ಒಟ್ಟು 359 ಕಡೆಗಳಲ್ಲಿ , 76 ದಾಸರು , 318 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಗು ಮಲಗೆಲೊ ಸುಮ್ಮನೆ ಸುಕುಮಾರ ಚೆಲುವ ಜೋಗುಳವ ಪಾಡುವೆ ಗೋಪಾಲ ಪ ಲಲನಾಮಣಿಯರು ಸುಲಭದಿ ನಿನ್ನನು ಕಲಭಾಷಣದಿಂದ ಸೆಳೆಯ ಬಯಸುತಿಹರೋ ಅ.ಪ ಭೋಗಿಶಯನ ಹರಿ ಈ ಜಗದೊಳಗೆ ಈಗ ಬಂದಿರುವ ಜಾಗವನರಿಯದೆ ಯೋಗಿ ಜನರು ಅನುರಾಗದಿಂದ ನಿನ್ನ ಸಾಗಿಸಲಿರುವರೊ ಕೂಗದೆ ಸುಖದಲಿ 1 ದುರುಳ ಶಕಟನನು ಮುರಿದ ಕೋಮಲದ ಚರಣ ಕಮಲಗಳು ಉರಿಯುತಲಿದ್ದರು ಮರೆಯಲದನು ಸುವಿನೋದವೀಯುವ ಸರಸಪದಗಳನು ಪರಿಪರಿಯರುಹುವೆನೊ 2 ಎನ್ನಯ ಕರಗಳು ನೋಯುತಲಿರುವುವು ಚಿನ್ಮಯ ರೂಪನೆ ನಿದ್ರೆಯ ಮಾಡೊ ದಧಿ ಪಯ ಬೆಣ್ಣೆಯ ಕೊಡುವೆ ಪ್ರಸನ್ನ ಸುಹೃದಯದಲಿ 3
--------------
ವಿದ್ಯಾಪ್ರಸನ್ನತೀರ್ಥರು
ಮುನಿಯುವರೇ ಕೃಷ್ಣಾ ಮುನಿಯುವರೆ ಪ ದಣಿಸಲಾಗದೊ ನಿನ್ನ ನೆನೆವ ಭಕುತರೊಳು ಅ.ಪ ಮುನಿಗಳು ಮನದೊಳು ಕ್ಷಣಬಿಡದಲೆ ನಿನ್ನ ದಣಿಸಿ ಕುಣಿಸುವರೊ ಮೌನದಿಂದಲಿ ನಾ ಮಣಿದು ಬೇಡುವೆ ಬರಿದೆ ಹಣಿದು ಬಿಸುಡುವರೆ ಕೆಣಕಿದವರ ನೀ ಕ್ಷಣದಿ ಕಾಪಾಡಿದೆ 1 ಬಲಿಯ ಯಾಚಿಸಿ ಭಕ್ತಿಬಲೆಗೆ ನೀ ಸಿಲುಕಿದೆ ಶಿಲೆಯನೊತ್ತಿ ಸುಶೀಲೆಯ ಪೊರೆದೆ ಜಲಧಿಶಯನಾ ನೀ ರಥಕೆ ಸಾರಥಿಯಾದೆ ಛಲವೇತಕೆನ್ನೊಳು ನೀನೆ ಗತಿ ಎಂದರೆ2 ಎಂಜಲಾಸೆಗೆ ಸೋತು ಶಬರಿಯ ಪೊರೆದೆ ಸಂಜೆ ಹಗಲೆನ್ನದೆ ಎಂಜಲ ಬಳಿದೆ ಅಂಜದೆ ಅಜಾಮಿಳಗೊಲಿದೆಯೋದೇವ ಅಂಜೆನೊ ಎಂದಿಗೂ ಕುಂಜರವರದಾ 3 ಶಪಥಮಾಡಿ ನಿನ್ನ ಪಂಥವ ಕೆಡಿಸಲು ಕುಪಿತನಾಗಲಿಲ್ಲ ಕುರುಪಿತಾಮಹನೊಳು ಆಪ್ತನಿಮಿತ್ತಬಾಂಧವನೆಂದು ನಿನ್ನ ಪ್ರಾಪ್ತಿಯ ಬೇಡಲು ಬಂದುದಕೆ ಈಗ 4 ಪರಿ ಅಂಕಿತ ಪೇಳದೆ ಬಿಂಕತನದಲಿ ಕಾಲವ ಕಳೆದೆ ಶಂಕರನುತ ಶ್ರೀ ವೇಂಕಟೇಶ ನಿನ್ನ ಕಿಂಕರನೆನಿಸೆನ್ನ ಸಂಕಟ ಹರಿಸೂ5
--------------
ಉರಗಾದ್ರಿವಾಸವಿಠಲದಾಸರು
ಮುಯ್ಯ ಒಯ್ಯೋಣು ಬಾರೆ ಮಾನಿನಿಯರೆಲ್ಲರು ನೀರೆಮೈ ಮರೆದೇನೆ ನಾರಿ ಮಾರನಯ್ಯನ ತೋರೆ ಪ. ಹರದಿ ಸುಭದ್ರಾ ತಮ್ಮ ದೊರೆಗಳಿಗೆ ಅರುಹಲು ಪರಮ ಹರುಷರಾಗಿ ಐವರು ಚಪಲಾಕ್ಷಿ ಪರಮ ಹರುಷರಾಗಿ ಐವರು ಮುಯ್ಯಕ್ಕದುರದಿಂದ ಭೇರಿ ಹೊಯ್ಸಿದರ ಚಪಲಾಕ್ಷಿ1 ಹಸ್ತಿನಾಪುರದರಸು ಮತ್ತೆ ಜೋಯಿಸರ ಕರೆಸಿ ಮುತ್ತು ತುಂಬಿಡಿಸಿ ಮರದಾಗ ಚಪಲಾಕ್ಷಿಮುತ್ತು ತುಂಬಿಡಿಸಿ ಮರದಾಗ ಮುಯ್ಯಕ್ಕಉತ್ತಮ ತಿಥಿಯು ಬರಬೇಕು ಚಪಲಾಕ್ಷಿ 2 ಧರ್ಮನ ಪ್ರಶ್ನೆಯ ಪ್ರೇಮದಿಂದಲೆ ಕೇಳಿ ಅಮ್ಮಯ್ಯ ಶ್ರೀ ರಮಣನ ನೆನೆಯುತ ಚಪಾಲಾಕ್ಷಿ ಶ್ರೀ ರಮಣನ ನೆನೆಯುತ ಬೃಹಸ್ಪತಿಜಮ್ಮನೆ ತೆಗೆದಾ ಶುಭತಿಥಿಚಪಲಾಕ್ಷಿ3 ಈಗಿನ ವ್ಯಾಳ್ಯಕ್ಕ ಜಾಗು ಮಾಡದೆ ಕೃಷ್ಣಿಹೋಗ ನೀಗೆದ್ದು ಬರತೀಯೆ ಚಪಲಾಕ್ಷಿಹೋಗ ನೀಗೆದ್ದು ಬರತೀಯೆ ಎನುತಲೆ ಆಗಬೃಹಸ್ಪತಿಯು ನುಡಿದಾನೆ ಚಪಲಾಕ್ಷಿ 4 ಇಂದಿನ ದಿವಸÀಕ್ಕ ಸಂದೇಹ ಬ್ಯಾಡವ್ವಾ ತಂದೆರಾಮೇಶನ ಮಡದೇರ ಚಪಲಾಕ್ಷಿತಂದೆ ರಾಮೇಶನ ಮಡದೇರ ನಾಚಿಸಿ ಬಂದಿಯೆಕೃಷ್ಣಿ ನಗುತಲೆ ಚಪಲಾಕ್ಷಿ5
--------------
ಗಲಗಲಿಅವ್ವನವರು
ಮೂರು ನಾಮಗಳ ಧರಿಸಿರುವ ಕಾರಣವೇನು ಸಾರಿ ಪೇಳಲೊ ಈಗಲೆ ಪ. ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ ಯಾರು ಇಟ್ಟರೋ ನಿನಗೆ ಈ ಮೂರು ನಾಮ ಅ.ಪ. ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು ಕರವ ಮುಗಿದು ಎದ್ದು ನೋಡಲು ನಿನ್ನ ಫಣಿಯೋಳೀ ತರವಿರಲು ಮಧ್ವಮತ ದೈವವೆಂದಿನ್ನು ತಿಳಿಯುವರೆ 1 ಮೂರುರೂಪನು ನಾನು ಮೂರು ಲೋಕಗಳಿಹವು ಮೂರು ಮಾಳ್ಪೆನು ಜಗವ ಮೂರು ಗುಣದಿ ಮೂರು ತಾಪವ ಗೆದ್ದು ಮೂರು ಮಾರ್ಗದಿ ಭಜಿಸೆ ಪಾರು ಮಾಡುವೆನೆಂದು ತೋರುವ ಸೊಬಗೊ 2 ಸಾಲದೆ ನಿನಗೆ ಸೌಂದರ್ಯಕೆ ಒಂದು ತಿಲುಕ ಪಾಲಸಾಗರಶಾಯಿ ಚಲುವಮೂರ್ತಿ ಕಾಲಕಾಲಕೆ ಜನರ ದೃಷ್ಟಿ ತಗುಲುವುದೆಂದು ಲೀಲೆಯಿಂದಲಿ ಹೀಗೆ ಧರಿಸಿದೆಯ ಪೇಳೊ 3 ಮೂರೆರಡು ಎರಡೊಂದು ಇಂದ್ರಿಯವನರ್ಪಿಸಲು ತೋರುವನು ನಿಜರೂಪ ಭಕ್ತಗೆಂದು ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದರೆ ಮೂರುನಾಮವೆ ಗತಿ ಎನ್ನುವ ಬಗೆಯೊ 4 ಶ್ರೀಲೋಲ ಗೋಪಾಲಕೃಷ್ಣವಿಠ್ಠಲ ನಿನ್ನ ಈ ಲೀಲೆ ಬಗೆಯನು ಅರಿವವರ್ಯಾರೊ ವ್ಯಾಳಶಯನ ವೆಂಕಟೇಶ ಎನ್ನ ಮನದಿ ಕಾಲಕಾಲಕೆ ನಿನ್ನ ರೂಪವನೆ ತೋರೋ 5
--------------
ಅಂಬಾಬಾಯಿ
ಮೂರ್ತಿ ಚಿನ್ಮಯಾತ್ಮಕ ರೂಪ ಸಂತತದಿ ನೆನೆವವರ ಸಲಹೊ ಕರುಣಿ ಪ. ತುಂಬಿ ಇರುತಿಹುದು ಎಂತು ನಿನ್ನಾಟ ಪೇಳ್ ನಿಗಮವೇದ್ಯ ಚಿಂತೆ ಎನಗೊಂದಿಲ್ಲ ಅಂತರಂಗದಿ ನೆಲೆಸಿ ಸಂತತದಿ ನಿನ ಧ್ಯಾನ ನೀಡೆಂಬೆನೊ 1 ದೇಶಾಧಿಪತಿಗಳಿಗೆ ಕೋಶ ತುಂಬದ ಚಿಂತೆ ದೇಶ ತಿರುಗುವನಿಗೆ ಹಣದ ಚಿಂತೆ ದೇಶಸ್ಥನಾದವಗೆ ರಾಜಭಟರಾ ಚಿಂತೆ ಕಾಶಿಯಲ್ಲಿರುವವಗೆ ಮನೆಯ ಚಿಂತೆ 2 ಜಾರಿಣಿಗೆ ವಿಟನೊಬ್ಬ ಬಾರದಿರುವ ಚಿಂತೆ ಚೋರನಿಗೆ ರವಿ ಮುಳುಗದಿರುವ ಚಿಂತೆ ಮಾರನಿಗೆ ಯೋಗಿಗಳ ಹೃದಯ ಭೇದಿಪ ಚಿಂತೆ ಪತಿ ಒಲುಮೆ ಪಡೆವ ಚಿಂತೆ 3 ಕರ್ಮತತ್ಪರರಿಗೆ ಹರಿಮರ್ಮವರಿಯದ ಚಿಂತೆ ಧರ್ಮಪುರುಷಗೆ ಕಲಿಬಾಧೆಯ ಚಿಂತೆ ವೇದಶಾಸ್ತ್ರಜ್ಞನಿಗೆ ವಾದಿಯ ಭಯ ಚಿಂತೆ ಹಾದಿ ನಡೆವಗೆ ದುಷ್ಟ ಜನರ ಚಿಂತೆ 4 ಸಾಧು ಸಜ್ಜನರಿಗೆ ಬಾಧೆ ಕೊಡುವರ ಚಿಂತೆ ಹಾದಿ ತಪ್ಪಿದ ಪಾಪಿಗೆ ಯಮನ ಚಿಂತೆ ವಾಣಿಜ್ಯತನದವಗೆ ಹಣವು ಗಳಿಸುವ ಚಿಂತೆ ಮಾನವಂತರಿಗೂನ ನುಡಿಯ ಚಿಂತೆ 5 ಇಂತೆಲ್ಲರಾ ಚಿಂತೆ ಇರಲಿ ಕೇಳ್ ಹರಿಯೆ ಚಿಂತೆ ಬಿಡಿಸೆನಗೆ ನೀನೊಲಿದು ದೊರೆಯೆ ಚಿಂತನೆಗೆ ಸಿಗದಿಹುದು ನಿನಗೆ ಸರಿಯೆ ಚಿಂತಿಪರಿಗೊಲಿವಂಥ ಸಿರಿಕಾಂತ ಹರಿಯೆ6 ಶಾಂತ ಮೂರುತಿ ಪರಮ ಕರುಣಾಳುವೆನ್ನುತಲಿ ಎಂತೆಂತೂ ಸಜ್ಜನರು ಸ್ತುತಿಪುದನು ಕೇಳುತಲಿ ಇಂತು ನಿನ ಪದವನಾನ್ಹಾರೈಸಿ ಬಂದರೂ ನಿಂತರೂ ಎದುರಲ್ಲಿ ನೀನೊಲಿಯಲಿಲ್ಲ 7 ಕರಮುಗಿದು ಎರಗಿದರೂ ಶಿರಬಾಗಿ ನಮಿಸಿದರೂ ಚರಣದಲಿ ತನುಮನ ಒಪ್ಪಿಸಿದರೂ ಕರಗಲಿಲವು ಮನಸು ಕರುಣಪುಟ್ಟಲು ಕಾಣೆ ಭರವಸೆಯು ನಿನ್ನಲ್ಲಿ ಮೂಡಲಿಲ್ಲ 8 ಶಿರದಿ ಕರವಿಡಲಿಲ್ಲ ತೊರೆದೆಯೊ ಜರಿದೆಯೊ ವರಭಕ್ತಿ ಸಾಲದೊ ಗುರುವಿಕೆಯೊ ದೊರೆತನವೊ ಅರಹೊಟ್ಟೆ ಜೀವಿಸುತ ಅರಿಯದೆ ಮತ್ತೊಂದು ಇರುಳು ಹಗಲಾಲ್ಪರಿವ ತೆರವು ತೋರದೊ ಮನಕೆ 9 ಸರಿಯಲ್ಲ ಸರಿಯಲ್ಲ ಕರುಣಾಳುವೆಂಬುವೋ ಬಿರುದುಳಿವ ತೆರವಿಲ್ಲ ಬಿಂಕಪಟ್ಟರೆ ಈಗ ಕರೆದು ಮನ್ನಿಸೊ ಪಾಂಡುರಂಗವಿಠ್ಠಲ ದೇವ ವರ ಪುಂಡಲೀಕಗೆ ಒಲಿದದ್ದು ನಿಜವಾಗೆ 10 ಪರಿಪರಿಯ ಭಕ್ತರನು ಪೊರೆದದ್ದು ನಿಜವಾಗೆ ಹರಿದಾಸ ಸಂತತಿಗೆ ಮನೆದೈವ ನಿಜವಾಗೆ ಸರಿಯಿಲ್ಲದಾ ದೈವ ನೀನೆಂದು ನಿಜವಾಗೆ ಹೊರವೊಳಗೆ ಒಂದಾಗಿ ಕರಪಿಡಿದು ಸಲಹಿನ್ನು 11 ಗುರುಕೊಟ್ಟ ವರಬಲದಿ ಶರಣು ಪೊಂದಿದೆ ನಿನಗೆ ಚರಣದಲಿ ಬಿದ್ದಿರುವೆ ಪರಮ ಪುರುಷನೆ ದೇವ ಸ್ಮರಪಿತನೆ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಣೆ ಮಾಡಿದ ಮೇಲೆ ಭವದ ಭಯ ಉಂಟೆ 12
--------------
ಅಂಬಾಬಾಯಿ
ಮೊದಲನೇ ಅಧ್ಯಾಯ ಪಾತಿವ್ರತ್ಯ ಮಹಾತ್ಮೆ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಬೋಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ನಿರ್ದೋಷ ಗುಣಪೂರ್ಣ ವಿಷ್ಣು ಸರ್ವೋತ್ತಮ ಸ್ವತಂತ್ರ ಶ್ರೀದ ಶ್ರೀಪತಿ ಜಗಜ್ಜನ್ಮಾದಿಕರ್ತನು ಸಚ್ಛಾಶ್ರ - ದಿಂದಲೇ ವೇದ್ಯನು ಮೂರು ವಿಧ ಜೀವರಿಗೆ ಯೋಗ್ಯ ಸಾಧನಕೆ ಗತಿಯ ಮಾಡುವ ಅವತಾರ ಲೀಲಾ 1 ಸುಪುಷ್ಪಭವ ಬ್ರಹ್ಮದೇವನೋಳ್ ತತ್ ಶಬ್ದವಾಚ್ಯನು ಶ್ರೀ ಪುರುಷೋತ್ತಮನೆ ಪ್ರಜಾಸೃಷ್ಟಿ ಮಾಡಿಸುವನು ತ್ರಿಪುರಾರಿ ಭಸ್ಮಧರ ರುದ್ರನೋಳ್ ತನ್ನಾಮದಲಿ ಶ್ರೀ ಪುರುಷೋತ್ತಮನೇ ಸಂಹಾರ ಮಾಳ್ಪ ಅಂತರ್ಯಾಮಿ 2 ಉರುಜ್ಞಾನ ಸುಖ ಬಲಾದ್ಯಮಿತ ಗುಣಧಾಮನ ಕರ ಚರಣಾದ್ಯವಯವಕ್ಕೂ ಅವಗೂ ಅವನು ಧರೆಯಲ್ಲಿ ಅವತಾರ ಮಾಡುವ ರೂಪಗಳಿಗೂ ಪರಿಪೂರ್ಣವಾಗಿ ಅಭೇದ ಭೇದಲೇಶವೂ ಇಲ್ಲ 3 ದ್ವಿ ಷೋಡಶ ಶುಭಲಕ್ಷಣ ತನುವುಳ್ಳ ಬ್ರಹ್ಮಗೂ ವಿಷಕಂಠ ರುದ್ರಗೂ ಪರಸ್ಪರ ಭೇದ ಅಂತಸ್ಥ ವಿಷ್ಣುಗೂ ಇವರುಗಳಿಗೂ ಭೇದವು, ಅಂತರ್ಯಾಮಿ ವಿಷ್ಣು ಒಬ್ಬನೇ ದ್ವಿರೂಪದಲ್ಲಿ ಇವರಲ್ಲಿಹ 4 ಹತ್ತಾವತಾರ ಮತ್ಸ್ಯಾದಿರೂಪಗಳು ಮಾತ್ರವಲ್ಲ ಅನಂತರೂಪನು ಅನಂತಗುಣ ಕ್ರಿಯಾವಂತನು ಕ್ಷಿತಿಯಲ್ಲಿ ಬಲಕಾರ್ಯಕ್ಕೆ ಕೆಲವು ಅವತಾರ ಹಿತಕರ ಹಲವು ಜ್ಞಾನಬೋಧಕ್ಕೇವೇ ಕೆಲವು 5 ಧ್ಯಾತ್ಮನು ಜ್ಞಾನಕಾರ್ಯಕ್ಕಾಗಿ ಅವತರಿಸುವನು ಶ್ರೀಮಾನ್ ಹಯಗ್ರೀವ ಸನತ್ಕುಮಾರ ದತ್ತ ಕಪಿಲ ಧೀಮಾನ್ ಪರಾಶರ ವಾಸವೀಸೂನು ಐತರೇಯಾದಿ 6 ದ್ವಾಪರದಲ್ಲೇವೆ ಅಲ್ಲಲ್ಲಿ ಕಲಿವಿಷ ಹರಡಿ ತಪೋಧನರು ಗೌತಮರು ಶಪಿಸೆ ಜ್ಞಾನಕುಂದೆ ಶ್ರೀಪ ವೇದವ್ಯಾಸ ಜ್ಞಾನ ತೇಜಃಪುಂಜ ಬಂದು ತೋರಿ ಆ ಪೀಡಿಸುವ ಅಜ್ಞಾನ ತರಿದು ಸಜ್ಞಾನ ಇತ್ತ 7 ಹಿಂದೆ ಬ್ರಹ್ಮದೇವರಾಜÉ್ಞಯಿಂ ಅತ್ರಿಋಷಿವರ್ಯರು ನಿಂತರು ಋಕ್ಷಗಿರಿಯಲ್ಲಿ ಅಪತ್ಯಾಪೇಕ್ಷೆಯಿಂದ ಅದ್ಭುತ ತಪವಚರಿಸಿ ಜಗದೀಶ್ವರ ಸಮ - ಪುತ್ರ ಕೊಡೆ ಚಿಂತಿಸಿ ಹರಿಯಲ್ಲಿ ಶರಣಾದರು 8 ಹರಿ ತಾನು ತನ್ನ ಅಧಿಷ್ಟಾನರಾದ ಬ್ರಹ್ಮೇಶ್ವರ ಕರಕೊಂಡು ಋಷಿ ಮುಂದೆ ನಿಂತು ಯುಕ್ತಮಾತನ್ನಾಡಿ ಮೂರು ಮಂದಿಗಳು ತಾವು ಪುತ್ರರಾಗುವೆವು ಎಂದ ತರುವಾಯ ತಾನಿತ್ತ ವರವ ಒದಗಿಸಿದನು 9 ಭಾಗವತ ಈ ವಿಷಯ ಒಳಗೊಂಡು ಇಹುದು ಪತಿ ವೇದವ್ಯಾಸ ಸಂಕೃತ ಈ ಭೂರಾದಿ ಜಗತ್ತಿನಲ್ಲಿ ಪ್ರಖ್ಯಾತ ಪುರಾಣಂಗಳೊಳ್ ಶ್ರೀ ಭಗವಾನ್ ದತ್ತಾತ್ರಯನ ಅವತಾರವು ವೇದ್ಯ 10 ಗೀರ್ವಾಣ ಛಂದಸ್ಸು ಅಷ್ಟಿಯಲಿ ಬರೆಯುವದೆಂದು ಶ್ರೀವರನ ಹಿತಾಜÉ್ಞಯಿಂ ಪ್ರಸನ್ನ ಶ್ರೀನಿವಾಸೀಯ ಶ್ರೀವಿಷ್ಣು ಸಹಸ್ರನಾಮ ಭಾಷ್ಯ ಕನ್ನಡದಲ್ಲಿ ಅಳವಡಿಸಿದಂತೆ ಅಷ್ಟೀ ಛಂದಸ್ಸಲಿ ಈ ಗ್ರಂಥವ 11 ಈ ಗ್ರಂಥದಲಿ ಶ್ರೀಭಾಗವತವು ಮಾರ್ಕಂಡೇಯವು ಭಾಗವತರಿಗೆ ಉಪಾಸನಾ ಹೇತು ಪಂಚರಾತ್ರ ಆಗಮವು ಒಳಗೊಂಡ ವಿಷಯಗಳು ಇವೆಯು ಕಾಯ ಶುದ್ಧಿಯಿಂ ಪಠಣೀಯವು 12 ಗುರುಮಂತ್ರ ಉಪದೇಶವಿಲ್ಲದಂತಹ ಸ್ತ್ರೀ ಜನ ಶೂದ್ರರು ಬ್ರಹ್ಮಬಂಧುಗಳು ಈ ಗ್ರಂಥ ಪಠಿಸಲು ಹರಿಭಕ್ತ ಸಾಧು ವೈದಿಕ ಬ್ರಾಹ್ಮಣರ ಅಪ್ಪಣೆ ಕೋರಿ ಅವರ ಅಪ್ಪಣೆಯಿಂದ ಓದಬಹುದು 13 ಪ್ರತಿಷ್ಠಾನಪುರದಲ್ಲಿ ಕೌಶಿಕಾಹ್ವಯ ದ್ವಿಜನು ವ್ಯಾಧಿ ಪೀಡಿತನು ಕುಷ್ಠಿ ನಡಮಾಡಲು ಅಶಕ್ತ ಆತನ ಪತ್ನಿಯು ಸಾಧುಗುಣವತಿ ಬಲುಶ್ರೇಷ್ಠ ಪತಿ ಹೇಳಿದಂತೆ ನಡೆಯುವಳು 14 ಒಂದು ದಿನ ಆ ಬ್ರಾಹ್ಮಣನು ನೋಡಿದ ಬಾಗಿಲಾಚೆ ಬೀದಿಯಲಿ ಹೋಗುತ್ತಿದ್ದ ಸುಂದರಿ ವೇಶ್ಯೆಯೋರ್ವಳಲಿ ಸೋತು ಮನ ಅವಳನ್ನು ತಾನು ಹೊಂದಬೇಕೆನ್ನಲು ಸಾಧ್ವಿಸತಿ ಪತಿಯನ್ನು ಎತ್ತಿದಳು ಸೊಂಟದಲಿ 15 ರಾತ್ರಿ ಕತ್ತಲೆಮಾರ್ಗ ತಿಳಿಯದಲೆ ಪತಿಯನ್ನು ಹೊತ್ತುಕೊಂಡು ಹೋಗುವಾಗ ಪತಿಯ ಕಾಲು ತಾಕಿತು ಹಾದಿಯಲ್ಲಿ ಕಬ್ಬಿಣ ಸಲಾಕದಲ್ಲಿ ಚುಚ್ಚಿಸಿ ಇದ್ದ ಕಟಿ ಸಮೀಪ ಹಾಹಾ 16 ಅನ್ಯಾಯದಿ ಆ ರಾಜ್ಯದರಸ ಆ ಮಹಾಮುನಿಯ ಧನಚೋರನೆಂದು ಶೂಲಕ್ಕೆ ಹಾಕಿಸಿದ್ದ ಆ ಶೂಲ ಕಾಣದೇ ಕೌಶಿಕನ ಕಾಲ್ತಗಲಿ ಬಲು ನೋವಾಗಿ ಮುನಿ ಶಾಪವಿತ್ತರು ಸೂರ್ಯೋದಯಲ್ಲೇ ಸಾಯೆಂದು 17 ಹಾಹಾ ಇದು ಏನು ಮುನಿಗಳಿಗೆ ನೋವಾಯಿತಲ್ಲಾ ಮಹಾತ್ಮರ ಶಾಪ ವೀಣಾಗಲಾರದು ಮಾಂಗಲ್ಯವ ಪತಿ ಅಂತಸ್ಥ ಶ್ರೀಹರಿಯ ಸ್ಮರಿಸಿ ಆ ಪತಿವ್ರತೆ ಹೇಳಿದಳು 18 ಸೂರ್ಯೋದಯವಾಗದಿದ್ದರೆ ಶಾಪವು ಫಲಿಸದು ಸೂರ್ಯೋದಯವಾಗಬೇಡಿ ಎಂದು ಹೇಳಿದಳು ಸಾಧ್ವಿ ಆರ್ಯಧರ್ಮ ಲೋಕಕಾರ್ಯ ಸರ್ವವೂ ಸ್ತಬ್ಧವಾದವು ಎಲೆಲ್ಲೂ ಕತ್ತಲೆಯು ಭಾನು ಉದಯಿಸಲಿಲ್ಲ 19 ಇಂದ್ರಾದಿ ದೇವರ್ಗಗಳು ಬ್ರಹ್ಮನಲಿ ಮೊರೆಯಿಡಲು ಪತಿವ್ರತೆ ಮಹಾತ್ಮನೆ ಮತ್ತೊಬ್ಬ ಪತಿವ್ರತೆಯೇ ಪ್ರತಿ ಮಾಡುವಳು ಅತ್ರಿಋಷಿ ಪತ್ನಿ ಅನಸೂಯಾ ಪತಿವ್ರತಾ ರತ್ನಳಾ ಸಹಾಯ ಕೇಳೆಂದರು ವೇಧ 20 ಶಕ್ರಾದಿ ಸುರರುಗಳು ಅನಸೂಯಾದೇವಿಯಲಿ ಕೋರಿಕೆ ಮಾಡಲು ಆಕೆ ದೇವತೆಗಳ ಸಮೇತ ಧೀರ ಪತಿವ್ರತೆಯಾದ ಕೌಶಿಕಾ ಗೃಹಕೆ ಹೋಗಿ ಪರಿಚಯ ಮಾಡಿಕೊಂಡು ಕೊಂಡಾಡಿದಳಾ ಸಾಧ್ವಿಯ 21 ಮಹಾಭಾಗರು ಇಂದ್ರಾದಿಗಳಿಗೂ ಅನಸೂಯಗೂ ವಿಹಿತೋಪಚಾರ ಪೂಜಾದಿಗಳ ಮಾಡಿ ಆ ಸಾಧ್ವಿ ಮಹಾಭಾಗ್ಯ ಆಗಮನ ಎನ್ನುತ್ತ ಕಾರಣವನು ಬಹು ಹಿತದಲಿ ಕೇಳಿದಳು ತನ್ನ ಸ್ಥಿತಿ ಹೇಳಿ 22 ಸೂರ್ಯ ಉದಿಸುವದಕ್ಕೆ ಪತಿ ಬದುಕಿಸಲ್ಪಡುವನು ಎನ್ನುತೆ ಕೌಶಿಕಾ ಸಾಧ್ವಿಯು ಅನುಮೋದನೆ ಕೊಂಡು ಇನ ಉದಿಸಲಿ ಎಂದ ಅಘ್ರ್ಯ ಕೊಟ್ಟಳು ಮುದದಿ 23 ಸೂರ್ಯ ಮುನಿಶಾಪ ಫಲಿಸಿತು ಬಿದ್ದ ಕೆಳಗೆ ಕೌಶಿಕ ತತ್‍ಕ್ಷಣವೇ ಬದುಕಿ ಎದ್ದ ಪತಿವ್ರತಾ ಶಿರೋಮಣಿ ಅನಸೂಯಾ ದೇವಿ ಪ್ರಭಾವ ಪತಿವ್ರತಾ ಮಹಾತ್ಮೆ ಜ್ವಲಿಸಿತು ಲೋಕದಲ್ಲಿ 24 ಕೌಶಿಕನ್ನ ಬದುಕಿಸಿದ್ದು ಮಾತ್ರವಲ್ಲದೇ ಸರ್ವ ಕುಷ್ಠಾದಿ ರೋಗ ಪರಿಹರಿಸಿ ಯುವವಾಗಿ ಮಾಡಿ ಅಯುಷ್ಯ ಬಹುನೂರು ವರ್ಷಗಳ ಅನುಗ್ರಹಿಸಿ ತುಷ್ಠಿ ಸುಖಜೀವನ ಒದಗಿಸಿದಳ್ ಅನಸೂಯಾ 25 ಅನಸೂಯೆಯ ಪಾತಿವ್ರತ್ಯ ಮಹಾತ್ಮೆಯ ಶ್ಲಾಘಿಸಿ ಏನು ವರ ಕೇಳಿದರೂ ಕೊಡುವವೆಂದು ಸುರಪ ಆನಿಮಿಷರು ಹೇಳಲು ಪತಿವ್ರತಾ ಶಿರೋಮಣಿ ವಿಧಿ ಶಿವ ತನ್ನಲ್ಲವತರಿಸಲೆಂದಳು 26 ತಥಾಸ್ತು ಎಂದ ದೇವತೆಗಳ ವರ ಸತ್ಯಮಾಡೆ ಸುತಪಸ್ವಿ ಅತ್ರಿಗೆ ಹಂಸ ವೃಷಾರೂಡರು ಪ್ರತ್ಯಕ್ಷದಿ ಹೇಳಿದಂತೆಯೂ ಅನಸೂಯ ಅತ್ರಿಗೆ ಪುತ್ರರೆಂದುದಿಸಿದರು ಸೋಮಸ್ತ ಬ್ರಹ್ಮೇಶ ವಿಷ್ಣು 27 ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ ಅರ್ಕಕೋಟ್ಯಾಮಿತ ತೇಜನೇ ಬ್ರಹ್ಮಾದ್ಯಮರ ಗುರೋ ಜಗದೀಶ ದತ್ತಾತ್ರಯನಮೋ ಪ್ರಿಯತಾಂ ಶರಣು 28 ಎರಡನೇ ಅಧ್ಯಾಯ ಶ್ರೀ ದತ್ತಾತ್ರಯ ಪ್ರಾದುರ್ಭಾವ ಸಾರ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಭೋಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ಬ್ರಹ್ಮಾವಿಷ್ಟನು ಸೋಮ ಔಷಧಿಗಳ ರಾಜನಾದ ಉನ್ಮಾದ ಚರ್ಯದಿ ಕೋಪ ಪ್ರಕಟಿಸಿ ಮೆರೆವರು ತಮ್ಮ ಶಿಷ್ಯರೊಡಗೂಡಿ ಶಿವಾವತಾರ ದೂರ್ವಾಸ ಸುಮ್ಮನಸ ಸಜ್ಜನ ಹಿತರು ದುಷ್ಟನಿಗ್ರಹರು 1 ತನ್ನನ್ನ ತಾನೇ ಸುತನಾಗಿ ದತ್ತಮಾಡಿಕೊಂಡನು ವಿಷ್ಣು ಅತ್ರಿ ದಂಪತಿಗೆ ಆದ ಕಾರಣ ಪ್ರಖ್ಯಾತೆ ಉನ್ನಾಮ ದತ್ತಾತ್ರಯ ಕ್ಷೋಣಿ ಯೋಗ್ಯಾಧಿಕಾರಿಗಳಿಂ ಘನಭಕ್ತಿಯಿಂ ಶುಚಿಯಿಂ ಜಪ್ಯ ಸ್ಮರಣೀಯಿಂ ಶ್ರೋತವ್ಯ ಜಯತು 2 ಕಲ್ಯಾಣತಮ ಪೂರ್ಣ ಅಮಲ ಗುಣಗಣ ಸಿಂಧು ಮಾಲೋಲ ಶ್ರೀವಕ್ಷ ಶ್ರೀಶನೇ ಪ್ರಾದುರ್ಭವಿಸಿದನು ಚೆಲುವ ಅನುಪಮ ಸೌಂದರ್ಯಸಾರ ಸರ್ವೋತ್ತಮ ಲೀಲಾನಂದಮಯ ಚಿನ್ಮಾತ್ರಗಾತ್ರ ಭಕ್ತೇಷ್ಟದಾತ 3 ಕಮಲಾಸನಾವಿಷ್ಟ ಸೋಮ ರುದ್ರಾವತಾರ ದೂರ್ವಾಸ ತಮ್ಮ ತಮ್ಮ ಉದ್ಯೋಗಸಾಧನಕೆ ಬೇರೆ ಬೇರೆ ಹೋಗೆ ಸುಮನೋಹರ ರೂಪ ಶ್ರೀಮನೋರಮ ದತ್ತಾತ್ರಯ ಸುಮಹಾ ಯೋಗಿಯಾದ ನಿಸ್ಸಂಗ ಯೋಗೇಶ್ವರೇಶ್ವರ 4 ಅತ್ರೇಯರು ಮೂವರು ಹೀಗೆ ಬೇರೆ ಬೇರೆಯಾಗಿಯೇ ತಮ್ಮ ತಮ್ಮ ರೂಪದಲ್ಲೇ ಇದ್ದರು ಒಂದಾಗಿ ಅಲ್ಲ ಸೋಮ ಶಿವ ದತ್ತರಿಗೆ ಬೇರೆ ಬೇರೆ ಮಂತ್ರವುಂಟು ಸೋಮ ಪಂಚ ಶಿವ ಪಂಚ ದತ್ತ ನವಅಕ್ಷರವು 5 ಪ್ರೋದ್ಯ ದಿವಾಕರ ಪೋಲ್ವ ವರ್ಣವುಳ್ಳ ಶುಭಗಾತ್ರ ಆದಿತ್ಯ ಸಹಸ್ರಾಮಿತ ಮಹೋತ್ಕøಷ್ಟ ತೇಜಃಪುಂಜ ವ್ಯಾಪ್ತ ಸರ್ವತ್ರ ಜ್ಞಾನಾಭಯಕರನು ಬ್ರಹ್ಮಾದಿ ತ್ರಿದಿವ ಸುಬೋಧಕನು ಕಪಿಲನು ದತ್ತಾತ್ರಯ 6 ಇಂಥ ಮಹಾಮಹಿಮನು ಕಪಿಲ ದತ್ತಾತ್ರಯನು ಅಧಿಕಾರಿಗಳಿಗೆ ಅಪರೋಕ್ಷಜ್ಞಾನ ಮೋಕ್ಷದಾತ ಶ್ರೋತೃ, ಮಂತ್ರ, ಧ್ಯಾತೃಗಳಿಗೆ ಕಪಿಲ ದತ್ತಾತ್ರಯ ಭಕ್ತಿ ಮೆಚ್ಚಿ ಸದಾ ಸಂರಕ್ಷಿಸಿ ಇಷ್ಟಾರ್ಥ ಕೊಡುವ 7 ಪದ್ಮ ಭವಾದ್ಯಮರರಿಂ ಧ್ಯಾತ ದತ್ತಾತ್ರಯ ಹರಿ ಮೇದಿನಿ ನರರಂತೆ ಅವತಾರ ಲೀಲೆ ಚರಿಸಿ ಅದ್ಭುತ ಯೋಗಾನುಷ್ಠಾನದಿ ಇರುತಿರೆ ಜನರು ಈತನ ಸೌಂದರ್ಯ ಯೋಗಸಾಮಥ್ರ್ಯ ಹೊಗಳಿದರು 8 ಸಹಸ್ರಾರು ಋಷಿಪುತ್ರ ಬ್ರಹ್ಮಚಾರಿಗಳು ಬಂದು ಅಹರ್ನಿಶಿ ಯೋಗೇಶ್ವರೇಶ್ವರ ದತ್ತನಾಶ್ರಮದಿ ಬಹಳುತ್ಸಾಹದಲಿ ಸುತ್ತು ಮುತ್ತು ಗುಂಪುಗೂಡಿ ಮಹಾಯೋಗಾಭ್ಯಾಸಕ್ಕೆ ಚ್ಯುತಿಯ ಕಲ್ಪಿಸಿದರು 9 ಯೋಗ್ಯರು ಸಜ್ಜನರು ಈ ಭಕ್ತ ಋಷಿಕುವರರು ಯೋಗ್ಯಸಾಧನೆ ಅವರವರ ಆಶ್ರಮದಲ್ಲಿಯೇ - ಗೈಯಲಿ ಬೇಕೆಂದು ಅವರುಗಳು ಹೋಗೋ ಉಪಾಯ ನಿಶ್ಚೈಸಿ ಮುಳುಗಿದ ದತ್ತನು ಸರೋವರದೊಳು 10 ಸುರಮಾನದಿ ಸಾವಿರವರ್ಷ ಭಗವಾನ್ ದತ್ತನು ಸರೋವರದೊಳಿದ್ದನು ಹೊರಜನಕ್ಕೆ ಕಾಣದೆ ಆ ಋಷಿಪುತ್ರರು ತೀರದಲಿ ಇಕೋ ಈಗ ನಾಳೆ ಬರುವನು ಮೇಲೆ ಎಂದು ಕಾಯುತ್ತಿದ್ದರು ದೃಢದಿ 11 ಜಲಧಿ ಉಕ್ಕಿ ಹರಿದು ಕ್ಷೋಣಿಯ ಮುಳುಗಿಸದೆ ಜಲಮಧ್ಯ ತಾನಿದ್ದು ಕಾಯುವ ವಡವಾ ಮುಖಾಗ್ನಿ ಜಲಮಧ್ಯದಿ ಈಗ ಹೊಕ್ಕಿರುವ ದತ್ತಾತ್ರಯನು ಮುಳುಗಿರುವುದು ಆಶ್ಚರ್ಯವಲ್ಲ ಈರ್ವರೂ ಏಕ 12 ಬಲುದೀರ್ಘ ದೇವವರ್ಷಗಳು ಸಾಸಿರವಾದರೇನು ಶೀಲತಮ ವರವಾಯುವು ವರುಣನು ಬುಧಾದಿ ಜಲಾಭಿಮಾನಿಗಳು ಕಿಂಕರರಾಗಿ ಇರುತಿಹರು ಜಲಶಾಯಿ ನಾರಾಯಣ ಅವತಾರ ದತ್ತನಿಗೆ 13 ಒಂದು ದಿನ ಕೆರೆನೀರು ಚಲಿಸಲು ಸಂತೋಷದಿ ಬಂದರೂ ಬಂದರೂ ಎಂದು ಕೂಗೆ ಋಷಿಕುವರರು ಇಂದಿರಾಪತಿ ದತ್ತ ಮೇಲೆದ್ದು ಬಂದ ಬದಿಯಲ್ಲಿ ಇಂದಿರಾಂಗಿ ನಾರೀಮಣಿ ಓರ್ವಳ ಆಲಿಂಗಿಸುತ 14 ಯಾರನ್ನೂ ಲೆಕ್ಕಿಸದೆ ಕಾಮವಿಲಾಸ ಕೇಳಿಯ ಆ ಸ್ತ್ರೀಯೊಡನೆ ಮಾಡುತ್ತಿದ್ದುದು ಕಂಡು ಯುವಕರು ಯೋಗಿ ಹೀಗಾದರೆ ಎನ್ನುತ ತ್ವರಿತ ತೆರಳಿದರು ಜುಗುಪ್ಸೆಯಲ್ಲಿ ತ್ಯಜಿಸಿ 15 ಆ ಪುಣ್ಯವಂತ ಋಷಿಪುತ್ರರು ತಿಳಕೊಳ್ಳಲಿಲ್ಲ ಆ ಸ್ಛುರದ್ರೂಪಿಣಿ ನಾರಿ ಸಾಕ್ಷಾತ್ ಲಕ್ಷ್ಮೀದೇವಿಯೆಂದು ವಿಪುಲ ಮನ ಹರುಷ ತೋರಿಸಿ ದತ್ತಾತ್ರಯನು ಕೈಪಿಡಿದು ಲಕ್ಷ್ಮಿಯ ಕರೆದುಹೋದ ಆಶ್ರಮಕೆ 16 ಯಾವ ತನ್ನಾಶ್ರಮದಿ ಸ್ವಾಧ್ಯಾಯ ಪ್ರವಚನಗಳ್ ದಿವ್ಯ ಯೋಗ ಅಭ್ಯಾಸ ಶಿಷ್ಯರ್ಗೆ ಶೀಕ್ಷಾದಿಗಳ್ ಯಾವಾಗಲೂ ಹಿಂದೆ ನಡೆಸುತ್ತಿದ್ದನೋ ಅಲ್ಲಿ ಈಗ ದೇವಿಯೊಡನೆ ಲೀಲಾವಿಲಾಸಗಳ ತೋರಿಸಿದ 17 ಮಂದ ಧೀಗಳು ಈ ವಿಡಂಬನೆ ಕಂಡು ಮೋದದಲಿ ಶ್ರೀದತ್ತ ಈ ರೀತಿ ಆದನಲ್ಲಾ ಎಂದು ಮಾತನಾಡೆ ಸುಧೀಗಳು ಬೃಹಸ್ಪತ್ಯಾದಿಗಳು ದತ್ತಾತ್ರಯನು ಮೋದಚಿನ್ಮಯ ನಿರ್ದೋಷ ಹರಿ ಶ್ರೀಶನೆ ಎಂದರÀು 18 ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ ಅರ್ಕಕೋಟ್ಯಮಿತ ತೇಜನೇ ಬ್ರಹ್ಮಾದ್ಯಮರ ಗುರೋ ಜಗದೀಶ ದತ್ತಾತ್ರಯ ನಮೋ ಪ್ರಿಯತಾಂ ಶರಣು 19 -ಇತಿ ಎರಡನೇ ಅದ್ಯಾಯ ಸಂಪೂರ್ಣಂ - ಮೂರನೇ ಅದ್ಯಾಯ ಸಂಪತ್‍ಲಕ್ಷ್ಮೀ ವೃತ್ತಾಂತ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಬೊಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ಸುರಪ ಜಂಭಾಸುರನಿಂದ ಅಪಜಯವ ಕೊಂಡು ಸುರಗುರು ಪ್ರೇರಣೆಯಿಂ ದತ್ತಾತ್ರಯನಲಿ ಹೋಗಿ ಶರಣು ಹೊಕ್ಕು ಸೇವಗೈಯಲು ಆಗ ಅವನನ
--------------
ಪ್ರಸನ್ನ ಶ್ರೀನಿವಾಸದಾಸರು
ಮೊರೆ ಕೇಳು ಭಕುತಬಂಧು ಮರೀಬೇಡ ಕರುಣಾಸಿಂಧು ಪ ಮರೆಯಬಿದ್ದು ಸೆರಗನೊಡ್ಡಿ ನಿರುತ ನಿಮ್ಮ ಚರಣ ಭಜಿಪೆ ಶರಣಾಗತರ ವರಪ್ರದಾತ ನಿರುತ ಪರಿಪಾಲಿಸಭವ 1 ಶುದ್ಧ ನಿಮ್ಮ ಭಕ್ತನೆನಿಸೊ ಬದ್ಧನೆನಿಸಿಬೇಡ ದೇವ ಬಿದ್ದು ಬೇಡ್ವೆ ನಿಮ್ಮ ಪದಕೆ ತಿದ್ದಿಕಾಯೋ ಎನ್ನ ತಪ್ಪ 2 ತರಳನ್ಹೊರೆದಿ ಭರದಿ ಬಂದು ನರನ ಕಾಯ್ದಿ ಧುರದಿ ನಿಂದು ಪರಮಸಿದ್ಧಿ ನೀಡು ಈಗ ಚರಣದಾಸಗೆ ವರ ಶ್ರೀರಾಮ 3
--------------
ರಾಮದಾಸರು
ಯಾಕೆ ಈ ದಾಸನನು ಸಲಹಲೊಲ್ಲೆ ಶ್ರೀಕಾಂತ ಭಕ್ತನನು ಕಾಯಲೊಲ್ಲೆ ಪ ತರಳತನದಲಿ ನಾನು ಪಾಪಗಳ ಮಾಡಿದರೆ ಪರಮಾತ್ಮ ಸದ್ಗುರುವೆ ತಿಳಿದು ಮಾಡಿದನೇ ನಿರುತ ಯೌವನದಲ್ಲಿ ಪಾಪಗಳ ಮಾಡಿದರೆ ಅರಿತು ಮಾಡಿದೆನೆಂದು ಬಗೆದೆಯಾ ಹರಿಯೇ 1 ಈಗ ವಾರ್ಧಿಕ್ಯದಲಿ ಪಾಪಮಾಡಿದೆನೆಂದು ನಾಗೇಶಶಯನನೇ ಮುನಿದೆಯಾ ಹರಿಯೇ ಜಾಗುಮಾಡದೆ ನೀನು ಅಜಮಿಳಗೆ ವಲಿದಂತೆ ಬೇಗನೇ ಸಲಹಯ್ಯ ನಾಮಸ್ಮರಿಸುವೆನೊ2 ಹರಿಸೇವೆಯನ್ನು ನಾ ಭಕ್ತಿಯಲಿ ಗೈವೇ ಹರುಷದಿಂ ಹರಿಯೆಂನ ಪಾಪಗಳ ಕ್ಷಮಿಸುತ್ತ ಸಿರಿ ಚನ್ನಕೇಶವನೆ ಮುನಿಯದಿರು ತಂದೆ 3
--------------
ಕರ್ಕಿ ಕೇಶವದಾಸ
ಯಾಕೆ ನಿರ್ದಯ ಮಾಡಿದೆ ರಂಗಯ್ಯ ನೀನ್ಯಾಕೆ ನಿರ್ದಯ ಮಾಡಿದೆ ಪ ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ ದುಷ್ಟ ಇಂದ್ರಿಯ ಬಿಡದೆನ್ನ 1 ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ ಪಂಚಬಾಣನ ಪಿತ ಪರಮಪುರುಷ ರಂಗ ಅ ಕಿಂಚನಾದೆ ನಿನ್ನಂಘ್ರಿಯ ಸೇರಿಸು 2 ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ ವಿಷ ತಿರುಗೆಸೋ ಶ್ರೀಹರಿ 3 ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ 4 ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು ನಿಮಿಷವಾದರು ಮಾಡಲೀಸದು 5 ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ 6 ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ ಇಂದು ಈ ಸಂಸಾರ ಬಂಧನದೊಳಗೆ ನಾ ಒಂದು ನಿಮಿಷ ಜೀವಿಸಲಾರೆನು ರಂಗ 7 ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ ಬಂದು ಕಾಯ್ದ ಗೋವಿಂದ 8 ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು 9 ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ ಬೇಗ ಮುಕ್ತಿಪಥವ ಪಾಲಿಸುವಳು 10 ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು ಗಾಡನೆ ಮುಕ್ತಿಯ ನೀಡೊ ವೆಂಕಟರಮಣ 11
--------------
ಯದುಗಿರಿಯಮ್ಮ
ಯಾಕೆ ಬಳಲಿಸುವಿ ಗುರುರಾಯಾ ಇನ್ನು ಸಾಕು ಮಾಡಿ ಸಲಹೋ ಕಡು ಬೇಗ ಜೀಯಾ ಭಕ್ತ ಕೇಳಿದರೆ ಕೊಡವಲ್ಲಿ ಉಪ- ಯುಕ್ತವಲ್ಲದ ಮಾಯವನು ಬಿಡಿಸಲೊಲ್ಲಿ ಶಕ್ತಿ ನಿನಗಿಹುದೋ ಕರದಲ್ಲಿ ವಿ- ರಕ್ತನೇ ಕೋಪವ್ಯಾತಕೋ ದಾಸನಲ್ಲಿ 1 ತ್ರಾಹಿ ತ್ರಾಹಿ ಗುರುರಾಯಾ ಈಗ ದೇಹಿ ಎಂಬಗೆ ನಾಸ್ತಿ ಎನಬ್ಯಾಡೋ ಜೀಯಾ ದೇಹ ನಿನಗೊಪ್ಪಿಸಿದೆನಯ್ಯಾ ಮುದ್ದು ಮೋಹದಾ ಹರಿಕಂದಾ ಪ್ರಹ್ಲಾದರಾಯಾ 2 ಇಷ್ಟಕ್ಕೆ ನಾ ಬಿಡುವುದಿಲ್ಲ ನೀನು ಥಟ್ಟನೆ ಕೊರಳ ಕೊಯ್ದರೆ ಯತ್ನವಿಲ್ಲಾ ಕೊಟ್ಟು ಕಾಯ್ದರೇ ಅಹಿತವಲ್ಲಾ ನಮ್ಮ ಧಿಟ್ಟ ಶ್ರೀ ಹನುಮೇಶವಿಠಲನ ಜಾಲಾ 3
--------------
ಹನುಮೇಶವಿಠಲ
ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ. ಯಾಕೆ ಪಂಥ ಲೋಕೈಕನಾಥ ದಿ- ವಾಕರಕೋಟಿಪ್ರಭಾಕರ ತೇಜನೇ ಅ.ಪ. ಪೂರ್ವಾರ್ಜಿತ ಕರ್ಮದಿಂದಲಿ ಇರ್ವೆನು ನರಜನ್ಮ ಧರಿಸುತ ಗರ್ವದಿಂದ ಗಜರಾಜನಂತೆ ಮತಿ ಮರ್ವೆಯಾಯ್ತು ನಿನ್ನೋರ್ವನ ನಂಬದೆ ಗರ್ವಮದೋನ್ಮತ್ತದಿ ನಡೆದೆನು ಉರ್ವಿಯೊಳೀ ತೆರದಿ ಇದ್ದೆನಾದರೂ ಸರ್ವಥಾ ಈಗ ನಿಗರ್ವಿಯಾದೆಯಹ ಪರ್ವತವಾಸ ಸುಪರ್ವಾಣ ವಂದಿತ 1 ಯಾರಿಗಳವಲ್ಲ ಮಾಯಾ ಕಾರ ಮಮತೆ ಸಲ್ಲ ಸಂತತ ಸಾರಸಾಕ್ಷ ಸಂಸಾರಾರ್ಣವದಿಂದ ಪಾರಗೈದು ಕರುಣಾರಸ ಸುರಿವುದು ನತ ಮಮ ಕಾರ ಹೋಯ್ತೆ ಕಡೆಗೆ ಏನಿದು ಭಾರಿ ಭಾರಿ ಶ್ರುತಿ ಸಾರುವುದೈ ದಯ ವಾರಿಧಿ ನೀನಿರಲ್ಯಾರಿಗುಸುರುವುದು 2 ಬಾಲತ್ವದ ಬಲೆಗೆ ದ್ರವ್ಯದ ಶೀಲವಿತ್ತೆ ಎನಗೆ ಆದರೂ ಪಾಲಿಸುವರೆ ನಿನಗಾಲಸ್ಯವೆ ಕರು- ಸಾಲದೆರಡು ಮೂರು ನಿನ್ನಯ ಮೂಲ ಸಹಿತ ತೋರು ಮುನಿಕುಲ ಪಾಲ ಶ್ರೀಲಕ್ಷ್ಮೀನಾರಾಯಣ ಗುಣ ಶೀಲ ಕಾರ್ಕಳ ನಗರಾಲಯವಾಸನೇ 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಾರೊಡನುಸುರವೆನೋ ಕಡಲಶಾಯಿ ಬಿಡದೆ ನಿನ್ನನು ಅಡಿಗಡಿಗೆ ಕೊಂಡಾಡುವ ಹುಡಗನ ಮೇಲಿಷ್ಟು ಕರುಣವಿಲ್ಲದರಿಂದ ಪ ಪೊಡವಿಯೊಳಗೆ ಜನಿಸಿರುವರೊಳಗೆ ನಾನೆ ಕಡೆ ಈಗ ಬಸುರಿನೋಳ್ ಪಡೆದ ಮಗನು ತನ್ನ ಮಡದಿ ಮಕ್ಕಳನು ಎನ್ನೊಡನಿತ್ತು ನಾಕಕೆ ನಡೆದನೆನಗೆ ನಡುಮರಣವ ಹೊರಸಿ 1 ಕೆಟ್ಟ ಬದುಕ ಕಾಣಲಾರೆ ಮಾಳ್ಪರೆ ಎನ್ನ ರಟ್ಟೆ ಬಲವು ತಗ್ಗಿ ಹೋಯ್ತು ಮೊಮ್ಮಕ್ಕಳ ಅಟ್ಟುಳಿ ಬರಿಸನ್ನವಸ್ತ್ರಾಭರಣಕೆಂದು ಕುಟ್ಟಿ ಕೊಂಬರು ಎನಗಿದಿರಾಗಿ ಶಿವನೇ 2 ನಾನು ಎಂಬುವರಿಲ್ಲ ಗೃಹಕೃತ್ಯದೊಳಗೆನ್ನ ಮಾನಿನಿಯೊರ್ವಳುಂಟಿದರೊಳು ಸೊಸೆಯಷ್ಟು ಏಕೆಂದ ರೇನು ಸಂಸಾರವಿದನು ಪವಮಾನ ಸುತನ ಕೋಣೆ ಲಕ್ಷ್ಮೀಶ ನಡೆಸು 3
--------------
ಕವಿ ಪರಮದೇವದಾಸರು
ಯೆಂದಿಗಾಹುದೋ ನಿನ್ನ ದರುಶನಾ | ಇಂದಿರೇಶ ಮುಕುಂದ ಕೇಶವಾ ಪ ಗಾನಲೋಲನೇ ದೀನ ವತ್ಸಲಾ || ಮಾನದಿಂದಲೀ ನೀನೆ ಪಾಲಿಸೋ 1 ಯಾರಿಗೆ ಮೊರೆಯಿಡುವೆ ಶ್ರೀ ಹರೀ || ಸಾರಿ ಬಂದು ನೀ ಈಗಲೇ ಪೊರೀ 2 ಗಜವ ಪಾಲಿಸೋ ಗರುವದಿಂದಲೀ || ಭುಜಗಶಯನ ಶ್ರೀ ವಿಜಯವಿಠಲಾ3
--------------
ವಿಜಯದಾಸ
ರಂಗ ಬಾರ ಬಾಲೆ ಕುರಂಗನಯನೆ ಕೇಳೆ ಪ ಹೀಂಗಿರಲಾರೆ ಶ್ರೀಹರಿಯ ಸಂಗ ಬಿಟ್ಟಮೇಲೆಈ ತಂಗಾಳಿಯ ದಾಳೆ ಬೆಳದಿಂಗಳಿÀನ ಢಾಳೆಗಿಳಿ ಭೃಂಗನ ಸ್ವರಗಳೆ ದೇವಾಂಗನಾ ಗಾಯನಗಳೆಅನಂಗಗಿದು ಪೇಳೆಅ.ಪ. ಪರ ಹೆಣ್ಣುಗಳನೆ ಕೂಡಿಬಲು ಬಣ್ಣಗೆಟ್ಟೋಡ್ಯಾಡಿ ಕಲಿಯನ್ನು ಸಂಹಾರಮಾಡಿ 1 ಯುಗಳಸ್ತನಗಳ ಮೇಲೆ ಒಳ್ಳೆ ಮುಗುಳು ಮಲ್ಲಿಗೆ ಮಾಲೆಬಗೆ ಬಗೆ ಅಲಂಕಾರದಿ ಸೊಗಸಿಲಿದ್ದ ವೇಳೆಖಗವಾಹನನು ಬಂದ ಎನ್ನ ಬಿಗಿದಪ್ಪುವೆನೆಂದನಗುತ ಮಾತನಾಡಳಿವಳು ಸುಗುಣೆಯಲ್ಲವೆಂದನಿಗಮ ಚೋರನ ಕೊಂದ ನಗವ ಬೆನ್ನಿಲಿ ತಂದಜಗವ ನೆಗಹುವೆನೆಂದ ಜಿಗಿದು ಕಂಭದಿ ಬಂದಮಗುವಿನಂದದಿ ನಿಂದ ಯಾತ್ರೆಗಳ ಮಾಡುವೆನೆಂದಅನ್ನಗಳ ಒಲ್ಲೆನೆಂದ ಬೆಣ್ಣೆಗಳ ಕದ್ದುತಿಂದನಗುತ ಬತ್ತಲೆನಿಂದ ತಾ ಸಿಗದೆ ಓಡುವೆನೆಂದ 2 ನಾರಿ ಈಗ ನಾನು ಮುರಾರಿಯ ಕಂಡೆನುವಾರಿಜಾಕ್ಷ ಬಾಯೆನ್ನಲು ಶಿರವ ಬಾಗಿದೆನೆಮಾರನಯ್ಯನು ಜಾಣೆ ಎನ್ನ ಮೋರೆಯ ನೋಡಿದನೆಜಾರನಾರಿ ಇವಳೆಂದು ಸೇರದೆ ಪೋದನೆನೀರೊಳಡಗಿದನೆ ಮೋರೆ ಮುಚ್ಚಿದನೆಕೋರೆ ತೋರಿದನೆ ಆ ಘೋರ ರೂಪಾದನೆಬ್ರಹ್ಮ-ಚಾರಿಯೆಂತೆಂದನೆ ಕ್ಷತ್ರಿಯರ ಸವರಿದನೆವಾರಿಧಿಯ ದಾಟಿದನೆ ಬಹುಜಾರನೆನಿಸಿದನೆನಾರೇರ ವ್ರತವಳಿದನೆ ಕುದುರೆ ಏರಿದ ಶ್ರೀಕೃಷ್ಣನೆ 3
--------------
ವ್ಯಾಸರಾಯರು
ವ್ಯಾಪಾರ ಉದ್ಯೋಗವನು ಮಾಡುವೆ | ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಪ ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ | ಅರವಿಂದನಾಭವೆಂಬೊ ಅಂಗಿಯ ತೊಟ್ಟು || ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ | ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ 1 ಕಮಲನಾಭವೆಂಬೊ ಕಮಲದಾನಿ ಪಿಡಿದು | ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ || ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ 2 ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು | ಭಾಗವತರು ಕರೆದು ಇಂಬನಿತ್ತು || ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ | ಈಗಳೆ ಕುಳಿತ ಅಚ್ಯುತನ ತೋರಿದರು 3 ಕಂಡು ಕರವನು ಮುಗಿಯೆ ಕರುಣಾಸಾಗರನೆಂಬೊ | ಮಂಡಲಾಧಿಪನು ಕರೆದು ಮನ್ನಿಸಿ || ಗಂಡುಗಲಿಯಾಗೆಂದು ಸಂಚುಗಾರಿಕೆ ತುಲಸಿ | ದಂಡೆ ಕೊರಳಿಗೆ ಹಾಕಿ ದಾಸರೊಳಗಿರಿಸಿದನು 4 ಘನವಾದ ಉದ್ಯೋಗ ದೊರಕಿತು ನನಗಿನ್ನು | ಅನುಮಾನವಿಲ್ಲವು ಎಂದೆಂದಿಗೂ || ದಿನದಿನಕೆ ಹರಿನಾಮವೆಂಬೊ ಲೆಖ್ಖ-| ವನು ಬರೆದು ತ್ರಿಲೋಕದರಸನಿಗೆ ಒಪ್ಪಿಸಿದೆ || 5 ಬರೆದು ಲೆಖ್ಖವ ನೋಡಿ ದಯಾಪಯೋವಾರಿಧಿ | ಹರುಷದಿಂದಲಿ ಎನಗೆ ಸಂಬಳಕ್ಕೆ || ಬರೆಸಿ ಕೊಟ್ಟನು ಸನದು ಕೇಶವಾದಿಯಂಬೊ | ವರಹಗಳು ಎಂದಿಗಾದರು ಅಳಿವಿಲ್ಲದೆ || 6 ಈಸು ದಿನ ಉದ್ಯೋಗ ಹೀನನಾಗಿ ನೊಂದೆ | ದಾಸರಾ ದಯದಿಂದ ದೊರೆಕಿತಿಂದು || ಸಂಚಿತ ಕರ್ಮ ಓಡಿಸಿ |ಶ್ರೀಶ ವಿಜಯವಿಠ್ಠಲನಲ್ಲಿ ಬಾಳಿದೆನೊ || 7
--------------
ವಿಜಯದಾಸ