ಒಟ್ಟು 3977 ಕಡೆಗಳಲ್ಲಿ , 126 ದಾಸರು , 2593 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿಕುಕೊಳ್ಳಿರೈಯ್ಯಾ ನೀವು ಹರಿಯ ನಾಮಾವೃತ ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ ಧ್ರುವ ಒಳ್ಳೆಒಳ್ಳೆವರು ಬಂದು ಕೇಳಿರೊ ನೀವಿನ್ನು ತಿಳದುಕೊಳ್ಳಿ ಇದಕೆ ಬೀಳುವದಿಲ್ಲಾ ಹಣಹೊನ್ನು ಉಳ್ಳ ಬುದ್ಧಿಯಿಂದ ನೀವು ತೆರೆದುನೋಡಿ ಕಣ್ಣು ಕೊಳಲರಿಯದವನ ಬಾಯಾಗ ಬೀಳುದು ಮಣ್ಣು 1 ಬ್ರಹ್ಮಸುಖ ಇದೇ ಇದೇ ನೋಡಿರೋ ಸಾಕ್ಷಾತ ತುಂಬಿ ತುಳಕುತ್ತ ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ ನೇಮದಿಂದ ಕೊಳ್ಳಲಿಕ್ಕೆ ದೋರುದು ಸ್ವಹಿತ 2 ಇಹಪರ ನಾರ್ಥಕಿದೆ ಕೇಳಿರೋ ನೀವೆಲ್ಲ ದೇಹ ಅಭಿಮಾನಿಗಿದು ಸಾದ್ಯವಾಗುವುದಿಲ್ಲ ಸೋಹ್ಯವರಿತು ಸೂರೆಗೊಂಡು ಮಹಿಮ ತಾನೆ ಬಲ್ಲಗುಹ್ಯವಾಕ್ಯ ತಿಳಿದುನೋಡಿ ಮಹಿಪತಿ ಸೊಲ್ಲಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅರಿತು ಕೊಳ್ಳಿರೊ ಬ್ಯಾಗ ಹರಿಯ ನಾಮಮೃತ ದೊರಕುವದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲಾ ಧ್ರುವ ಗುರುಕರುಣ ಕೃಪೆಯಿಂದ ಪರಮ ದಿವ್ಯಾಮೃತವು ಸುರಿಸುರಿದು ಚಪ್ದರಿಸು ಸೂರ್ಯಾಡಿ ಸಾರಸವ 1 ಅನುದಿನ ಸೇವಿಸುವ ಅನುಭವಿಗಳೂಟ ಏನೆಂದು ಸುರಲಿ ನಾ ಆನಂದೋಬ್ರಹ್ಮವಾ 2 ಮಾನವ ಜನ್ಮ ಚಂದ ಮಾಡಿಕೊಳ್ಳಿರೊ ಬಂದ ಕೈಯಲಿ ಬ್ಯಾಗ 3 ಆಲಸ್ಯ ಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ ಸುಲಲಿತವಾಗಿಹುದು ತಿಳಿದುಕೊಂಬವರಿಗೆ 4 ಇರಳ್ಹಗಲ ಪೂರ್ಣ ಸುರವುತಿಹ ಅಮೃತ ತರಳ ಮಹಿಪತಿ ಪ್ರಾಣ ದೊರೆವ ಸಂಜೀವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅರಿಯಾರೊ ಅಂದಿಗಂದಿಗನ್ಯ - ಈ ಧರೆಯೊಳಿವರ ಮಹಿಮೆ ಘನ್ನ ಪ ಮರುತಾವೇಶಯುತ - ಉರಗಾಂಶರನ್ನ ಅ.ಪ ಪ್ರಲ್ಹಾದ ಲಕ್ಷ್ಮಣ ಬಾಹ್ಲೀಕÀ ವ್ಯಾಸನು ಇಲ್ಲೀಗ ರಾಘವೇಂದ್ರ ಉಲ್ಲಾಸ ಬಡುವನು 1 ಇನ್ನೂರ ನಾಲ್ವತ್ತು ಮುನ್ನೀಗ ಪೋದದ್ದು ನನ್ನುರ ಅರವತ್ತು ಇನ್ನು ಉಳಿದಿಹದು 2 ಎಲ್ಲೀ ನೋಡಲಿವರಿಲ್ಲದ ಸ್ಥಳವಿಲ್ಲ ಬಲ್ಲಾ ಭಕುತಗೆ - ಅಲ್ಲಲ್ಲೆ ತೋರುವದು 3 ಖುಲ್ಲ ನರರಿಗೆ - ಎಲ್ಲೆಲ್ಲಿ ಇಲ್ಲವೊ ಸಲ್ಲೋದು ನಿಶ್ಚಯ - ಸುಳ್ಳಲ್ಲ ಈ ಮಾತು 4 ದುಷ್ಟ ಜನರಿಗೆ ಇಷ್ಟಾರ್ಥ ಕೊಡುವೊನೊಮ್ಮೆ ಶಿಷ್ಟಾ ಜನರಿಗ ಭೀಷ್ಠಾವ ಕೊಡುವದು 5 ಇವರ ಪೂಜಿಪ ಜನ - ದಿವಿಜರು ನಿಶ್ಚಯ ಭುವನದೊಳಗೆ ಇನ್ನು ಇವರಿಗೆ ಸರಿಯುಂಟೆ 6 ಇವರನ ಒಲಿಸಲು ಪವನಾನು ಒಲಿವನು ಮಾಧವ ತಾನೆÀ ಒಲಿವÀನು 7 ಅಮಿತ ಮಹಿಮರೆಂದು ಪ್ರಮಿತರು ಪೇಳೋರು ಸುಮತಿಗಳ ಮನಕೆ ಗಮಿಸಿ ತಿಳಿಸುವದು 8 ದಾತಾ ಗುರು ಜಗನ್ನಾಥಾ ವಿಠಲ ಬಹು ಪ್ರೀತಿಯಿಂದಲಿ ಇವರ ಖ್ಯಾತಿಯ ಮಾಡೊದು 9
--------------
ಗುರುಜಗನ್ನಾಥದಾಸರು
ಅರುಕ್ಯುಳ್ಳ ಗುರುಪಾದವಾಶ್ರೈಸೊ ಎನ್ನ ಮನವೆ ಎgವಾಗ್ಯನುಭವ ಸುರಕಿ ಕೊಳ್ಳೊ ಧ್ರುವ ಮರಹುಮರದೀಡ್ಯಾಡಿ ಅರಹುವಿನೊಳರಿತು ಗೂಡಿ ಕುರುಹ ಗುರುತುಮಾಡಿ ಸ್ಥಿರವು ಕೂಡಿ 1 ತಿರಹು ಮರ್ಹವಿನ ಖೂನ ಅರಹು ಮರ್ಹವಿನ ಸ್ಥಾನ ಇರಹು ಆಗೀಹ್ಯ ಘನ ಬೆರಿಯೋ ಧ್ಯಾನಾ 2 ಜೀವ ಶಿವರಸಂದು ಠಾವಮಾಡಲು ಬಂದು ಭವಕ ಬೀಳುವನೆಂದು ಭಾವಿಕನೆಂದು 3 ಅಗ್ರಗುರು ಸುವಿದ್ಯ ಶೀಘ್ರಸಾಧ್ಯ 4 ಕೀಲು ತಿಳಿದರೆ ಸಾಕು ಜಾಲವ್ಯಾತಕೆ ಬೇಕು ಮೂಲಗುರುಪಾದ ಮಹಿಪತಿ ನೀ ಸೋಂಕು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು ಜ್ಞಾನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವಜ್ಞಾನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಅಲ್ಪದೇಹವು ಹುಟ್ಟಿ ಮಾಯ ಕಲ್ಪನೆಗೊಳಗಾಗಿ ಸ್ವಲ್ಪವನ (ಸ್ವಲ್ಪವು) ಶ್ರೀಹರಿ ನಾಮಸ್ಮರಿಸಿ ಸದ್ಗತಿ ಕಾಣುವ ಸಾಧನೆ ಇಲ್ಲದ್ಹೋಯಿತು ಪ ಜನುಮ ಜನುಮದಲಿ ಸಂಸಾರ ಜಲಧಿಯೊಳಗೆ ಮುಳುಗಿ ಘನ ಪುರುಷನ ಮಹಿಮೆ ಕಾಣದೆ ಗಾಢಾಂಧ ಕಾರದಲಿ ದಿನಗಳ ಕಳೆದು ದೇವರ ಭಜಿಸದೆ ಜನುಮಗಳಳಿದೂ ಚರಿಸುವದಾಯಿತು 1 ಭ್ರಾಂತಿಯ ಘನವಾಗಿ ಪ್ರಪಂಚ ಬದ್ಧನಾಗಿ ಕಾಂತೇರ ಮೋಹಕ್ಕೆ ಸಿಲುಕಿ ಕಾಲವುಕಳೆದಿನ್ನು ಚಿಂತನೆ ಮಾಡದೆ ಮುಕ್ತಿ ಸೇರದಂತಾಯಿತು 2 ಪನ್ನಗಶಯನನ್ನಾ ಪರಿಪರಿ ಭಕುತಿಲಿ ಮನದಿಂದ ವರ್ಣಿಸಿ ಜಿವ್ಹದಲಿ ಹರಿಪದವನ್ನೇ ಕಾಣದಲೆ ಇನ್ನು ಶ್ರೀ ವ್ಯರ್ಥವು ಹೋಯಿತು 3
--------------
ಹೆನ್ನೆರಂಗದಾಸರು
ಅಲ್ಲಿಂದಲ್ಲೆದೆಮಾ ಅಲ್ಲಿಂದಲ್ಲೆದೆ ಘನಗುರುಮಹಿಮೆ ಧ್ರುವ ಅಲ್ಲಿಂದಲ್ಲಿದ್ದು ತಿಳಿಯದು ಲೋಕಾ 1 ಅಲ್ಯಾವನಾದರ ಅಲ್ಲೆವೇ ತಿಳಿದಾ 2 ಬಲ್ಲಮಹಿಮರ ಬಲಗೊಂಡು ಕೇಳಿ 3 ಒಳಗಲ್ಲ ಹೊರಗಲ್ಲ ಒಳಿತಾಗಿ ಕೇಳಿ4 ಕೆಳಗಲ್ಲ ಮ್ಯಾಲಲ್ಲ ತಿಳಿದುಕೊಂಡು ನೋಡಿ 5 ಹಿಂದಲ್ಲ ಮುಂದಲ್ಲ ಸಂಧಿಸಿ ನೋಡಿ 6 ಎಡಕಲ್ಲ ಬಲಕಲ್ಲ ಪಡಕೊಂಡು ನೋಡಿ 7 ದೂರಲ್ಲ ಸಾರ್ಯಲ್ಲ ಅರಿತಿನ್ನು ನೋಡಿ 8 ಬೆಡಗಿನ ಮಾತಲ್ಲ ಕಡಗಂಡು ನೋಡಿ 9 ಸ್ಥೂಲಲ್ಲ ಸೂಕ್ಷ್ಮಲ್ಲ ಭೇದಿಸಿ ನೋಡಿ 10 ಮನದಿರಗಿ ಉನ್ಮನವಾಗಲಿಕ್ಕೆ 11 ಕಣ್ಣದಿರಗಿ ಕಣ್ಣ ನೋಡಲಿಕ್ಕೆ 12 ಎಚ್ಚತ್ತು ಅಲ್ಲಿವೆ ಯೋಚಿಸಲಿಕ್ಕೆ 13 ಅರವಿನ ಮುಂದ ಮರವಿನ ಹಿಂದ 14 ಜಾಗ್ರ ನಿದ್ರಿ ಮಧ್ಯ ಅರುವಾಗಲಿಕ್ಕೆ 15 ಗುರುಕೃಪೆಯಿಂದಲಿ ಗುರುತಿಟ್ಟು ನೋಡಿ16 ಸಾಧಕನಾದರ ಸಾಧಿಸಬಹುದಿದು 17 ಭೇದಿಸೇನೆಂದರೆ ಭೇದಿಸಬಹುದಿದು 18 ಸೂರ್ಯಾಡೇನಂದರ ಸೂರ್ಯಾಡಬಹುದಿದು 19 ಖೂನಹೇಳಿದ ಮ್ಯಾಲ ಙÁ್ಞನೇನಬಹುದು 20 ಹೆಜ್ಜೆ ಹೇಳಿದ ಮ್ಯಾಲ ಸಜ್ಜನ ಅವನೀಗ 21 ಚೆನ್ನಾಗ್ಹೇಳಿದ ಮ್ಯಾಲ ಮನ್ನಿಸಬಹುದಿದು 22 ಗುರುತಹೇಳಿದ ಮ್ಯಾಲ ಗುರುಸ್ವರೂಪ ತಾಂ 23 ಸರಗಹೇಳಿದ ಮ್ಯಾಲ ಶರಣೆಂಬುದಾತಗ 24 ಅಲ್ಲಿಂದಲ್ಲೆಂಬುದನುಭವಾಗಬೇಕು 25 ಅನುಭವದೋರಿದ ಘನಗುರು ನಮ್ಮಯ್ಯ 26 ಲೇಸು ಲೇಸು ನಮ್ಮ ಭಾಸ್ಕರ ಗುರುದಯ 27 ಭಾಸುತ ಭಾಸ್ಕರಕೋಟಿ ತೇಜಾದನು 28 ದಾಸಮಹಿಪತಿಗೆ ಲೇಸು ಲೇಸಾಯಿತು 29
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಲ್ಲೆ ನೋಡಿದರೀಹ್ಯ ಇಲ್ಲೆ ನೋಡಿದರೀಹ್ಯ ಎಲ್ಲಾ ಕಡೆಯಲ್ಲೇಕೋಮಯವೋ 1 ಸುಲ್ಲಭವಾಗಿ ನಮ್ಮ ಫುಲ್ಲಲೋಚನ ಕೃಷ್ಣ ಬಲ್ಲ ಮಹಿಮರಿಗೆ ಭಾಸುವನು 2 ಭೇದಿಸಿ ನೋಡಿರಯ್ಯ ಸಾಧು ಜನರೆಲ್ಲ ಮೇದಿನಿಯೊಳು ಘನತುಂಬಿಹುದು 3 ಕಣ್ಣಾರೆ ಕಂಡೆವಯ್ಯ ಪುಣ್ಯಚರಣಮಹಿಮೆ ಸಣ್ಣ ದೊಡ್ಡದರೊಳು ಸಾಕ್ಷಾತವೊ 4 ನಂಬಿನಡಿಯಲಿಕೆ ಅಂಜುಜಾಕ್ಷನ ಪಾದ ಗುಂಭಗುರುತವಾಗಿದೋರುವದು 5 ಗುರುಕೃಪೆಯಿಂದ ನೋಡಿ ಹರುಷವಾಯಿತು ಜೀವ ಬೆರತುಕೂಡಿತು ಸಮರಸವೊ 6 ಬೆರೆದು ಕೊಡುವದು ಹರಿಯ ಕಟಾಕ್ಷವಿದು ಮರುಳ ಮಂಕಗಳಿದು ಅರಿಯಾವೊ 7 ವದಗಿ ಬಂದತಿದರಿಟ್ಟು ಸದಮಲಬ್ರಹ್ಮಸುಖಾ ಮೊದಲಿನ ಪುಣ್ಯ ಪೂರ್ವಾರ್ಜಿತವೊ 8 ಧನ್ಯವಾಯಿತು ಮೂಢ ಮಹಿಪತಿ ಪ್ರಾಣಜೀವ ಮನವು ಆಯಿತು ಉನ್ಮನವೊ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಲ್ಲೇನಿಲ್ಲೇನು ಮತ್ತಿಲ್ಲೇನು ಪ ಅಲ್ಲೇ ನಿಲ್ಲೇನು | ಹರಿರೂಪಗಾಣದೇ ಡಂಭದಿ ತಿರುಗಿದ | ಅಲ್ಲೇ ನಿಲ್ಲೇನು 1 ಕರ್ಮಧರ್ಮವ ಮಾಡಿ ಸ್ವರ್ಗವ ಪಡೆದನು | ಅಲ್ಲೇ ನಿಲ್ಲೇನು| ಮರ್ಮವ ಗಾಣದ ವಿಷಯದ ಸಂಭ್ರಮ | ಅಲ್ಲೇ ನಿಲ್ಲೇನು 2 ಅಲ್ಲೇನಿಲ್ಲೇನು | ವನಿತೆ ಮಕ್ಕಳ ಬಿಟ್ಟು ಶಿಷ್ಯರ ನೆರಹಿದ | ಅಲ್ಲೇ ನಿಲ್ಲೇನು 3 ಎಲ್ಲ ಶಾಸ್ತ್ರವನೋದಿ ಪ್ರಾಕೃತಹಳಿದನು | ಅಲ್ಲೇ ನಿಲ್ಲೇನು | ಬಲ್ಲವ ನಾನೆಂಬ ಗರ್ವವು ಸೇರಿತು | ಅಲ್ಲೇ ನಿಲ್ಲೇನು 4 ಅಲ್ಲೇ ನಿಲ್ಲೇನು | ಮನದಲೆಚ್ಚರವಿಲ್ಲ ಕವಾಟಹೊಕ್ಕನು ಅಲ್ಲೇ ನಿಲ್ಲೇನು 5 ಮಹಿಪತಿ ನಂದನ ಸಾರಿದ ಸ್ವಹಿತ ಅಲ್ಲೇ ನಿಲ್ಲೇನು | ಶ್ರೀಹರಿ ನಾಮದ ನಂಬುಗೆ ಇರಬೇಕು | ಅಲ್ಲೇ ನಿಲ್ಲೇನು 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಲ್ಲೇನು ಇಲ್ಲವೋ ಪ ಸಿರಿಯು ಇರುವದೆಂದು ನೀನು ಗರುವದಿಂದ ಹರಿಯ ಮರೆತು ಉರುಳಿ ಪೋಪ ತನುವ ಪೋಷಿಸುತಲಿ ಬಹುತೋಷಿಸೂತಲಿ 1 ಮತಿಯ ತೊರೆದು ಪತಿತನಾಗಿ ಬಾಳ ಬೇಡೆಲೊ ಗತಿತೋರರವರೆಲೊ 2 ಧರಣಿಗೊಡೆಯನಾದ ನಿನ್ನ ಭರದಿ ಯಮನ ಚರರು ಕರೆಯೆ ನೀ ತಿಳಿದು ನೋಡಲೆ 3 ಬನ್ನ ಬಿಟ್ಟು ಲಜ್ಜೆ ಬಿಟ್ಟು ಬಲು ನೀಚನಾದೆಲೊ 4 ಮಂದಮತಿಯೆ ಕೇಳು ನೀನು ಮುಂದೆ ಹಿರಿದು ಬಳಲಬೇಡ ಪೊಂದಿ ಭಜಿಸೊ ರಂಗೇಶವಿಠಲನ ಸುಖವೀವ ದೊರೆಯನ 5
--------------
ರಂಗೇಶವಿಠಲದಾಸರು
ಅವತಾರತ್ರಯ ಅಕ್ಷಯ ನೀನಾಮೃತಂ ಕುಕ್ಷಿಯೊಳಗೆ ಪೂರ್ಣವಾಗಿಹ ಅಕ್ಷಯಾಂತಕನೀಕ್ಷಿಪುದು ಸುಜನರು ಪ ಇಕ್ವಾಕು ಕುಲಾಧ್ಯಕ್ಷ ರಾಘವನಾ ಶಿಕ್ಷೆಯಲಿ ಪ್ರಾಣ ರಕ್ಷಕನೆÉಂದರುಹಲು ಧರೆಗೆ ತಕ್ಷಣದಿ ಮರುದ್ವಾಕ್ಷ ಮರಕಟ ಕೃತಿಯ ತೋರಿ ಜಲಧಿಯನೆ ಪಾರಿ ರಕ್ಷಕೇಂದ್ರನ ಪುರಸೇರಿ ರಕ್ಕಸಿಯದೆಡೆಯಲಿ ಜನನಿಗೊಂದಿಸಿ ಲಕ್ಷಣದುಂಗುರವ ತೋರಿ ರಕ್ಷಸದಕ್ಷರವನಳಿದಾ 1 ಯದುಕುಲದೊಳುದಯಿಸೆÉ ಹರಿಯು ತದನರಿತು ವಾಯು ಉದಭವಿಸಿ ಭೀಮಾಭಿಧಾನದಿ ಮುದಗೊಳಿಸಲಿಳೆಗೆ ಕುದಿಯುವ ಬಕ ಹಿಡಿಂಬರರಳಿದು ಕೀಚಕನ ಸದೆದು ಅಧಮಕಾರವ ಕುಲವನಳಿದು ವಧಿಸಿzಖಿಲ ಬಲವ ತೋರಿ ಮುದವ ಬೀರಿ ಧರೆಯ ಜನಕೆ ಯಶವ ಗಳಿಸಿದವನ ಇಹಕೆ ಚರಕೆ2 ಗುರುವಾಗವತರಿಸಿ ಧರೆಯ ಸುಜನರು ಕರುಣಾಬ್ಧಿ ಹರಿಯು ಧರೆಯೊಳುಡುಪಿ ಪುರದಿ ಜನಿಸಲಿ ಸುರರಿಗೆ ತಿಳಿಯಲು ಹರಿಯ ಮತವ ಸೃಜಿಸಲಿಳೆಯಲು ತದಾಜ್ಞೆಯ ಕೇಳಲು ಭರದಿ ಮಧ್ವನಾಮ ಪಡೆದು ಹರಿಮತವ ಪಿಡಿಯ ಬೋಧಿಸಲು ನರಸಿಂಹವಿಠಲನ ಸ್ಮರಣೆಯಗೈದು ನರಜನ್ಮ ಸಾರ್ಥಕವು ಪರಮಪದವ ಗೈದು 3
--------------
ನರಸಿಂಹವಿಠಲರು
ಅವತಾರತ್ರಯ ಚರಣ ಸೇವಕರನ್ನು ಪೊರೆದ ಪ್ರಾಣೇಶನ್ನಹರುಷಾದಿ ವಂದಿಸಿ ವರಬೇಡಿರೈ ಪ ಕರುಣ ಸಾಗರ ಕಲ್ಪತರು ಭಕ್ತ ಕುಮುದ ಚಂದಿರನೆನಿಸುತಭೀಷ್ಟ ಸುರಿಸುವ ನೋಡಿರೈ ಅ.ಪ. ಸುದತಿ ಜಾನಕಿಯಾಪದಕೆರಗಿ ಪೇಳಿದ ಮುದದಿ ರಾಮನಹೃದಯ ವಾರುತಿಯಾಮುದ್ರಿಕೆಯ ಸಲಿಸುತ ವದಗಿದಸುರತ ಒಡೆದ ಕೀರುತಿಯಾಪಿಡಿಯಲ್ಕೆ ಕ್ಷಣದೊಳು ಕದನಕಂಠಕನೆನಿಪರಾವಣನೆದುರಿಸಿ ಗರ್ವ ಶಿಕ್ಷಿಸಲುಪುಚ್ಛದಲಿ ಪಟ್ಟಣ ಸುಟ್ಟು ದಹಿಸಿದಸದಯಕಾಮನ ಕಾರ್ಯ ಪೂರ್ತಿಯಾ 1 ದುರುಳ ಹರಣ ಸಂನುತ ಚರಣ ಕಮಲª Àಧರೆಯೊಳಗೆ ಪರಿಪರಿ ಮೆರೆದಾ 2 ಮರಳಿ ಭೂಸುರನು ಮಂದಿರದೊಳು ಜನಿಸಿತಾಗುರು ಮಧ್ವಮುನಿಯೆಂದು ಕರೆಸೀದನುವರವೇದವ್ಯಾಸರಾ ಕರುಣಪಡೆದು ದೇಶ ಸಂಚರಿಸಿದಾನಿಂದಕರ ಧಿಕ್ಕರಿಸಿದಾ ಸೇವಕರನುದ್ಧರಿಸಿದಾಗ್ರಂಥಗಳ ರಚಿಸಿ ಭರದಿ ಕಲಿ ಸಂಕರನೋಳ್ವಾದಿಸಿದಾಗುರು ಇಂದಿರೇಶನೆ ಧರೆಗೆ ಪಿತನೆಂದರುಹಿ ಸಾಧಿಸಿದಾಕರಕಂಜಜಾತದಿ ಕರಕೆ ಶಾಸ್ತ್ರದರಿವ ಬೋಧಿಸಿದಾನವರತ್ನ ಭಾಸಿತ ಕರಣಕುಂಡಲಮಕುಟ ಸಕಲಾಭರಣ ಭೂಷಿತಸುಮನಸೋತ್ತುಮ ಮುನಿಪ ಮಾನಂದಾತ್ಮಬುಜಗುಣದರಸೆ ಘನಸುಂದರ ಸುಖಪ್ರದ 3
--------------
ಗುರುಇಂದಿರೇಶರು
ಅವತಾರತ್ರಯ ಮೂರು ರೂಪವ ತೋರೋ ಮಾರ್ಜಿವದೊಡೆಯಾ ಪ. ಸಾರುವೆನು ಶರಣೆಂದು ಚಾರುತವ ಚರಣಕ್ಕೆ ಅ.ಪ.ಅಂಜನೆಯಲುದ್ಭವಿಸಿ ಸಂಜೀವನವ ತಂದುಕಂಜನಾಭನ ದಯದಿಅಂಜದತಿ ಕೆಂಜಡೆಯ ಪಿತಗಂಜಲಿ ಮುಗಿಯುವೆನು 1 ವಾರಿಧಿಯ ನೆರೆದಾಂಟಿ ನಾರಿಗುಂಗುರವಿತ್ತುಕ್ರೂರ ಕೀಚಕನ ಸಂಹಾರವನೆ ಮಾಡುತಲಿವೀರ ಬದರಿಲಿ ಪೋಗಿ ಸಾರಶಾಸ್ತ್ರವ ತಿಳಿದಧೀರ ಮಧ್ವಾಚಾರ್ಯ ಭೀಮ ಕರುಣವ ತೋರೋ 2 ಎರಡೈದು ಶಿರದವನ ಪುರವನೇ ನೀನುರುಹಿದುರುಳ ದುರ್ಯೋಧನನ ಧುರದಿ ಗೆಲಿದುವರ ಉಡುಪಿ ಕ್ಷೇತ್ರದಲಿಸಿರಿಯ ರಮಣಾ ತಂದೆ ವರದ ವಿಠ್ಠಲರೇಯಾ3
--------------
ಸಿರಿಗುರುತಂದೆವರದವಿಠಲರು
ಅವನೆ ಧನ್ಯನೆಲಾ ಜಗದೊಳು ಇವನೇ ಮಾನ್ಯನೆಲಾಪ ಆವ ಪರಿಯಲಿಂದಾದರು ತನ್ನಯ ಭಾವ ಶುದ್ಧಿಯಲಿ ಭಗವತ್ಪರನಾದವನೆ ಧನ್ಯ 1 ಆತ್ಮೇಂತರ ಸಂಸ್ಕøತಿಯೊಳಿದ್ದು ಸ್ವಾತ್ಮಲಾಭ ಸಿದ್ಧಿಯ ಸಾಧಿಸಿಕೊಂಡವನೆ 2 ಶ್ರೀದವಿಠಲನ ಸಾಕ್ಷಾತ್ಕರಿಸಿ ಸೇವ್ಯ ಚಿತ್ಸುಖಮಯವಾದುದವನೇ ಧನ್ಯನೆಲಾ 3
--------------
ಶ್ರೀದವಿಠಲರು
ಅವನೆವೆ ಧನ್ಯ ನೋಡಿ ಅವನ ದರುಶನ ಮಾಡಿ ಪ. ಹರಿಧ್ಯಾನ ಹೃದಯದಲ್ಲಿ | ಹರಿನಾಮ ಜಿವ್ಹದಲಿ | ಹರಿಕಥೆ ಶ್ರವಣದಲ್ಲಿ| ಹರಿಯಾ ಸೇವೆ ಅಂಗದಲ್ಲಿ1 ಹರಿಭಕ್ತಿಯೊಳು ಕೂಡಿ | ಹರಿ ಕೀರ್ತನೆಯ ಮಾಡಿ | ಹರಿ ಪ್ರೇಮ ತುಳಕಾಡಿ | ಹೊರಳುವ ನಲಿದಾಡಿ 2 ತಂದೆ ಮಹಿಪತಿ ದಯಾ ದಿಂದ ಪಡೆದು ವಿಜಯಾ ಹೊಂದುವ ತಿಳಿದು ನೆಲಿಯಾ ಛಂದವಾದಾ ಪುಣ್ಯಕಾಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು