ಒಟ್ಟು 3287 ಕಡೆಗಳಲ್ಲಿ , 121 ದಾಸರು , 2495 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ) ಹರಿಕಥಾಮೃತಸಾರ ಶ್ರೀಮ- ದ್ಗುರುವರ ಜಗನ್ನಾಥದಾಸರ ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ಪರಮಪಂಡಿತಾಭಿಮಾನಿಗಳು ಮ- ತ್ಸರಿಸಲೆದೆಗಿಚ್ಚಾಗಿ ತೋರುವು- ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1 ಭಾಮಿನಿಯ ಷಟ್ಪದಿಯ ರೂಪದ- ಲೀ ಮಹಾದ್ಭುತ ಕಾವ್ಯದಾದಿಯೊ- ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ ಯಾಮಯಾಮಕೆ ಪಠಿಸುವರ ಸು- ಧಾಮಸಖ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2 ಸಾರವೆಂದರೆ ಹರಿಕಥಾಮೃತ ಸಾರವೆಂಬುವುದೆಮ್ಮ ಗುರುವರ ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ ಸಾರಥಿಯ ಬಲಗೊಂಡು ಸಾರಾ- ಸಾರಗಳ ನಿರ್ಣೈಸಿ ಪೇಳ್ದನು ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3 ದಾಸವರ್ಯರ ಮುಖದಿ ನಿಂದು ರ- ಮೇಶನನು ಕೀರ್ತಿಸುವ ಮನದಭಿ- ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ಈ ಸುಲಕ್ಷಣ ಕಾವ್ಯದೋಳ್ ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4 ಪ್ರಾಕೃತೋಕ್ತಿಗಳೆಂದು ಬರಿದೆ ಮ- ಹಾಕೃತಘ್ನರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಟಾದ ಬಳಿಕ ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5 ಶ್ರುತಿಗೆ ಶೋಭನವಾಗದೊಡೆ ಜಡ ಮತಿಗೆ ಮಂಗಳವೀಯದೊಡೆ ಶ್ರುತಿ ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ ಮಥಿಸಿ ಮಧ್ವಾಗಮಪಯೋಬ್ಧಿಯ ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6 ಸಕ್ತಿ ಸಲ್ಲದು ಕಾವ್ಯದೊಳು ಪುನ- ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ- ಭಕ್ತಿ ವಿಷಮಗಳಿರಲು ಜೀವ- ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7 ಆಶುಕವಿಕುಲಕಲ್ಪತರು ದಿ- ಗ್ದೇಶವರಿಯಲು ರಂಗನೊಲುಮೆಯ ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು ಈ ಸುಲಕ್ಷಣ ಹರಿಕಥಾಮೃತ ಸಾರ ದೀರ್ಘ ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8 ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ದೂಷಕರು ದಿನದಿನದಿ ಮಾಡುವ ದೂಷಣವೇ ಭೂಷಣವು ಎಂದುಪ- ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9 ಅಶ್ರುತಾಗಮಭಾವ ಇದರ ಪ- ರಿಶ್ರಮವು ಬಲ್ಲವರಿಗಾನಂ- ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ ಮಿಶ್ರರಿಗೆ ಮರೆಮಾಡಿ ದಿತಿಜರ ಶಸ್ತ್ರದಲಿ ಕಾಯದಿಪ್ಪರಿದರೊಳು- ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10 ನಿಚ್ಚ ನಿಜಜನ ಮೆಚ್ಚ ಗೋಧನ ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ ಉಚ್ಚವಿಗಳಿಗೆ ಪೊಚ್ಚ ಪೊಸದೆನ- ಲುಚ್ಚರಿಸಿದೀ ಸಚ್ಚರಿತ್ರೆಯ ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11 ಸಾಧು ಸಭೆಯೊಳು ಮೆರೆಯೆ ತತ್ವಸು- ಬೋಧವೃಷ್ಟಿಯ ಗರೆಯೆ ಕಾಮ ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ ವಾದಿಗಳ ಪಲ್ಮುರಿಯೆ ಪರಮವಿ- ನೋದಿಗಳ ಮೈ ಮರೆಯಲೋಸುಗ ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12 ವ್ಯಾಸತೀರ್ಥರ ಒಲವೊ ವಿಠಲೋ- ಪಾಸಕ ಪ್ರಭುವರ್ಯ ಪುರಂದರ ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ ಕೇಶವನ ಗುಣಮಣಿಗಳನು ಪ್ರಾ- ಣೇಶಗರ್ಪಿಸಿ ವಾದಿರಾಜರ ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13 ಹರಿಕಥಾಮೃತಸಾರ ನವರಸ ಭರಿತ ಬಹುಗಂಭೀರ ರತ್ನಾ- ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ಸರಸ ನರಕಂಠೀರವಾಚಾ- ಜನಿತ ಸುಕುಮಾರ ಸಾತ್ವೀ- ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14 ಅವನಿಯೊಳು ಜ್ಯೋತಿಷ್ಮತಿಯ ತೈ- ಲವನು ಪಾಮರನುಂಡು ಜೀರ್ಣಿಸ- ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ಶ್ರವಣಮಂಗಳ ಹರಿಕಥಾಮೃತ ಸವಿದು ನಿರ್ಗುಣಸಾರಮಕ್ಕಿಸ- ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15 ಅಕ್ಕರದೊಳೀ ಕಾವ್ಯದೊಳು ಒಂ- ದಕ್ಕರವ ಬರೆದೋದಿದವ ದೇ- ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ಲೆಕ್ಕಿಸದೆ ಲೋಕೈಕನಾಥನ ಭಕ್ತಿಭಾಗ್ಯವ ಪಡೆದ ಜೀವ ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16 ಒತ್ತಿ ಬಹ ವಿಘ್ನಗಳ ತಡೆದಪ ಮೃತ್ಯುವಿಗೆ ಮರೆಮಾಡಿ ಕಾಲನ ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ ಒತ್ತಿಗೊಳಿಸಿ ವನರುಹೇಕ್ಷಣ ನೃತ್ಯಮಾಡುವನವನ ಮನೆಯೊಳು ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17 ಆಯುರಾರೋಗ್ಯೈಶ್ವರ್ಯ ಯಶ ಧೈರ್ಯ ಬಲ ಸಮಸಹಾಯ ಶೌರ್ಯೋ ದಾರ್ಯ ಗುಣಗಾಂಭೀರ್ಯ ಮೊದಲಾದ ಆಯತಗಳುಂಟಾಗಲೊಂದ- ಧ್ಯಾಯ ಪಠಿಸಿದ ಮಾತ್ರದಿಂ ಶ್ರವ- ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18 ಕುರುಡ ಕಂಗಳ ಪಡೆವ ಬಧಿರನಿ- ಗೆರಡುಕಿವಿ ಕೇಳ್ವಹವು ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ ಬರಡು ಹೈನಾಗುವುದು ಕೇಳ್ದರೆ ಕೊರಡು ಪಲ್ಲವಿಸುವುದು ಪ್ರತಿದಿನ ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19 ನಿರ್ಜರತರಂಗಿಣಿಯೊಳನುದಿನ ಮಜ್ಜನಾದಿ ಸಮಸ್ತ ಕರ್ಮವಿ- ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರತೂಗುವಂದದಿ ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20 ಸತಿಯರಿಗೆ ಪತಿಭಕುತಿ ಪತ್ನಿ ವ್ರತ ಪುರುಷರಿಗೆ ಹರಿಷ ನೆಲೆಗೊಂ- ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ ಸತತ ಮಂಗಳವೀವ ಬಹು ಸು- ಕೃತಿಗಳೆನಿಸುತ ಸುಲಭದಿಂ ಸ ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21 ಎಂತು ವರ್ಣಿಸಲೆನ್ನಳವೆ ಭಗ- ವಂತನಮಲ ಗುಣಾನುವಾದಗ- ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ ಚಿಂತನೆಗೆ ಬಪ್ಪಂತೆ ಬಹು ದೃ- ಷ್ಟಾಂತಪೂರ್ವಕವಾಗಿ ಪೇಳ್ದ ಮ- ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22 ಮಣಿಖಚಿತ ಹರಿವಾಣದಲಿ ವಾ ರಣಸುಭೋಜ್ಯ ಪದಾರ್ಥ ಕೃಷ್ಣಾ ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ ಪ್ರಣತರಿಗೆ ಪೊಂಗನಡ ವರವಾ ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23 ದುಷ್ಟರೆನ್ನದೆ ದುರ್ವಿಷಯದಿಂ ಪುಷ್ಟರೆನ್ನದೆ ಪೂತಕರ್ಮ ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣ ಕೈಪಿಡಿಯುವನು ಸತ್ಯ ವಿ- ಶಿಷ್ಟ ದಾಸತ್ವವನು ಪಾಲಿಸಿ ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24
--------------
ಶ್ರೀದವಿಠಲರು
ಹರಿಕೃಪೆಯೋಗ್ಯ ಮುಮುಕ್ಷನು ಧರಿಯೊಳು ಕಾಂಬ ಪರೋಕ್ಷನು ಪ ಹಿಂದಿನ ಪುಣ್ಯದಿ ಬಂದೆನೈ ದೇಹದಿ ಮುಂದಾವಗತಿಯಂದು ಮುಮುಕ್ಷನು ನೊಂದು ಮನದಿ ಪಶ್ಚಾತ್ತಾಪ ವಿರಕ್ತಿಯ ಹೊಂದಿದ ದಡದಲಿ ಮುಮುಕ್ಷನು ನಿಂದು ವಿವೇಕದಿ ಪರಮ ಶುಭೇಚ್ಛವ ಛಂದದಿ ಹಿಡಿವನು ಮುಮುಕ್ಷನು ಇಂದಿರೆ ಪತಿಗೋವಿಂದ ಮುಕ್ಕುಂದ ಸಲ ಹೆಂದು ಮೊರೆಯಿಡುವ ಮುಮುಕ್ಷನು 1 ಅಷ್ಟಮದ ಮುರಿದು ಆರರಿಗಳ ಇಟ್ಟಣಿ ಗಿಡಿಸುವ ಮುಮುಕ್ಷನು ದುಷ್ಟತನ ಬಿಡಿಸಿ ಮನನಿನ ಮಲ್ಲನೆ ಕಟ್ಟಲೆಳಿರಿಸುವ ಮುಮುಕ್ಷನು ನಿಷ್ಠೆಯಿಂದಲಿ ಗುರುಚರಣ ವಭಕುತಿಲಿ ಮುಟ್ಟಿಭಜಿಸುವನು ಮುಮುಕ್ಷನು ಇಷ್ಟಸ್ವಧರ್ಮಪಕರ್ಮಗಳನ್ನು ಕಾಮ್ಯವ ಬಿಟ್ಟು ನಡೆಸುತಿಹ ಮುಮುಕ್ಷನು 2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಕೃಷ್ಣ ವಿಠಲಾ | ಕರುಣಿಸಿವಳೀಗೆ ಪ ಕರುಣಾನಿಧಿ ಎಂದೆನುತ | ಮರೆಹೊಕ್ಕೆ ದೇವಾ ಅ.ಪ. ಜ್ಞಾನವರ್ಜಿತಳಾಗಿ | ಆಜ್ಞೆಳೆಂದೆನಿಸಿಹಳುಮಾನನಿಧಿ ನೀನಾಗಿ | ಜ್ಞಾನ ಸಾಧನವಾಸಾನುಕೂಲಿಸೆ ಕಾಯೊ | ಮೌನಿಜನ ಸದ್ವಂದ್ವನೀನೆಗತಿ ಎಂದೆನುತಾ | ತನುವನರ್ಪಿಪಳೊ 1 ಕತೃ ನೀನೆಂಬಂಥಾಉತ್ತಮದ ಮತಿಯಿತ್ತು | ಬೃತ್ಯಳನು ಪೊರೆಯೋ 2 ಕ್ಲೇಶಮೋದಗಳು ಸಮ | ಭಾಸವಾಗಲಿ ದೇವವಾಸವಾದ್ಯಮರನುತ | ವಾಸುದೇವಾ ಖ್ಯಏಸೇಸು ಜನ್ಮಗಳ | ರಾಶಿ ಪುಣ್ಯದ ಫಲದಿದಾಸ ದೀಕ್ಷೆಗೆ ಮನವ | ಆಶಿಸಿಹಳಯ್ಯಾ 3 ರಾಜೀವ ನಯನ ಹರಿಓಜಸ್ಸುಗಳ ಕೊಟ್ಟು ಕಾಪಾಡೊ ಇವಳಾ 4 ಸರ್ವಜ್ಞ ಸರ್ವೇಶ | ಸರ್ವಕಾರಣ ಮೂರ್ತಿಊರ್ವಿಯಾಳಿವಳೊಬ್ಬ | ದರ್ವಿಯಂತಿಹಳೋಸರ್ವದಾ ತವಸ್ಮರಣೆ | ಕೃಪೆಗೈದು ಪೊರೆ ಇವಳಾಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹರಿದಾಸನಾದರೆ ಹ್ಯಾಂಗಿರಲಿ ಬೇಕು ನರಲೋಕದ ಚಿಂತೆ ಬಿಟ್ಟುಕೊಡಬೇಕು ಪ ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು ಬಂದದೆಲ್ಲ ಬರಲಿ ಈಗಲೇ ಎನಬೇಕು ಅಂದವರು ಎನಗೆ ಬಂಧುಗಳು ಎನಬೇಕು 1 ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು ಮಾನಾಭಿಮಾನಕ್ಕೆ ಹರಿತಾನೆ ಎನಬೇಕು ಏನಾದರಾಗಲಿ ಸುಖಬಡಲಿಬೇಕು 2 ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು ಪರಲೋಕದ ಗತಿ ಬಯಸಬೇಕು ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು ದುರುಳರನ ಕಂಡರೆ ದೂರಾಗಬೇಕು 3 ತಾವರೆಮಣಿ ತುಲಸಿಸರವ ಧರಿಸಲಿಬೇಕು ಭಾವಶುದ್ಧನಾಗಿ ತಿರುಗಬೇಕು ಕೋವಿದರೆ ಸಂಗಡ ಕೂಡ್ಯಾಡುತಿರಬೇಕು ಪಾವಕನಂತೆ ಇಂಪವ ಕಾಣಬೇಕು 4 ಅನ್ನಪಾನಾದಿಗಳಿಗವಸರ ಬೀಳದಿರಬೇಕು ಕಣ್ಣಿದ್ದು ಕುರುಡನೆಂದೆನಿಸಬೇಕು ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು ತನ್ನೊಳಗೆ ತಾ ತಿಳಿದು ನಗುತಲಿರಬೇಕು 5 ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು ಡಂಭಕ ಭಕುತಿಯ ಜರಿಯ ಬೇಕು ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು ನಂಬಿ ನರಹರಿಪಾದವೆನುತ ಸಾರಲಿ ಬೇಕು6 ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು ಮರುತನೆ ಜಗಕೆ ಗುರುವೆನಲಿ ಬೇಕು ಪುರಂದರದಾಸರೇ ದಾಸರೆಂದನ ಬೇಕು ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು 7
--------------
ವಿಜಯದಾಸ
ಹರಿನಾಮ ಜಪಕಿನ್ನು ಸರಿಯಾದುದಿಲ್ಲ ಸರಸಿಜಾಸನಿದರ ಸಾರವನು ಬಲ್ಲ ಪ. ಬಡವಾಗ್ನಿ ಸುತ್ತಿದರು ಕೊಡುವದನುಪಮ ತಂಪ ನಡುನೀರೊಳಗೆ ಮುಳುಗಲುಡುಪವಹದು ಕಡುಭಯದ ಕಾಡಲ್ಲಿ ಮಿಡುಕುತಿಹ ಸಮಯದಲಿ ಒಡೆಯನನು ನೆನೆದವನ ಕಡೆಹಾಯಿಸುವ ನಮ್ಮ 1 ಘೋರ ರಿಪು ರಾಜಾಗ್ನಿ ಘೋರಾಹಿ ಪಕ್ಷಿ ಮೃಗ ಮಾರಿ ಮೊದಲಾದಭಯಕಾರಿಗಳನು ದೂರ ಓಡಿಸಿ ದಡವ ಸೇರೆ ಸಲಹುವ ನಮ್ಮ ಕಾರುಣ್ಯ ನಿಧಿಯನ್ನು ಸಾರಿಸಾರಿಗೆ ನೆನೆವ 2 ಆವ ಕಾಲಕು ಸುಖವನೀವ ಶೇಷ ಗಿರೀಶ ಶ್ರೀವರನ ಸರ್ವತ್ರ ಸ್ಮರಿಸಿರೆಂದು ದೇವಋಷಿಯೆಂದುದನು ದಿಟವೆನುತ ನಂಬುವರ ಕಾವನನುಭವ ಸಿದ್ಧ ಕಮಲಾಕ್ಷ ಗತಿಯೆಂಬ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಪಾದವ ನಂಬಿರೋ | ಮನುಜರೆಲ್ಲ | ಹರಿಯಲ್ತೆ ಹರಿಗರ್ವ ಹರಿಸಿ ಗೋಕುಲದೀ | ವಿ | ಹರಿಸಿ ಹರಿಜಳಲ್ಲಿ ಹರಿಮೆಟ್ಟಿನಲಿವಂಥ ಪ ಸೋಮಜ ಭವನ ಪದಾ | ಸೇವೆಗೆ ಮೆಚ್ಚಿ | ಸೋಮ ಪುತ್ರಗೆ ನೀಡಿದಾ | ಸೋಮನಾ ಭಂಡಾರಿಯನೆ ಮಾಡಿ ದಯದಿಂದ | ಸೋಮಜಾನನಾ ಪೂರ್ಣ ಸೋಮಚಕೋರವಾ 1 ಕಮಲಾರಿ ಧರ ಸೇವ್ಯನು | ಶಂಖ ಚಕ್ರ | ಕಮಲಾಗದಾಧರನು | ಕಮಲಾಂಘ್ರೀಯನಖ ಕಮಲದಿ ಜನಿಸಿದಾ | ಕಮಲದಿ ಮೂಜಗ ಕಮಲಗತಿಯ ನೀವ 2 ಗೋಪೆಸರನ ಪಿತನ | ಉದ್ಧರಿಸಲು | ಗೋಪಾದ ತ್ರಯ ಕೃತನ | ಗೋಪಾದಿವಿನುತ ಮಹಿಪತಿಸುತ ಪ್ರಭು | ಗೋಪಕೋಟಿ ತೇಜ ಗೋಪಾಲ ನೆನಿಸುವ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಭಜನೆ ಮಾಡುವಗೆ ಅನಂತಫಲವೂ ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ ಭವರೋಗ ಸಂಚಿತವು ಪರಿ ಪರಿಯ ನರಕಾದಿ ಬಂಧಕವು ಬಿಡದು 1 ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ ಗಾರಾಮವಾದಂಥ ಸುಖಸೌಖ್ಯವು ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು 2 ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ ಸತತಧ್ಯಾನವು ಮಾಡುವ ಸಾಧು ಜನರಾ ಪತಿತ ಪಾವನನಾದ ಪರಮಾತ್ಮ ಪಾಲಿಸೆ ಗತಿಯು ತೋರುವ ಇನ್ನು ಕರುಣದಲಿ ಹರಿಯು 3
--------------
ಹೆನ್ನೆರಂಗದಾಸರು
ಹರಿಯ ನೆನೆವಲ್ಲಿ ಮನವೆ ನೀ ಪ ಅರಿವು ತಿಳಿವಲ್ಲಿ ಹರಿದುಹೋಗುವ ದುರುಳ ಸಂಸಾರಕೆ ಮರುಳನಾಗಿ ನೀ ನರಕಕ್ಹೋಗುವಿಯಲ್ಲೋ ಅ.ಪ ಖೊಟ್ಟಿಗುಣಳಿವಲ್ಲಿ ಮನಸಿನ ಭ್ರಷ್ಟತ್ವ ಕಳಿವಲ್ಲಿ ಶಿಷ್ಟರಲ್ಲಿ ಮನವಿಟ್ಟು ಉಳಿಯದೆ ನೀ ಕಷ್ಟದೊಳಗೆ ಬಿದ್ದು ಕೆಟ್ಟು ಹೋಗುವಿಯಲ್ಲೋ 1 ಮರವೆ ಮಾಯವನ್ನು ಮರುಳೆ ನೀ ತರಿಯವಲ್ಲಿ ಇನ್ನು ಪರಿ ವಿಚಾರಿಸದೆ ದುರಿತದೊಳಗೆ ಬಿದ್ದು ಮರುಗುವಿಯಲ್ಲೋ 2 ಅಸೆ ನೀಗುವಲ್ಲಿ ಸಂಸಾರ ದ್ವಾಸನೆ ಕಡಿವಲ್ಲಿ ದಾಸರ ನಡೆನುಡಿ ಸೋಸಿಲಿಂ ತಿಳಿಯದೆ ನಾಶನಾಗುವಿ ಯಮಪಾಶದೊಳಗೆ ಬಿದ್ದು 3 ಸತಿಸುತರ ಮಾಯಮೋಹದಿ ಗತಿಸಿ ಪೋಗ್ವುದು ವಯ ಕೃತ್ರಿಮನೆ ಅತಿ ಮಂದಮತಿಯೊಳು ಬಿದ್ದು ಘನ ವ್ಯಥೆಯ ಬಡುವಿ ಮಹಗತಿಮೋಕ್ಷ ಪಡೆಯದೆ 4 ಮಂದಿ ಮಕ್ಕಳ್ಯಾರು ನಿನಗೀ ಬಂಧು ಬಳಗ ಯಾರು ಕುಂದುವ ಜಗಮಾಯದಂದ ತಿಳಿದು ಮಮ ತಂದೆ ಶ್ರೀರಾಮನ ಹೊಂದಿಕೊಳ್ಳವಲ್ಲಿ 5
--------------
ರಾಮದಾಸರು
ಹರಿಯ ಭಜನೆ ಮಾಡೋ ನಿರಂತರ ಪ. ಪರಗತಿಗಿದು ನಿರ್ಧಾರ ಅ.ಪ. ಮೊದಲೆ ತೋರುತದೆ ಮಧುರ ವಿಷಯಸುಖ ಕಡೆಯಲಿ ದುಃಖ ಅನೇಕ 1 ವೇದಶಾಸ್ತ್ರಗಳನೋದಿದರೇನು ಸಾಧನಕಿದು ನಿರ್ಧಾರ 2 ಸಾರವೊ ಬಹುಸಂಸಾರ ವಿಮೋಚಕ ಸೇರೊ ಶ್ರೀಹಯವದನನ್ನ 3 ತತ್ವವಿವೇಚನೆ
--------------
ವಾದಿರಾಜ
ಹರಿಯಂದು ಸ್ಮರಿಸುವರ ದುರಿತಪರಿಹಾರವೆಂದು ನೆರೆಪೇಳ್ವ ಶೃತಿ ತಿಳಿದು ಮನವೆ ಕರುಣಾಸಾಗರನಾದ ಕಮಲಾದ್ರಿವಾಸ ನರಹರಿಯಪಾದ ಭಜಿಸುವ ಮನವೆ ಪ ಸುತನ ನಿಂದಗನೆಂದು ಹಿತದಂತ್ಯಕಾಲ ಸಂಘಾತನೆ ಹಿತ ವೇಳ್ವೆ ಕರಿಯಲು ಮನವೆ ಚತುರಾಸ್ಯ ಜನಕ ಮನ್ಮಥಕೋಟಿರೂಪ ಸದ್ಗತಿ ತೋರಿಸಲಹುದೇನು ಮನವೆ 1 ಆ ಮರರೀಮರ ಎಂಬ ಪಾಮರಗೆ ಪಟ್ಟಾಭಿರಾಮ ಭಕ್ತರ ಪ್ರೇಮ ಮನವೆ ಕಾಮಿತಾರ್ಥವನಿತ್ತ ಕಂಜಾಕ್ಷದಯದಿ ಸೀತಾಮನೋಹರ ರಾಮ ಮನವೆ 2 ಕರಿಯು ಮಕರಿಗೆ ಶಿಲ್ಕಿ ನೆರಳುತಲಿ ಪರಮಾತ್ಮ ಪರಬ್ರಹ್ಮನೆಂದು ಸ್ತುತಿಸಿ ಮನವೆ ಗರುಡವಾಹನ ಹೆನ್ನೆಪುರನಿಲಯ ಮರಿಯದಲೆ ಪರಿಪಾಲಿಸಿ ಪೊರೆವ ಮನವೆ 3
--------------
ಹೆನ್ನೆರಂಗದಾಸರು
ಹರಿಯನರಿಯದಿಹ್ಯ ನರಜನ್ಮಾವ್ಯಾಕೆ ಪರಬ್ರಹ್ಮವರಿಯದ ಬರೆ ಬ್ರಾಹ್ಮಣವ್ಯಾಕೆ ಧ್ರುವ ಹರಿಃ ಓಂ ತತ್ಸದಿತಿಯೆಂಬ ಶ್ರೀ ಹರಿ ವಾಕ್ಯವರಿಯದೆ ಬರುದೆ ಶ್ರೀ ಹರಿ ಶ್ರೀ ಹರಿಯಂದೊದರುವದ್ಯಾಕೆ 1 ಏಕಾಂಶೇನ ಸ್ಥಿತೋ ಜಗತ ಎಂಬ ವಾಕ್ಯವರಿಯದೆ ನಾಲ್ಕಾರು ವೇದಶಾಸ್ತ್ರವೋದಿ ಕೇಳುವದ್ಯಾಕೆ 2 ಎಂಬ ವಾಕ್ಯವರಿಯದೆ ಹದಿನೆಂಟು ಪುರಾಣ ಕೇಳಿ ಹೇಳುವದ್ಯಾಕೆ 3 ಮಮೈವಾಂಶೋ ಜೀವಲೋಕೇ ಜೀವಭೂತ:ಸನಾತನ ಎಂಬ ವಾಕ್ಯವರಿಯದೆ ನಾನಾವ್ರತಾಚಾರ ಸಂನ್ಯಾಸ ಕೈಕೊಂಬುದ್ಯಾಕೆ 4 ಸುದರ್ಶನ ಮಹಾಜ್ವಾಲಾ ಕೋಟಿಸೂರ್ಯ ಸಮಪ್ರಭ ಎಂಬ ವಾಕ್ಯವರಿಯದೆ ಸೀಳಿ ಸುದರ್ಶನಗಳ ಪೂಜಿ ಮಾಡುವದ್ಯಾಕೆ 5 ಮಂತ್ರ ಪ್ರಣಮ್ಯವರಿಯದೆ ತಂತ್ರ ಮಂತ್ರಸರವ್ಯಾಕೆ ಅಂತರಾತ್ಮವರಿಯದೆ ತರ್ಕಭೇದಗಳ್ಯಾಕೆ 6 ವಿಶ್ವವ್ಯಾಪಕ ಗುರು ಭಾಸ್ಕರಮೂರ್ತಿ ಶ್ರೀಪಾದ ವಿಡದಿಹ ಮಹಿಪತಿಗೆ ಭವಪಾಶದಂಜಿಕಿನ್ಯಾಕೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯಲರಿಯದು ಜನ್ಮ ಗುರುಪಾದವರಿಯದೆ ಧ್ರುವ ಬಯಲು ಭಾವಿಸಿ ನಿರ್ಬೈಲ ನೆಲೆಗೊಳ್ಳದೆ ಭಾವಭಕ್ತಿಯ ಕೀಲು ಹೊಯಿಲು ತಿಳಿಯದೆ 1 ರವಿ ಶಶಿಯನೊಡಗೊಡಿ ಶಿವಸುಖವ ತಿಳಿಯದೆ ಸೂತ್ರ ಸೋಹ್ಯ ಹೊಳಿಯದೆ 2 ಆಧಾರವಂ ಬಲಿದು ಆರೇರಿ ಬೇರಿಯದೆ ಮಹಿಪತಿ ನಿನ್ನೊಳು ಗುರುಗತಿ ಅರಿಯದೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯಾ ಪಾದಕ ಶರಣೆನ್ನಿ | ಸ್ಮರಣೆಗೆ ಹರಿಯನು ಕರೆತನ್ನಿ ಪ ಅವನ ನಾಮವನೆನಿಯಲು ಭಕುತಿಲಿ | ಭವಭಯ ಮೂಲದಿ ನೀಗುವದು | ಆವಾಗ ಕಂಗಳ ಸಿರಿಸುಖ ದೋರುತ | ಜೀವನ ಗತಿನೆಲೆ ಹೊಂದುವದು 1 ಸಿಕ್ಕಿತ್ತು ನರದೇಹ ದೊರಿಯಲು ಪುಣ್ಯದಿ | ಸರ್ಕನೆ ಸಂತರ ಮೊರೆಹೊಕ್ಕು | ದಕ್ಕಿಸಿಕೊಳ್ಳದೇ ಬೋಧಾಮೃತವನು | ಪುಕ್ಕಟೆ ದಿನವನು ಗಳೆವರೇ 2 ತನುವಿದು ನೋಡಲು ನೆಚ್ಚಿಕೆ ಇಲ್ಲದ | ಮನಿಗಂಧರ್ವದ ಪುರದಂತೆ | ತನುವಿಗೆ ಹತ್ತಿದ ಸಂಸಾರ ಸುಖ | ಕನಸಿನ ಭಾಗ್ಯವ ತೆರೆದಂತೆ 3 ಇದರೋಳು ನಾ ನನ್ನದು ಎಂದೆನುತಲಿ | ಮದಮತ್ಸರವಾ ಬಗೆಯಲಿ | ಕುದಿಕುದಿದೇಳು ತಜ್ಞಾವಿಹೀನದಿ | ಉದರವ ಹೊರವುತ ತಿರುಗವರೇ 4 ಈಗಾಗಯನ್ನದೇ ಹರಿನಾಮವ | ನಾ | ಲಿಗೆ ಕೊನಿಯಲಿ ತಂದಿರಿಸೀ | ಭವ | ಸಾಗರ ಸುಳಿಯಿಂದಲಿ ತರಸೀ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯಾ ಪೂಜೆಯಾ ಮಾಡಿ ಗತಿಗಳ ಬೇಡಿ ಹರುಷದಿ ಕೂಡಿ ನಲಿ ನಲಿದಾಡಿ ಪ ಎಲ್ಲರೊಳು ಬಾಗಿ ನಡಿಬೇಕು ಸಾಗಿ ಖುಳ್ಳತನ ಹೋಗಿ ಏಕೋ ನಿಷ್ಟಾಗಿ ನಿಲ್ಲದೇ ವದಗಿ ಸಮದೃಷ್ಟಿ ತೂಗಿ 1 ನಿತ್ಯ ತಿಳಿದು ವಿಚಾರ ಬಲಿದು ಕುತ್ತಾಪಗಳದು ಸತ್ಯಗದಲ್ಲಿದ್ದು ಸತ್ಯಜ್ಞಾನ ಪಡೆದು ಸದ್ಬಾವ ಜಡಿದು ಚಿತ್ತ ಚಂದಲ ಜರಿದು ಮದ ಮತ್ಸರ ಜರೆದು 2 ತನ್ನದಿದಲ್ಲಾ ಸಿರಸೌಖ್ಯವೆಲ್ಲಾ ಇನ್ನು ತಿಳಿಲಿಲ್ಲಾ ಈ ಮರಹು ಸಲ್ಲಾ ಸನ್ನು ತನೆಬಲ್ಲಾ ಈ ಸಾಕಾಯ ವೆಲ್ಲಾ ಮನ್ನಿಸಿ ನೀವೆಲ್ಲಾ ಮಹಿಪತಿ ಜನಸೊಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯು ಕರ್ತನೆಂದರಿತವನೇ ಮುಕ್ತ ಮಿಕ್ಕಮಾತೆಲ್ಲಾ ವ್ಯರ್ಥ ಪ ಸರಸಿಜಭವ ರುದ್ರಾದ್ಯರಿಗೆಲ್ಲ ಅ.ಪ ದೊರಕುವುದೆಂದಿಗೂ ಶಾಶ್ವತ ನಿಜಮುಕ್ತಿ ಅರಿಯದ ವಾದಗಳೆಲ್ಲ ಕುಯುಕ್ತಿ ಸರ್ವಜೀವರಲಿ ಹರಿಯೆ ವ್ಯಾಪ್ತಿ1 ತೇನವಿನಾ ತೃಣಮಪಿನಚಲತಿ ಎಂಬ ಶ್ರುತ್ಯರ್ಥವ ಗುರುಬೋ- ಧಾನುಸಾರ ತಿಳಿಯಲು ತನ್ನಯ ಬಿಂಬಾ ಮಾನಸ ಪೀಠದಿ ಹೊಳೆಯಲು ದರುಶನ- ದಾನಂದ ಸುಖಾಮೃತ ತಾನುಂಬಾ 2 ಗುಣಕರ್ಮಗಳನು ಒಂ- ಪವನಾಂತರ್ಗತ ಗುರುರಾಮವಿಠಲ ಜವನವರಿಗೆ ಒಪ್ಪಿಸನು ತನ್ನವರನು 3ಸಂಪ್ರದಾಯದ ಹಾಡುಗಳು
--------------
ಗುರುರಾಮವಿಠಲ