇಳ್ವೆನುಸರಸಿಜಾಕ್ಷನ್ನ ಚರಿತೆಯ ಕೋಲೆ 53 ರಾಜರಾಜೇಶ್ವರ ಸತ್ಯಾಭಿನವ ತೀರ್ಥರಾಜಕರಾಬ್ಜ ಸಂಭೂತ ಕೋಲೆರಾಜಕರಾಬ್ಜ ಸಂಭೂತ ಸತ್ಯಾಧಿ-ರಾಜರ ಮೊದಲೆ ಬಲಗೊಂಬೆ ಕೋಲೆ 54 ಕ್ಷೀರನದಿಯ ತೀರ ವೇಲೂರ ಪುರವಾಸಸಾರ ಸಜ್ಜನರ ಪೊರೆವನೆ ಕೋಲೆಸಾರ ಸಜ್ಜನರ ಪೊರೆವ ಸತ್ಯಾಧಿರಾಜಧೀರ ಯತಿಗಳ ಬಲಗೊಂಬೆ ಕೋಲೆ 55 ಸತ್ಯಬೋಧರೆಂಬ ಸದ್ಗುರು ಚರಣವಚಿತ್ತದೊಳಿಟ್ಟು ಚರಿಸುವೆ ಕೋಲೆಚಿತ್ತದೊಳಿಟ್ಟು ಸ್ಮರಿಸಿ ನಾ ಪೇಳ್ವೆನುಚಿತ್ತದೊಲ್ಲಭನ ಚರಿತೆಯ ಕೋಲೆ 56 ಪುರಂದರ ರಾಯರಪರಮ ಕೃಪಾಪಾತ್ರ ವಿಜಯರಾಯ ಕೋಲೆಪರಮ ಕೃಪಾಪಾತ್ರ ವಿಜಯರಾಯರ ಪಾದಪರಮ ಭಕ್ತಿಯಲಿ ಸ್ಮರಿಸುವೆ ಕೋಲೆ 57 ದೇವ ನಾರಾಯಣ ಭೂದೇವಿ ಮೊರೆ ಕೇಳಿದೇವಕಿಯಲ್ಲಿ ಜನಿಸಿದ ಕೋಲೆದೇವಕಿಯಲ್ಲಿ ಜನಿಸಿ ಧಾರುಣಿದೇವಿ ಭಾರವನೆಲ್ಲನಿಳುಹಿದ ಕೋಲೆ 58 ಶಕಟ ಪೂತನಿ ವತ್ಸ ಬಕಧೇನುಕ ಕಂಸಮುಖಾದ್ಯರನ್ನು ಮಡುಹಿದ ಕೋಲೆಮುಖಾದ್ಯರನ್ನು ಮಡುಹಿ ವಸುದೇವ ದೇ-ವಕಿಯರ ಬಂಧನ ಬಿಡಿಸಿದ ಕೋಲೆ 59 ಹೆತ್ತ ತಾಯಿಯ ಮೊಲೆಯರ್ತಿಲಿ ನಲಿದುಂಡುಮತ್ತೆ ಬಾಲಲೀಲೆ ತೋರಿದ ಕೋಲೆಮತ್ತೆ ಬಾಲಲೀಲೆ ತೋರಿ ತೋಷವ ಪಡಿಸಿಮುತ್ಯಾಗೆ ಪಟ್ಟವ ಕಟ್ಟಿದ ಕೋಲೆ 60 ಜರೆಯ ಸುತನು ತಾನು ಜಗಳಕ್ಕೆ ಬಹನೆಂದುಕರೆಸಿದ ವಿಶ್ವಕರ್ಮನ್ನ ಕೋಲೆಕರೆಸಿದ ವಿಶ್ವಕರ್ಮನ್ನ ದ್ವಾರಕಪುರವ ನಿರ್ಮಿಸೆಂದಾಕ್ಷಣ ಕೋಲೆ 61 ದ್ವಾರಕಪುರದ ಶೃಂಗಾರ ವರ್ಣಿಸಲುಮೂರು ಕಣ್ಣವಗೆ ವಶವಲ್ಲ ಕೋಲೆಮೂರು ಕಣ್ಣವಗೆ ವಶವಲ್ಲ ನಾಲ್ಕಾರುಮೋರೆಯವರಿಗೆ ವಶವಲ್ಲ ಕೋಲೆ 62 ತಳಿರು ತೋರಣಗಳುಮೇರುವಿಗೆ ಪೊನ್ನ ಕಲಶವು ಕೋಲೆಮೇರುವಿಗೆ ಕಲಶ ಕನ್ನಡಿ ಮನೋ-ಹಾರವಾಗಿರುವುದು ಸಟೆಯಲ್ಲಿ ಕೋಲೆ 63 ಹದಿನಾರು ಸಾವಿರ ಚದುರೇರ ಮಂದಿರವುಮದನನಯ್ಯನ ಮನೆ ಮಧ್ಯ ಕೋಲೆಮದನನಯ್ಯನ ಮನೆ ಮಧ್ಯ ಪ್ರದೇಶಅದುಭುತವಾಗಿ ಬೆಳಗೋದು ಕೋಲೆ 64 ನಾರಿ ರುಕ್ಮಿಣಿ ಸತ್ಯಭಾಮೆದೇವಿ ಮತ್ತೆವಾರಿಜಮುಖಿಯರ್ ನಾಲ್ಕೆರಡು ಕೋಲೆವಾರಿಜಮುಖಿಯರ್ ನಾಲ್ಕೆರಡು ಸಹಿತಾಗಿವಾರಿಜನಾಭ ಕುಳಿತಿದ್ದ ಕೋಲೆ 65 ಶ್ರೀ ಭೂರಮಣನಾದ ಶ್ರೀಕೃಷ್ಣನರಮನೆಗೆಸುಭದ್ರೆ ಮುಯ್ಯ ತರುತಾಳೆ ಕೋಲೆಸುಭದ್ರೆ ಮುಯ್ಯ ತರುತಾಳೆ ಗಜಪುರಭೂ ಭುಜರೆಲ್ಲ ಬರುತಾರೆ ಕೋಲೆ 66 ಧರ್ಮ ಭೀಮಾರ್ಜುನ ನಕುಲ ಸಹದೇವರುಪೆರ್ಮೆಯಿಂದಲಿ ಪೊರವಂಟು ಕೋಲೆಪೆರ್ಮೆಯಿಂದಲಿ ಪೊರವಂಟು ದಿಕ್ಪಾಲರುಕೂರ್ಮೆಯಿಂದಲಿ ಬರತಾರೆ ಕೋಲೆ 67 ವಜ್ರ ಧರಿಸಿ ಉ-ಪೇಂದ್ರನರಮನೆಗೆ ಬರುತಾರೆ ಕೋಲೆ 68 ಸತಿ ಸ್ವಾಹಾದೇವಿಯ ಕೂಡಿಅತಿಶಯದಿಂ ಮೇಷವೇರುತ್ತ ಕೋಲೆಅತಿಶಯದಿಂ ಮೇಷವೇರಿ ಶಕ್ತಿಯ ಪಿಡಿದುಕ್ರ್ರತುಪತಿ ಮನೆಗೆ ಬರುತಾನೆ ಕೋಲೆ 69 ಯಮನು ಮಹಿಷವೇರಿ ಗಮನದಿಂದಲಿ ಸತಿಶಾಮಲಾದೇವಿ ಸಹಿತಲಿ ಕೋಲೆಶಾಮಲೆ ಸಹಿತ ದಂಡಾಯುಧ ಧರಿಸಿರಾಮನ ಮನೆಗೆ ಬರುತಾನೆ ಕೋಲೆ 70 ನಿರರುತಿ ತಾನೊಂದು ನರನ ಪೆಗಲನೇರಿಪರಮಾಪ್ತ ಸ್ತ್ರೀಯನೊಡಗೂಡಿ ಕೋಲೆಪರಮಾಪ್ತ ಸ್ತ್ರೀಯನೊಡನೆ ಕುಂತವ ಧರಿಸಿಧರಾಧರನ ಮನೆಗೆ ಬರುತಾನೆ ಕೋಲೆ 71 ವರುಣ ತಾನೊಂದು ಮಕರಿಯನೇರಿಕೊಂಡುಸಿರಿ ಭಾಗೀರಥಿಯನೊಡಗೊಂಡು ಕೋಲೆಸಿರಿ ಭಾಗೀರಥಿಯನೊಡನೆ ಪಾಶಧರಿಸಿಸಿರಿವತ್ಸನರಮನೆಗೆ ಬರುತಾನೆ ಕೋಲೆ 72 ಮರುತದೇವನೊಂದು ಎರಳೆಯನೇರಿತರುಣಿ ಪ್ರಾವಹಿಯೊಡಗೂಡಿ ಕೋಲೆ ತರುಣಿ ಪ್ರಾವಹಿಗೂಡಿ ಧ್ವಜ ಧರಿಸಿ ಶ್ರೀ-ಧರನ ಮನೆಗೇ ಬರುತಾನೆ ಕೋಲೆ 73 ವಿತ್ತಪತಿಯೊಂದು ಉತ್ತಮ ಹಯವೇರಿಚಿತ್ತದೊಲ್ಲಭೆಯ ಒಡಗೂಡಿ ಕೋಲೆಚಿತ್ತದೊಲ್ಲಭೆಯ ಒಡನೆ ಖಡ್ಗ ಧರಿಸಿಕರ್ತನ್ನ ಮನೆಗೆ ಬರುತಾನೆ ಕೋಲೆ 74 ಈಶಾನ ತಾನೊಂದು ವೃಷಭವೇರಿಕೊಂಡುಶ್ರೀ ಸತಿದೇವಿಯೊಡಗೂಡಿ ಕೋಲೆಶ್ರೀ ಸತಿದೇವಿಯೊಡಗೂಡಿ ಶೂಲ ಧರಿಸಿ ನಾ-ರಸಿಂಹನ ಮನೆಗೆ ಬರುತಾನೆ ಕೋಲೆ 75 ಹರಿಯೇ ಸರ್ವೋತ್ತಮ ಹರಿಯೇ ಪರದೇವತೆಹರಿದಾಸರೆಂಬೋ ಬಿರುದಿನ ಕೋಲೆಹರಿದಾಸರೆಂಬೋ ಬಿರುದಿನ ಹೆಗ್ಗಾಳೆಹಿರಿ ಬಾಗಿಲೊಳು ಹಿಡಿಸಿಹರು ಕೋಲೆ 76 ಒಬ್ಬನೆ ವಿಷ್ಣುವಿನ್ನೊಬ್ಬ ದೈವಗಳಿಲ್ಲೆಂ-ದಬ್ಬರದಿಂದ ನಾಗಸ್ವರ ಕೋಲೆಅಬ್ಬರದಿಂದ ನಾಗಸ್ವರಂಗಳಹೆಬ್ಬಾಗಿಲೊಳಗೆ ನುಡಿಸೋರು ಕೋಲೆ 77 ಖಳನ ಬೆನ್ನ ಚರ್ಮ ಸುಲಿದು ಭೇರಿಗೆ ಹಾಕಿಅಲವ ಬೋಧರೆ ಜಗದ್ಗುರು ಕೋಲೆಅಲವ ಬೋಧರೆ ಜಗದ್ಗುರುಗಳೆಂತೆಂದುಛಲದಿಂದ ಭೇರಿಯ ಹೊಡಿಸೋರು ಕೋಲೆ 78 ವಿಷ್ಣು ಸರ್ವೋತ್ತಮ ವಿಷ್ಣು ಪರದೇವತೆವಿಷ್ಣುದಾಸರೆಂಬ ಬಿರುದಿನ ಕೋಲೆವಿಷ್ಣುದಾಸರೆಂಬ ಬಿರುದಿನ ಠೆಕ್ಕೆಯಘಟ್ಯಾಗಿ ಎತ್ತಿ ನಿಲಿಸೋರು ಕೋಲೆ 79 ಮತದೊಳು ಮಧ್ವಮತ ವ್ರತದೊಳು ಹರಿದಿನಕಥೆಯೊಳು ಭಾಗವತವೆನ್ನಿ ಕೋಲೆಕಥೆಯೊಳ್ ಭಾಗವತವೆನ್ನಿ ಇದರಂತೆಪ್ರತಿಮೆಯೊಳ್ ವಿಷ್ಣು ಪ್ರತಿಮೆನ್ನಿ ಕೋಲೆ 80 ಈಚಲ ಬನದೊಳು ಗೋ ಕ್ಷೀರ ಕುಡಿದಂತೆನೀಚರ ಸಂಗ ಸುಜನರು ಕೋಲೆನೀಚರ ಸಂಗ ಸುಜನರು ಮಾಡಲುಈಚೆ ನೋಡುವರಿಗೆ ಅನುಮಾನ ಕೋಲೆ 81 ಸೂರಿ ಜನರ ಸಂಗ ಸುಧೆಯ ಪ್ರಾಶನೆಯಂತೆಹೋರಣೆ ಗುಣವುಳ್ಳ ಅಧಮರ ಕೋಲೆಹೋರಣೆ ಗುಣವುಳ್ಳ ಅಧಮರ ಸಹವಾಸನೀರುಳ್ಳಿ ತಿಂದ ತೆರನಂತೆ ಕೋಲೆ 82 ಒಳ್ಳೆ ಮನುಜರ ಸಂಗ ಮಲ್ಲಿಗೆ ಮುಡಿದಂತೆಖುಲ್ಲ ಕುಮತಿಯ ಸಹವಾಸ ಕೋಲೆಖುಲ್ಲ ಕುಮತಿಯ ಸಹವಾಸ ಮಾಡಲುಮುಲ್ಲಂಗಿ ತಿಂದು ತೇಗಿದಂತೆ ಕೋಲೆ 83 ಭಾವಜ್ಞರ ಸಂಗ ಶ್ಯಾವಿಗಿ ಉಂಡಂತೆಭಾವವನರಿಯದ ಬಲುಹೀನ ಕೋಲೆಭಾವವನರಿಯದ ಬಲುಹೀನರ ಸಂಗಬೇವಿನಹಾಲ ಕುಡಿದಂತೆ ಕೋಲೆ 84 ಬಾಳುವರ ಸಂಗ ಹಾಲೋಗರುಂಡಂತೆಬಾಳುವೆಗೆಟ್ಟ ಅಧಮರ ಕೋಲೆಬಾಳುವೆಗೆಟ್ಟ ಅಧಮರ ಸಹವಾಸಹೇಳಬಾರದ್ದು ತಿಂದಂತೆ ಕೋಲೆ 85 ಹರಿಗುರು ದ್ರೋಹಿ ಮರಳಿ ಮಾತೃ ದ್ರೋಹಿವರ ವೈಷ್ಣವ ದ್ರೋಹಿ ಪಿತೃ ದ್ರೋಹಿ ಕೋಲೆವರ ವೈಷ್ಣವ ದ್ರೋಹಿ ಸ್ವಾಮಿ ದ್ರೋಹಿನೆರಳು ಬಿದ್ದವರ ನೆರೆಹೊಲ್ಲ ಕೋಲೆ 86 ಕತ್ತೆ ಕುದುರೆ ಒಂದೆ ಅತ್ತೆ ಸೊಸೆಯು ಒಂದೆಹೆತ್ತಮ್ಮ ಒಂದೆ ಹೆಂಡ್ತೊಂದೆ ಕೋಲೆಹೆತ್ತಮ್ಮ ಒಂದೆ ಹೆಂಡ್ತೊಂದಾದ ಮೇಲೆವ್ಯರ್ಥದ ಮದುವೆ ನಿನಗ್ಯಾಕೆ ಕೋಲೆ 87 ಅಕ್ಕ ತಂಗಿಯು ಒಂದೆ ಮಕ್ಕಳು ಸೊಸೆ ಒಂದೆಚಿಕ್ಕಮ್ಮ ಒಂದೆ ಹೆಂಡ್ತೊಂದೆ ಕೋಲೆಚಿಕ್ಕಮ್ಮ ಒಂದೆ ಹೆಂಡ್ತೊಂದಾದ ಮೇಲೆರೊಕ್ಕ ವೆಚ್ಚ ಮಾಡಿ ಮದುವ್ಯಾಕೆ ಕೋಲೆ 88 ಹಿಟ್ಟು ಬೂದಿ ಒಂದೆ ರೊಟ್ಟಿ ಮುಚ್ಚಳ ಒಂದೆಕಟ್ಟಿಗೆ ಒಂದೆ ಕಬ್ಬೊಂದೆ ಕೋಲೆಕಟ್ಟಿಗೆಯೊಂದೆ ಕಬ್ಬೊಂದಾದ ಮೇಲೆಕಟ್ಟಿಗೆ ಯಾಕೆ ಮೆಲುವೊಲ್ಲೆ ಕೋಲೆ 89 ಹಾಲು ಮಜ್ಜಿಗೆಯೊಂದೆ ಕೋಳಿ ಕೋಗಿಲೆಯೊಂದೆಮಾಳಿಗೆ ಒಂದೆ ಬಯಲೊಂದೆ ಕೋಲೆಮಾಳಿಗೆಯೊಂದೆ ಬಯಲು ಒಂದಾದರೆಹೇಳಬಾರದ್ದು ತಿನವಲ್ಯ ಕೋಲೆ 90 ಗಂಗೆಯ ತಡಿಯಲ್ಲಿ ಲಿಂಗವನರ್ಚಿಸಿಅಂಗೈಯಲಿಟ್ಟು ಪೂಜಿಸುವೆ ಕೋಲೆಅಂಗೈಯಲಿಟ್ಟು ಪೂಜಿಸುವೆ ಎಲೆ ಪಾಪಿಲಿಂಗನು ನೀನು ವಂದ್ಹ್ಯಾಗೆ ಕೋಲೆ 91 ಶಿವನು ನೀನಾದರೆ ಶಿವೆಯು ನಿನಗೇನುಅವಿವೇಕಿ ಮನುಜ ಈ ಮಾತು ಕೋಲೆಅವಿವೇಕಿ ಮನುಜ ಈ ಮಾತು ಕೇಳಿದರೆಕವಿಗಳು ನಗರೆ ಕೈ ಹೊಯ್ದು ಕೋಲೆ 92 ವೇದ ಪ್ರಾಮಾಣ್ಯಂದು ಸುಜನರಿಗೆಲ್ಲಬೋಧಿಸುತಿಪ್ಪ ಬೌದ್ಧನ ಕೋಲೆಬೋಧಿಸುತಿಪ್ಪ ಬೌದ್ಧನ ಎಳೆದೊಯ್ದುಕಾದೆಣ್ಣೆಯೊಳು ಕೆಡುಹೋರು ಕೋಲೆ 93 ಇಲ್ಲಿ ಮಾತ್ರ ಭೇದ ಅಲ್ಲಿಯೊಂದೆ ಎಂಬಕ್ಷುಲ್ಲಕರ ಹಿಡಿದು ಹಲ್ಮುರಿದು ಕೋಲೆಕ್ಷುಲ್ಲಕರ ಹಿಡಿದು ಹಲ್ಮುರಿದು ಯಮರಾಯಕಲ್ಲುಗಾಣಕ್ಕೆ ಹಾಕಿಸುವ ಕೋಲೆ 94 ಅಪ್ಪ ನಾರಾಯಣನಿಪ್ಪಂಥ ಅರಮನೆಅಪ್ರಾಕೃತದ ವೈಕುಂಠ ಕೋಲೆಅಪ್ರಾಕೃತದ ವೈಕುಂಠವೆಂಬೋದುಸ್ವ ಪ್ರಕಾಶದ ಪರಮಾತ್ಮ ಕೋಲೆ 95 ಸುತ್ತ ವಿರಜಾನದಿ ಮತ್ತೆ ಆನಂದ್ವನಚಿತ್ತಜನೈಯ್ಯನರಮನೆಗೆ ಕೋಲೆಚಿತ್ತಜನೈಯ್ಯನರಮನೆ ಎಂಬುದುಉತ್ತಮೋತ್ತಮ ವೈಕುಂಠ ಕೋಲೆ 96 ನೀಲ ವೈಢೂರ್ಯ ನಿಚ್ಚಳ ವಜ್ರಅಚ್ಚ ಮಾಣಿಕ್ಯದ ಅಳವಟ್ಟು ಕೋಲೆಅಚ್ಚ ಮಾಣಿಕ್ಯದ ಅಳವಟ್ಟು ಹರಿಪುರಅಚ್ಯುತನಿಪ್ಪ ಅರವನೆ ಕೋಲೆ 97 ಸಿರಿಯು ತಾ ಮುರಹರನ ಪಟ್ಟಣದಲ್ಲಿವಿರಜೆಯೆಂತೆಂದು ಕರೆಸೋಳು ಕೋಲೆವಿರಜೆಯೆಂತೆಂದು ಕರೆಸಿ ವೈಕುಂಠಕ್ಕೆಪರಿಖಾ ರೂಪದಲ್ಲಿ ಮೆರೆವಳು ಕೋಲೆ 98 ಉತ್ತರದಿ ನಾಲ್ಕು ತತ್ಥಳಿಸುವ ದ್ವಾರಮುತ್ತು ಮಾಣಿಕ್ಯ ನವರತ್ನ ಕೋಲೆಮುತ್ತು ಮಾಣಿಕ್ಯ ನವರತ್ನ ಝಲ್ಲಿಯಎತ್ತಿ ಮೇಲ್ಕಟ್ಟು ಬಿಗಿದಿದೆ ಕೋಲೆ 99 ಜಯ ವಿಜಯಾದ್ಯೆಂಟು ದ್ವಾರಪಾಲಕರುಜಯದೇವಿ ರಮಣನರಮನೆಗೆ ಕೋಲೆಜಯದೇವಿ ರಮಣನರಮನೆ ಬಾಗಿಲೊಳ್‍ಜಯ ಜಯವೆನುತ ನಿಂದಾರೆ ಕೋಲೆ 100 ಕಸವೆಲ್ಲ ಪರಿಮಳ ಕೆಸರೆಲ್ಲ ಶ್ರೀಗಂಧಬಿಸರುಹ ನೇತ್ರನ ಅರಮನೆ ಕೋಲೆಬಿಸರುಹ ನೇತ್ರನ ಅರಮನೆಯೊಳಗೆಲ್ಲಕುಸುಮದ ಮಳೆಯು ಗರೆವುದು ಕೋಲೆ 101 ಕಾಜಿನ ನೆಲೆಗಟ್ಟು ರಾಜ ಮಾಣಿಕ ಗೋಡೆಈ ಜಡ ದ್ರವ್ಯವಲ್ಲಿಲ್ಲ ಕೋಲೆಈ ಜಡ ದ್ರವ್ಯವಲ್ಲಿಲ್ಲ ಪುಸಿಯಲ್ಲಶ್ರೀ ಜನಾರ್ದನನರಮನೆಯೊಳ್ ಕೋಲೆ 102
--------------
ಮೋಹನದಾಸರು