ಒಟ್ಟು 2557 ಕಡೆಗಳಲ್ಲಿ , 114 ದಾಸರು , 1974 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿದಾಸರಿಗೆ ಕಿಂಚಿತ್ತಳಿವಿಲ್ಲ ಮನವೆ ಹರಿಯನ್ನು ನೆರೆನಂಬು ಸರಿಯಾರು ನಿನಗೆ ಪ ದುರಿತ ಕೋಟ್ಯಾಚರಿಸಿ ನರಕಿಯಾದಜಮಿಳಗೆ ಮರಣಕಾಲದಿ ಸಂಸ್ಮರಣ ಮಾತ್ರದಿ ನರಕದ ಭಯತಪ್ಪಿ ಸ್ಥಿರಮುಕ್ತಿಪದವಾಯ್ತು ಅರಿದು ನೀ ಗಟ್ಟ್ಯಾಗಿ ಸ್ಮರಿಸು ಮಾಧವನ 1 ಹರಿಸರ್ವೋತ್ತಮನೆಂಬ ತರಳನಿಗೆ ಹಿರಣ್ಯ ಹರಿಯೆಲ್ಲಿ ತೋರದಿರೆ ಶಿರಹಾರಿಸಿಕಪೆನೆನಲು ನರಹರಿಯ ರೂಪದಿಂ ಭರದಿ ಕಂಬದಿ ಬಂದು ಹಿರಣ್ಯಕನ ಶಿರತರಿದು ಪೊರೆದ ಪ್ರಹ್ಲಾದನ 2 ಲಲನೆ ದ್ರೌಪದಿ ಲಕ್ಷ್ಮೀನಿಲಯನ ದಯದಿಂದ ಉಳಿದಳು ಮಾನದಿಂ ಖುಲ್ಲನ ಸಭೆಯಲಿ ಅನುದಿನ ಚಲಿಸದೆ ಮನವಂ ತಿಳಿದು ನೀ ಭಜಿಸೆಲೊ ಸುಲಭ ಶ್ರೀರಾಮ 3
--------------
ರಾಮದಾಸರು
ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು
ಹರಿನಾಮ ಮರೆಯ ಬೇಡಯ್ಯ ಪರಿ ದುರಿತಗಳನ್ನು ಅದು ನೀಗುವುದಯ್ಯಾ ಪ ತರಳಪ್ರಲ್ಹಾದನಿಗೊಲಿದ ನಾಮವುಯಿದು ದುರುಳ ರಕ್ಕಸರನ್ನು ತರಿದ ನಾಮವೋ 1 ನಿರುತದಿ ಭಕ್ತರಿಗೊಲಿವ ನಾಮವುಯಿದು ಸರಸದಿ ಭಜಕರ ಪೊರೆವ ನಾಮವೋ 2 ಭಾಮೆಗಕ್ಷಯವಿತ್ತ ಪರಮನಾಮವುಯಿದು ಪ್ರೇಮದಿ ದಾಸರಿಗೊಲಿವ ನಾಮವೋ 3 ಕಾಮಿತ ವರಗಳನೀವ ನಾಮವುಯಿದು ನಿತ್ಯ ಭಜಿಪ ನಾಮವೋ 4 ದಶರೂಪ ಧರಿಸಿದ ದಿವ್ಯ ನಾಮವುಯಿದು ದಶಕಂಠನನು ಕೊಂದ ಶ್ರೀನಾಮವೋ 5 ಕೇಶವ ರೂಪದಿ ಮೆರೆವ ನಾಮವುಯಿದು ಪಾಶವ ಕಡಿಯುವ ನಿಜ ನಾಮವೋ 6 ವರ ದೂರ್ವಾಪುರದ ಶ್ರೀಹರಿಯ ನಾಮವುಯಿದು ಮರೆಯದೆ ಭಕ್ತರ ಪೊರೆವ ನಾಮವೋ 7 ಸಿರಿ ಚನ್ನಕೇಶವನೆಂಬ ನಾಮವೋ 8
--------------
ಕರ್ಕಿ ಕೇಶವದಾಸ
ಹರಿಪಾದಕಮಲಕ್ಕೆ ಮರೆಹೊಕ್ಕ ಬಳಿಕ ಮರಮರ ಮರುಗುವ ಪರಿಯು ಇನ್ನ್ಯಾಕೋ ಪ ಪರಮಪಾವನ ತನ್ನ ಚರಣದಾಸರ ಸ್ಥಿತಿ ಅರಿಯನೆನೆನ್ನುತ ಸ್ಥಿರವಾಗಿ ನಂಬಿ ಅ.ಪ ಕಂತುಪಿತನಧ್ಯಾನ ಚಿಂತಾಮಣಿಯೆಂದು ಚಿಂತಾದೂರನ ನಿಜಸ್ಮರಣೆಯೇ ಪರಷೆಂದು ಸಂತರೊಡೆಯ ಶ್ರೀಕಾಂತನ ಭಜನೆಯೇ ಭ್ರಾಂತಿನೀಗಿಸುವಂಥ ಕಲ್ಪತರುವಿದೆಂದು 1 ಸೃಷ್ಟಿಕರ್ತನ ಕಥನ ಕಷ್ಟನಿವಾರಣ ಅಷ್ಟಮೂರುತಿ ಕೀರ್ತನಷ್ಟಸಂಪದ ಪೂರ್ಣ ಎಷ್ಟು ಮಾತ್ರಕೆ ತನ್ನ ಇಷ್ಟ ಭಕ್ತರಿಗಿಹ್ಯ ಕಷ್ಟ ನಿವಾರಿಸಿದೆ ಬಿಡನೆಂದು ಗಟ್ಟ್ಯಾಗಿ 2 ಧ್ಯಾನಮೂರುತಿ ಎನ್ನ ಮಾನಾಪಮಾನವು ನಿನ್ನಗೆ ಕೂಡಿತು ಎನಗಿನ್ನೇನೆಂದು ಅನ್ಯಾಯವನು ತ್ಯಜಿಸಿ ಧ್ಯಾನವ ಬಲಿಸಿ ಜಾನಕೀಶನೆ ಭಕ್ತಧೇನು ಶ್ರೀರಾಮೆಂದು 3
--------------
ರಾಮದಾಸರು
ಹರಿಭಕುತರ ದರುಶನವು ಅತಿಹರುಷವು ಧ್ರುವ ಹರಿ ನೆನೆವರಾ ನೆರಿಯು ನಿಧಾನದಾ ಕೆರೆಯು ಹರಿ ಸ್ಮರಿಸುವರ ಮರಿಯು ವಜ್ರವರಿಯು ಹರಿ ಭಜಿಸುವರ ಸರಿಯು ನಿಜಘನಾತ್ಮದ ಝರಿಯು ಹರಿ ಮಹಿಪರ ಕರಿಯು ಪರಮಾನಂದದ ತೆರಿಯು 1 ಹರಿಶರಣರ ನುಡಿಯು ಕರುಣದಮೃತಧ್ವನಿಯು ಹರಿಯದಾಸರ ನಡೆಯು ನಿಲಕಡೆಯು ಹರಿಭಕ್ತರಿದ್ದೆಡೆಯು ಪುಣ್ಯಕ್ಷೇತ್ರದ ತಡಿಯು ಹರಿಮಹಿಮರ ಕಡಿಯು ಕ್ಯಾದಿಗ್ಹೊಡಿಯು 2 ಹರಿಭಕ್ತರ ಸಂಗ ಸ್ನಾನಗಂಗ ತುಂಗ ಹರಿಮಹಿಮರ ಅಂಗ ಅಂತರಂಗ ಹರಿಪರಮಾನಂದ ಗುರು ಕರುಣಾಕೃಪಾಂಗ ಭಂಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಭಜನವೇ ಬಹುಮಿಗಿಲು ನರನಿಗೆ ಧರೆಯಸುಖವೆಲ್ಲ ಸುಳ್ಳೊ ಸುಳ್ಳೋ ಪ ತಂದೆತಾಯಿಗಳು ಮಂದಿ ಮಕ್ಕಳು ಬಂಧುಬಳಗ ಒಂದು ಸಂಬಂಧವಿಲ್ಲ 1 ಕೋಟಿಕೊತ್ತಲ ಕೋಟಿಧನಬಲ ನೀಟಾದ ಮಹಲು ನಿಜವಿಲ್ಲ ಇಲ್ಲ 2 ರಾಜ್ಯಭಂಡಾರ ಪ್ಯಾಟೆ ತೇಜಿ ಆನೆ ಒಂಟಿ ರಾಜಿಪುದೆಲ್ಲ ಸುಳ್ಳ ಮುಷ್ಟಿಮುಷ್ಟಿ 3 ಸಿರಿ ಅಂದಣ ಭಾರಿ ನಂದಿಪೋಗುವುದೆಲ್ಲ ಹಾರಿ ಹಾರಿ 4 ವರದ ಶ್ರೀರಾಮನ ಚರಣಸ್ಮರಣಿಲ್ಲದ ನರರ ಜನುಮವೆಲ್ಲ ಹಾಳು ಹಾಳು 5
--------------
ರಾಮದಾಸರು
ಹರಿಭಜನೆ ಮಾಡುವಗೆ ಅನಂತಫಲವೂ ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ ಭವರೋಗ ಸಂಚಿತವು ಪರಿ ಪರಿಯ ನರಕಾದಿ ಬಂಧಕವು ಬಿಡದು 1 ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ ಗಾರಾಮವಾದಂಥ ಸುಖಸೌಖ್ಯವು ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು 2 ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ ಸತತಧ್ಯಾನವು ಮಾಡುವ ಸಾಧು ಜನರಾ ಪತಿತ ಪಾವನನಾದ ಪರಮಾತ್ಮ ಪಾಲಿಸೆ ಗತಿಯು ತೋರುವ ಇನ್ನು ಕರುಣದಲಿ ಹರಿಯು 3
--------------
ಹೆನ್ನೆರಂಗದಾಸರು
ಹರಿಯ ಚರಣ ನಿರುತ ಸ್ಮರಿಸಲೊ ಮೂಢ ಮನುಜ ನಿತ್ಯ ಪಾಡಿ ಭಜಿಸು ನರಕಭಯ ವಿಮುಕ್ತನಾಗೆಲೋ ಪ ಹಿಂಡುಬಳಗ ಕೂಡಿಹಾಕಿದಿ ಆಸಕ್ತನಾಗಿ ಬಂಡಿಹೊನ್ನು ಘಳಿಸಿ ಹೊಳಿದಿ ಬಗೆಬಗೆಯಲಿಂಡು ಬಂಡÀ ಬೆಳಸಿ ತುಂಡಗ್ವಾಣದಿ ತುಂಡಿನೇಗ ಜವನಭಟರು [?] ಬೆನ್ನ ಬಿಡವು 1 ಪಗಲು ಹರಟಿಯೊಳಗೆ ಪೋದಿತು ಆಯುಷ್ಯದೊಳಗೆ ಮಿಗಿಲು ರಾತ್ರಿ ವಿಷಯಗಳೆಯಿತು ಸುಗಂಧದ್ರವ್ಯ ಸೊಗಸಿನಿಂದ ಮೈಯ್ಯ ಮುಸುಕಿತು ಜಗದಿ ಘೂಳೆಯಂತೆ ಮೆರೆದಿ ಸೊಗಸಿನಂಗ ತೊಲಗಿತಲ್ಲಿ 2 ದುಷ್ಟತನಕೆ ದಾರಿ ಕೊಡದಿರು ಲೋಕದಲಿ ನೀನು ಭ್ರಷ್ಟನಾಗದೆ ತುಷ್ಟಿಯಿಂದಿರು ಕಷ್ಟಸುಖಗಳ್ಹರಿಗೆಯರ್ಪಿಸಿ ಸೃಷ್ಟಿಪರ ನರಸಿಂಹವಿಠಲನಷ್ಟ ವಿಧದಿ ಪೂಜೆಗೈದು ಇಷ್ಟ ಮುಕ್ತಿ ಸುಖ ಪಡೆಯೋ 3
--------------
ನರಸಿಂಹವಿಠಲರು
ಹರಿಯ ಭಜನೆ ಮಾಡೋ ನಿರಂತರ ಪ. ಪರಗತಿಗಿದು ನಿರ್ಧಾರ ಅ.ಪ. ಮೊದಲೆ ತೋರುತದೆ ಮಧುರ ವಿಷಯಸುಖ ಕಡೆಯಲಿ ದುಃಖ ಅನೇಕ 1 ವೇದಶಾಸ್ತ್ರಗಳನೋದಿದರೇನು ಸಾಧನಕಿದು ನಿರ್ಧಾರ 2 ಸಾರವೊ ಬಹುಸಂಸಾರ ವಿಮೋಚಕ ಸೇರೊ ಶ್ರೀಹಯವದನನ್ನ 3 ತತ್ವವಿವೇಚನೆ
--------------
ವಾದಿರಾಜ
ಹರಿಯಂದು ಸ್ಮರಿಸುವರ ದುರಿತಪರಿಹಾರವೆಂದು ನೆರೆಪೇಳ್ವ ಶೃತಿ ತಿಳಿದು ಮನವೆ ಕರುಣಾಸಾಗರನಾದ ಕಮಲಾದ್ರಿವಾಸ ನರಹರಿಯಪಾದ ಭಜಿಸುವ ಮನವೆ ಪ ಸುತನ ನಿಂದಗನೆಂದು ಹಿತದಂತ್ಯಕಾಲ ಸಂಘಾತನೆ ಹಿತ ವೇಳ್ವೆ ಕರಿಯಲು ಮನವೆ ಚತುರಾಸ್ಯ ಜನಕ ಮನ್ಮಥಕೋಟಿರೂಪ ಸದ್ಗತಿ ತೋರಿಸಲಹುದೇನು ಮನವೆ 1 ಆ ಮರರೀಮರ ಎಂಬ ಪಾಮರಗೆ ಪಟ್ಟಾಭಿರಾಮ ಭಕ್ತರ ಪ್ರೇಮ ಮನವೆ ಕಾಮಿತಾರ್ಥವನಿತ್ತ ಕಂಜಾಕ್ಷದಯದಿ ಸೀತಾಮನೋಹರ ರಾಮ ಮನವೆ 2 ಕರಿಯು ಮಕರಿಗೆ ಶಿಲ್ಕಿ ನೆರಳುತಲಿ ಪರಮಾತ್ಮ ಪರಬ್ರಹ್ಮನೆಂದು ಸ್ತುತಿಸಿ ಮನವೆ ಗರುಡವಾಹನ ಹೆನ್ನೆಪುರನಿಲಯ ಮರಿಯದಲೆ ಪರಿಪಾಲಿಸಿ ಪೊರೆವ ಮನವೆ 3
--------------
ಹೆನ್ನೆರಂಗದಾಸರು
ಹರಿಯೆ ಸರ್ವೋತ್ತಮ ಪರದೈವವೆಂತೆಂಬ ಮರುತ ಮತವ ಸಾರಿರೊ ಪ. ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ. ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು ಪಂಚ ಮೂರ್ತಿಯ ಭಜಿಸಿರೊ ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1 ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು ಎಂಟು ದಳದಿ ಕಾಣಿರೊ ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2 ಮೂರು ಗುಣಗಳಿಂದ ಮೂರು ಮಾಳ್ಪ ಜಗವ ಮೂರು ರೂಪವ ನೆನೆಯಿರೊ ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3 ಕಂಡ ದೈವಗಳಿಗೆ ಮಂಡೆಯ ಬಾಗಿಸುತ ಬೆಂಡು ಆಗಲಿ ಬೇಡಿರೊ ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ ಗಂಡುಗಲಿಯಾಗಿರೊ | ಧೈರ್ಯವ ತಾಳಿ 4 ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು ಉರ್ವಿಯೊಳಗೆ ಬಾಳಿರೊ ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಸರ್ವಬಿಂಬನೆನ್ನಿರೊ | ಮೂಲರೂಪಿ 5
--------------
ಅಂಬಾಬಾಯಿ
ಹರಿಯೆನ್ನ ನರಜನ್ಮ ವ್ಯರ್ಥವಾಯ್ತು ಪರಮ ಭಕ್ತಿಯೊಳಿನ್ನು ಭಜಿಸುವೆನು ಕಾಯೋ ಪ ತೊಡೆಯ ಮೇಲಾಡುತಿಹ ಶಿಶುವಿನಾನುಡಿ ಕೇಳಿ ಕಡು ಮೂರ್ಖತನದಿಂದ ಭ್ರಮೆಗೊಂಡೆನೋ ಸಡಗರದಿ ಕಿವಿಗೊಟ್ಟು ಕಿಂಕಿಣಿಯ ದ್ವನಿಗಳನು ಎಡಬಿಡದೆ ಕೇಳುತಿಹ ಹರಿಣನಂತಾದೇ 1 ತೊಡೆಗÀುಹ್ಯ ಕುಚಗಳಿಗೆ ಅನುದಿನವು ನಲಿಯುತ್ತ ಮಡದಿಯರ ಅಂಗ ಸಂಗದ ನಂಬುತಾ ಒಡಲ ಶಾಂತಿಯಗೊಳಿಸೆ ಬಡಿಗೋಲು ಕೆಡಹಿಕೊಂ ದಡಗುತಿಹ ಮೂಷಕನ ತೆರದಲ್ಲಿ ಕಳೆದೇ 2 ನಿರುತದಿಂ ಪರಸತಿಯ ಲಾವಣ್ಯವನು ನೋಡಿ ಚರಿಸಿತೆನ್ನಯ ಮನವು ಅವಳ ಕೂಟಕ್ಕೇ ಉರಿವ ದೀಪವ ಕಂಡು ಕನಕ ಮಣಿಯೇಯೆಂದ ಎರಗುತಿಹ ಹುಳದಂತೆ ಹಾಳಾದೆ ಬರಿದೇ 3 ಜರಿದು ನಿಜವೃತ್ತಿಯನು ಪರದಾಸ್ಯದಲಿ ಮುಳುಗಿ ಪೊರದೆ ಹೊಟ್ಟೆಯನಾ ಪರಾನ್ನ ಭಕ್ಷದಲೀ ಹರುಷದಿಂ ಬಲೆಯತುದಿ ಮಾಂಸಕ್ಕೆ ಮೆಚ್ಚಿದಾ ಮರುಳಾ ಮೀನಿನ ಗತಿಯು ಯನಗಾಯ್ತು ನಿಜದೀ4 ನಾರಿಯರ ಜಾಲಕ್ಕೆ ಪ್ರತಿದಿನವು ಸಿಲುಕುತ್ತ ಮಾರಿಯರ ಸಾಕಿ ನಾ ಫಲವ ತಿಂದೆ ಭ್ರಮರ ಸಂಪಿಗೆಯಸಳ ಸಾರಿ ಕೊಡಲೆ ಮೃತ್ಯುವಶವಾಗುವಂತೇ 5 ಮೂರಾರು ಶತ್ರುಗಳು ತರಿದೆನ್ನ ಮನವನ್ನು ಗಾರು ಮಾಡುತಲಿಹವು ತಿಳಿಯದಾ ಹರಿಯೇ ನರಸಿಂಹನೇ ಐದು ಇಂದ್ರಿಯವ ಗೆಲಲಾರೆ ಭೂರಿ ಭಕ್ತಿಯೊಳೆರಗಿ ಮರೆಹೊಕ್ಕೆ ಕಾಯೋ 6 ಪನ್ನಗಶಯನ ಶ್ರೀ ವೇಣುಗೋಪಾಲನೆ ಚನ್ನಿಗಕೇಶವನೇ ದೂರ್ವೇಶನೇ ನಿಂನನಾ ಬಿಡಲಾರೆ ಮಾರಮಣ ಪೊರೆಯಂನ ಯೋನಿ ಜನ್ಮಕೆ ಮುಂದೆ ಬರದಂತೆ ಮಾಡೋ 7
--------------
ಕರ್ಕಿ ಕೇಶವದಾಸ
ಹರಿಯೇ ದಯಮಾಡು ಮಾಡು ಮಾಡು ಮಾಡು ಪ ಮರೆತು ಭವಾಟವಿಯಲ್ಲಿ ಬಹು ನೊಂದೆನು | ಕರುಣ ಕಟಾಕ್ಷದಿ ನೋಡು ನೋಡು ನೋಡು | ನೋಡು 1 ಹರಿಸಿ ತ್ರಿತಾಪವ ಸ್ವಸುಖ ಬೀರುವಾ | ಚರಣದ ಭಜನೆಯ ನೀಡು ನೀಡು ನೀಡು ನೀಡು 2 ಹೃದಯ ಮಂದಿರದೊಳಗಾಡು ಆಡು ಆಡು ಆಡು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೇ ನಮ್ಮ ಪರದೈವಾ ಹರಿಯೇ ತ್ರಿಭುವನ ಕಾವಾ ಹರಿಯೇ ಇಹಪರ ನೀವಾ ಜಗದೊಳಗೆ ಪ ಬಿಟ್ಟು ತಾಯ ತಂದೆಗಳ ನೆಟ್ಟನಡವಿಗೆ ಪೋಗಿ | ಮುಟ್ಟಿ ಭಜಿಸಲಾಗಿ ದಯವಿಟ್ಟು ಬಂದನು | ವಿಠಲ ನಚಲ ಪದವಿಯ ಕೊಟ್ಟು ಸಲಹಿದಕ | ಧಿಟ್ಟ ಧ್ರುವರಾಯ ಸಾಕ್ಷಿ ಅಂಬರದಲಿ 1 ಶರಧಿ ದಾಟ ಬಂದು ರಘು | ಪತಿ ಕರಿಸಿದನು | ಧರಿಯದುಳ್ಳನಕಾ ಲಂಕಾಪುರದ ಪದವಿಕೊಟ್ಟು ಕಾಯ್ದಾ | ಮೆರೆವಾ ವಿಭಿಷಣÁ ಸಾಕ್ಷಿ ಮೃತ್ಯುಲೋಕದೀ 2 ಧರೆಯ ನೆಳೆದು ಕೊಟ್ಟರಂಘ್ರಿ ವೆರಡರಿಂದ ಮುಚ್ಚಲಾಗಿ | ಶರಣ ತೃತಿಯ ಪಾದಕ ಶಿರಸವ ನೀಡಲು | ಹೊರೆದನೆಂದು ಬಲಿಸಾಕ್ಷಿ ಪಾತಾಳದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಸರ್ವೋತ್ತಮನೆಂದರಸುವರು ಪ ಹರಿದಾಸರಿವರು ಧರೆಯೊಳಿವರಿಗೆ ಸರಿಗಾಣೆ ಕೇಳಮ್ಮ ಜಾಣೆ ಅ.ಪ ಸಾಧುಸಜ್ಜನರಿಗೆ ಬಾಗುವರು ವೇದಕೆ ನಮಿಸುವರು ವಾದವಾಂಛಲ್ಯವ ತೊಡದಿಹ್ಯರು ಭೇದಿಲ್ಲದಿವರು 1 ಕಾಮ ಕ್ರೋಧಾದಿಗಳು ಜೈಸಿಹ್ಯರು ತಾಮಸಬಿಟ್ಟಿಹರು ಭೂಮಿ ಮೋಹಾದಿಗಳನಳಿದಿಹ್ಯರು ಸ್ವಾಮಿನ ಭಜಿಸುವರು 2 ಕ್ಲೇಶಪಂಚಕದಿಂದುಳಿದಿಹ್ಯರು ಮೋಸಕೆ ಒಳಪಡರು ಅಶಪಾಶಗಳೆಲ್ಲ ತುಳಿದಿಹ್ಯರು ವಾಸನೆ ತೊಳೆದಿಹ್ಯರು 3 ಮೆಚ್ಚದೆ ಸಂಸಾರ ತುಚ್ಛೀಕರಿಸಿಹ್ಯರು ಎಚ್ಚರಗೊಂಡಿಹ್ಯರು ಅಚ್ಚುತಾನಂತನೆ ಗತಿಯೆಂಬುವರು ಬಚ್ಚಿಟ್ಟು ನೆನೆಯುವರು 4 ಹರಿಯೆ ಪರದೈವವೆಂದರಿತಿಹ್ಯರು ಹರಿಯ್ಹೊರತಿಲ್ಲೆಂಬುವರು ಸರುವ ಜಗಭರಿತನೆಂದವರು ಸಿರಿರಾಮನ್ನ ತಿಳಿದಿಹ್ಯರು 5
--------------
ರಾಮದಾಸರು