ಪುಣ್ಯೋದವೇ ಈ ಪುಣ್ಯಭೂಮಿಯೊಳು
ಪನ್ನಂಗಶಯನ ಸನ್ನುತಿಪ ದಾಸರಿಗೆ ಪ
ಕಡುಸಿರಿವಂತರಾದೊಡೆ ಬಡವರ ಬಾಯ್ಬಡಿಯದೆ
ಕೊಡುವಿಡುವ ಕೆಡದತಿ ಪುಣ್ಯ
ಬಡತನವಿರ್ದಡೆ ಎಡೆಬಿಡದೆ ಒಡಲೊಳು
ಜಡಜಾಕ್ಷನಡಿಧ್ಯಾನ ಹಿಡಿದ ಮಹಪುಣ್ಯ 1
ಮಡದಿಯರೊಂದಿಗೆ ಬಿಡದೆ ಸಂಸಾರಗೈಯೆ
ದೃಢಯುತರು ಮನೆಯೊಳಗಡಿಯಿಡುವ ಪುಣ್ಯ
ಸಡಗರದಿ ಮಕ್ಕಳನ್ಹಡೆದು ಮೋಹದಿ ಜಗ
ದೊಡೆಯನ್ಹೆಸರಿಟ್ಟು ನುಡಿಯುವ ಪುಣ್ಯ 2
ತಿರುಕರಾಗಿರ್ದಡೆ ತಿರಿದು ತಂದನ್ನವನು
ಹರಿಯಪ್ರಸಾದವೆಂದು ತಿರಿದುಣುವ ಪುಣ್ಯ
ಪರಮಪುರುಷನ ಚರಣ ನಿರುತ ಸ್ಮರಿಪ ಪುಣ್ಯ 3
ಹಿಂದೆ ಮುಂದೆ ತಮಗೆ ನಿಂದೆಯಾಡಲು ಆ
ನಂದದಿ ಹಿಗ್ಗದ ಕುಂದದ ಪುಣ್ಯ
ಮಂದಿಮಕ್ಕಳು ಬಿಡದ್ಹೊಂದಿಸಲದು ಹರಿ
ಗೆಂದು ಅರ್ಪಿಸಿ ಮನಸೊಂದೆಮಾಡಿದ ಪುಣ್ಯ 4
ನೀರಿನೊಳಿರಲೇನರಣ್ಯದೊಳರಿಲೇನು
ಘೋರತಾಪದಿರಲೇನಪಾರಜ್ಞಾನಿಗಳು
ಪಾರಮೋಕ್ಷಕ್ಕಧಿಪ ಧೀರ ಶ್ರೀರಾಮಪಾದ
ವಾರಿಜದೊಳು ಮನ ಸೇರಿಸಿದ ಪುಣ್ಯರಿಗೆ5