ಒಟ್ಟು 6534 ಕಡೆಗಳಲ್ಲಿ , 130 ದಾಸರು , 4232 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಂಗಳೂರು ಉಮಾಮಹೇಶ್ವರ ದೇವರು) ಚಂದ್ರಚೂಡನಿವನ್ಯಾರೆ ಹೇಳಮ್ಮ ಇಂದ್ರಾದಿವರ ಮನೋ ಮಂದಿರ ನಮ್ಮ ಪ. ಭಾಲಲೋಚನ ಪಂಚತತ್ವ ವಿವೇಚನ ನೀಲಕಂಧರನಿವನ್ಯಾರೆ ಹೇಳಮ್ಮ ಸಾಲಾಗಿ ನಿಲುವ ದಿಕ್ಪಾಲ ಗಣದಿ ಕ- ಟ್ಟಾಳುಗಳಿರವ ಸುಶೀಲ ಕಾಣಮ್ಮ 1 ಭಸ್ಮೋದ್ಧೂಳಿತ ವಿಗ್ರಹ ವಿಶದ ಮಂ- ದಸ್ಮಿತಮುಖನಿವನ್ಯಾರೆ ಹೇಳಮ್ಮ ವಿಸ್ಮರಣೆಗಳೆಂದಿಗೀಯದೆ ಪಾಲಿಪ ಅಸ್ಮದ್ಗುರುವಂಬಿಕೇಶ ಕಾಣಮ್ಮ 2 ಉಮ್ಮೆಯನೊಡಗೊಂಡು ವುಛ್ರಯದೋರುತ ನಮ್ಮಲ್ಲಿ ದಯವಾದನ್ಯಾರೆ ಹೇಳಮ್ಮ ಬೊಮ್ಮನ ಪೆತ್ತ ಭಕ್ತಾಧೀನ ಶೇಷಾದ್ರಿ ತಿಮ್ಮಪ್ಪರಾಜನ ಮೊಮ್ಮಕಾಣಮ್ಮ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಮದ್ರಾಸಿನ ತಿರ್ವಳಕೇಣಿ ಪಾರ್ಥಸಾರಥಿ) ಏನು ಮಾಡಲಿನ್ನು ನೀನಲ್ಲದೆ ಯಾದಾರ ಬೇಡಲಿನ್ನು ಪ. ಮಾನಿನಿ ದ್ರೌಪದಿ ಮೊರೆಯಿಡುವುದ ಕೇಳಿ ಸಾರಥಿ ದೇವ ಅ.ಪ. ನೀನಿತ್ತ ಸೌಭಾಗ್ಯದ ಗರ್ವದಿ ಎನ್ನ ಧ್ಯಾನಾದಿಗಳ ಮಾಡದೆ ನಾನಾ ವಿಧದ ದುರ್ಮಾನುವಾದುದರಿಂದ ನೀನೆ ಸದ್ಗತಿಯೆಂದು ಧ್ಯಾನಿಸಿಲ್ಲಿಗೆ ಬಂದೆ 1 ಬಡತನದಿಂದಿರಲು ಸಕಲ ಸುರ- ರೊಡೆಯ ನೀ ಕೈ ಪಿಡಿದು ರೂಢಿ ಮದದಿ ನಿನ್ನನು ಬಿಟ್ಟು ಕಡೆಗೆ ನಿನ್ನಯ ಪಾದದೆಡೆಗೆ ಬಂದೆನು ದೇವ 2 ಪಶ್ಚಿಮ ವಾರಿಧಿಯ ತೀರದಲಾದ ದುಶ್ಚರಿತ್ರೆಯ ತಾಳದೆ ಆಶ್ಚರ್ಯತಮವಾದ ಸಚ್ಚರಿತ್ರನೆ ನಿನ್ನ ನೆಚ್ಚಿ ಬಂದಿಹೆನೊ ವಿಪಶ್ಚಿತರೊಡೆಯನೆ 3 ನಕ್ಷತ್ರಗಳಂದಿಂದಲು ಯೆನ್ನಪರಾಧ- ವಕ್ಷಯವಾಗಿರಲು ಅಕ್ಷರಿ ವಂದ್ಯ ನೀ ಲಕ್ಷ ಬಿಡುವುದೆ ಕ- ಟಾಕ್ಷದಿಂದಲಿ ನೋಡಿ ರಕ್ಷಿಸು ಕರುಣದಿ 4 ಎಷ್ಟು ಕರ್ಮಿಯಾದರು ನಿನ್ನಲಿ ಮನ- ವಿಟ್ಟು ಬಂದಿರುವೆನಲ್ಲ ದುಷ್ಟಮರ್ದನ ಶಿಷ್ಟರಕ್ಷಣ ಭಾಜಕ ಜ- ನೇಷ್ಟದಾಯಕ ಸೃಷ್ಟ್ಯಾದೃಷ್ಟಕರ್ತ 5 ನಟನ ಮಾಡುವ ಬೊಂಬೆಯ ಪೋಲುವ ಯೆನ್ನ ಹಟದಿಂದ ದಣಿಸುವುದೆ ವಟಪತ್ರ ಶಾಯಿ ಧೂರ್ಜಟಿ ವಂದ್ಯ ಅಂಜಲಿ ಪುಟನಾಗಿ ಬೇಡುವೆ ಘಟಿಸೊಭಿಲಷಿತವ 6 ಎಂದಿಗಾದರು ನಿನ್ನಯ ಪಾದಯುಗಾರ- ವಿಂದ ದರ್ಶನವಾಗಲು ಭವ ಸಿಂಧುವ ದಾಟುವೆ- ನೆಂದು ಬಂದಿರುವೆ ಸನಂದನಾದಿ ವಂದ್ಯ 7 ಕೂರ್ಮ ವರಾಹ ನಾರಸಿಂಹ ವಾಮನ ಶ್ರೀ ಭಾರ್ಗವ ರಾಮಕೃಷ್ಣ ಬೌದ್ಧ ಕಲ್ಕಿಯಂಬ ದಿವ್ಯ ನಾಮಗಳನು ಬಿಟ್ಟು ಕಾಮಲಾಲಸನಾಗಿ 8 ಒಂದು ನಿಮಿಷವಾದರು ತತ್ವಾಧಾರ ವಿಂದ ದರ್ಶನ ಮಾಡಲು ಹೊಂದಿದಘಗಳೆಲ್ಲ ಬೆಂದು ಹೋಗುವುದೆಂದಾ- ನಂದತೀರ್ಥಚಾರ್ಯರೆಂದ ನುಡಿಯ ನಂಬಿ 9 ದ್ವೇಷಿ ಮಾನವರ ಮುಂದೆ ನಾನಾ ವಿಧ ಕ್ಲೇಶವ ತಾಳ್ದೆ ಹಿಂದೆ ಘಾಸಿಯಾಗಿ ನಾನಾ ದೇಶ ದಾಟಿ ಬಂದೆ ಮೀಸಲಾದೆ ನಿನ್ನ ದಾಸ ದಾಸ್ಯನೆಂದೆ 10 ಜನರೊಳು ಪ್ರಮಿತನಾಗಿ ಬಾಳಿದ ಮಾನ- ವನು ಮಾನಹೀನನಾಗಿ ತನುವ ಪೊರೆದನತಿ ಘನಕ್ಲೇಶವೆನುತ ಅ- ರ್ಜುನನಿಗೆ ಉಪದೇಶವನು ಪೇಳಿದವ ನೀನೆ 11 ಯುಕ್ತಿ ಒಂದನು ಕಾಣೆನು ದೇಹದಿ ದೃಢ ಶಕ್ತಿಯಿಲ್ಲದವ ನಾನು ಮುಕ್ತಾಶ್ರಯ ಸರ್ವ ಶಕ್ತಿ ನೀನಿಹ ಪರ- ಭುಕ್ತಿ ಮುಕ್ತಿದನೆಂಬ ವಿರಕ್ತಿಯಿಂದಲಿ ಬಂದೆ 12 ಕಾಸೆಲ್ಲ ವ್ಯಯವಾಯಿತು ಎನಗೆ ಪರದೇಶವಾಸವಾಯಿತು ಆಸೆ ಬಿಡದುದರ ಘೋಷಣೆಗಿನ್ನವ- ಕಾಶವೊಂದನು ಕಾಣೆ ಶ್ರೀಶ ನೀನರಿಯೆಯ 13 ನಿಲ್ಲಲಾಶ್ರಯವನು ಕಾಣೆ ಪೋಗುವೆನೆಂದ- ರೆಲ್ಯು ಮಾರ್ಗವನು ಕಾಣೆ ಬಲ್ಲಿದ ವೈರಿಗಳಲ್ಲಿ ತುಂಬಿಹರರಿ- ದಲ್ಲಣ ನೀ ಎನ್ನ ಸೊಲ್ಲ ಲಾಲಿಸು ಕೃಷ್ಣ 14 ಅಶನವಸನ ಕಾಣದೆ ದೇಶವ ಸುತ್ತಿ ಬಸಿದು ಬೆಂಡಾಗಿಹೆನು ಉಶನಾಂiÀರ್i ಶಿಷ್ಯನ ವಶದಿಂದೆತ್ತಿ ಪೃಥ್ವಿಯ ದಶನಾಯಕರಿಗಿತ್ತ ಅಸಮಸಾಹಸ ದೇವ 15 ಮಾಡಿದಪರಾಧಕೆ ಮಾನಹಾನಿ ಮಾಡಿದುದು ಸಾಲದೆ ಬೇಡುವೆ ದೈನ್ಯದಿ ಪಾಡುವೆ ಮಹಿಮೆಯ ರೂಢಿಯೊಳಗೆ ದಯಮಾಡು ಇನ್ನಾದರು 16 ಇನ್ನಾದರೂ ಮನದಿ ಪಶ್ಚಾತ್ತಾಪ ವನ್ನು ತಾಳೊ ದಯದಿ ಕಣ್ಣ ಕಟ್ಟಿ ಕಾಡಿನೊಳು ಬಿಟ್ಟ ತೆರದೊಳಿಂ- ತೆನ್ನನು ಬಳಲಿಪದನ್ಯಾಯವಲ್ಲವೆ 17 ನಷ್ಟವೇನಹುಣನು ಎನ್ನಲಿ ಕ್ರೋಧ ಬಿಟ್ಟು ಬಾಧಿಸುತ್ತಿರಲು ಕೃಷ್ಣ ನೀ ಕರುಣದಿ ಕಷ್ಟ ಬಿಡಿಸಿ ಕಡೆ ಗಿಷ್ಟು ತಾತ್ಸಾರದಿಂದ ಕಷ್ಟಗೊಳಿಸಿದೆ 18 ಇಂದ್ರಾದಿ ಸುರರುಗಳು ಕೆಲವು ಕಾಲ ನೊಂದು ಭಾಗ್ಯವ ಪಡದು ಇಂದಿರೇಶ ನಿನ್ನ ಬಂಧಕ ಶಕ್ತಿಯಾ ನಂದ ತಿಳಿದಂತೆ ಮಂದನಾನರಿವೆನೆ 19 ಆನೆಯ ಭಾರವನು ಹೊರಲು ಸಣ್ಣ ಶ್ವಾನ ಸಹಿಸಲಾಪದೆ ದೀನ ಮಾನವನೆಂದು ಧ್ಯಾನಿಸಿ ಮನದಲಿ ಘನ್ನ ದುಖ್ಖವ ಕಳೆಯಾನಂಥ ಮೂರುತಿ20 ನೀನಿತ್ತ ಮಾನವನು ನೀ ಕಳದುದ ಕಾನು ಮಾಡುವದೇನಯ್ಯ ದಾನವಾರಿ ಸುರಧೇನು ನಿನ್ಡಿಗಳ ಧ್ಯಾನ ಮಾಡುತಲಿ ಸುಮ್ಮಾನದಿಂದಿರುವೆನು 21 ಸಾಕು ಸಾಕು ಮಾಡಿದೆ ಎನ್ನನು ಬಹು ನೀಕರಿಸುತ ದೂಡಿದೆ ಬೇಕಾದರೆ ಭಕ್ತ ನೀ ಕಪಾಲನ ಪ- ರಾಕೆಂಬ ಬಿರುದಿಂದ ಸಾಕುವದುಚಿತವೆ 22 ಅಂಬರೀಷವರದ ಸ್ವಭಕ್ತ ಕು- ಟುಂಬಿಯಂಬ ಬಿರುದ ನಂಬಿದ ಮೇಲೆನಗಿಂಬುದೋರದೆ ವೃಥಾ ಡಂಬರವ್ಯಾಕಿನ್ನು ಶಂಬರಾರಿಯ ಪಿತ 23 ಹಂಸವಾಹನ ಜನಕ ದಾಸಮದ- ಭ್ರಂಶಕನೆಂದನ- ಕ ಸಂಶಯವಿಲ್ಲದೆ ತಿಳಿದೆನು ಮಾತುಳ ಕಂಸ ಮರ್ದನ ವಿಪಾಂಸ ಶೋಭಿತ ದೇವ 24 ತರಳ ಪ್ರಹ್ಲಾದ ಧ್ರುವಾದಿಗಳನೆಲ್ಲ ಪೊರೆದನೆಂಬ ಕಥೆಯ ಹಿರಿಯರು ಪೇಳ್ವರು ಭರವಸೆ ಎನಗಿಲ್ಲ ಸಿರಿನಲ್ಲ ನೀಯೆನ್ನ ಬರಿದೆ ಬಿಟ್ಟದ ಕಂಡು25 ವಿಜಯಸಾರಥಿ ನಿನ್ನಯ ಮೂರ್ತಿಯ ಕಂಡು ಭಜಿಸಿದ ಮೇಲೆನ್ನನು ವಿಜಯ ಪೊಂದಿಸದಿರೆ ತ್ರಿಜಗವು ನಗದೇನೊ ಭುಜಗ ಭೂಷಣ ವಂದ್ಯ ದ್ವಿಜರಾಜ ಗಮನನೆ 26 ಕುಂದಣ ವರ್ಣವಾದ ಕೇತಕಿಯನು ಗಂಧಕೆ ಮರುಳನಾಗಿ ಬಂದು ಕುಸುಮಧೂಳಿಯಿಂದ ಲಂಡನಾದ ತುಂದಿಲೋದರ ಮಿಳಿಂದನಂದದಿ ಸಿಕ್ಕಿ 27 ಬೇಡುವದೇನೆಂದರೆ ನಿನ್ನನು ಧ್ಯಾನ ಮಾಡಿ ಪಾಡುವ ಭಾಗ್ಯವ ನೀಡು ನೀಚರನೆಂದು ಬೇಡದಂದದಿ ಮಾಡು ರೂಢಿಯೊಳಗೆ ದಯಮಾಡು ನೀ ನಿರುಪದಿ 28 ಇನ್ನು ತಾ ತಾಳಲಾರೆ ಕ್ಷಣೆ ಕ್ಷಣೆ ನಿನ್ನ ಪೊಗಳಲಾರೆ ಪನ್ನಗಾಚಲವಾಸ ಪರಮ ಪುರುಷ ಪ್ರ- ಸನ್ನ ವೆಂಕಟೇಶ ಪಾಲಿಸು ಕೃಪೆಯಿಂದ 29
--------------
ತುಪಾಕಿ ವೆಂಕಟರಮಣಾಚಾರ್ಯ
(ಮಹಿಷಿ ಅಶ್ವತ್ಥನಾರಾಯಣ ದೇವರು) ತಪ್ಪಾ ಕ್ಷಮಿಸು ಕಲ್ಪತರುರೂಪ ತವಪಾದ- ಕೊಪ್ಪಿಸಿದೆನು ಯೆನ್ನನು ಅಪ್ಪಳಿಸಖಿಳಾಂತರಾಯವತಿದಯದಿ ತಿ- ಮ್ಮಪ್ಪರಾಜನೆ ನೀನೆಂದರಿತು ಬಂದಿರುವೆನು ಪ. ಮಂಗಲ ಮಹಿಮೆ ಮಾತಂಗ ವರದ ಶುಭ ತುಂಗಾತೀರದಿ ನಿಂದು ತಾರಕನೆಂದು ಭವ ಭಯ ಭಂಗದ ಮಹಿಮನೆಂದರಿತು ಬಂದಿಹೆನಿಂದು ಅಂಗದಾದಿ ದೇವೇಂದ್ರ ಸಂಸ್ತುತ ತುಂಗಬಲ ಹನುಮತ್ಪ್ರತಿಷ್ಠಿತ ಅಂಗುಟಾಗ್ರದೊಳಖಿಳಪಾವನ ಗಂಗೆಯನು ಪಡದಾದಿ ಪುರುಷ 1 ಪಾವಕ ದಿಋಖ(?) ದೇವ ಸತ್ಸುಖಗಣ ಭಾವನ ಭಜಕೇಷ್ಟಸಿದ್ಧಿದನೇ ಮಾವನ ಮಗನೊಳಗುಸುರಿದ ನುಡಿಯನು ಕಾವೆನಿಂದಿರುವಿಲ್ಲಿ ಕರುಣಾವಾರಿಧಿ ಕೃಷ್ಣಾ ಈ ವಸುಂಧರೆಯಲ್ಲಿ ಘಟಿಸುವ ನೋವುಗಳ ಸಂಬಂಧಗೊಳಿಸದೆ ಶ್ರೀವನಿತೆಯೊಡಗೂಡಿ ನಿನ್ನ ಕ- ರಾವಲಂಬನವಿತ್ತು ಕರುಣಿಸು 2 ತ್ರಿವಿಧ ತಾಪಗಳು ಭರಿಸಲಾರದೆ ವಂದು ನೆವನದಿಂದಲಿ ಬಂದು ನುಡಿದೆನಿಂದು ಪವಮಾನವಂದಿತ ಪತಿತ ಪಾವನನೆ ನೀ- ವಹಿಸಿ ರಕ್ಷಿಪುದೆಂದು ಒರೆವೆನು ಗುಣಸಿಂಧು ವಿರಿಂಚಿ ರಮಾ ವರಪ್ರದ ಭಾರ ನಿನ್ನಲಿರಿಸಿದವನನು ತವಕದಲಿ ಕಾಪಾಡು ವೆಂಕಟ ಮಹಿಷಿ ಕ್ಷೇತ್ರ ಪಾಲನ3
--------------
ತುಪಾಕಿ ವೆಂಕಟರಮಣಾಚಾರ್ಯ
(ಮೂಲ್ಕಿಯ ನರಸಿಂಹ ದೇವರು) ರಕ್ಷಿಸು ಮನದಾಪೇಕ್ಷೆಯ ಸಲಿಸುತ ಲಕ್ಷ್ಮೀನರಹರಿ ರಾಕ್ಷಸವೈರಿ ಪ. ಅಕ್ಷಮ ದುಶ್ಯೀಲ ದುವ್ರ್ಯಾಪಾರದಿ ಕುಕ್ಷಿಂಭರನೆಂದುಪೇಕ್ಷೆಯ ಮಾಡದೆ ಅ.ಪ. ಉಭಯ ಶುಚಿತ್ವವು ಊರ್ಜಿತವೆನೆ ಜಗ- ದ್ವಿಭು ವಿಶ್ವಂಭರ ವಿಬುಧಾರಾದ್ಯ ಶುಭಮತಿ ಸಂಸ್ಥಿತಿಯಭಯವ ಪಾಲಿಸೊ ತ್ರಿಭುವನಮೋಹನ ಪ್ರಭು ನೀನನುದಿನ1 ಸಿಂಧುಶಯನ ನಿತ್ಯಾನಂದ ಗುಣಾಬ್ಧೇ ಹಿಂದಣ ಪಾಪವು ಮುಂದೆಸಗದ ರೀತಿ ಮಂದರಾದ್ರಿಧರ ಮಾಮವ ದಯಾಕರ 2 ಪಾಪಾತ್ಮರಲಿ ಭೂಪಾಲಕನು ನಾ ಶ್ರೀಪತಿ ಕರುಣದಿ ಕಾಪಾಡುವುದು ಗೋಪೀರಂಜನ ಗೋದ್ವಿಜರಕ್ಷಣ ಕಾಪುರುಷರ ಭಯ ನೀ ಪರಿಹರಿಸಯ್ಯ 3 ಸರ್ವೇಂದ್ರಿಯ ಬಲ ತುಷ್ಟಿ ಪುಷ್ಟಿಯಿತ್ತು ಸರ್ವಾಂತರ್ಯದೊಳಿರುವನೆ ಸಲಹೊ ದುರ್ವಾರಾಮಿತ ದುರ್ವಿಷಯದಿ ಬೇ- ಸರ್ವೇನು ಪನ್ನಗಪರ್ವತವಾಸನೇ 4 ಶರಣಾಗತನಾಗಿ ಸೆರಗೊಡ್ಡಿ ಬೇಡುವೆ ವರ ಮೂಲಿಕಪುರ ದೊರೆಯೇ ಹರಿ ಲಕ್ಷ್ಮೀನಾರಾಯಣ ತ್ರಿಜಗ ದ್ಭರಿತ ಉತ್ಪ್ರೇರಕ ಸ್ಥಿರಭಕ್ತಿಯನಿತ್ತು 5
--------------
ತುಪಾಕಿ ವೆಂಕಟರಮಣಾಚಾರ್ಯ
(ಮೂಲ್ಕಿಯ ಮಹಾಲಿಂಗೇಶನನ್ನು ನೆನೆದು) ಪಿಡಿಯೆನ್ನ ಕೈಯ ಜಗನ್ಮಯ ಪಿಡಿಯೆನ್ನ ಕೈಯ ಪ. ಪಿಡಿಯೆನ್ನ ಕೈಯ ನಿನ್ನಡಿದಾವರೆಯಲ್ಲಿ ದೃಢವಾದ ಮನವ ಬೆಂಬಿಡದೆನಗೀಯಯ್ಯ ಅ.ಪ. ಪಾಮರಮತಿಯ ಪಾಪಾತ್ಮರ ಸೀಮಾಧಿಪತಿಯ ಕಾಮುಕಪರದಾರಭ್ರಾಮಕತಾಮಸ- ಧಾಮನ ಕಪಟವಿಶ್ರಾಮ ಕುಧೀಮನ ವ್ಯೋಮಕೇಶ ಭಗತ್ಪದಾಶ್ರಿತನ ಮಮಕಾರದಲಿ ಪಾಲಿಸು ಹೈಮವತಿಪತಿ ಕಾಮಹರ ಸುತ್ರಾಮವಂದಿತ ಸೋಮಶೇಖರ 1 ದುಷ್ಟದುರ್ಜನನ ದುರಾಚಾರ ಭ್ರಷ್ಟಜೀವನನ ಮೆಟ್ಟಿದ ನೆಲಮುನಿಯುವನ ಕೃತಘ್ನ ಕ- ನಿಷ್ಟಕಾಯುಷ್ಯದ ಘಟ್ಟಿಚೇತನನೆನ್ನ ತಟ್ಟನೆ ದಯವಿಟ್ಟು ಸರ್ವಾಭೀಷ್ಟದಾಯಕನಾಗಿ ಕರುಣಾ- ದೃಷ್ಟಿಯಿಂದಲಿ ನೋಡು ಸನ್ಮನವಿಷ್ಟರಸ್ಥ ಶಿವಾಷ್ಟಮೂರುತಿ2 ಸತ್ಯಬಾಹಿರನ ಪ್ರಪಂಚ ಪ್ರ-ವೃತ್ತಿಯೊಳಿಹನ ಅತ್ಯಂತ ಪಾಪಿ ಕುಚಿತ್ತ ಮದಾಂಧನು- ನ್ಮತ್ತ ಮಾತಂಗವಿರಕ್ತಿವಿಹೀನನ ಎತ್ತಿ ಎನ್ನತ್ತಿತ್ತ ನೋಡದೆ ಮತ್ತೆ ಕಾವ ಸಮರ್ಥರಾರೈ ಸತ್ತ್ವನಿಧಿಸುರಮೊತ್ತ ಪೂಜಿತ ಮೃತ್ಯುಹರ ಶ್ರೀಕೃತ್ತಿವಾಸನೆ 3 ಎಣಿಸಲು ಬೇಡ ಎನ್ನಪರಾಧ ಗಣಿತಕ್ಕೆ ಕೂಡ ಗುಣಗಣನಿಧಿ ಲಕ್ಷ್ಮೀನಾರಾಯಣಸಖ ದಣಿಯಲೊಲ್ಲೆ ದಯಮಾಡೆನಗೀಗಲೆ ಫಣಿಪಕುಂಡಲ ಪಾರ್ವತೀಪತಿ ಪ್ರಣತಜನಮಂದಾರ ನಿರ್ಮಲ ಪ್ರಣವರೂಪನೆ ಮೌಕ್ತಿಕಾಪುರ ಮಣಿಮಹಾಲಿಂಗೇಶ ಬೇಗನೆ 4
--------------
ತುಪಾಕಿ ವೆಂಕಟರಮಣಾಚಾರ್ಯ
(ಯರ್ಡನಾಡ ವಿಷ್ಣುಮೂರ್ತಿ) ಸಾರಥಿ ಪ. ಶಿಷ್ಟರಾಯಸದ ಸಜ್ಜನರ ಮೇಲ್ಕರುಣಾ ದೃಷ್ಟಿಯಿಂದಲಿ ಉಭಯಾರ್ಥದ ಪುರದಿ ಕಷ್ಟಪಾಶವ ಕಡಿದರಿಗಳ ಗೆಲಿಸುತ ಭೀಷ್ಟ ಕೊಡುವ ಸರ್ವೋತ್ಕøಷ್ಟ ಪರೇಶಾ 1 ಕ್ಷೋಣಿಸುತೆಯ ಚೂಡಾಮಣಿಯ ಬೇಗದಿ ತಂದ ಪ್ರಾಣನಾಥನು ಸುಪ್ರವೀಣನೆಂದದಿರು ಕಾಣಿಕೆ ಕಪ್ಪ ಪೂಜೆಗಳ ತನ್ಮತದಿಂದ ಮಾನಿಸಿಕೊಳುತಿಹ ಮನ್ಮಥ ಜನಕ 2 ನಿನ್ನ ಕಟಾಕ್ಷ ಸಂಪೂರ್ಣ ಪೊಂದಿಹರಾ ಹೆಂಣಾ ತಂದಿಹನಾ ಮೇಲಿರಿಸು ಪದ್ಮ ಕರಾ ಪನ್ನಗಚಲವಾಸ ಪವಮಾನವಂದಿತ ನಿನ್ನ ದಾಸರ ದಾಸ್ಯ ದಯಮಾಡು ಸುಪ್ರೀತ 3
--------------
ತುಪಾಕಿ ವೆಂಕಟರಮಣಾಚಾರ್ಯ
(ರುದ್ರದೇವರಿಗೆ ಮೊರೆ) ನೀಗಿದೆನು ಸಂಸಾರ ಧನ್ಯಾಳಾದೆ ಮೂಗಣ್ಣ ತಾನೆ ಎನ್ನ ಕೈಯ ಪಿಡಿದಾ ಪ ರೋಗ ಪರಿದಿತು ಎನಗೆ ಈಗ್ಯಾಕೆ ಔಷಧವು ಜಾಗು ಮಾಡದೆ ಕಾವೋ ದೇವನಿರಲು ಭವ ಸಾಗರವ ದಾಟಿಸಿ ಈಗಲಿಯ ಭೂಮಿಗೆನ್ನಾಮ ಹಮನ [?] ತಪ್ಪಿಸಲಿ 1 ಬಳಲಿದೆನು ಸಂಸಾರದಳವು ಕಾಣದೆ ನಾನು ಭವ ದುಃಖ ಶರಧಿಯೊಳಗೆ ಉಳುಹುವರ ದಾರಿಗಣದೆ ಹರನ ಮೊರೆಯಾಗಲು ನೆಲಸಿದನು ಕರುಣಾಳು ಎನ್ನಯ ಮನದೀ 2 ನೀಲಕಂಠಗೆ ಜಯ ಫಾಲನೇತ್ರನೆ ಜಯ ಮಾಲತೀಧವ ಜಯ ವಂದಿಸುವೆ ಶಿರವಾ ಮೇಲು ನರಸಿಂಹವಿಠಲನಾಣೆ ಬೇಡುವೆ ವ್ಯಾಲ ಭೂಷಣ ಮನ್ಮನಾಲಯದಿ ನಿ ನೆಲಸು 3
--------------
ನರಸಿಂಹವಿಠಲರು
(ಲಾವಣಿ ಧಾಟಿ) ಕರುಣಾಳು ಕರುಣಾಳು ನಾನಿನಗೆ ಶರಣ್ಯನಾಗಿರೆ ದುರಿತದ ಭಯವ್ಯಾಕೆ ಬಲು ಜೋಕೆ ಪ. ಬಲು ಜೋಕೆಯಿಂದ ನೀ ಸ್ವೀಕರಿಸೆನ್ನ ದ- ಯಾಕರ ತ್ವರೆಯಿಂದ ಸುರವಂದ್ಯ 1 ಪಾದ ಮನ್ಮಂದಿರದ ಲಾ- ನಂದ ಬೀಜಬಿತ್ತು ಫಲವಿತ್ತು 2 ಫಲವಿತ್ತು ಸಲಹು ಪುರುಷೋತ್ತಮ ಸುಲಲಿತ ವರ್ತುಳ ಶುಭನಾಭ ಕರಶೋಭ 3 ಚಕ್ರಧರ ವಾರಿತದಾನವ ವೀರ ವಿದ್ಯಾಧೀರ ಜಲಧಾರಾ 4 ಜಲಧಾರಾಕರ ನಿಭ ಭೂರಮೇಶ ದು- ರ್ವಾರ ದುರಿತನಾಶ ಸರ್ಪೇಶ 5 ಸರ್ಪೇಶ ಗಿರೀಂದ್ರ ಸಮರ್ಪಿತ ವಿಗ್ರಹ ನಿತ್ಯದಿ ಕಾಪಾಡೊ ದಯಮಾಡು 6 ದಯಮಾಡು ದುರ್ಮತಿಯ ದೂಡು ಕಟಾಕ್ಷದಿ ನೋಡುತ ನಲಿದಾಡು 7
--------------
ತುಪಾಕಿ ವೆಂಕಟರಮಣಾಚಾರ್ಯ
(ವಿಜಯದಶಮಿ) ಜಯಜಯ ದೇವ ಹರೆ ಜಯಜಯದೇವ ವಿ- ಜಯರಥ ಭೂಷ ಭಯಹರ ಭಕ್ತ ಜನಾಶ್ರಯ ಶ್ರೀಶ ಪ. ಕೀಟಕ ಶಕುನಿಯ ಕೂಟಭಾವನದ ಕಾ- ದಾಟದಿ ಸೋತು ಮಹಾಟವಿಯ ದಾಟಿ ಧರ್ಮಲಿ ವಿರಾಟನಲ್ಲಿ ಸೇರಲು ಕಿ- ರೀಟಿಗೆ ಜಯವಿತ್ತ ಖೇಟಗಮನ ಕೃಷ್ಣ 1 ಸಮಯಬಂಧವ ದಾಟಿ ಶಮಿಯ ಪೂಜಿಸುತ ಸಂ- ಭ್ರಮದೊಳಾಸನವೇರ್ದ ಯಮಸುತನ ನಮಿಸಿದ ನೃಪತಿಯ ಭಯ ಪರಿಹರಿಸಿದ ಸುಮನಸ ಗಣವಂದ್ಯ ಸರ್ವಾಂತರಾತ್ಮಕ 2 ಸಾರಥಿ ತಾನೆಂದು ಸೇರಿ ಪಾಂಡವರಿಗೆ ಕೌರವರನ್ನು ಸಂಹಾರ ಗೈಸಿ ಭಾರತೀಶಗೆ ಭೂಮಿ ಸೇರಿಸಿ ಸಲಹಿದ ವಾರುಧಿಶಯನ ವೆಂಕಟಗಿರಿ ನಾಯಕ 3
--------------
ತುಪಾಕಿ ವೆಂಕಟರಮಣಾಚಾರ್ಯ
(ವಿನಾಯಕ ಚತುರ್ಥಿಯಂದು ಶರ್ವಿನ ಗಣಪತಿಯನ್ನು ನೆನೆದು) ಗಣಪತೀ ಕೊಡು ನಮಗೆ ಶ್ರೀಶನಲಿ ಮತಿ ಪ. ತನು ಮನದಲಿ ಶ್ರೀವಿನಿಯನ ಸ್ಮರಿಸಲು ವುಣಿಸುವ ಸುಖ ಸಂದಣಿಗಣ ನಿರವಧಿ 1 ವಿಘ್ನ ಸಮೂಹವ ವೋಡಿಸಿ ಭವಭಯ ಭಗ್ನಗೈಸಿ ನಿರ್ವಿಘ್ನದಿ ಕರುಣಿಸು 2 ಪರಶು ಪಾಶಾಂಕುಶಧರ ಕರುಣಾಕರ ಸಿರಿವರ ವೆಂಕಟವರ ವಲಿವಂದದಿ 3 ಶ್ರೀಹರಿ ಸಂಕೀರ್ತನ ; ನಾಮ ಮಹಾತ್ಮೆ
--------------
ತುಪಾಕಿ ವೆಂಕಟರಮಣಾಚಾರ್ಯ
(ಶುಕಾಚಾರ್ಯರ ಸ್ತೋತ್ರ) ಆಚಾರ್ಯನ ನೋಡಿ ಸುಮ್ಮನೆ ಪೇಚಾಡಲು ಬ್ಯಾಡಿ ಪಡದ ಮೃಡಾತ್ಮನ ಪಾಡಿ ಪ. ಬಾಲಕರಂತಿರುವ ಧೂಸರ ಧೂಳಿಯ ಧರಿಸಿರುವಾ ಕೇಳಿದವರಿಗೊರೆವಾ ಭಗವನ್ಮೂಲ ತತ್ವದಿರವಾ ಪರೀಕ್ಷಿತ ಲಾಲಿಸುವಂತೆರ- ಮಾಲಯ ಗುಣವರುಣಾಲಯ ತಿಳಿಸಿದ 1 ವ್ಯಾಪಿಸಿ ಕೊಂಡಿರುವಾ ಸಂಸೃತಿ ತಾಪತ್ರಯ ಭರವಾ ತಾಪಕ ಮತ್ಸರವಾ ಮೋಹ ಮಹಾಪರಾಧದಿರವಾ ದೀಪವು ತಿಮಿರವ ಕಳವಂದದಿ ನಿ- ಲೋಪಗೊಳಿಸುವ ಪರೋಪಕಾರಿಯನು 2 ಭಾಗವತಾಮೃತವಾ ಮುಖದಿ ಸರಾಗದಿ ಧರಿಸಿದನಾ ವಾಗೀಶಾಂಶಕನಾ ಹೊಂದಿರೊ ಗುರುಮುನಿ ಶುಕನಾ ತಾಗುಬಾಗುವೊಳಗಾಗದ ತೆರದಲಿ ನಾಗ ಗಿರೀಂದ್ರನು ನಲಿವನು ಮನದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶೇಣಿಯ ಗೋಪಾಲಕೃಷ್ಣನನ್ನು ನೆನೆದು) ತಾಪವ ಬಿಡಿಸು ದಯಾಪರ ಶ್ರೀ ಗೋಪಾಲ ಕೃಷ್ಣ ನೀ ಕಾಪಾಡು ಸಂಸಾರ ಪ. ಲೋಕನಾಯಕ ನಿನ್ನ ಕರುಣವಂದಿದ್ದರೆ ಸಾಕೆಂಬೆ ಜ್ಞಾನಾನಂದಕರ ಪಾಕಶಾಸನ ಸುತಗೊಲಿದಾತನ ಭಂಡಿ ನೂಕಿ ನಡೆಸಿದ ಕೃಪಾಕರ ಮೂರುತಿ 1 ನಡೆವುದು ನುಡಿವುದು ಕೊಡುವುದು ಕೊಂಬುದು ಮಡದಿ ಮಂದಿರ ಮಮತಾಸ್ಪದದ ಒಡವೆ ವಸ್ತುವು ಮೊದಲಾದುದೆಲ್ಲವನು ಶ್ರೀ- ಮುಡಿಯ ಸಂವರಿಸುವ ಕರದಿ ಸಂಗ್ರಹಿಸುತ2 ನಿನ್ನಡಿಗಳ ನಂಬಿ ನಿಂದಿಹೆನಿಲ್ಲಿ ಪ್ರ- ಸನ್ನ ಮುಖಾಂಬುಜ ಪಾಲಿಸೆಂದು ಅನ್ಯರಿಗೆಂದೆಂದು ದೈನ್ಯ ತೋರಿಸಲಾರೆ ಪನ್ನಗಾಚಲವಾಸ ಪರಮ ದಯಾಳೊ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶೇಷದೇವರ ಪ್ರಾರ್ಥನೆ) ಸುಕೃತ ಭಾಗ್ಯವಂತನೋ ಗುರುಶೇಷ ಯಂತು ಬಣ್ಣಿಸುವುದಿನ್ನು ಮಾಂತರಂಗದಿ ಪ್ರೇಮ ಪಾತ್ರನಾಗಿರುವದೀ ಪ. ಶ್ರೀನಿವಾಸಗೆ ಮೂರು ಸ್ಥಾನದಿ ಸರಿಯಾಗಿ ತಾನೆ ಶಯನ ಪೀಠ ಛತ್ರನಾಗಿ ಜ್ಞಾನಾನಂದನ ಪರಮಾನುರಾಗದಿ ನೋಡಿ ಮಾನವ ಪಡೆದು 1 ರಾಮರೂಪದಿ ನಿಂದ ಸ್ವಾಮಿಗೆ ನಿರವಧಿ ಪ್ರೇಮದನುಜನಾಗಿ ಪರಿಚಿರಿಸಿ ಸೋಮವಂಶದಿ ಬಲರಾಮನೆನಿಸಿ ಸತ್ಯ- ಭಾಮಾವರನ ಜೇಷ್ಠ ನಾಮವ ಪಡೆದು 2 ಹಲವು ವಿಧದ ಪುಣ್ಯ ಫಲವ ನೀಡಲು ಲಕ್ಷ್ಮಿ ಲಲನೆ ಪದ್ಮಜೆಯರ ಬಲಗೊಳ್ಳುತಾ ಕಲಿಯುಗದಲಿ ಬಂದು ನೆಲೆಯಗೊಳ್ಳಲು ಶೇಷಾ- ಚಲನೆಂದು ಹರಿಗೆ ನಿಶ್ಚಲವಾದ ನಿಲಯಾಗಿ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ರಮಣನೆಲ್ಲಿಹ ಕರೆತಾರೆ ಸಖಿಯಳೆ ) * ಪ ಮನು ಕಮಂಡಲ ಕೂಪದಲ್ಲಿ ಹಿಡಿಯದಂತೆ ಬೆಳೆದು ಅವರ ಶರಧಿ ಒಳಗೆ ಹರಿದಾಡುತಿರುವ ಕೇಳ್ ಸಖಿಯಳೆ ಶರಧಿ ಒಳಗೆ ಹರಿದಾಡುತಲೆ ವೇದತಂದು ತೋರಿದ್ಹೊಳೆವ ಮಚ್ಛನ್ನ ಬಲಗೊಂಬೆ ಕೇಳ್ ಸತಿಯಳೆ 1 ಸೃಷ್ಟಿಗೆ ಅಧಿಕ ಸ್ತ್ರೀಯಳ ದೈತ್ಯರು ಮೋಹಿಸಲು ಕಂಡು ಹುಟ್ಟಿಸಿದ ಸುಧೆಯ ಸುರರಿಗೆರೆದ ಕೇಳ್ ಸಖಿಯಳೆ ಹುಟ್ಟಿಸಿದ ಸುಧೆಯ ಸುರರಿಗೆರೆದು ಬೆಟ್ಟವನು ಬೆನ್ನ- ಲಿಟ್ಟ ಕೂರ್ಮನ ಬಲಗೊಂಬೆ ಕೇಳ್ ಸತಿಯಳೆ 2 ವಾಸುದೇವ ಕ್ರೋಡರೂಪಿಲಿಂದ ಹಿರಣ್ಯಾಕ್ಷನ ನಾಶವ ಮಾಡಿ ಕೋರೆಯಿಂದ ಕೇಳ್ ಸಖಿಯಳೆ ನಾಶವ ಮಾಡಿ ಕೋರೆಯಿಂದ ಧರಣಿ ತಂದು ಹರ್ವಿ (ರವಿ?)ದ ಭೂಪತಿವರ್ಹ(ರಾಹ?)ನ್ನ ಬಲಗೊಂಬೆ ಕೇಳ್ ಸತಿಯಳೆ 3 ಒಡೆದು ಕಂಬ ಕಡೆಗೆ ಕಿತ್ತು ಬಿಡದೆ ಅರಿಯ ತೊಡೆಯಲಿಟ್ಟು ಒಡಲ ತಾ ಬಗೆದ ಭಕ್ತರೊಡೆಯ ಕೇಳ್ ಸಖಿಯಳೆ ಒಡಲ ತಾ ಬಗೆದ ಭಕ್ತರೊಡೆಯನಾಗಿದ್ದ ಲಕ್ಷ್ಮೀ- ನಾರಸಿಂಹನ್ನ ಬಲಗೊಂಬೆ ಕೇಳ್ ಸತಿಯಳೆ 4 ಪಾದ ದಾನ ಬೇಡಿ ಪೃಥ್ವಿ ಆಕ್ರಮಿಸಿದ ಪರಮಾತ್ಮ ಕೇಳ್ ಸಖಿಯಳೆ ಪೃಥ್ವಿ ಆಕ್ರಮಿಸಿದ ಪರಮಾತ್ಮನಾದ ನಮ್ಮ ಕಶ್ಯಪರ ಸುತ ವಾಮನನ ಬಲಗೊಂಬೆ ಕೇಳ್ ಸಖಿಯಳೆ 5 ಋಷಿಗಳಲ್ಲಿ ಜನಿಸಿ ಕರದಿ ಧರಿಸಿ ಕುಠಾರವನ್ನು ಅರಸು ಕ್ಷತ್ರಿಯರಿಗಂತಕನ ಕೇಳ್ ಸಖಿಯಳೆ ಅರಸು ಕ್ಷತ್ರಿಯರ ಕುಲಕೆ ಅಂತಕನಾಗಿದ್ದ ನಮ್ಮ ಪರÀಶುರಾಮನ್ನ ಬಲಗೊಂಬೆ ಕೇಳ್ ಸಖಿಯಳೆ 6 ಮುದ್ರೆ ಕಳುವಿ(ಹಿ?) ಲಂಕಾಪುರದಲ್ಲಿದ್ದ ವಾರ್ತೆ ಕೇಳಿ ಸ- ಮುದ್ರ ಸೇತುಗಟ್ಟಿ ಜಾನಕಿಯ ಕೇಳ್ ಸಖಿಯಳೆ ಸ- ಮುದ್ರ ಸೇತುಗಟ್ಟಿ ಜಾನಕಿಯ ಕೂಡಿ ಬಂದ ಅ- ಯೋಧ್ಯಾರಾಮನ್ನ ಬಲಗೊಂಬೆ ಕೇಳ್ ಸಖಿಯಳೆ7 ಎಲ್ಲ ಜಗವ ತನ್ನ ಉದರದಲ್ಲೇ ಇಟ್ಟು ಗೋಕುಲದ ಗೊಲ್ಲತಿಯರ ಮನೆಯ ಪಾಲ್ಬೆಣ್ಣೆ ಕೇಳ್ ಸಖಿಯಳೆ ಗೊಲ್ಲತಿಯರ ಮನೆಯ ಪಾಲ್ಬೆಣ್ಣೆ ಕದ್ದು ಮೆಲ್ಲುವಂಥ ಚೆಲ್ವ ಕೃಷ್ಣನ್ನ ಬಲಗೊಂಬೆ ಕೇಳ್ ಸುಖಿಯಳೆ 8 ಮಾಯಾಶಿಶುರೂಪ ತಾನಾಗಿ ವೇದನಿಂದ್ಯವನ್ನು ಮಾಡಿ ಬೋಧಿಸಿದ ದುರ್ಮತವ ಕೇಳ್ ಸಖಿಯಳೆ ಮಾಡಿ ಬೋಧಿಸಿದ ದುರ್ಮತವ ತ್ರಿಪುರಜನರಿಗೆಲ್ಲ ಬೋಧಿಸಿದ ಬೌದ್ಧನ್ನ ಬಲಗೊಂಬೆ ಕೇಳ್ ಸಖಿಯಳೆ 9 ಕಲಿಸಮಾಪ್ತಿ ಕಾಲದಲ್ಲಿ ಚೆಲುವ ಅಶ್ವಾರೂಢನಾಗಿ ಬಿಡದೆ ಪಾಲಿಸಿದ ಶರಣಜನರ ಕೇಳ್ ಸಖಿಯಳೆ ಬಿಡದೆ ಪಾಲಿಸಿದ ಶರಣಜನರನು ಭೀಮೇಶಕೃಷ್ಣನ ಚರಣಕಮಲಕೆರಗಿ ಬಲಗೊಂಬೆ ಕೇಳ್ ಸಖಿಯಳೆ 10
--------------
ಹರಪನಹಳ್ಳಿಭೀಮವ್ವ
(ಶ್ರೀ ವಾದಿರಾಜರು) ದಿಟ್ಟದಿ ನಿನ್ನಯ ಪದಪದ್ಮವನ್ನು ಮನಮುಟ್ಟಿ ಭಜಿಸುವೆ ಕೃಷ್ಣರಾಯ ಪ ಸೃಷ್ಟಿ ನಿನ್ನಂಥ ಇಷ್ಟ ಪುಷ್ಟನ ಕಾಣೆ ಶ್ರೀ ಕೃಷ್ಣರಾಯ ಅ.ಪ ಇಷ್ಟನು ದುಷ್ಟ ಪಾಪಿಷ್ಠನಾಗುವುದುಚಿತವೇ ಕೃಷ್ಣರಾಯಾ ನಿನ್ನ ದೃಷ್ಟೀಲಿ ನೋಡೆನ್ನ ಶ್ರೇಷ್ಠ ಶ್ರೀಷ್ಮಿಪನಿಷ್ಟ ಕೃಷ್ಣರಾಯಾ 1 ಪಾಲನ ಪಾಲಿಪನನಿಲ್ಲಿಸಿದೇ ಕೃಷ್ಣರಾಯಾ 2 ಗರಳ ಸೇವಿಸಲು ಕಂಡುತ್ಯಜಿಸಿದೆ ಕೃಷ್ಣರಾಯಾತರಳೆಗೆ ನೀ ನಿನ್ನ ಸುಧಿಮಳೆಗರೆಯುತ ಅರಳಿಸೊ ಕೃಷ್ಣರಾಯಾ3 ವಡವುಟ್ಟಿದವರಂತೆ ದುಷ್ಟ ಪಾಪಿಷ್ಟ ಬೆನ್ನಟ್ಟುವನೋ ಕೃಷ್ಣರಾಯಾಗುಟ್ಟದಿ ನಿನ್ನಯ ದೃಷ್ಟಿಲಿ ನೋಡಿ ಆ ದುಷ್ಟನ ಸುಟ್ಟು ಹಾಕೊ ಕೃಷ್ಣರಾಯಾ4 ಮಧ್ಯಾನ್ಹ ಸಮಯದಿ ಮಧ್ವದಾಸನ ಭೂಷಿಪ ಶೇಷನ ವೈರಿಯ ಕೃಷ್ಣರಾಯಾದಾನವ ಗೈದು ದೂತಿಯ ಕರದಿಂದ ದೋಷಿಯೆಂದೆನಿಸಾದೆಸಲಹಿದೊ ಕೃಷ್ಣರಾಯಾ 5 ಅರಿಯದೆ ಪೋಗಿ ನಾಥಾ ತ್ರಿನಾಮನ ಕೂಡ ಭುಂಜಿಸಿದೆ ಕೃಷ್ಣರಾಯಾಅರಿಯು ನೀನಲ್ಲದೆ ಅನ್ಯರ ನಾಕಾಣೆ ಮೈಗಣ್ಣ ಕೃಷ್ಣರಾಯಾ 6 ಎನ್ನ ತನುಮನ ಧನಧಾನ್ಯ ಮನೆಯ ಮಕ್ಕಳೆಲ್ಲಾ ನಿನ್ನ ಚರಣಾಲಯವೋ ಕೃಷ್ಣರಾಯಾನಿನ್ನ ಗುಣಗಣಗಳೆಲ್ಲಾ ಅಗಣಿತವೋ ಅನ್ನಪೂರ್ಣೆಗೆಕೃಷ್ಣರಾಯಾ7 ಆದಿ ಅನಾದಿ ಅನೇಕನಾದಿ ಜನುಮದಿ ಎನ್ನಲ್ಲಿದ್ಯೋ ಕೃಷ್ಣರಾಯಾ ದೇವ ದೇವೇಶ ನೀನೆಂದು ದಯದಿಂದ ತೋರೋಕೃಷ್ಣರಾಯಾ 8 ಚರಣದ ಚರ್ಮಲ ಚಂದಸುವಸನ ತೋದ್ರ್ಯೋ ಕೃಷ್ಣರಾಯಾ ಆಲಸ್ಯ ಮಾಡುತ ತಾಳದೆ ನಿನ್ನ ಬಲಿನ ತೋದ್ರ್ಯೋಕೃಷ್ಣರಾಯಾ 9 ನಾರಂಗಿ ಫಲವನ್ನು ತಿಂದು ನೀ ನವರಸ ಭರಿತದಿ ನಿಂತ್ಯೋ ಕೃಷ್ಣರಾಯಾ ನಾರಿಯ ಮನವ ನೀನರಿತು ನಿನ್ನ ಮನವನಿತ್ತೆ ಕೃಷ್ಣರಾಯಾ 10 ಮೂರಾರು ಎರಡೊಂದು ನಿಂದಿಪ ಮತವನ್ನು ಛಂದದಿಖಂಡಿಸಿದೊ ಕೃಷ್ಣರಾಯಾಗಂಗಾದಿ ಕ್ಷೇತ್ರವು ಹಾಗದೇ ಚರಿಸಿ ತುಂಗದಿ ಬಂದು ಮೈಗಂಧ ತೋದ್ರ್ಯೋ ಕೃಷ್ಣರಾಯಾ 11 ಅಂಗದಿದ್ದುಕೊಂಡು ಪಂಚಭೇದವ ನರುಹಿದೆ ಕೃಷ್ಣರಾಯಾ ತಾರತಮ್ಯವನಿತ್ತು ನಿರುತದಿ ಸ್ಮರಿಸೆಂದು ತರುಳರಿಗುಪದೇಶಿಸಿದೆ ಕೃಷ್ಣರಾಯಾ 12 ಅರ್ಥಿಯಿಂದಲಿ ವೇದ ವೇದ್ಯತೀರ್ಥರ ಪ್ರಬಂಧ ತೀರ್ಥವ ತೋರಿ ನೀ ಕೃತಾರ್ಥನ ಮಾಡಿದೋ ಕೃಷ್ಣರಾಯಾಸತಿಸುತ ಜನನಿ ವಡಗೂಡಿ ವಿರೋಧಿಸೆ ಶಾಪವನಿತ್ತೆಕೃಷ್ಣರಾಯಾ 13 ಸತಿಜಾರನರಿತು ಮನದಲ್ಲಿ ಯೋಚಿಸಿ ಚೋರನಂದದಿ ಜರಿದು ಚರಿಸಿದಿ ಕೃಷ್ಣರಾಯಾಚರಿಸುತ ಧರೆಯೊಳು ಚೋರ ಜಾರನ ಪೊರೆದೆ ಕೃಷ್ಣರಾಯಾ14 ಅಂಗದಿ ಅಂಗಿತೊಟ್ಟು ಭಂಗವಿಲ್ಲದೆ ಕೂಡಲಗಿರಿಯಲಿ ಭುಂಜಿಸಿದೆ ಕೃಷ್ಣರಾಯಾತೀರ್ಥಗಿಂಡಿಯ ಮುಟ್ಟೆಂದು ಅಂಧಕರಾಯನು ಪೇಳಲು ಮುಟ್ಟಲಂಜದೆ ಗಾಡಿ ಧರಿಸಿದೆ ಕೃಷ್ಣರಾಯಾ 15 ತಂಡುಲವಿಲ್ಲದೆ ಪವಾಡತನದಿ ಕೂತುದ್ದಂಡ ಭೀಮನ ಸ್ಮರಿಸಿದೊ ಕೃಷ್ಣರಾಯಾ ತೊಂಡನ ಸತಿಯ ಕೈಗೊಂಡು ಪುಂಡ ಕಂಸಾರಿಯ ಸ್ಮರಿಸಿದೊ ಕೃಷ್ಣರಾಯಾ16 ಸ್ವಾದಿ ಕ್ಷೇತ್ರದಿ ಪೋಗಿ ಛತ್ರದಿ ಅರ್ಚಿಸಿಕೊಂಡ್ಯೋ ಕೃಷ್ಣರಾಯಾ ಮನವನ ಚರಿಸುತ ತಪವನೆಗೈಯುತ ಕಪಿಯನ್ನೇ ಪುಡುಕಿದ್ಯೊ ಕೃಷ್ಣರಾಯಾ 17 ಚಿಕ್ಕ ಬದಿರಲಿ ಪೋಗಿ ಬಲು ಅಕ್ಕರದಿ ನಿನ್ನ ಪಡೆದನ ಕಪ್ಪುಗೊರಳನ ರೂಪದಿ ಕಂಡ್ಯೋ ಕೃಷ್ಣರಾಯಾ ಸ್ವಪ್ನದಿ ಸರ್ವರ ಕಾಣುತ ಸ್ವಪದವಿಯನೇರಿದ್ಯೋಕೃಷ್ಣರಾಯಾ 18 ತಾಮಸ ಜೀವನು ಜವನಂತೆ ಜೂಜಿಸೆ ಜೀವನವರಿಸಿದ್ಯೋ ಕೃಷ್ಣರಾಯಾಲೇಖವು ಬರೆಯಲು ಲೋಕಾವಧರಿಸಿದ ವಾರುಣೀಶನಂತೆ ಪೌರುಷ ತೋರಿ ಫಣಿರೋಗ ನಿತ್ಯೋ ಕೃಷ್ಣರಾಯಾ 19 ಎನ್ನ ಜನ್ಮವಾದ ದಿನದಲ್ಲಿ ಜೀವೇಶರಾಯನ ಪೂಜಿಸಿದ್ಯೋ ಕೃಷ್ಣರಾಯಾಪೂಜಾದಿ ಪೂಜಿಸಿ ಪೂರ್ಣ ಆಯುವಿತ್ತು ಜೀವನುದ್ಧರಿಸಿ ಜೋಕೆಯೋ ಕೃಷ್ಣರಾಯಾ 20 ಅಕ್ಕನ ಕೈಯಲ್ಲಿ ದಿಕ್ಕಿಲ್ಲದವರಂತೆ ಸಿಕ್ಕು ಸುಖಬಟ್ಯೋ ಕೃಷ್ಣರಾಯಾ ದಿಟ್ಟದಿ ನಿನ್ನಯ ಗುಟ್ಟು ತಿಳಿಸಿ ಬೆಟ್ಟದೊಡೆಯ ತಂದೆವರದಗೋಪಾಲವಿಠಲನಪದಪದ್ಮಗಳನ್ನೆ ಮುಟ್ಟಿ ಭಜಿಸುವಂತೆ ದಿಟ್ಟನ ಮಾಡುಶ್ರೀ ಗುರು ಕೃಷ್ಣರಾಯಾ 21
--------------
ತಂದೆವರದಗೋಪಾಲವಿಠಲರು