ಒಟ್ಟು 7419 ಕಡೆಗಳಲ್ಲಿ , 132 ದಾಸರು , 3991 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಜಗನ್ನಾಥದಾಸರ ಪ್ರಾರ್ಥನೆ) ಯಾತಕಿನ್ನನಾಥನೆಂಬುವುದು ಕರುಣಾಳು ಜಗ ನ್ನಾಥದಾಸರ ಸೇರಿಕೊಂಬುವುದು ಪ. ಭೀತಿಕರ ಬಹು ಜನ್ಮಕೃತ ಮಹಾ ಪಾತಕಾದಿಗಳನ್ನು ಭೇದಿಸೆ ಮಾತುಳಾಂತಕನಂಘ್ರಿ ಕಮಲದಿ ನೀತಭಕ್ತಿಯ ನೀಡಿ ಸಲಹುವ ಅ.ಪ . ಘೋರತರ ಸಂಸಾರಪಾರಾವಾರ ದಾಟಿಸುವ ಲಕ್ಷ್ಮೀ ನಿತ್ಯ ಭಾರ ವಹಿಸಿರುವ ಮೂರು ಲೋಕಾಧಾರ ದುರಿತೌಘಾರಿ ಕೃಷ್ಣಕಥಾಮೃತಾಬ್ಧಿಯ ಸಾರ ತೆಗೆದು ಖರಾರಿ ಕರುಣವ ಬೀರಿ ಸುಜನೋದ್ಧಾರ ಮಾಡಿದ 1 ಶ್ರೀ ರಮಾಪತಿ ಸರ್ವ ಸುಗುಣಾಧಾರ ದಯದಿಂದ ಒಲಿಯಲು ಸೇರಿ ಬರುವುದು ಸರ್ವಸಂಪತ್ಸಾರವಾನಂದ ಕಾರುಣಿಕತನದಿಂದಲಿಂತುಪಕಾರ ಮಾಡಿದ ದೀನಜರಿಗೆಧೀರ ಶೇಷಗಿರೀಂದ್ರನಿರವನು ತೋರಿದನು ನಿಜಭಕ್ತ ಬುಧರಿಗೆ 2
--------------
ತುಪಾಕಿ ವೆಂಕಟರಮಣಾಚಾರ್ಯ
(ಧ್ರುವನು ಜನಿಸಿದಾಗಿನ ಜೋಗುಳ ಹಾಡು) ಮುತ್ತಿನ ಸರಪಣಿ ಹಸ್ತದಿ ಪಿಡಿದು ಮತ್ತೈದೆಯರೆಲ್ಲ ಸುತ್ತಲೂ ನೆರೆದು ಪುತ್ರರತ್ನವ ತಂದು ತೊಟ್ಟಿಲೊಳಿಟ್ಟು ಮತ್ತಕಾಶಿನಿಯರು ತೂಗಿದರೊಟ್ಟು ಜೋ ಜೋ 1 ಮಾರನ ಹೋಲ್ವ ಶೃಂಗಾರನೆ ಜೋ ಜೋ ಧಾರುಣಿಪತಿ ಸುಕುಮಾರನೆ ಜೋಜೋ ಸಾರಸನೇತ್ರಪವಿತ್ರನೆ ಜೋ ಜೋ ಚಾರುಮೋಹನ ಶುಭಗಾತ್ರನೆ ಜೋಜೋ ಜೋಜೋ 2 ಜೋ ಜೋ ಮಕ್ಕಳ ಕಂಠಾಭರಣ ಜೋ ಜೋ ಸುರತರುಪಲ್ಲವಚರಣ ಜೋ ಜೋ ಸಜ್ಜನ ಹೃದಯಾನಂದ ಜೋ ಜೋ ಉತ್ತಾನಪಾದನ ಕಂದ ಜೋ ಜೋ3 ತೃವಿ ತೃವಿ ಲಕ್ಷ್ಮೀನಾರಾಯಣ ಶರಣ ತೃವಿ ತೃವಿ ಪರಿಪೂರ್ಣ ಸದ್ಗುಣಾಭರಣ ತೃವಿ ತೃವಿ ಸುಸ್ಮಿತವದನವಿಲಾಸ ತೃವಿ ತೃವಿ ಚಂದಿರಕಿರಣ ಪ್ರಕಾಶ ಜೋ ಜೋ 4
--------------
ತುಪಾಕಿ ವೆಂಕಟರಮಣಾಚಾರ್ಯ
(ನಾಟಿ ಅಗ್ರಹಾರದ ಶ್ರೀರಾಮ) ಕಂಡಿರೆ ನಾಟಿ ಕೋದಂಡ ರಾಮನ ಪದ್ಮ- ಜಾಂಡದಿ ನಾಯಕನಾ ಕಟಕ ಕಿರೀಟಧಾರಿ ಮಾ- ರ್ತಾಂಡ ಕೋಟಿಪ್ರಭನಾ ಪ. ಭೂತಳದೊಳಗೆ ವಿಖ್ಯಾತರಾಗಿಹ ರಘು- ನಾಥ ಒಡೆಯರ ಮೇಲೆ ಪ್ರೀತಿಯಿಂದಲಿ ಬಂದ ಪವಮಾನವಂದಿತ- ನೀತನು ನಿಜ ಜನರ ಬೀತಿಯ ಬಿಡಿಸುವೆನೆಂದು ಬಿಲ್ಲಂಬುಗ- ಳಾಂತು ಕರಾಬ್ಜದಲಿ ಪಾತಕಗಳ ಪರಿಹಾರಗೈದರಿಗಳ ಘಾತಿಸುವನು ಜವದಿ 1 ಕಡು ಪರಾಕ್ರಮಿ ವಾಯಿನು ಧಿಕ್ಕರಿಸಿ ಕೈ ಪಿಡಿದಂತೆ ರವಿಜನಸು ಬಡವರ ಭಕ್ತಿಯ ದೃಢಕೆ ಮೆಚ್ಚುತ ಜಗ- ದೊಡೆಯನು ಸಂತಸದಿ ಒಡೆಯ ನೀ ಸಲಹೆಂದು ವಂದಿಸಿ ತುಲಸಿಯ ಕೊಡುವನು ಕರುಣ ಕಟಾಕ್ಷದಿ ಪುರುಷಾರ್ಥ ತಡೆಯದೆ ತವಕದಲಿ 2 ಎರಡು ಭಾಗದಿ ಭಕ್ತ ಗರುಡ ಮಾರುತಿಯರ- ನಿರಿಸಿ ಕೊಂಡವನುದಿನದಿ ನಿರವಧಿ ಸೇವೆಯ ಕೈಕೊಂಡು ಜಾನಕಿ- ವರನಿಹನೀಪುರದಿ ಸಿರಿವರ ವೆಂಕಟಗಿರಿ ರಾಜನಿವನೆಂದು ನೆರೆ ನಂಬಿ ಸೇವಿಪರಾ ಪರಿಕಿಸಿ ತನ್ನಯ ಚರಣ ಸೇವೆಯನಿತ್ತು ಪೊರೆವನು ಕರುಣಾಕರ 3
--------------
ತುಪಾಕಿ ವೆಂಕಟರಮಣಾಚಾರ್ಯ
(ನಾವೂರ ಅಗ್ರಹಾರದ ಕಟ್ಟೆ ಮುಖ್ಯಪ್ರಾಣ) ಕರವ ಪಿಡಿಯೋ ಜಾಣ ಘಟ್ಯಾಗಿರಲಿ ಕರುಣಾ ದುಷ್ಟ ಭಾವನೆಯನ್ನು ದೂರವೋಡಿಸಿ ಮನೋ- ಭೀಷ್ಟವ ದಯಮಾಡು ದುರಿತಾಬ್ಧಿ ಕಾರಣ ಪ. ಕೋಳಾಲ ಜನರಮೇಲ್ಕರುಣಾ ಕಟಾಕ್ಷಧಿ ಕೋಳಾಲ ಕರಯುಗದಿ ಪಿಡಿದು ಬಂದು ನೀಲ ಮೇಘನ ತೆರದಿ ಶೋಭಿಸುತಾಗ್ರ- ಮಾಲೆಯ ಶಿಖರದಲಿ ರಾಜಿಸುವ ಕೃಷ್ಣನ ಲೀಲೆಗಳಿಗನುಕೂಲನಾಗಿ ಸುಲೋಲ ನೇತ್ರಾವತಿ ಸರಿದ್ವರ ಕ- ಪಿಲದೊಳು ಪುಟ್ಟಾಲಯದೊಳನುಗಾಲ ನಿಂತ ಕೃಪಾಲವಾಲಾ 1 ಪ್ರಾಚೀನ ಯುಗದಿ ಮಾರೀಚ ವೈರಿಯ ಸೇರಿ ನೀಚ ರಕ್ಕಸರ ಗೆದ್ದೆ ದ್ವಾಪರದಲ್ಲಿ ಕೀಚಕ ಕುಲವ ಗೆದ್ದೆ ಕ್ಷಮೆಯೊಳು ತಿದ್ದೆ ಸೂಚಿಸಿದ ದೇವೋತ್ತಮರ ಬಲು ಸೂಚನೆಯ ಕೈಗೊಂಡು ಕಲಿಮಲ ಮೋಚನೆಯಗೊಳಿಸಿಲ್ಲಿ ನಿಂದು ನಿ- ರೋಚನಾತ್ಮಜ ವರದನೊಲಿಸುವ 2 ಕಾಯ ವಾಕ್ಕøತಾನಂತಾ ಪರಧಾಮ- ನೇನೊಂದನೆಣಿಸದಿರು ಕೃಪಾಪಾತ್ರ ನಾನೆಂದು ನೆನೆಸುತಿರು ಅಭಿಮಾನ ತೋರು ಪಾದ ಪಂಕಜ ಮಾನಿ ಕರುಣಿಸಹೀಂದ್ರ ಗಿರಿವರ ಶ್ರೀನಿವಾಸನ ಮುಖ್ಯಮಂತ್ರಿಯ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಬಪ್ಪನಾಡ ದುರ್ಗಾಪರಮೇಶ್ವರಿ) ಬಪ್ಪನಾಡ ಭದ್ರಕಾಳಿ ತಪ್ಪು ಕ್ಷಮಿಸಿ ಸಲಹಮ್ಮ ನ- ಮ್ಮಪ್ಪ ಶ್ರೀನಿವಾಸ ದೇವನಪ್ಪುತಾನಂದಾಬ್ಧಿಗಿಳಿದ ಪ. ಸರಸಿಜಾಸನಾದಿ ದೇವ ವರರ ನೀನೆ ಸಲಹುವಿ ದುರುಳ ಜನರ ತರಿದು ಭೂಮಿ ಭರವನೆಲ್ಲ ಇಳುಹುವಿ ಚರಿಯ ತೋರ್ಪಮಾಯೆ ಅಲ್ಯ- ಲ್ಲಿರುವ ಶತ್ರು ಪುಂಜವ ಕತ್ತರಿಪದೇನಾಶ್ಚರ್ಯ ತಾಯೆ 1 ಶಂಬರಾರಿ ಪಿತನಪಾದ ನಂಬಿಕೊಂಡ ರಾತಿಯ ಅಂಬೆ ನಿನ್ನ ಕರುಣದಿಂದ ಸಂಭವಿಸಿದ ಖ್ಯಾತಿಯ ಡಂಬತನದ ಶುಂಭ ನೀಶುಂಭ ದಮನೆ ಶಕ್ತಿ ನಿನ- ಗೆಂಬುದೇನು ದಾಸದಾಸನೆಂಬದರಿತು ಸಲಹು ದೇವಿ 2 ಮೂಢಮತದಿ ಮುಂದೆ ಹೋಗಿ ಮಾಡಿದಂಥ ಕುಂದನು ಪ್ರ- ಹುಡೆ ಕ್ಷಮಿಸಬೇಕೆಂದಿಂದು ಓಡಿ ಬಂದು ನಿಂದೆನು ಮೂಡಲಾದ್ರಿವಾಸನಡಿಯ ಪಾಡುವನೆಂದೆನ್ನನು ಕಾ- ಪಾಡಿ ಕಡೆಹಾಯಿಸುವದೆಂದು ಬೇಡಿಕೊಂಬೆ ಭಯಹರಾಂಬೆ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಬಪ್ಪನಾಡಿನ ಪಂಚದುರ್ಗೆ) ಮಂಗಲಂ ಶ್ರೀಪಂಚದುರ್ಗೆಗೆ ಜಯ ಮಂಗಲಾರತಿಯೆತ್ತಿ ಶ್ರೀಮಹೇಶ್ವರಿಗೆಪ. ಶಂಕರನಂಕಾಲಂಕಾರಿಗೆ ಕುಂಕುಮಬೊಟ್ಟಕಸ್ತೂರಿ ಲಲಾಟೆಗೆ ಪಂಕಜಗಂಧಿ ಶ್ರೀಪಾರ್ವತಿಗೆ1 ಕೋಕಿಲಗಾನೆಗೆ ಕೋಕಪಯೋಜೆಗೆ ಶ್ರೀಕಂಠನರ್ಧಾಂಗಿ ಶ್ರೀಗೌರಿಗೆ ಏಕದಂತನ ಜನನಿಗೆ ಜಗದಂಬೆಗೆ ಲೋಕನಾಯಕಿ ಶ್ರೀಮಹಾಕಾಳಿಗೆ2 ಕಂಜದಳಾಕ್ಷಿಗೆ ಕಲಧೌತಗಾತ್ರೆಗೆ ಕುಂಜರಗಮನೆ ಕಂಧರಜಾತೆಗೆ ಮಂಜೀರನೂಪುರರಣಿತಪದಾಬ್ಜೆಗೆ ನಂಜುಂಡನ ಮನಮಂಜುಳೆಗೆ3 ಅಂಗಜರೂಪೆಗೆ ಮಂಗಲದಾತೆಗೆ ಭೃಂಗಕುಂತಳೆ ಸರ್ವಮಂಗಲೆಗೆ ಬಂಗಾರಮಕುಟೋತ್ತಮಾಂಗದಿ ಧರಿಸಿದ ಸಂಗೀತಲೋಲೆಗೆ ಶರ್ವಾಣಿಗೆ4 ರೂಢಿಗಧಿಕ ಬಪ್ಪನಾಡಿಗೊಡತಿಯಾಗಿ ಮೂಡಿತೋರಿದ ಶ್ರೀಮುಕಾಂಬಿಕೆಗೆ ಕ್ರೋಡಾವತಾರ ಲಕ್ಷ್ಮೀನಾರಾಯಣ ಸೊಸೆ ಬೇಡಿದಿಷ್ಟವನೀವ ಸರ್ವೇಶೆಗೆ5
--------------
ತುಪಾಕಿ ವೆಂಕಟರಮಣಾಚಾರ್ಯ
(ಬಾಗಿಲು ತಡೆ) ಸಾರಸ ನಿಲಯೆ ಸಾಗರ ತನಯೆ ಸಾರೆ ಬಂದೆನು ಈಗ ಬೇಗ ಸಾರಿ ಬಾಗಿಲ ತೆಗೆ ಬೇಗ ಪ. ಸಾರು ಸಾರೆಲೊ ಸಾರಿಕೂಗುವನಾರೊ ಸಾರು ಬಾಗಿಲ ತೆಗೆ ನಾನು ಅ.ಪ. ಏಕಿಂತು ಕೋಪವೆ ಕೋಕಿಲಾರವೆ ನೀಂ ಕಟಾಕ್ಷಿಸು ಎನ್ನ ಮುನ ಸಾಕುಮಾಡುವುದಿದೆನ್ನ 1 ಸಾಕು ಸಾಕಿಂತು ಏಕೆ ಕೂಗುತಿರ್ಪೆ ಕಾಕು ನುಡಿಗಳುಸಲ್ಲ 2 ಪುಂಡರ ತಡೆವುದ ಕಂಡುಂಟು ಜಗದೊಳು ಗಂಡನ ತಡೆವರೆ ಭಾಮೆ ರಾಮೆ ಕಂಡವರೇನೆಂಬರೆ ಭಾಮೆ 3 ಗಂಡನಾರಿಗೆ ಹೆಂಡತಿಯಾರಿಗೆ ಪುಂಡಾಟವಾಡದೆ ಪೋಗು ಸಾಗು ಭಂಡನಾಗಿರ್ಪೆ ಪೋಗು 4 ವಲ್ಲಭೆ ನಿನ್ನೆದೆ ಕಲ್ಲಾಗಿರುವುದೆ ಬಲ್ಲವಳೆಂಬುವುದೆಲ್ಲೆ 5 ಬಲ್ಲೆ ಬಲ್ಲೆನೀ ಚಲ್ಲಾಟಗಳ ಸೊಲ್ಲಿಸದಾರನ್ನು 6 ದಶರಥರಾಮನೆ ಸೀತೆ ಖ್ಯಾತೆ ಪುಸಿಯಲ್ಲವೆಲೆ ಭೀತೆ 7 ನಿಶಿಚರರಿಲ್ಲಿಹರೇನೈ ಜ್ಞಾನಿ ವಿಷಮವರ್ತನವೇನೈ 8 ಅಂಗನೆ ನಿನ್ನ ಮೋಹನಾಂಗನಾದ ಶ್ರೀ ರಂಗ ನಾನೆಲೆ ಚಪ ಲಾಕ್ಷಿ ಲಕ್ಷ್ಮಿ | ಭಂಗಿಸಬೇಡೆನ್ನ ಲಕ್ಷ್ಮಿ 9 ತುಂಗ ವಿಕ್ರಮ ರಘು ರಾಮ ಶ್ಯಾಮ ರಂಗ ಕಾರುಣ್ಯಧಾಮ 10 ಪರಿ ಪೇಳುತೆ ಕೈಪಿಡಿದಳು ತ ನ್ನೋಪನ ವಂದಿಸಿ ರಾಣಿ ರಮಣಿ ಕೋಪರಹಿತೆ ಸುವಾಣಿ 11 ಭೂಪಶೇಷಾದ್ರೀಶನು ಕಾಂತೆಯ ಕೈಪಿಡಿದನು ನಲವೇರೆ ಅರರೆ ತಾಪಸನುತ ನಲವೇರೆ 12
--------------
ನಂಜನಗೂಡು ತಿರುಮಲಾಂಬಾ
(ಬಾಲಕೃಷ್ಣ ವರ್ಣನೆ) ಕಂಸಾರಿ ಕೃಷ್ಣಾ ಕಾಡದಿರೆನ್ನನು ಪ ಹಳ್ಳದ ತಡಿಯಲ್ಲಿ ಮಳಲು ತೋಡಿ ತೋಡಿ ಗೊಲ್ಲಿತೆರೊಡÀನಾಡಿ ಕಲಿತ್ಯೋ ಬೆಡಗಾ ಅಹಿನೇರಿ ಹುಡುಗಾ ಮಾಡಿದಿ ತುಡುಗಾ 1 ನೀರಿಗ್ಹೋಗುವಾಗ ದಾರಿಗಡ್ಡಕಟ್ಟಿ ನಾರಿ ನೀನಾರೆಂದ್ವಿಚಾರಿಸುವೀ ದೂರದಲ್ಲಿರುವಿ ಬದಿಯಲ್ಲಿ ಬರುವಿ ಬೇರೆ ಕರೆವೆ ಈ ಬುದ್ಧಿ ತರವೆ 2 ವರ ಕದರುಂಡಲಗಿ ಹನುಮಯ್ಯನೊಡೆಯನೆ ನಿನಗೆಣೆಯಿಲ್ಲವೊ ವನಜನಾಭಾ ವನಿತೆಯರೆಲ್ಲಾ ಒಲಿಸಿದೆಯಲ್ಲಾ ಮನುಜನಲ್ಲಾ ಮಾಯದ ಗೊಲ್ಲಾ 3
--------------
ಕದರುಂಡಲಗಿ ಹನುಮಯ್ಯ
(ಭೀಮಸೇನ ಪ್ರಾರ್ಥನೆ) ಭೀಮಸೇನ ಸಕಲಸತ್ವಧಾಮ ರಕ್ಷಿಸೆನ್ನ ಬೇಗ ಸಾಮಗಾನ ಲೋಲ ಕೃಷ್ಣ ಪ್ರೇಮರಸಕೆ ಪಾತ್ರನಾದ ಪ. ಮಂಗಲಾಚರಿತ್ರ ನಿನ್ನ ಅಂಗಸಂಗದಿಂದ ಬಹು ತುಂಗ ಗಿರಿಯು ಒಡೆದು ಶತಶೃಂಗವೆನಿಸಿತು ಅಂಗುಲಿ ಪ್ರಹಾರದಿಂದ ಶಿಂಗತತಿಗಳನ್ನು ಬಹಳ ಭಂಗಬಡಿಸಿ ಬಾಲಲೀಲ ರಂಗದಲ್ಲಿ ಬಲುಹ ತೋರ್ಪ 1 ಹಸಿದ ವೇಳೆಯಲ್ಲಿ ಮೆದ್ದ ವಿಷದ ಭಕ್ಷ್ಯ ಜೀರ್ಣಗೊಳಿಸಿ ಉಶನ ಮಂತ್ರದಿಂದ ಹಲ್ಲ ಮಸೆಯುತಾ ಬಂದ ಅಸುರ ವೇಶದಷ್ಟಾಕ್ಷಿಗಳ ಮಶಕದಂತೆ ಬಡಿದು ಕೆಡಹಿ ಕುಶಲದಿಂದ ನಿದ್ರೆಗೈದ ಅಸಮಶಕ್ತಿ ಪೂರ್ಣಮೂರ್ತಿ 2 ನಗಗಳ ಮೇಲೇರುತ್ತ ಹಣ್ಣುಗಳನೊಂದೊಂದಾಗಿ ಕರದಿ ತೆಗೆದು ತಿಂಬ ಕೌರವರನು ನಗುತ ನೋಡುತಾ ನೆಗೆದು ಬೀಳ್ವ ತೆರದಿ ತರುಮೂಲಗಳಾ ತುಳಿದು ಕೆಡಹಿ ದೇವಾ- ಕೊಂಡ 3 ಗೂಗೆಯಂತೆ ನಿನ್ನ ಬಳಿಗೆ ಸಾಗಿ ಬಂದು ಶಕುನಿಮುಖರು ಯೋಗನಿದ್ರೆ ತಿಳಿಯದೆ ಚೆನ್ನಾಗಿ ಬಂಧಿಸಿ ಭಾಗೀರಥಿಯ ಜಲದಿ ದೂಡೆ ವೇಗದಿ ಪಾತಾಳವೈದಿ ನಾಗಕನ್ಯೆರಿತ್ತ ರಸವ ಬೇಗ ಸವಿದು ತಿರುಗಿ ಬಂದ 4 ದುರುಳರಿಂದ ರಚಿತವಾದ ಅರಗಿನ ಮನೆಗೆ ಹೋಗಿ ಕಾಲ ನಿರುತಕಿನಿಸಿಲಿ ಇರುಳಿನಲ್ಲಿ ತಾನೆ ಅಗ್ನಿ ಇರಿಸಿ ಬೇಗಲೆದ್ದು ಸಹೋ ದರರನೆತ್ತಿ ಬಹು ಯೋಜನಕೆ ಸರಿದು ಪೋದ ಶಕ್ತರರಸ 5 ಡೊಂಬಿಮಾಳ್ಪನೆಂದು ಬಹಳ ಡಂಬರದಿಂದಿದಿರಾ ಹಿ- ಕದಂಬ ವೈರಿಯ ಅಂಬರದೊಳಗೈದಿ ವಜ್ರಕಂಬದಂತೆ ಹೊಳವ ಬಹು ಸ್ತಂಭದಿಂದ ಕೆಡಹುತ ಹೈಡಿಂಬನೆಂಬ ಮಗುವ ಪಡೆದ 6 ನಗರ ದೊಳ್ವೈದಿಕರಂತೆ ವಾಸವಾಗಿ ಪೋಕ ಬಕನ ಬಾಧೆಯಿಂದ ಶೋಕಗೊಳುವರ ಸಾಕುವೆನೆಂದೆದ್ದು ನಾನಾ ಶಾಖ ಭಕ್ಷಾನ್ನಗಳ ತಾನೆ ಸ್ವೀಕರಗೊಂಡಸುರನನ್ನು ಸೋಕಿ ಸೀಳಿ ಬಿಸುಟ ದೊರೆಯೆ 7 ವಿಪ್ರ ವೇಷದಿಂದ ದ್ರುಪದಸುತೆಯನೊಲಿಸಿ ಕೃದ್ಧ ನೃಪರ ಗೆದ್ದು ರುಕ್ಮಿಣೀಶ ಕೃಪೆಯಾ ಬಲಕೊಂಡು ಅಪರಿಗಣ್ಯ ಪೌರುಷಕಿಂನುಪಮೆಯಿಲ್ಲವೆಂದು ಸರ್ವ ಖಪತಿವರರು ಪೊಗಳುತಿರಲು ತ್ರಿಪುರವೈರಿಯಂತೆ ಮೆರೆದ 8 ಅಂಧ ನೃಪನ ಮಾತ ಕೇಳಿ ಇಂದ್ರಪ್ರಸ್ಥ ಪುರಕೆ ರಾಜ ನೆಂದು ನಿಂದು ಮಗಧಾದಿಗಳ ನೊಂದೆ ನಿಮಿಷದಿ ಕೊಂದು ರಾಜಸೂಯಮೇಧದಿಂದ ಸಕಲಯಜ್ಞೇಶಗೋ- ಕೊಂಡ 9 ದ್ಯೂತ ನೆವದಿ ಸಕಲ ರಾಜ್ಯ ಸೋತು ವನಕೆ ಪೋಗಿ ಲಕ್ಷ್ಮೀ- ನಾಥ ಕರುಣ ಬಲದಿಂದ ಸುರವ್ರಾತವಡಗಿಸಿ ಭೂತನಾಥನೋರದಿ ಬಹಳ ಖ್ಯಾತ ಕೀಚಕಾದಿಗಳನು ಘಾತಿಸಿ ಗಂಧರ್ವನೆಂದಜ್ಞಾತವಾಸ ಕಳದ ಧೀರ 10 ದುರುಳ ಕೌರವರನು ಗದೆಯ ತಿರುಹಿ ಕೆಡಹಿ ಧರಣಿಭರವ ಸುರಪಸೂನು ಸಹಿತಲ್ಲಿಳುಹಿ ಪರಮ ಹರುಷದಿ ಹರಿಯ ನೇಮದಿಂದ ನಾಗಪುರವನಾಳಿ ವಿಷ್ಣುಭಕ್ತಿ ಸುಜನ ತತಿಯ ಪೊರೆದು ಪದ್ಮಜಾತನಾಹ11 ದುಷ್ಟವೈರಿ ಜನರ ಗೆದ್ದು ಅಷ್ಟ ಭಾಗ್ಯ ಸಹಿತ ದೇಹ ಪುಷ್ಟಿ ಜ್ಞಾನ ದೃಷ್ಟಿಗಳನು ಕೊಟ್ಟು ಕರುಣಿಪಾ ಸೃಷ್ಟಿಗೊಡೆಯ ಸರ್ಪರಾಜ ಬೆಟ್ಟದಲ್ಲಿ ನಿಂದು ಭಕ್ತ- ಭೀಷ್ಟವರದನೊಲಿಪ ತೆರದಿ ಸುಷ್ಠುಪ್ರೇಮವಿಟ್ಟು ಕಾಯೊ 12
--------------
ತುಪಾಕಿ ವೆಂಕಟರಮಣಾಚಾರ್ಯ
(ಮದ್ರಾಸಿನ ತಿರ್ವಳಕೇಣಿ ಪಾರ್ಥಸಾರಥಿ) ಏನು ಮಾಡಲಿನ್ನು ನೀನಲ್ಲದೆ ಯಾದಾರ ಬೇಡಲಿನ್ನು ಪ. ಮಾನಿನಿ ದ್ರೌಪದಿ ಮೊರೆಯಿಡುವುದ ಕೇಳಿ ಸಾರಥಿ ದೇವ ಅ.ಪ. ನೀನಿತ್ತ ಸೌಭಾಗ್ಯದ ಗರ್ವದಿ ಎನ್ನ ಧ್ಯಾನಾದಿಗಳ ಮಾಡದೆ ನಾನಾ ವಿಧದ ದುರ್ಮಾನುವಾದುದರಿಂದ ನೀನೆ ಸದ್ಗತಿಯೆಂದು ಧ್ಯಾನಿಸಿಲ್ಲಿಗೆ ಬಂದೆ 1 ಬಡತನದಿಂದಿರಲು ಸಕಲ ಸುರ- ರೊಡೆಯ ನೀ ಕೈ ಪಿಡಿದು ರೂಢಿ ಮದದಿ ನಿನ್ನನು ಬಿಟ್ಟು ಕಡೆಗೆ ನಿನ್ನಯ ಪಾದದೆಡೆಗೆ ಬಂದೆನು ದೇವ 2 ಪಶ್ಚಿಮ ವಾರಿಧಿಯ ತೀರದಲಾದ ದುಶ್ಚರಿತ್ರೆಯ ತಾಳದೆ ಆಶ್ಚರ್ಯತಮವಾದ ಸಚ್ಚರಿತ್ರನೆ ನಿನ್ನ ನೆಚ್ಚಿ ಬಂದಿಹೆನೊ ವಿಪಶ್ಚಿತರೊಡೆಯನೆ 3 ನಕ್ಷತ್ರಗಳಂದಿಂದಲು ಯೆನ್ನಪರಾಧ- ವಕ್ಷಯವಾಗಿರಲು ಅಕ್ಷರಿ ವಂದ್ಯ ನೀ ಲಕ್ಷ ಬಿಡುವುದೆ ಕ- ಟಾಕ್ಷದಿಂದಲಿ ನೋಡಿ ರಕ್ಷಿಸು ಕರುಣದಿ 4 ಎಷ್ಟು ಕರ್ಮಿಯಾದರು ನಿನ್ನಲಿ ಮನ- ವಿಟ್ಟು ಬಂದಿರುವೆನಲ್ಲ ದುಷ್ಟಮರ್ದನ ಶಿಷ್ಟರಕ್ಷಣ ಭಾಜಕ ಜ- ನೇಷ್ಟದಾಯಕ ಸೃಷ್ಟ್ಯಾದೃಷ್ಟಕರ್ತ 5 ನಟನ ಮಾಡುವ ಬೊಂಬೆಯ ಪೋಲುವ ಯೆನ್ನ ಹಟದಿಂದ ದಣಿಸುವುದೆ ವಟಪತ್ರ ಶಾಯಿ ಧೂರ್ಜಟಿ ವಂದ್ಯ ಅಂಜಲಿ ಪುಟನಾಗಿ ಬೇಡುವೆ ಘಟಿಸೊಭಿಲಷಿತವ 6 ಎಂದಿಗಾದರು ನಿನ್ನಯ ಪಾದಯುಗಾರ- ವಿಂದ ದರ್ಶನವಾಗಲು ಭವ ಸಿಂಧುವ ದಾಟುವೆ- ನೆಂದು ಬಂದಿರುವೆ ಸನಂದನಾದಿ ವಂದ್ಯ 7 ಕೂರ್ಮ ವರಾಹ ನಾರಸಿಂಹ ವಾಮನ ಶ್ರೀ ಭಾರ್ಗವ ರಾಮಕೃಷ್ಣ ಬೌದ್ಧ ಕಲ್ಕಿಯಂಬ ದಿವ್ಯ ನಾಮಗಳನು ಬಿಟ್ಟು ಕಾಮಲಾಲಸನಾಗಿ 8 ಒಂದು ನಿಮಿಷವಾದರು ತತ್ವಾಧಾರ ವಿಂದ ದರ್ಶನ ಮಾಡಲು ಹೊಂದಿದಘಗಳೆಲ್ಲ ಬೆಂದು ಹೋಗುವುದೆಂದಾ- ನಂದತೀರ್ಥಚಾರ್ಯರೆಂದ ನುಡಿಯ ನಂಬಿ 9 ದ್ವೇಷಿ ಮಾನವರ ಮುಂದೆ ನಾನಾ ವಿಧ ಕ್ಲೇಶವ ತಾಳ್ದೆ ಹಿಂದೆ ಘಾಸಿಯಾಗಿ ನಾನಾ ದೇಶ ದಾಟಿ ಬಂದೆ ಮೀಸಲಾದೆ ನಿನ್ನ ದಾಸ ದಾಸ್ಯನೆಂದೆ 10 ಜನರೊಳು ಪ್ರಮಿತನಾಗಿ ಬಾಳಿದ ಮಾನ- ವನು ಮಾನಹೀನನಾಗಿ ತನುವ ಪೊರೆದನತಿ ಘನಕ್ಲೇಶವೆನುತ ಅ- ರ್ಜುನನಿಗೆ ಉಪದೇಶವನು ಪೇಳಿದವ ನೀನೆ 11 ಯುಕ್ತಿ ಒಂದನು ಕಾಣೆನು ದೇಹದಿ ದೃಢ ಶಕ್ತಿಯಿಲ್ಲದವ ನಾನು ಮುಕ್ತಾಶ್ರಯ ಸರ್ವ ಶಕ್ತಿ ನೀನಿಹ ಪರ- ಭುಕ್ತಿ ಮುಕ್ತಿದನೆಂಬ ವಿರಕ್ತಿಯಿಂದಲಿ ಬಂದೆ 12 ಕಾಸೆಲ್ಲ ವ್ಯಯವಾಯಿತು ಎನಗೆ ಪರದೇಶವಾಸವಾಯಿತು ಆಸೆ ಬಿಡದುದರ ಘೋಷಣೆಗಿನ್ನವ- ಕಾಶವೊಂದನು ಕಾಣೆ ಶ್ರೀಶ ನೀನರಿಯೆಯ 13 ನಿಲ್ಲಲಾಶ್ರಯವನು ಕಾಣೆ ಪೋಗುವೆನೆಂದ- ರೆಲ್ಯು ಮಾರ್ಗವನು ಕಾಣೆ ಬಲ್ಲಿದ ವೈರಿಗಳಲ್ಲಿ ತುಂಬಿಹರರಿ- ದಲ್ಲಣ ನೀ ಎನ್ನ ಸೊಲ್ಲ ಲಾಲಿಸು ಕೃಷ್ಣ 14 ಅಶನವಸನ ಕಾಣದೆ ದೇಶವ ಸುತ್ತಿ ಬಸಿದು ಬೆಂಡಾಗಿಹೆನು ಉಶನಾಂiÀರ್i ಶಿಷ್ಯನ ವಶದಿಂದೆತ್ತಿ ಪೃಥ್ವಿಯ ದಶನಾಯಕರಿಗಿತ್ತ ಅಸಮಸಾಹಸ ದೇವ 15 ಮಾಡಿದಪರಾಧಕೆ ಮಾನಹಾನಿ ಮಾಡಿದುದು ಸಾಲದೆ ಬೇಡುವೆ ದೈನ್ಯದಿ ಪಾಡುವೆ ಮಹಿಮೆಯ ರೂಢಿಯೊಳಗೆ ದಯಮಾಡು ಇನ್ನಾದರು 16 ಇನ್ನಾದರೂ ಮನದಿ ಪಶ್ಚಾತ್ತಾಪ ವನ್ನು ತಾಳೊ ದಯದಿ ಕಣ್ಣ ಕಟ್ಟಿ ಕಾಡಿನೊಳು ಬಿಟ್ಟ ತೆರದೊಳಿಂ- ತೆನ್ನನು ಬಳಲಿಪದನ್ಯಾಯವಲ್ಲವೆ 17 ನಷ್ಟವೇನಹುಣನು ಎನ್ನಲಿ ಕ್ರೋಧ ಬಿಟ್ಟು ಬಾಧಿಸುತ್ತಿರಲು ಕೃಷ್ಣ ನೀ ಕರುಣದಿ ಕಷ್ಟ ಬಿಡಿಸಿ ಕಡೆ ಗಿಷ್ಟು ತಾತ್ಸಾರದಿಂದ ಕಷ್ಟಗೊಳಿಸಿದೆ 18 ಇಂದ್ರಾದಿ ಸುರರುಗಳು ಕೆಲವು ಕಾಲ ನೊಂದು ಭಾಗ್ಯವ ಪಡದು ಇಂದಿರೇಶ ನಿನ್ನ ಬಂಧಕ ಶಕ್ತಿಯಾ ನಂದ ತಿಳಿದಂತೆ ಮಂದನಾನರಿವೆನೆ 19 ಆನೆಯ ಭಾರವನು ಹೊರಲು ಸಣ್ಣ ಶ್ವಾನ ಸಹಿಸಲಾಪದೆ ದೀನ ಮಾನವನೆಂದು ಧ್ಯಾನಿಸಿ ಮನದಲಿ ಘನ್ನ ದುಖ್ಖವ ಕಳೆಯಾನಂಥ ಮೂರುತಿ20 ನೀನಿತ್ತ ಮಾನವನು ನೀ ಕಳದುದ ಕಾನು ಮಾಡುವದೇನಯ್ಯ ದಾನವಾರಿ ಸುರಧೇನು ನಿನ್ಡಿಗಳ ಧ್ಯಾನ ಮಾಡುತಲಿ ಸುಮ್ಮಾನದಿಂದಿರುವೆನು 21 ಸಾಕು ಸಾಕು ಮಾಡಿದೆ ಎನ್ನನು ಬಹು ನೀಕರಿಸುತ ದೂಡಿದೆ ಬೇಕಾದರೆ ಭಕ್ತ ನೀ ಕಪಾಲನ ಪ- ರಾಕೆಂಬ ಬಿರುದಿಂದ ಸಾಕುವದುಚಿತವೆ 22 ಅಂಬರೀಷವರದ ಸ್ವಭಕ್ತ ಕು- ಟುಂಬಿಯಂಬ ಬಿರುದ ನಂಬಿದ ಮೇಲೆನಗಿಂಬುದೋರದೆ ವೃಥಾ ಡಂಬರವ್ಯಾಕಿನ್ನು ಶಂಬರಾರಿಯ ಪಿತ 23 ಹಂಸವಾಹನ ಜನಕ ದಾಸಮದ- ಭ್ರಂಶಕನೆಂದನ- ಕ ಸಂಶಯವಿಲ್ಲದೆ ತಿಳಿದೆನು ಮಾತುಳ ಕಂಸ ಮರ್ದನ ವಿಪಾಂಸ ಶೋಭಿತ ದೇವ 24 ತರಳ ಪ್ರಹ್ಲಾದ ಧ್ರುವಾದಿಗಳನೆಲ್ಲ ಪೊರೆದನೆಂಬ ಕಥೆಯ ಹಿರಿಯರು ಪೇಳ್ವರು ಭರವಸೆ ಎನಗಿಲ್ಲ ಸಿರಿನಲ್ಲ ನೀಯೆನ್ನ ಬರಿದೆ ಬಿಟ್ಟದ ಕಂಡು25 ವಿಜಯಸಾರಥಿ ನಿನ್ನಯ ಮೂರ್ತಿಯ ಕಂಡು ಭಜಿಸಿದ ಮೇಲೆನ್ನನು ವಿಜಯ ಪೊಂದಿಸದಿರೆ ತ್ರಿಜಗವು ನಗದೇನೊ ಭುಜಗ ಭೂಷಣ ವಂದ್ಯ ದ್ವಿಜರಾಜ ಗಮನನೆ 26 ಕುಂದಣ ವರ್ಣವಾದ ಕೇತಕಿಯನು ಗಂಧಕೆ ಮರುಳನಾಗಿ ಬಂದು ಕುಸುಮಧೂಳಿಯಿಂದ ಲಂಡನಾದ ತುಂದಿಲೋದರ ಮಿಳಿಂದನಂದದಿ ಸಿಕ್ಕಿ 27 ಬೇಡುವದೇನೆಂದರೆ ನಿನ್ನನು ಧ್ಯಾನ ಮಾಡಿ ಪಾಡುವ ಭಾಗ್ಯವ ನೀಡು ನೀಚರನೆಂದು ಬೇಡದಂದದಿ ಮಾಡು ರೂಢಿಯೊಳಗೆ ದಯಮಾಡು ನೀ ನಿರುಪದಿ 28 ಇನ್ನು ತಾ ತಾಳಲಾರೆ ಕ್ಷಣೆ ಕ್ಷಣೆ ನಿನ್ನ ಪೊಗಳಲಾರೆ ಪನ್ನಗಾಚಲವಾಸ ಪರಮ ಪುರುಷ ಪ್ರ- ಸನ್ನ ವೆಂಕಟೇಶ ಪಾಲಿಸು ಕೃಪೆಯಿಂದ 29
--------------
ತುಪಾಕಿ ವೆಂಕಟರಮಣಾಚಾರ್ಯ
(ಮಹಿಷಿ ಅಶ್ವತ್ಥನಾರಾಯಣ ದೇವರು) ತಪ್ಪಾ ಕ್ಷಮಿಸು ಕಲ್ಪತರುರೂಪ ತವಪಾದ- ಕೊಪ್ಪಿಸಿದೆನು ಯೆನ್ನನು ಅಪ್ಪಳಿಸಖಿಳಾಂತರಾಯವತಿದಯದಿ ತಿ- ಮ್ಮಪ್ಪರಾಜನೆ ನೀನೆಂದರಿತು ಬಂದಿರುವೆನು ಪ. ಮಂಗಲ ಮಹಿಮೆ ಮಾತಂಗ ವರದ ಶುಭ ತುಂಗಾತೀರದಿ ನಿಂದು ತಾರಕನೆಂದು ಭವ ಭಯ ಭಂಗದ ಮಹಿಮನೆಂದರಿತು ಬಂದಿಹೆನಿಂದು ಅಂಗದಾದಿ ದೇವೇಂದ್ರ ಸಂಸ್ತುತ ತುಂಗಬಲ ಹನುಮತ್ಪ್ರತಿಷ್ಠಿತ ಅಂಗುಟಾಗ್ರದೊಳಖಿಳಪಾವನ ಗಂಗೆಯನು ಪಡದಾದಿ ಪುರುಷ 1 ಪಾವಕ ದಿಋಖ(?) ದೇವ ಸತ್ಸುಖಗಣ ಭಾವನ ಭಜಕೇಷ್ಟಸಿದ್ಧಿದನೇ ಮಾವನ ಮಗನೊಳಗುಸುರಿದ ನುಡಿಯನು ಕಾವೆನಿಂದಿರುವಿಲ್ಲಿ ಕರುಣಾವಾರಿಧಿ ಕೃಷ್ಣಾ ಈ ವಸುಂಧರೆಯಲ್ಲಿ ಘಟಿಸುವ ನೋವುಗಳ ಸಂಬಂಧಗೊಳಿಸದೆ ಶ್ರೀವನಿತೆಯೊಡಗೂಡಿ ನಿನ್ನ ಕ- ರಾವಲಂಬನವಿತ್ತು ಕರುಣಿಸು 2 ತ್ರಿವಿಧ ತಾಪಗಳು ಭರಿಸಲಾರದೆ ವಂದು ನೆವನದಿಂದಲಿ ಬಂದು ನುಡಿದೆನಿಂದು ಪವಮಾನವಂದಿತ ಪತಿತ ಪಾವನನೆ ನೀ- ವಹಿಸಿ ರಕ್ಷಿಪುದೆಂದು ಒರೆವೆನು ಗುಣಸಿಂಧು ವಿರಿಂಚಿ ರಮಾ ವರಪ್ರದ ಭಾರ ನಿನ್ನಲಿರಿಸಿದವನನು ತವಕದಲಿ ಕಾಪಾಡು ವೆಂಕಟ ಮಹಿಷಿ ಕ್ಷೇತ್ರ ಪಾಲನ3
--------------
ತುಪಾಕಿ ವೆಂಕಟರಮಣಾಚಾರ್ಯ
(ಮುಳಬಾಗಿಲು ಪರಶುರಾಮ ದೇವರು) ತುಂಗಾ ತಟದಲ್ಲಿ ಥಳಥÀಳಿಸುವ ಭೃಗುಪುಂಗವ ಭೂಪತಿಯೆ ಭಂಗಿಸು ಶ್ರೀಪತಿಯೆ ಪ. ಸೂರ್ಯ ದಿನದಿ ನಿನ್ನಡಿಯಲಿ ಬೇಡಿದ ಕಾರ್ಯಗಳೆಲ್ಲವನು ಸ್ಥೈರ್ಯ ಧೈರ್ಯ ಶೌರ್ಯಗಳ ನೀಡುವಾಚಾರ್ಯ ಸಮರ್ಜಿತನೆ ಆರ್ಯ ಗ್ರಹಸ್ಥಿತ ಧಾರ್ಯಾನಲಧೃತ ವೀರ್ಯವಿಭಾವನನೆ ಮರ್ಯಾದೆಯ ಕಾಪಾಡೆಂದಿಗು ಶ್ರೀ ಭಾರ್ಯಾಲಂಗಿತನೇ 1 ವೈದಿಕ ಲೌಕಿಕ ವಿವಿಧ ಕರ್ಮಗಳ ಸಾಧಿಸು ಸುಲಭದಲಿ ಶೋದಿಸಿ ಹೃತ್ಕಮಲವನು ನಿಲ್ಲಿಸಿ ಬೋಧಿಸು ಭೂಮಿಯಲಿ ಬಾಧಿಪ ವಿಘ್ನವ ಬಡಿದೋಡಿಸಿ ಮೃದು ಪಾದಯುಗ್ಮವ ಸಾದರದೊಳ್ಮಸ್ತಕದಲ್ಲಿರಿಸುತ ಮೋದಗೊಳಿಸು ಮನವ 2 ನಿರುತದಿ ನೀನಿಲ್ಲಿರುವುದ ಕಂಡರೆ ಹರುಷವ ಹೊಂದಿಹೆನು ಮರೆಯದಿರೆನ್ನನು ಮನೆಯಲ್ಲಿದ್ದರು ಸರಸಿಜಾಸನ ಪಿತನೆ ಪರತರ ಮಂಗಳ ಪಾವನ ವೆಂಕಟ ಗಿರಿವರ ಶೋಭಿತನೆ ಸರಿ ನಿನಗಿಲ್ಲೆಂದರಿವರನೆಂದಿಗು ಪೊರೆವ ಕೃಪಾಕರನೆ3
--------------
ತುಪಾಕಿ ವೆಂಕಟರಮಣಾಚಾರ್ಯ
(ಮೂಲ್ಕಿಯ ನರಸಿಂಹದೇವರು) ಜಯತು ಜಯತು ನೃಹರಿ ಬ್ರಹ್ಮಾದಿನಿರ್ಜರ ಜಯತು ಜಾತಕೈವಾರಿ ಪ. ಜಯ ನಮೋ ಜಗದಾದಿಮಾಯಾ ಶ್ರಯ ಚರಿತ್ರ ಪವಿತ್ರ ವಿಗತಾ- ಮಯ ಸದಾನಂದೈಕನಿಧಿ ಚಿ- ನ್ಮಯ ದಯಾರ್ಣವ ಭಯನಿವಾರಣ ಅ.ಪ. ಸುಕುಮಾರ ಪ್ರಹ್ಲಾದನ ಬಾಧಿಸೆ ಭಯಾ- ನಕ ರೂಪ ತಾಳ್ದಾಕ್ಷಣ ಸಕಲ ಲೋಕಾಲೋಕಭೀಷಣ ಪ್ರಕಟನಖಮುಖ ಕ್ರೋಧವಾಹಿನಿ ಪ್ರಖರ ಜ್ವಾಲಾಮಾಲ ಬದ್ಧ- ಭ್ರಕುಟಿ ಲಾಲಿತ ಭಕುತ ವತ್ಸಲ 1 ಪಾರಮೇಷ್ಠಿ ರುದ್ರರೇ ಮುಖ್ಯಸ್ಥ ವೃಂ- ದಾರಕಋಷಿವರರೇ ವೀರಭದ್ರ ಸುಭದ್ರ ನಂದಿ ಪ್ರ- ವೀರ ಭೈರವ ಭೃಂಗಿ ಮುಖ್ಯರು ಶ್ರೀರಮಣ ಕುರು ಕರುಣ ಪಾರಾ- ವಾರಸಮ ಗಂಭೀರನೆಂಬರು 2 ಶಾಂತವಾಗದು ಕ್ರೋಧ ಮಾಡಿದುದಾ- ನಂತ ಸಂಕ್ಯಾಪರಾಧಾ ಎಂತು ನಿರ್ವೃತಿ ಎಂದು ಚಿಂತಾ- ಕ್ರಾಂತರಾಗಿ ಪಿತಾಮಹಾದ್ಯರು ಕಂತುಜನನಿಯ ಬೇಡಿಕೊಳಲ- ತ್ಯಂತ ಹರುಷವನಾಂತು ಬಂದಳು 3 ಪಟ್ಟದರಸನರೂಪ ಕಾಣುತ ಭಯ- ಪಟ್ಟಳಪೂರ್ವಕೋಪ ಶ್ರೇಷ್ಠಭಕ್ತಶಿಖಾಮಣಿಯ ಮುಂ- ದಿಟ್ಟೆರಗಿ ಸಂಸ್ತುತಿಸೆ ದನುಜಘ- ರಟ್ಟ ಹೃದಯನಿವಿಷ್ಟ ಕರುಣಾ- ದೃಷ್ಟಿಯಿಂದ ಸಂತುಷ್ಟಗೊಳಿಸಿದ 4 ಶ್ರೀ ಲಕ್ಷ್ಮೀನಾರಾಯಣ ದೈತ್ಯೇಂದ್ರ ಹೃ- ಚ್ಛೂಲ ಅಖಿಲ ಕಾರಣ ಕಾಲಕಾಲಾಂತಕ ತಮಾಲ ಸು- ನೀಲನಿಭ ನಿತ್ಯಾತ್ಮ ಸುರಮುನಿ ಜಾಲಪಾಲ ವಿಶಾಲ ಗುಣನಿಧಿ ಮೂಲಿಕಾಲಯಲೋಲ ನರಹರಿ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಮೂಲ್ಕಿಯ ಮಹಾಲಿಂಗೇಶನನ್ನು ನೆನೆದು) ಪಿಡಿಯೆನ್ನ ಕೈಯ ಜಗನ್ಮಯ ಪಿಡಿಯೆನ್ನ ಕೈಯ ಪ. ಪಿಡಿಯೆನ್ನ ಕೈಯ ನಿನ್ನಡಿದಾವರೆಯಲ್ಲಿ ದೃಢವಾದ ಮನವ ಬೆಂಬಿಡದೆನಗೀಯಯ್ಯ ಅ.ಪ. ಪಾಮರಮತಿಯ ಪಾಪಾತ್ಮರ ಸೀಮಾಧಿಪತಿಯ ಕಾಮುಕಪರದಾರಭ್ರಾಮಕತಾಮಸ- ಧಾಮನ ಕಪಟವಿಶ್ರಾಮ ಕುಧೀಮನ ವ್ಯೋಮಕೇಶ ಭಗತ್ಪದಾಶ್ರಿತನ ಮಮಕಾರದಲಿ ಪಾಲಿಸು ಹೈಮವತಿಪತಿ ಕಾಮಹರ ಸುತ್ರಾಮವಂದಿತ ಸೋಮಶೇಖರ 1 ದುಷ್ಟದುರ್ಜನನ ದುರಾಚಾರ ಭ್ರಷ್ಟಜೀವನನ ಮೆಟ್ಟಿದ ನೆಲಮುನಿಯುವನ ಕೃತಘ್ನ ಕ- ನಿಷ್ಟಕಾಯುಷ್ಯದ ಘಟ್ಟಿಚೇತನನೆನ್ನ ತಟ್ಟನೆ ದಯವಿಟ್ಟು ಸರ್ವಾಭೀಷ್ಟದಾಯಕನಾಗಿ ಕರುಣಾ- ದೃಷ್ಟಿಯಿಂದಲಿ ನೋಡು ಸನ್ಮನವಿಷ್ಟರಸ್ಥ ಶಿವಾಷ್ಟಮೂರುತಿ2 ಸತ್ಯಬಾಹಿರನ ಪ್ರಪಂಚ ಪ್ರ-ವೃತ್ತಿಯೊಳಿಹನ ಅತ್ಯಂತ ಪಾಪಿ ಕುಚಿತ್ತ ಮದಾಂಧನು- ನ್ಮತ್ತ ಮಾತಂಗವಿರಕ್ತಿವಿಹೀನನ ಎತ್ತಿ ಎನ್ನತ್ತಿತ್ತ ನೋಡದೆ ಮತ್ತೆ ಕಾವ ಸಮರ್ಥರಾರೈ ಸತ್ತ್ವನಿಧಿಸುರಮೊತ್ತ ಪೂಜಿತ ಮೃತ್ಯುಹರ ಶ್ರೀಕೃತ್ತಿವಾಸನೆ 3 ಎಣಿಸಲು ಬೇಡ ಎನ್ನಪರಾಧ ಗಣಿತಕ್ಕೆ ಕೂಡ ಗುಣಗಣನಿಧಿ ಲಕ್ಷ್ಮೀನಾರಾಯಣಸಖ ದಣಿಯಲೊಲ್ಲೆ ದಯಮಾಡೆನಗೀಗಲೆ ಫಣಿಪಕುಂಡಲ ಪಾರ್ವತೀಪತಿ ಪ್ರಣತಜನಮಂದಾರ ನಿರ್ಮಲ ಪ್ರಣವರೂಪನೆ ಮೌಕ್ತಿಕಾಪುರ ಮಣಿಮಹಾಲಿಂಗೇಶ ಬೇಗನೆ 4
--------------
ತುಪಾಕಿ ವೆಂಕಟರಮಣಾಚಾರ್ಯ
(ಯರ್ಡನಾಡ ವಿಷ್ಣುಮೂರ್ತಿ) ಸಾರಥಿ ಪ. ಶಿಷ್ಟರಾಯಸದ ಸಜ್ಜನರ ಮೇಲ್ಕರುಣಾ ದೃಷ್ಟಿಯಿಂದಲಿ ಉಭಯಾರ್ಥದ ಪುರದಿ ಕಷ್ಟಪಾಶವ ಕಡಿದರಿಗಳ ಗೆಲಿಸುತ ಭೀಷ್ಟ ಕೊಡುವ ಸರ್ವೋತ್ಕøಷ್ಟ ಪರೇಶಾ 1 ಕ್ಷೋಣಿಸುತೆಯ ಚೂಡಾಮಣಿಯ ಬೇಗದಿ ತಂದ ಪ್ರಾಣನಾಥನು ಸುಪ್ರವೀಣನೆಂದದಿರು ಕಾಣಿಕೆ ಕಪ್ಪ ಪೂಜೆಗಳ ತನ್ಮತದಿಂದ ಮಾನಿಸಿಕೊಳುತಿಹ ಮನ್ಮಥ ಜನಕ 2 ನಿನ್ನ ಕಟಾಕ್ಷ ಸಂಪೂರ್ಣ ಪೊಂದಿಹರಾ ಹೆಂಣಾ ತಂದಿಹನಾ ಮೇಲಿರಿಸು ಪದ್ಮ ಕರಾ ಪನ್ನಗಚಲವಾಸ ಪವಮಾನವಂದಿತ ನಿನ್ನ ದಾಸರ ದಾಸ್ಯ ದಯಮಾಡು ಸುಪ್ರೀತ 3
--------------
ತುಪಾಕಿ ವೆಂಕಟರಮಣಾಚಾರ್ಯ