ಆರು ಸಂಗಡ ಬಾಹೊರೆಲೆ ಮನುಜ ನಿನಗೆ
ಹಾರೈಸಿ ಬಳಲುವೆ ಬರಿದೆ ಭವದೊಳಗೆ ಪ
ಗುರುಹಿರಿಯರಗ್ನಿಯ ಪರಿಮುಖದಿ ನಿನ್ನಯ
ಕರಪಿಡಿದು ಮಾಂಗಲ್ಯ ಧರಿಸಿಕೊಂಡರ್ಧ
ಶರೀರವೆನಿಸುವ ಸತಿಯು ಮರಣ ಕಾಲದಿ ನಯನ
ತಿರುಗುವುದ ಕಂಡಂಜಿ ತಿರಿಗಿನಿಂತಳುತಿಹ್ಯಳು 1
ತನುಜಮನುಜರಿವರೆಲ್ಲ ನಿನಗತಿಹಿತ ಬಂಧು
ಮಣಿದು ಸೇವಿಪರು ನಿನ್ನನುದಿನವು ಬಿಡದೆ
ತನುಬಿಟ್ಟ ಕ್ಷಣದಿ ನನನಿನಗೆನುತ ಮನೆಕೀಲಿ
ಘನ ಜಗಳ ಕಾಣು ಬಿದ್ದ್ಹೆಣದ ಪರಿವಿಲ್ಲದೆ 2
ಕುಲವಿದ್ಯವ್ಯವಹಾರ ಕಳವುಕೊಲೆ ನೃಪಸೇವೆ
ತಲೆ ಬಾಗಿ ಜನರಲ್ಲಿ ಬಲುದೈನ್ಯ ಬಟ್ಟು
ಗಳಿಸಿ ಹೂಳಿದ ದ್ರವ್ಯ ಎಳೆದೊಯ್ಯಲ್ಯಮ ನಿನ್ನ
ತಲೆಯೆತ್ತಿ ನೋಡದಲೆ ನೆಲದಿ ನಿಲ್ಲುವುದು 3
ಭೂಮಿ ನಿನ್ನದು ಎಂದು ನೇಮವನು ಬರಕೊಂಡು
ಕೋಮಲ ಮನೆಕಟ್ಟಿ ತಾಮಸದಿ ನಲಿವಿ
ಭೂಮಿಯ ರಿಣತೀರಿ ನೀ ಮಡಿದಾಕ್ಷಣ ಬಹಿ
ರ್ಭೂಮಿಯೋಳ್ಹುತಿವರೆಲೆ ಪಾಮರ ಮನುಜ 4
ಬಂಧುಬಾಂಧವರೆಲ್ಲ ಹಿಂದೆ ಉಳಿಯುವರು
ಮಂದನಾಗದೆ ತಂದೆ ಶ್ರೀರಾಮ ಪಾದಾರವಿಂದಮಂ
ನಂಬಿ ಭವಬಂಧವನು ಗೆಲಿಯೊ 5