ಪೊರೆಯೊ ಶ್ರೀಶನೆ ಸರುವ ಲೋಕ ಪೊರೆವನೆ ಪ
ಅರಿತು ಅರಿಯದಂತೆ ನಾನು ಗರುವದಿಂದ ಮೆರೆದನಯ್ಯ ಅ.ಪ
ಅರುಣ ಉದಯದಲ್ಲಿ ಎದ್ದು
ಹರಿಯೆ ನಿನ್ನ ಸ್ಮರಣೆ ಬಿಟ್ಟು
ಗೊರಿಕೆ ಹೊಡಿದು ನಿದೆÀ್ರಮಾಡಿ
ದುರಿತದಲ್ಲಿ ಪೊರಳುವವನ 1
ಕುತುಬ ಕಾಲದಲ್ಲಿ ಬಂದ
ಅತಿಥಿಗಳನು ಜರೆದು ನೂಕಿ
ಮಿತಿಯ ಮೀರಿ ಸವಿಯುತ ಪರ-
ಗತಿಯ ದಾರಿ ಕಾಣದವನ 2
ದಾನಧರ್ಮ ಕೇಳಬಂದ
ಮಾನವಂತ ಜನರ ಬಹಳ
ಹೀನ ಮಾತಿನಿಂದ ಬೈದ
ಜ್ಞಾನರಹಿತನಾದ ನರನ 3
ರೊಕ್ಕವಿರುವದೆಂದು ಬಹಳ
ಸೊಕ್ಕಿನಿಂದ ಬಡವರನ್ನು
ಲೆಕ್ಕಿಸದೆ ಮಾತನಾಡಿ
ಧಿಕ್ಕರಿಸಿದ ಅಧಮ ನರನ 4
ಪಟ್ಟದರಸಿಯಿರಲು ಅವಳ
ಬಿಟ್ಟು ಪರರ ಸತಿಯ ಬಯಸಿ
ಅಟ್ಟಹಾಸದಿಂದ ನಗುತ
ಕೆಟ್ಟು ಹೋದ ಭ್ರಷ್ಟ ನರನ 5
ಎಷ್ಟು ಮಾಡಲೇನು ಎಳ್ಳಿ
ನಷ್ಟು ಸುಖವ ಕಾಣಲಿಲ್ಲ
ಇಷ್ಟ ಮಿತ್ರ ನೀನೆಯೆಂದು
ಗಟ್ಟಿಯಾಗಿ ತಿಳಿದುಕೊಂಡೆ 6
ಶ್ರಿಷ್ಟಿಗೊಡೆಯನು ರಂಗೇಶ-
ವಿಠಲನೆಂಬ ಮತಿಯ ಎನಗೆ
ಎಷ್ಟು ಮಾತ್ರ ಕೊಟ್ಟು ಸಲಹೊ
ಕೆಟ್ಟ ಮೇಲೆ ಬುದ್ಧಿ ಬಂತು 7