ಒಟ್ಟು 2665 ಕಡೆಗಳಲ್ಲಿ , 124 ದಾಸರು , 1916 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದವಾಹನ ವಿಠಲ ನೀನಿವಳ ಕಾಯಬೇಕೋ |ಜ್ಞಾನಪೂರ್ಣನೆ ನಿನ್ನ ಸುಜ್ಞಾನ ಪಾಲಿಸುತ ಹರಿಯೆ ಪ ನಿಗಮವೇದ್ಯನೆ ದೇವ ಜಗದಂತರಾತ್ಮನೆಬಗೆಬಗೆಯ ಲೀಲೆಗಳ ನಗುನಗುತ ತೋರೀ ಬಗೆಹರಿಸು ಭವರೊಗ ಭಿನ್ನೈಪೆ ನಾನಿದನನಗಚಾಪ ಪರಿಪಾಲ ಖಗವಹನೆ ದೇವಾ1 ಪಂಚರೂಪಾತ್ಮಕನೆ ಪಂಚ ಬಾಣನ ಪಿತನೆಪಂಚ ಭೇದ ಜ್ಞಾನ ಸಂಚಿಂತನೆಯನಿತ್ತು |ವಾಂಚಿತಾರ್ಥದ ಹರಿಯೆ ವೈರಾಗ್ಯ ಸದ್ಭಕುತಿವಾಂಚಿಪಳಿಗೀಯೊ | ನಿಷ್ಕಿಂಚನರ ಪ್ರೀಯಾ 2 ಪತಿಸುತರು ಹಿತದಲ್ಲಿ ಮತಿ ಮತಾಂವರರಲ್ಲಿಕೃತಿಪತಿಯೆ ನಿನವ್ಯಾಪ್ತಿ ಅತಿಶಯದಿ ತೋರುತಲಿಹಿತದಿಂದ ಸೇವಿಸುವ ಮತಿಯಿತ್ತು ನೀನಿವಳ ಗತಿಗೆ ಸಾಧನನೆನಿಸು ಪ್ರತಿರಹಿತ ದೇವಾ 3 ನಾಮ ಮಹಿಮೆಯ ತಿಳಿಸಿ ಪ್ರೇಮದಿಂದಲಿ ನಿನ್ನನಾಮದುಚ್ಛಾರಣೆಯ ನೇಮವನೆ ಪಾಲಿಸುತ |ಕಾಮಿತವ ಸಲಿಸುವುದು ಭೂಮ ಗುಣ ನಿಸ್ಸೀಮರಾಮಚಂದ್ರನೆ ಸರ್ವ ಸ್ವಾಮಿ ಎನಿಸುವನೇ 4 ಶ್ರೀವರನೆ ಭವವನಧಿ ನಾವೆ ಎಂದೆನಿಸಿಹನೆಕಾವುದಿವಳನು ಸತತ ಸರ್ವಾಂತರಾತ್ಮ |ನೀವೊಲಿಯದಿನ್ನಾರು ಕಾವವರ ನಾಕಾಣೆದೇವವರ ವಂದ್ಯ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ ಪ ಸ್ಮರಿಸಿರಿ ಸ್ಮರಿಸಿರಿ ಸರ್ವರ ರಕ್ಷಿಸುವ ಮುಖ್ಯ ಪ್ರಾಣನೆಂಬಾನೆಅ.ಪ ವಾಯು ಸುಪುತ್ರ ನೆಂದೆನಿಸ್ಯಾನೇ ವಾರಿಧಿಯನ್ನೇದಾಟ್ಯಾನೇ ಶಶಿಮುಖಿ ಸೀತೆಯ ಕಂಡಾನೇ ದಶಕಂಠನಗರ್ವ ಮುರಿದಾನೆ 1 ಪಂಚಪಾಂಡವರ ಮಧ್ಯಾನೆ ಪ್ರಚಂಡ ಪರಾಕ್ರಮಿ ಎನಿಸ್ಯಾನೇ ವಂಚಿಸಿ ಕೀಚಕನ ಕೊಂದಾನೆ ಪಾಂಚಾಲಿಗೆ ಪ್ರಿಯನಾದನೆ 2 ಮಧ್ವಮತವ ಉದ್ಧರಿಸ್ಯಾನೇ ವೆಂಕಟ ವಿಠಲನೆಂಬಾನೆ 3
--------------
ರಾಧಾಬಾಯಿ
ಆರತಿ ಗುರುರಾಯಾ :ಸ್ವಾನಂದ ಚಂದ್ರೋದಯಾ ದೋರಲು ಭವತಾಪಾ :ಹೋಯಿತು ನಿಶ್ಚಯಾ ಪ ಚಿತ್ತಚಕೋರಕಿಂದು :ಬೋಧಾಮೃತವನುಣಿಸೀ ಮತ್ತಹೃದಯನೈದಿಲಿಗೆ :ಸುಖವಿತ್ತೆ ಕರುಣಿಸಿ 1 ಜ್ಞಾನಚಂದ್ರ ಕಾಂತಿಯಲ್ಲಿ :ರಾಮರಸವಿಸೀ ತಾನೇಪದ ರೂಪದಿಂದಾ :ನೆಲಿಸಿತು ಧನ್ಯಗೈಸಿ 2 ಶರಧಿ :ಹೊರಚೆಲ್ಲಿ ತೈಯಿಂದು ತಂದೆ ಮಹಿಪತಿ ಸ್ವಾಮಿ :ಕಂದನುದ್ಧರಿಸೆಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿ ಬೆಳಗಿರೆ ಶಾರದೆಗೆ | ಗುಣ ವಾರಿಧಿ ಕರುಣಾ ನೀರಧಿಗೆ ಪ ನತ ಗೀ- ಜಾಣೆಗೆ ತ್ರಿಭುವನ ತ್ರಾಣೆಗೆ ಜಪಸರ ಧಾ- ಶುಭ ರೂಪಿಣಿಗೆ 1 ಶಾರದ ಚಂದ್ರನ ಕಿರಣನ ಪೋಲುವ ಚಾರು ಶುಕ್ಲಾಂಬರದಿಂದಲಿ ಪೊಳೆವ ಹಾರ ಮಕುಟ ಪದ ನೂಪುರ ಕಂಕಣ ಅಘ ಹಾರಿಣಿಗೆ 2 ಸಕಲಾಗಮಗಳನಾಂತಿಹ ಗಣಿಗೆ ನಿಖಿಲ ಕಲೆಗಳನು ಕಾದಿಹ ಫಣಿಗೆ ಭಕುತರ ಪಾಲಿನ ಚಿಂತಾಮಣಿಗೆ ಶ್ರೀಕಾಂತನಾತ್ಮಜನರಗಿಣಿಗೆ 3
--------------
ಲಕ್ಷ್ಮೀನಾರಯಣರಾಯರು
ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ ಪಾರ್ವತಿದೇವಿಯರಿಗೆ ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ ಆರತಿಯ ಬೆಳಗಬನ್ನಿರೆ ಪ ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ 1 ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ 2 ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ 3 ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ 4 ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ5
--------------
ಹರಪನಹಳ್ಳಿಭೀಮವ್ವ
ಆರಿಲ್ಲಿಲ್ಲೋ ಮನುಜಾ | ಅರಿಲ್ಲಿಲ್ಲೋ | ಹರಿಭಕ್ತರಿಗೆ ಸರಿ ಉಂಟೇನಣ್ಣಾ | ಆರಿಲ್ಲಿಲ್ಲೋ ತಮ್ಮಾ | ಬಿರದಿನ ಘಲಗಳ ನಡೆಸುವರಯ್ಯಾ ಪ ಕಂಭದೊಳಗ ಹರಿ ಬಿಂಬವ ತೋರಿಸಿ | ಹಿರಣ್ಯ ಕನಾ | ವೆಂಬ ಶಾರ್ದೂಲ ಕರಳವ ಹಾರಿಸಿದ | ನಂಬಿದ ಪ್ರಲ್ಹಾದ ಮಾಸಾಳ ನಮಾ 1 ಕಂಡು ಸೀತಾಪತಿ ನೊಯ್ದು ರಾವಣ ನೆಂಬಾ | ಖಂಡಿಸಿ ಮದ ಸೊಕ್ಕಿದಾನಿಯನು | ತುಂಡ ಮುಂಡ ಮಾಡಿ ಪದವಿಯ ಪಡದಾ | ಚಂಡ ವಿಭೀಷಣ ಮಾಸಾಳ ನಮಾ 2 ಖಂಡ ದಾಸನಬೇಡಿ ಹೊಂದಿದ್ದ ಕಾಯನ | ಸಂದ ಬಿಡಿಸಿ ಮಲ್ಲಯುದ್ಧದಲಿ | ಮಂದರ ಧರನತಿ ಮೆಚ್ಚಿಸಿ ಮೆರೆದಾ | ನಂದ ಭೀಮಶೇನ ಮಾ-ಸಾಳ ನಮಾ 3 ಬೊಮ್ಮ ಸಾರಥಿ | ಉರಗಸ ಹದಿ ಮೇರು ಗಿರಿ ಪಾಪವು | ಹರಿಶರದಿಂದಲಿ ತ್ರಿಪುರವ ಕೆಡಹಿದ | ಸುರ ರಕ್ಷ ಮಹೇಶ ಮಾಸಾಳನಮಾ 4 ಹಿಂದಿನ ಮಾತಿಂದು ಇಂದಿಲ್ಲ ವೆನಬ್ಯಾಡಿ | ಎಂದೆಂದು ಸ್ವರ್ಗದ ಸುಖಗಳಿಗೆ | ಕುಂದವ ನಿಡುವರು ಮಹಿಪತಿ ಸುತ ಪ್ರಭು | ಹೊಂದಿದ್ದ ದಾಸರು ಮಾಸಾಳರೈಯ್ಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರುತೀಯ ತಾರೆ ಶ್ರೀಹರಿಗೆ ಸುರಸಾರ್ವಭೌಮಗೆ ಪ ಬೇಗನೆ ಸಾರಸಾಂಬಕಿಅ.ಪ ಮಾರಜನಕಗೆ ವಾರಿಜಭವ ಕು- ಮಾರ ಜನಕ ಮುಖಾಮರೇಡ್ಯಗೆ ಚಾಪ ಮುರಿದ ಸುಕು- ಮಾರ ಶರೀರ ಸೀತಾರಾಮ ಚಂದ್ರಗೆ 1 ಇಂದಿರವರಗೆ ಮಂದರಧರ ಪು- ರಂದರಾನುಜ ಸಿಂಧುಶಯನಗೆ ಮಂದಯಾನೆ ಛಂದದಿಂದ ಬಂದೀಗ ವಂದೀಶ್ಯಾನಂದಾದಿ ಬೆಳಗಲು 2 ವಾರಣಭಯ ನಿವಾರಣ ಜಗ- ತ್ಕಾರಣಗೆ ಸುಖಪೂರ್ಣದೇಹಗೆ ಸೇರಿ ತನ್ನ ಸೇವಿಪರಘ ದೂರ ಕೊಪ್ಪರ ಶ್ರೀ ನಾರಸಿಂಹನಿಗೆ 3
--------------
ಕಾರ್ಪರ ನರಹರಿದಾಸರು
ಆರೋಗÀಣೆಯ ನೀ ಮಾಡಯ್ಯಾ ಯದುಕುಲ ವಾರಿಧಿ ಚಂದ್ರಮನೆ ಪ ಸಾರಸನಯನ ಅಪಾರಮಹಿಮ ಕರು ಣಾರಸ ಪರಿಪೂರ್ಣಸಾರ ಭೋಕ್ತನೆ ಸ್ವಾಮಿ ಅ.ಪ. ಬಡವನು ನಾ ನಿನಗೆ ಕೊಡಲರಿಯೆನೊ ಸ್ವಾಮಿ ಪೊಡವಿಗೊಡೆಯ ನಿನ್ನ ಅಡಿಭಕ್ತ ನಾನಯ್ಯ ಕಡಲಶಯನ ಒಂದು ಕುಡಿತೆ ಪಾಲನು ನಿನಗೆ ಕೊಡುವೆನು ನಿತ್ಯತೃಪ್ತ ಒಡನೆ ಸ್ವೀಕರಿಸಯ್ಯಾ ಮೃಡವಂದಿತ ಪದಜಡಜಯುಗಳದಲಿ ದೃಢಭಕ್ತಿಯ ನೀ ಕೊಡು ಕೈ ಬಿಡದಲೆ ನುಡಿಗೆ ನುಡಿಗೆ ನಿನ್ನ ನಾಮವ ನುಡಿಸಯ್ಯ ಬಡವರ ಬಂಧುವೆ ಕರಿಗಿರೀಶನೆ 1
--------------
ವರಾವಾಣಿರಾಮರಾಯದಾಸರು
ಆರೋಗಣೆಯ ಮಾಡು ಸಾರಸುಖದೊಡೆಯ ಪ. ಸತ್ಯವಾದ ಜಗಕೆ ಕರ್ತುಕಾರಣ ನೀನೆ ಮುಕ್ತಿದಾಯಕ ನಿತ್ಯತೃಪ್ತನಹುದೈ ಸತ್ಯವಾದವತಾರ ಸಕಲಗುಣ ಪರಿಪೂರ್ಣ ಸಿರಿ ಪರಮ ದಯಾಳು1 ಅಣುರೋಮಕೂಪದಲಿ ಅಂಡಜಾಂಡಗಳಿರಲು ಘನಕೃಪಾಂಬುಧಿ ನಿಮ್ಮ ಪೊಗಳಲಳವೆ ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ ಘನಭಕುತಿಲ್ಯಜಭವರು ಪೂಜೆಮಾಡುವರು 2 ಗಂಗೆಗೋದಾವರಿ ತುಂಗಭದ್ರೆ ಯಮುನೆ ರÀಂಗಸನ್ನಿಧಿಯಾದ ಕಾವೇರಿಯು ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ ಅಂಗಜನಯ್ಯ ಭಾಪೆಂದು ಪೊಗಳೆ 3 ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4 ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ ಮುಂದೆ ಕುಂಕುಮದ ಕೇಸರಿಯ ಲೇಪ ಚೆಂದದ ಕೇದಿಗೆ ಮುಡಿವಾಳ ಸಂಪಿಗೆ ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5 ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ ನಸುನಗುತ ಇಂದಿರಾದೇವಿ ಬಡಿಸೆ 6 ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ ನಾರು ಬಣ್ಣದ ಚಿನ್ನದ್ಹರಿವಾಣವು ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ ಮೇರುಗಿರಿಯೆಂಬೊ ದೀಪಗಳು ಬೆಳಗೆ 7 ಘೃತ ಸೂಪ ಲೋಕಪತಿಗನುವಾದ ದಿವ್ಯಾನ್ನವು ಬೇಕಾದ ಪಂಚಭಕ್ಷ್ಯ ರಸಾಯನವ ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8 ಖಳರಕುಲವೈರಿಗೆ ತಿಳಿನೀರುಮಜ್ಜಿಗೆ ಎಳನೀರು ಪಾನಕ ಸೀತಳುದಕ ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
--------------
ವಾದಿರಾಜ
ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜ್ಞಾನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವುರವೆಯಷ್ಟು ತೋರದಲ್ಲ ಪ ದೇವ ದೇವೇಶ ನೀನೆಂದು ನಂಬಿರಲು ಕೃ-ಪಾವಲೋಕನದಿ ಸಲಹೊ ದೇವಅ ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾಸನವ ನಾನೆಂತ್ಹಾಸಲಿಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿತನುವಿನ ಪರಿಮಳವು ಘಮಘಮಿಪನಿಗೆ ಸುಚಂದನವದೆಂತು ನಾ ಪೂಸಲಿಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ 1 ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯಅರಿವೆಯೇನನು ಪೊದಿಸಲಿವರ ಕೌಸ್ತುಭವು ಕೊರಳೊಳಗೆ ಇಪ್ಪವಗೆ ಆ-ಭರಣವಾವುದ ತೊಡಿಸಲಿತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ-ಪೆರತೊಂದು ದೀಪವಿಡಲಿನೆರಹಿದ ಫಣಿಪತಿಯ ಸ್ತೋತ್ರದೂರನ ನಾನುಸ್ಮರಿಪೆನೆಂತಯ್ಯ ದೇವ ದೇವ 2 ವನಜಜಾಂಡ ಕೋಟಿಯುದರಂಗೆ ಆವುದನುಉಣಿಸಿ ತೃಪ್ತಿಯ ಮಾಡಲಿಅನಿಮಿಷರಿಗಮೃತವನ್ನೆರೆದವನ ತೃಷೆಯ ನೀ-ರಿನೊಳೆಂತು ಸಂತವಿಡಲಿವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀ-ಸಣಿಗೆಯನ್ನೇಂ ಬೀಸಲಿಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದ-ಕ್ಷಿಣೆಯೆಂತು ಸುತ್ತಿಬರಲಿ ದೇವ 3 ಮಿಗೆ ಫಣಿಯ ಫಣದಾತಪತ್ರವಿರುವಂಗೆ ನೆರ-ಳಿಗೆ ಕೊಡೆಯನೇಂ ಪಿಡಿಯಲಿಪಗಲಿರುಳು ಸಾಮಗಾನ ಪ್ರಿಯನ ಮುಂದೆ ಗೀ-ತಗಳ ನಾನೇಂ ಪಾಡಲಿಜಗವರಿಯೆ ಲಕ್ಷ್ಮೀದೇವಿಪತಿಗೆ ಎಷ್ಟು ಹೊ-ನ್ನುಗಳ ದಕ್ಷಿಣೆಯ ಕೊಡಲಿನಿಗಮತತಿ ಕಾಣದಿಹ ಮಹಿಮನಿಗೆ ನಮಿಸುವಬಗೆಯ ನಾನರಿವೆನೆಂತೈ ದೇವ 4 ಒಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊ-ಗಳುವ ಹೊಲಬ ನಾನರಿಯೆನುತಿಳಿದುದಿಲ್ಲವು ಷೋಡಶೋಪಚಾರದ ಪೂಜೆ-ಗಳಲೊಂದು ಪರಿಯಾದರೂನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧ ಭಕ್ತಿ-ಯೊಳಗೊಂದು ಬಗೆಯಾದರೂಅಳಿಲಸೇವೆಯನೊಪ್ಪಿಸಿಕೊಂಡು ಶರಣನ ಸಲಹೊನೆಲೆಯಾದಿ ಕೇಶವನೆ ಸ್ವಾಮಿ - ಪ್ರೇಮಿ5
--------------
ಕನಕದಾಸ
ಆವದೆನೆಗೆ ಪ್ರೀತಿ ಎಂದೆಂಬಿಯಾ | ದೇವ ದೇವಕಿ ತನುಜ ಬಿನ್ನಪವ ಮಾಡುವೆನೊ ಪ ದೊರೆತನವಲ್ಲೆ ಧನವಲ್ಲೆ ಒಬ್ಬರ ಬಳಿಯ | ಹಿರಿಯತನವಲ್ಲೆ ಹಿಗ್ಗುವುದು ವಲ್ಲೆ | ಹರಿ ನಿನ್ನ ಚರಣಗಳ ಸ್ಮರಿಸುವ ಭಾಗವತರ | ಅರಮನೆಯ ಬೀದಿಯಲಿ ಹೊರಳುವ ಭಾಗ್ಯವ ಕೊಡು 1 ಪಂಡಿತನಾಗಲಿವಲ್ಲೆ ಫಲವಲ್ಲೆ ನಾವು ಪ್ರ | ಚಂಡ ಯೋಗಗಳೊಲ್ಲೆ ಯಾಗವಲ್ಲೆ | ಥಂಡ ಥÀಂಡದಿ ನಿನ್ನ ಕೊಂಡಾಡುವರ ಬಳಿಯ | ಕೊಂಡರಾಗಿಪ್ಪವರ ಸೇರುವ ಭಾಗ್ಯವ ಕೊಡು 2 ಅಂದಣವೇರಲಿವಲ್ಲೆ ಆತ್ಮಸುಖವಲ್ಲೆ ನಾ | ನೆಂದು ಪೇಳುವರ ಸಂಗತಿಯವಲ್ಲೆ | ನಿತ್ಯ | ನಿಂದಂಗಳದೊಳಗೆ ಯಿಪ್ಪ ಭಾಗ್ಯವ ಕೊಡು 3 ರಸ ರಸಾಯನ ವಲ್ಲೆ ಹಸನಾದ ಪಟ್ಟಿ ರಂ | ಜಿಸುವದುವಲ್ಲೆ ರಾಗಗಳುವಲ್ಲೆ | ವಸುದೇವ ಸುತ ನಿನ್ನ ಪೆಸರು ಎಣಿಸುವವರ | ಶಿಶುವಾಗಿ ಬದಕುವ ಕುಶಲ ಭಾಗ್ಯವ ಕೊಡು 4 ಪುಣ್ಯ ತೀರ್ಥಗಳು ನಿನ್ನ ಮನಸಿಗೆ ಬಂದ | ವನ್ನು ಮಾಡಿಸು ಬಿಡದೆ ಮನ್ನಿಸೆನ್ನ | ಚನ್ನ ಮೂರುತಿ ಚೆನ್ನ ವಿಜಯವಿಠ್ಠಲರೇಯ | ಎನ್ನ ವಂದನೆಯನ್ನು ಮುನ್ನು ನೀ ಕೈಕೊಂಡು5
--------------
ವಿಜಯದಾಸ
ಆವಪರಿಯಿಂದಲಾದರೂ ರಾಮನಾಮವನು ಆವ ಪರಿಯಲಿ ನೆನೆದು ಸುಖಿಯಾಗು ಮನವೆ ಪ ಪಿತನಾಜ್ಞೆ ಲಕ್ಷಿಸದೆ ದೃಢದಿ ಪ್ರಹ್ಲಾದನು ಅತಿಶಯದಿ ಹರಿಯ ಧ್ಯಾನವ ಮರೆಯದೆ ಮತಿಗೇಡಿಯಾದ ಮಗನೆನುತ ಕುಲಗೆಡಿಸೆ ಶ್ರೀ ಪತಿಯು ತಾ ಬಂದು ಕಾಯ್ದುದೇ ಸಾಕ್ಷಿ 1 ದೋಷಹಿತನಾದ ದಶಶಿರನ ಒಡಹುಟ್ಟಿ ಕೇಶವನ ಧ್ಯಾನವನು ಮರೆಯದಿರಲು ಸಾಸಿರ ರಾಮಕಥೆಯುಳ್ಳನಕಾ ವಿ- ಭೀಷಣಗೆ ಸಾಮ್ರಾಜ್ಯವಿತ್ತುದೇ ಸಾಕ್ಷಿ 2 ಗಂಡರೈವರು ಸುತ್ತ ಕೆಲದಲಿರಲಾ ಸತಿಯ ಲಂಡ ದುಶ್ಶಾಸನ ಹಿಡಿದೆಳೆಯುತಿರಲು ಪುಂಡರೀಕಾಂಬಕನೆ ಸಲಹೆನಲು ಕರೆಯಲು ದ್ದಂಡನಾಭನೆ ಬಂದು ಕಾಯ್ದುದೇ ಸಾಕ್ಷಿ 3 ಯುದ್ಧಕೆ ನಡೆದಾಗ ಹಂಸಧ್ವಜಸುತನು ತನ್ನ ಬೇ ಕಾದ ಸತಿಯ ಆಜ್ಞೆಯ ನಡೆಸಲು ಪಿತನು ಕಾದೆಣ್ಣೆ ಕೊಪ್ಪರಿಗೆಯೊಳಗೆ ಸುಧನ್ವನ ಹಾಕೆ ಹರಿ ಕಾಯ್ದನೆಂಬುದ ಲೋಕವರಿದುದೆ ಸಾಕ್ಷಿ 4 ಉರ್ವಿಯೊಳು ವಿಪ್ರಜನ್ಮದಿ ಜನಿಸಿದಜಮಿಳಗೆ ಪೂರ್ವಸಂಚಿತ ಪಾಪಶೇಷವಿರಲು ಓರ್ವ ಸತಿಗಾಗಿ ಚಂಡಾಲತಿಯೊಳಗಾಗಿರೆ ಗೀರ್ವಾಣಪುರಿ ಲಕ್ಷ್ಮೀಶನೊಲಿದುದೇ ಸಾಕ್ಷಿ 5
--------------
ಕವಿ ಲಕ್ಷ್ಮೀಶ
ಆವಿರ್ಭವಿಸಿದಳಾಗ ಜಗನ್ಮಾತೆ | ಅಖಿಲಾಂಡ ವಿಖ್ಯಾತೆ ಪ ದೇವದಾನವರು ತಾವೊಡಗೂಡುತ ಲಾವುದಧಿಯಮದಿಸÀುತ್ತಿರಲದರೊಳು ಅ.ಪ ಪೊಳೆವ ಬೆರಳುಂಗುರ ಶೋಭಿತಪಾದ | ಧರಿಸಿದ ಸುರುಚಿರ ರುಳಿಯು ಅಂದಿಗೆ ಗೆಜ್ಜೆಯ ನಾದ | ಕಟಿಯಲಿ ನೋಡೆ ಥಳಥಳವಾದ ಶೃಂಗಾರವಾದ | ಒಡ್ಯಾಣದ ಮೋದ ದಲಿ ತಾನಿಟ್ಟಿಹ ಚಲುವಿಕೆಯಿಂದಲಿ ಸಲೆ ಬೆಳಗುತಲಿ ನಳಿನಲೋಚನೊಳು 1 ಕರಿರಾಜನ ಕರದಂತೆ ಒಪ್ಪುವ ಕರವು | ಬೆರಳಲಿ ನೋಡೆ ಪರಿಶೋಭಿಸುತಿಹ ಮಾಣಿಕ್ಯದುಂಗುರವು | ರಾರಾಜಿಸುವ ಹರಡಿ ಕಂಕಣಗಳು ಬಲು ಸುರುಚಿರವು | ಪರಿಕಿಸೆ ಸುಂದರವು ಪರಿ ಸರಗಳು ಕೊರಳೊಳು ಶೋಭಿಸೆ ತರಣಿ ಕಾಂತಿಯನು ತಿರಸ್ಕರಿಸುತ್ತಲಿ 2 ಮಂದಸ್ಮಿತ ಪರಿಶೋಭಿತ ಶುಭವದನ | ಆನಂದಸದನ ಕುಂದಕುಟ್ಮಲದಂತಿಹ ಸಮರದನ | ಸಂತಾಪಾರ್ದನ ಬಂಧುರ ಚಂಪಕ ನಾಸಿಕದ ಹದನ | ಏಂ ಪೇಳಲಿ ಅದನ ಮಂದರಾದ್ರಿಧರ ಕರಿಗಿರೀಶನ ಎಂದೆಂದಗಲದ ಸುಂದರಾಬ್ಜಮುಖಿ3
--------------
ವರಾವಾಣಿರಾಮರಾಯದಾಸರು
ಆಳ್ವಾರ್-ಆಚಾರ್ಯ ಸ್ತುತಿಗಳು ನೀರಾಟವ ನೋಡಿದೆ ನೀರಜಾಕ್ಷನ ರಾಣಿ ಗೋದಾದೇವಿಯ ಪ ಶ್ರೀವಿಲ್ಲಿಪುತ್ತೂರ ಶ್ರೀತುಳಸಿವನದಲ್ಲಿ ಶ್ರೀವಿಷ್ಣುಚಿತ್ತರಾ ಪುತ್ರಿಯೆಂದೆನಿಸಿ ಸುಪುತ್ರಿಯೆಂದೆನಿಸಿ ಶ್ರೀ ದೇವಿ ತಾನುದಿಸೆ ಬೇಗ ತೀವ್ರ ಹರುಷದಿಂ ಬೆಳೆಯುತ್ತಲಿದ್ದಾಳಲು 1 ಪುತ್ರಿಗೆ ತಕ್ಕಂಥ ವರವಿಲ್ಲವೆನುತಾಲೆ ಚಿತ್ತದೊಳಗೆ ಯೋಚಿಸಿದ ಆಳ್ವಾರರು ಪೆರಿಯಾಳ್ವರರು ಭಕ್ತವತ್ಸಲನಾ ವರಿಸಬೇಕೆನುತಾನೆ ಅರ್ಥಿಯಿಂದಲೆ ನೀರಾಟವನೆನೆದಾಳು 2 ಶ್ರೀಶವಾಸನೆಗಳ ಭಾವಿಸೀ | ಗೊಲ್ಲ ವಾಸನೆಗಳ ಭಾವಿಸೀ ವಾಸುದೇವನಾ ವರಿಸಬೇಕೆನುತಾಲೆ ಉ ಲ್ಲಾಸದಿಂದಲೆ ಹೆಂಗಳ ಕೂಡೆ ಪೊರಟಾಳು 3 ಮುತ್ತು ಮಾಣಿಕದಾಭರಣವನಿಟ್ಟು ಸುತ್ತೆಣೆ ಗಂಟನ್ಹಾಕಿ ದೇವಿ ಸುತ್ತೆಣೆ ಗಂಟನ್ಹಾಕಿ ಉತ್ತಮನಾಗಿದ್ದ ಪುಷ್ಪಗಳನೆ ಮುಡಿದು ಚಿತ್ತದೊಳೊಲ್ಲಭನಪ್ಪಣೆಗೊಂಡು ಪೊರಟಾಳು 4 ಮಾರ್ಗಶಿರ ಮಾಸದಿ ಪೊತ್ತೊಂದು ದಿವಸಾದಿ ಬೇಗ ತಾ ಪೊರಟೂ ಮಹಾಲಕ್ಷಿ ತಾ ಪೊರಟ ಳಾಗ ಬೀದಿಯನು ಸುತ್ತಿ ಮಂಟಪದಲಿ ನಿಂದು ಮಂಗಳಾರತಿಯನೆತ್ತೀ ಮಾರು ವಸ್ತ್ರವ ತೆಗದಾರು 5 ದಂತಧಾವನ ಮಾಡಿ ಕಂತುಪಿತನರಸೀಗೆ ಅಂತರಂಗದ ಭಕ್ತರು ಬೇಗ ಅಂತರಂಗದ ಭಕ್ತರು ಸಂತೋಷದಿಂದಲೆ ಮುಖವನ್ನು ತೊಳೆದು ಶ್ರೀ ಕಾಂತಗೆ ವಸ್ತ್ರದಿಂ ಮುಖವನೊರೆಸಿದಾರು 6 ಭಾಪು ಛತ್ರಿಚಾಮರ ಸೂರೆಪಾನವಾ ಜನ ಬೀಸಿ ಗೋಪಿ ಮುಕ್ತಿದಾಯಕಿಗಾಗ ಮುಕ್ತಿದಾಯಕಿಗಾಗ ದರ್ಪಣವನು ತೋರಿ ಕಂದರ್ಪನ ಮಾತೆಗೆ ಧೂಪ ದೀಪ ಕರ್ಪೂರದಾರತಿಯೆತ್ತಿದರು 7 ಬೇಗಾದಿಲಕ್ಷಿಗೆ ಆಭರಣ ಸಡುಲಿಸಿ ಆಗ ಮುಡಿಯ ಬಿಚ್ಚಿ ದೇವೀಗೆ ಆಗ ಮುಡಿಯ ಬಿಚ್ಚೀ ಬೇಗಾದಿಂ ಕಂಮೆಣ್ಣೆ ಕಸ್ತೂರಿತೈಲ ಮೈಗೆ ತಾಳಮೇಳದ ಗತಿಯಿಂದಲೊತ್ತಿದ್ದರೂ 8 ಶ್ವೇತವರ್ಣದ ದಿವ್ಯ ನಾಗವಲ್ಲಿಗಳಿಂದ ಖ್ಯಾತಿ ಪಡೆದಿರುವಾ ಕ್ರಮುಕಾ ಬೇಗ ಖ್ಯಾತಿ ಪಡೆದಿರುವಕ್ರಮುಕಾ ನೂತನವಾದ ಕರ್ಪೂರವರ್ಣಗಳಿಂದ ಜಗ ನ್ಮಾತೆಗೆ ತಾಂಬೂಲವ ನೀಡಿದರೂ 9 ಸಣ್ಣವಾದ್ಯದೊಳಗೆ ನುಡಿಸೇ ಬೇಗ ವಾದ್ಯದೊಳಗೆ ನುಡಿಸÉೀ ಹಣೆಯೊಳಗೆ ಬಾಚಿ ಮಣಿಗಂಟನಿಕ್ಕಿ ಉಳಿದ ಎಣ್ಣೆ ಭಕ್ತರಿಗೆಲ್ಲ ಯಿತ್ತಾರು 10 ಮಿಂದು ಮಡಿಯನುಟ್ಟು ಚಂದದಿಂದಲೆ ದೇವಿ ತಂದ ನೈವೇದ್ಯವುಂಡೂ ಬೇಗ ನೈವೇದ್ಯವುಂಡು ಬಂದ ಭಕ್ತರಿಗೆಲ್ಲ ತೀರ್ಥಪ್ರಸಾದವಿತ್ತು ಮಂದಗಮನೆ ತನ್ನ ಮಂದಿರಕೆ ನಡೆದಾಳು 11 ಬೈತಲೆಗೆ ರಾಗಟೆ ಹೆರಳಿಗೆ ಭಂಗಾರಗೊಂಡೆಯವ ನಿತ್ತು ಪಾನುಪಟ್ಟಿಯು ಮುತ್ತಿನಬಟ್ಟೆ ಕಟ್ಟಿ ಬೇಗ ಮುತ್ತಿನಬಟ್ಟೆ ಕಟ್ಟಿ ಕತ್ತುರಿ ಬಾವುಲಿ ಕಮಲಸರಗಳೂ ಮುತ್ತಿನ ಮೂಗುತಿ ಮುಕುರಾವನಿಟ್ಟಳೂ 12 ಹಾರಪದಕ ಹಸ್ತಕಡಗ ಹರಡಿ ವಂಕಿ ಶೀರೆಕುಪ್ಪಸ ತೊಟ್ಟೂ ಬೇಗ ಶೀರೆಕುಪ್ಪಸ ತೊಟ್ಟು ಅಂದುಗೆ ಇಂದೀರಾದೇವಿ ತಾನಿಟ್ಟು ಬಂದಳು ಆಗಾ 13 ಭಾಷ್ಯಕಾರರು ಮೊದಲಾದ ಭಕ್ತರುಯೆಲ್ಲ ಲಕ್ಷ್ಮಿದೇವಿಗೆ ಆಗ ಭಾಗ್ಯಲಕ್ಷ್ಮಿಗೆ ಆಗಾ ಭಾರಿ ಯಾ ಶೀರೆ ಕುಪ್ಪುಸವನಿತ್ತು ಪುಷ್ಪ ಮರ್ಯಾದೆಗಳ ಮಾಡೀ ಕರೆತಂದರು ಬೇಗಾ 14 ಮಂದಗಮನೆ ಅಂದು ಗೋವಿಂದನ ಎದುರಲ್ಲಿ ಆ ನಂದದಿಂದಲೆ ಕುಳಿತೂ ಬೇಗ ಆನಂದದಿಂದಲೆ ಕುಳಿತು ಚಂದದಿಂ ಮಲ್ಲಿಗೆಮಾಲೆಯ ಕಳುಹಲು ಮಂದರೋದ್ದರ ತನ್ನಾ ಮಡಿದೀಗೆ ಕಳುಹಿದ 15 ಕೂಡಾರವಲ್ಲಿಯೆಂತೆಂಬೊ ದಿವಸದಲ್ಲಿ ಕೂಡಿ ಮನ್ನಾರುರಂಗನಾ ಬೇಗ ಮನ್ನಾರುರಂಗನಾ ಕ್ಷೀರಾನ್ನ ಭೋಜನಂಗಳ ಮಾಡಿದರು ಭೋಗಿಯ ದಿನದಿ ಕಲ್ಯಾಣವ 16 ಮಕರ ಸಂಕ್ರಾಂತೀಲಿ ಮಂದರೋದ್ದಾರ ಸಹಿತ ಚೊಕ್ಕ ಪಲ್ಲಕ್ಕಿಯೇರಿ ಬೇಗ ಚೊಕ್ಕ ಪಲ್ಲಕ್ಕಿಯೇರಿ ಪಕ್ಕ ಮೆರವಣಿಗೆಯಲಿ ಬಂದು ಹರುಷದಿಂದ ವೆಂಕಟಕೃಷ್ಣನ ಎಡದಲ್ಲಿ ಕುಳಿತಾಳು 17
--------------
ಯದುಗಿರಿಯಮ್ಮ