ಅರಿ ಬೇಗನೇ ಪರಮಾತ್ಮ ನೀನೈ
ಪರತತ್ವನಾ ತ್ವರಿತದಲಿ ತಿಳಿಯೊ ಪ
ಮೂರು ತಾಣಗಳ ಮೀರಿ ಗೋಚರಿಪ
ತೋರುತಿಹ ಈ ದೇಹಾದಿಗಳಿಗೆ
ಬೇರೆಯಾಗಿಪುದೆ ಪರಮಪದವು
ಧೀರ ನೀನರಿಯೊ ಅದೆ ನಾನು ಎಂದು 1
ಕೋಶಪಂಚಕವ ಲೇಸಾಗಿ ಕಳೆದು
ವಾಸನೆಯ ಪಾಶವನೆ ಹರಿದೊಗೆದು
ಕ್ಲೇಶ ಪಡುವದನು ತ್ಯಜಿಸಿ ಮುದದಿ
ನಾಶರಹಿತಾದ ಪದವು ತಾನೆಂದು 2
ಜನನಮರಣಗಳಿಗಾಚೆಗಿರುವಂಥ
ಮನವಾಣಿಗಳಿಗೆ ನಿಲುಕದಿರುವಂಥ
ಘನಪದವು ಇದುವೆ ಪರಮಾತ್ಮನೈ
ಅನುನಯದಿ ಪೇಳ್ವ ಗುರುಶಂಕರಾರ್ಯ 3