ಒಟ್ಟು 647 ಕಡೆಗಳಲ್ಲಿ , 85 ದಾಸರು , 556 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಟ್ಟಿಗೋತ್ಸವ ಗೀತೆ ಕೊಟ್ಟೊಗೋತ್ಸವ ನೋಡಿ ಸೃಷ್ಟಿಗೀಶ್ವರನ ಪ. ವಾಸುದೇವನ ಸಹಸ್ರಸ್ತಂಭಮಂಟಪವ ದಾಸರು ಬಂದು ಶೃಂಗಾರವ ಮಾಡಿ ದೇಶದ ಮೇಲುಳ್ಳ ಬೊಂಬೆಗಳನು ರಚಿಸಿ ಲೇಸಾದ ಮೇಲುಕಟ್ಟುಗಳ ಕಟ್ಟಿದರು 1 ಸೃಷ್ಟಿಗೀಶ್ವರನಾದ ರಂಗನಾಥನಿಗೆ ಕೊಟ್ಟಿಗೋತ್ಸವವನ್ನು ನಡೆಸಬೇಕೆನುತ ಕಟ್ಟಿ ಕಂಕಣವನ್ನು ನಾಲ್ಕುವೇದಗಳಿಂದ ಭಟ್ಟರು ಓದಿ ಪೇಳಿದರು ಸಂಭ್ರಮದಿ 2 ವಜ್ರದ ಕಿರೀಟವಿಟ್ಟು ರತ್ನದಂಗಿಯ ತೊಟ್ಟು ಅರ್ಜುನಸಖ ಸಂಭ್ರಮದಲಿ ಪೊರಟು ಸ್ವರ್ಗದ ಬಾಗಿಲೊಳಗೆ ತಾ ನಿಂದು ಮೂರ್ಜಗವೆಲ್ಲ ಮೋಹಿಸುತಲೆ ಬಂದು 3 ಮಂದಹಾಸದಲಿ ನಿಂದು ಮಂಟಪದಲಿ ಬಂದ ಆಳ್ವಾರರಿಗಾಸ್ಥಾನವಿತ್ತು ಚಂದದಿಂದ ದಿವ್ಯ ಪ್ರಬಂಧವ ಕೇಳಿ ಒಂದುಅಂಕಣ ಬಿಡದೆ ಬಂದ ಶ್ರೀರಂಗ 4 ಸಂಕ್ರಾಂತಿಯಲಿ ಶಂಕರನ ಪ್ರಿಯನು ಶಂಕೆ ಇಲ್ಲದೆ ಆಭರಣವನು ಧರಿಸಿ ಪಂಕಜಮುಖಿಯರೊಡಗೊಂಡು ಹರುಷದ ಲಂಕಾರವಾಗಿ ಬಂದನು ಮಂಟಪಕೆ 5 ಮತ್ತೆ ಮರುದಿನದಲ್ಲಿ ಭಕ್ತವತ್ಸಲನು ಮುತ್ತಿನಅಂಗಿ ಮುಂಡಾಸನಳವಡಿಸಿ ಮುತ್ತಿನಛತ್ರಿ ಚಾಮರ ಸೂರೆಪಾನದಿ ಮುತ್ತರಸಿಯ ಮಂಟಪಕೆ ನಡೆತಂದ 6 ಅರ್ಥಿಯಿಂಬಂದು ತಾ ಅಶ್ವವನೇರಿ ಮತ್ತೆ ಬೇಟೆಯಮೃಗವನೆ ಕೊಂದು ಸಂ ಕ್ರಾಂತಿಯ ಪಾರ್ವೇಟೆಯನಾಡಿ ಸಂತೋಷದಿ ಬಂದ 7 ನಾರಿವೇಷವ ಆಳ್ವಾರರಿಗೆ ಧರಿಸಿ ಪೇರಿಯ ತಾ ಬಿಟ್ಟು ತೇಜಿಯನೇರಿ ಚೋರತನವ ಮಾಡಿದ ಭಕ್ತರಿಗೆ ಮೂಲಮಂತ್ರವ ಪೇಳಿ ಮುಕ್ತಿಯನಿತ್ತ 8 ಮಿಂದು ಮಡಿಯನುಟ್ಟು ಅಂದು ರಾತ್ರಿಯಲಿ ಹ ನ್ನೊಂದು ವಿಧ ಭಕ್ಷ್ಯಗಳನು ತಾ ಗ್ರಹಿಸಿ ಬಂದ ಆಳ್ವಾರರಿಗೆ ಮುಕ್ತಿಯನಿತ್ತು ಬಂದು ಆಸ್ಥಾನದಿ ನಿಂದ ಶ್ರೀರಂಗ 9 ಭಕ್ತರು ಮಾಡಿದ ಪ್ರಬಂಧವನೆಲ್ಲ ಭಕ್ತಿಯಿಂದಲೆ ಪೇಳಿದ ಆಚಾರ್ಯರಿಗೆ ಯುಕ್ತಿ ತೋರಿದ ಪರಾಶರವ್ಯಾಸರಿಗೆ ಬ್ರಹ್ಮ ರಥವನಿತ್ತ ಬ್ರಹ್ಮಾಂಡರೂಪ 10 [ಶೌ]ರಿಯು ತಾನಿರಲು ಮೇಘಮಂಡಲದಂತೆ ತೋರುವುದು ತಾರಕೆಯಂತೆ ಮೈಯುಡುಗೆ ವಾರಿಜನಾಭನ ಮುತ್ತಿನಂಗಿಯ ನೋಡು ವವರಿಗೆ ತಾ ಆನಂದವಾಗಿಹುದು 11 ಕ್ಷೀರಸಾಗರದಲ್ಲಿ ಪವಡಿಸಿಹ ಹರಿಗೆ ಕ್ಷೀರಬಿಂದುಗಳು ಮೈಯೊಳಗೆ ಬಿದ್ದಂತೆ ವಾರಿಜನೇತ್ರಗೆ ವಜ್ರದನಾಮವು ಧರಿಸಿದರು ಹೇಮದ ಪಾದಹಸ್ತಗಳ 12 ಮುತ್ತಿನಂಗಿಸೇವೆ ನೋಡಬೇಕೆನುತ ಹತ್ತುಸಾವಿರ ಪ್ರಜೆ ಬಂದು ನಿಂತಿರಲು ಇತ್ತು ಕಾಣಿಕೆಯನು ನೋಡಿ ವೆಂಕಟರಂಗನ ಮುಕ್ತರಾದೆವೆಂದು ಭಕ್ತರು ನುಡಿದರು 13
--------------
ಯದುಗಿರಿಯಮ್ಮ
ಕೊಂಬುವರಿಲ್ಲೆನ್ನ ಸರಕ | ಇಂಬಿಲ್ಲ ಇಡಲಿಕ್ಕೆ |ಹೂರಲಾರೆ ಮುದುಕ ನಾ ಪ ಸುರರು ಸೇವಿಸಲಿನ್ನು | ಸೆರೆ ಸಿಕ್ಕಿರುವರಲ್ಲಾ | ಧರೆಯೊಳು ಲೋಗರಿಗೆ |ಗುರುತಿಲ್ಲಾ ಇದರೊಳು 1 ಕೊಂಡವರಿಗೆ ಲಾಭವು ಒಂದಕ್ಕೆ ನಾಲ್ಕು | ಇಸಗೊಂಡವರಿಗೆಂಟು ಮಡಿಯಹುದು || ಪುಂಡತನದಲಿ ಕಸಗೊಂಡೇನೆಂದವರಿಗೆ | ಮಂದಮತಿಗಳಿಗೆಂದಿಗೂ ದೊರೆಯದು 2 ತಂದೆ ಸದ್ಗುರು ಭವತಾರಕನ ಭಜಕ- | ರಿಂದು ಈ ವಾರ್ತೆಯನು ಕೇಳಿದರೆ | ಬಂದು ವಂದಿಸೆನ್ನ || ಆನಂದವ ಬಡಿಸುವರು | ಎಂದು ಆಗುವದೋಹಾಗೆಂದು ಯೋಚಿಸುವೆ 3
--------------
ಭಾವತರಕರು
ಕೊರವಂಜಿ ಪದ ಬಾರೆ ಸತ್ಯಭಾಮೆ ತೋರೆ ನಿಮ್ಮ ಸುಹಸ್ತದ ಠೇವೆ ಧ್ರುವ ಸರ್ಕನೆ ಬಾರವ್ವಾ ಅರಿಕ್ಯುಳ್ಳ ಗರತಿ ಕರವ ಕೊರವತಿ ತಾರ್ಕಣ್ಯ ಬರುತಾದ ಪರಮ ಸುವಾರ್ತಿ ತರ್ಕರಹಿತ ವಸ್ತು ಕರಕೊ ಸುಮೂರ್ತಿ 1 ಓಯವ್ವ ಅವ್ವ ಬಾರೆ ನಮ್ಮವ್ವ ದೈವುಳ್ಳ ಗರತಿ ನೀನವ್ವ ದೈವ ಬರುದೆ ನಿನ್ನೊಳಗವ್ವ ಕೈದೋರೆ ಕೈದೋರೆ ಕೈದೋರೆ ನಿಮ್ಮ 2 ಕೈದೋರೆ ಕೈದೋರೆ ಕೈದೋರೆ ನಿಮ್ಮ ಕೈಯ ಲಕ್ಷಣ ನೋಡಿ ಹೇಳುವೆನಮ್ಮ ಅಯ್ಯ ಬರುತಾನೆ ಆಶೇಲಿ ನಿಮ್ಮ ಕೈಗೊಟ್ಟು ಕೇಳೆ ನಿಜ ಗುಹ್ಯವರ್ಮ 3 ಸುಳ್ಳು ಮಾತನಾಡಿ ಒಡಲ ಹೊರಳವಲ್ಲ ಬಲ್ಲಷ್ಟು ಬೊಗಳುವೆ ವಿಷಯ ದಾಸ್ಯವಳಲ್ಲ ಉಳ್ಳಷ್ಟು ಹೇಳುವೆ ಕೇಳೆ ಶಿವ ಸೊಲ್ಲ ಹೇಳುವ ಮಾತಿದು ಘನ ಗುರು ತಾ ಬಲ್ಲ 4 ಕೊರವಂಜಿ ಮಾತಿದು ಕಿವಿಗೊಟ್ಟು ಕೇಳಮ್ಮ ಬರುತಾನ ಉದರಲಿ ಹುಟ್ಟಿ ಸಗುಣ ನಿಮ್ಮ ತಾರಿಸುವ ಸ್ವಾಮಿ ಪತಿತ ಪಾವನ ನಿಮ್ಮ ಹರಷದೋರುವ ನಿತ್ಯಾನಂದೋ ಬ್ರಹ್ಮ 5 ಎಂದ ಮಾತನೆ ಕೇಳಿ ಬಂದಳು ಭಾವೆಮ್ಮ ಚೆಂದ ಉಳ್ಳ ಸುರಸ ವಾಕ್ಯ ಕೇಳಿದಳೊಮ್ಮೆ ಬಂದು ಹರುಷದಿ ಪೂರ್ಣ ಸಂದಿಸಿಟ್ಟಳು ಪ್ರೇಮ ಒಂದೆ ನಿಜಸುಮಾತ್ಹೇಳ್ಯೆಂದಳು ನೇಮ 6 ಎಲ್ಲಿಂದ ಬಂದೆವ್ವ ಸೊಲ್ಲ ಬೀರುತ ಶಿವ ಬಲ್ಲ ಮಹಿಮಳೆಂದು ನಾನರಿಯೆನವ್ವ ಇಲ್ಲೆವೆ ಕಂಡೆ ನಾ ಸೊಲ್ಲಿನ ಮಹಿಮರು ಎಲ್ಲ ನೆಲೆನಿಭೇಳೌವ್ವ 7 ಸರಿಯ ಬಂದರ ನಿನ್ನ ಮರಿಯೆನವ್ವ ಎಂದು ಖರೆ ಉಳ್ಳ ಮಾತನೆ ಹೇಳೆ ನಿಜ ಒಂದು ಹಿರಿಯರಗೀ ಮಾತು ಸರಿಯ ಬಾವ್ಹಾಂಗಿಂದು ಬೀರವ್ವ ನಿಜಸಾರವಿಂದು 8 ಲಕ್ಷ ಎಂಬತ್ತುನಾಲ್ಕು ಗ್ರಾಮವ ನೋಡಿ ಲಕ್ಷಿಸುತ ಬಂದ ಲಕ್ಷಣ ನಿಜಗೂಡಿ ಲಕ್ಷುಮಿ ಕರದೋರುತದ ನಿಮ್ಮೊಳೊಡಮೂಡಿ ಅಕ್ಷಯಾನಂದ ಬರುತಾನೆ ಇದರಿಡಿ 9 ಕರ ಕೊಟ್ಟಳು ಸುಶೀಲೆ ವರ ಕೃಪೆಯಲಿ ಕೊರವಂಜಿ ಮಾತಲಿ ಅರಿತಳು ತಾ ತನ್ನಲಿ ಪರಮಾನಂದ ಲೀಲೆ ಬೆರದಳು ಕೇಳಿ 10 ನುಡಿಯುವ್ವ ಸಲಲಿತವಾದ ನಿಜವಾಕ್ಯ ಬಡುವಂತೆ ಹರುಷವು ನೋಡಿ ತ್ರಯಲೋಕ್ಯ ಬಡಸವ್ವ ನನಗಿಂದು ಇದೆ ನಿಜ ಮುಖ್ಯ ಕುಡಲಿಕ್ಕೆ ನಿನಗಿದು ಶಕ್ಯ 11 ಮನದಂತೆಯಾದರ ನೆನದೇನವ್ವ ನಿಮ್ಮ ಅನುಕೂಲಾಗುವ ಪುಣ್ಯ ಪೂರ್ವಾರ್ಜಿತ ನಮ್ಮ ಸಾನುಕೂಲಾಗುವಂತೆ ಬೇಡಿಕೊಳ್ಳಮ್ಮ ನೆನಿ ಎಕನಾತಿ ಎಲ್ಲಮ್ಮ 12 ಒಡಮೂಡಿ ಬಂದರ ಉಡಿಯ ತುಂಬೇನವ್ವ ಜಡಿತಾಭರಣದುಡಿಗಟ್ಟೆ ನಿನಗವ್ವ ಹಿಡಿಯದೆ ಅನುಮಾನ ನುಡಿ ನಿಜ ಸಾರವ್ವ ಕುಡಲಿಕ್ಕೆ ನಿಧಾನದವ್ವ 13 ಕೈಯ ಲಕ್ಷಣದಲಿ ಶ್ರೇಯ ತೋರುತಲ್ಯದ ದಯ ಉಳ್ಳ ಮಹಿಮದ ಸೋಹ್ಯ ಬೀರುತಲ್ಯದ ಭಯವಿಲ್ಲದ ಭಾಗ್ಯ ಅಚಲ ತಾನಾಗ್ಯದ ಜಯಜಯಕಾರ ಭಾಸುತದ 14 ಪುಣ್ಯ ಪ್ರಭೆಯ ಚೆನ್ನಾಗಿ ಭಾಸುತಲ್ಯದೆ ಕಣ್ಣಿಗೆ ಸುಚಿನ್ಹ ಹೊಳವುತದೆ ಚಿನ್ನುಮಯದ ಸುಪುತ್ಥಳಿ ಬರುತದೆ ಬಣ್ಣ ಬಣ್ಣದ ಸುಖ ಬೀರುತದೆ 15 ಅಂಗದೊಳಗ ನಿಮ್ಮ ರಂಗ ಬರುತಾನಮ್ಮ ಕಂಗಳಿಗಿದರಿಡುತದೆ ಹರುಷವು ನಿಮ್ಮ ಭವ ಬಂಧದ ದುಷ್ಕರ್ಮ ಮಂಗಳಕರಾನಂದೊ ಬ್ರಹ್ಮ 16 ನಿನ್ನ ಭಾಗ್ಯಕ ಸರಿ ಇಲ್ಲೆ ಸಂಜೀವನಿ ಚೆನ್ನಾಗಿ ಕೇಳೆ ನೀ ಭಾವೆಗುಣಮಣಿ ಧನ್ಯವಾಯಿತು ನಿನ್ನಂದೆವೆ ಯತಿಮುನಿ ನಿನ್ನೊಳಗುಂಟು ದೇವಶಿಖಾಮಣಿ 17 ಭಾವೆ ನಿನ್ನಿಂದ ಪಾವನ್ನವಾಯಿತು ಜಗ ದೇವಾಧಿದೇವ ಮೂಡುವ ನಿನ್ನೊಳಗೀಗ ಕಾವಕರುಣ ಪ್ರತ್ಯಕ್ಷವಾಗುವ ಯೋಗ ಸುವಿದ್ಯ ಭಾಸುವ ದಿವ್ಯಭೋಗ 18 ಉಂಡ ಊಟ ಕಂಡ ಕನಸು ಪಿಂಡಲಕ್ಷಣ್ಹೇಳುವೆ ಮಂಡಲೊಳಗ ಮಂಡಿಸಿಹ್ಯ ಮಹಿಮೆ ನೀನಗ್ಹೇಳುವೆ ಹಿಂಡದೈವದೊಡಿಯ ನಿನ್ನೊಡಲೊಳಗ ತಾಳುವೆ ಪಂಡಿತರಿಗೆ ಪ್ರಿಯವಾದಾಗ್ಯ ಖಂಡನೀನೆ ಬಾಳುವೆ 19 ನೀನೆ ಜಗಕ ತಾರಿಸುವ ದೈವದೋರಿಕುಡುವೆ ನೀನೆ ಭಕ್ತಜನರ ಜನ್ಮಸಾರ್ಥಕವು ಮಾಡುವೆ ಜ್ಞಾನಗಮ್ಯವಾದ ವಸ್ತುಹಿಡದು ನೀನೆ ಕುಡುವೆ ನಿತ್ಯ ಆಡುವೆ 20 ಅಮ್ಮ ನಿಮ್ಮೊಳು ಘಮ್ಮನ್ಹೊಳುವ ತಮ್ಮ ಬರುತಾನ ಸುಮ್ಮಾನಿಹ್ಹಾ ಸಮೀಪಲೆ ಧಿಮ್ಮ ಹಿಡಿದ ಹಮ್ಮಿನೊಳು ಘುಮ್ಮವಾದರು ಬ್ರಹ್ಮಾದಿಗಳೆ ನಮ್ಮ ನಿಮ್ಮದೆಂಬು ಭ್ರಮೆ ಸುಮ್ಮನ್ಯಾಕಿದೊ ಅಮ್ಮಕೇಳೆ 21 ಬಯಕಿ ಲಕ್ಷಣ ನಿನ್ನ ಹೇಳ್ಹೆನವ್ವಾ ತಾಯಿ ಮಾಯಿಕ ಗುಣ ಸುಟ್ಟು ತಿಂದೇನೆಂಬುದು ಬಾಯಿ ಕೈಕಚ್ಚಿಲೆ ಶುದ್ದಿಲ್ಲಾದವರ ತಾಳದು ಸೋವಿ ಐರಾವತ ಬರುತಾನ ನಿನ್ನೊಳು ಪನ್ನಂಗಶಾಯಿ 22 ಬಾಹ್ಯನಿಷ್ಟರ ಕಂಡು ಬದಿಗೆ ಬರಗುಡಿ ನೀನು ಅಹಂಭಾವಕ ಹೇಸಿ ವಾಕರಿಸುವೆ ನೀನು ಗುಹ್ಯ ಹೇಳುವೆ ನಾನು ಸಾಹ್ಯ ಮಾಡುವ ಶ್ರೀಗುರು ತಾನು 23 ಕಾಮಕ್ರೋಧ ಕರದು ತಿಂದೇನೆಂಬುದು ಬಯಕಿ ನೇಮದಿಂದಲಿ ಮದ ಮತ್ಸರನೆ ನೂಕಿ ಪ್ರೇಮವಿಲ್ಲದವರ ಎಂದಿಗಾದರ ಸೋಕಿ ವರ್ಮಿಕರಿಗೆ ನೀ ಕೈಯಗುಡುವಾಕಿ 24 ಆಸಿ ಎಂಬುದು ಅಟ್ಟುಅರದೇನೆಂಬುದು ಬ್ಯಾಗ ಹುಸಿನುಡಿವೆಂಬದು ಹುರವಾದೀಗ ಹಸನಾದ ಬಯಕೀದು ಋಷಿ ಮುನಿಗಳ ಯೋಗ ಲೇಸು ಲೇಸು ನಿನ್ನ ಅಂತರಂಗ 25 ಧನ್ಯವಾದ ರಾಜಯೋಗವ ಬಯಸುದು ಉನ್ಮನವಾಗಿ ಊರ್ಜಿತವಾದೇನೆಂಬುದು ಸ್ವಾನುಭವದ ಸುಖ ಸೂರ್ಯಾಡೇನೆಂಬುದು ಭಿನ್ನ ಭೇದಕ ಕಣ್ಣ ತ್ಯರಿಯದಿದು 26 ವಾಸುದೇವನ ಭಕ್ತಿ ಆಶ್ರೈಸೇನೆಂಬುದು ಶ್ವಾಸೋಚ್ಛ್ವಾಸಕ ಒಮ್ಮೆ ಬಯಸುವುದು ವಿಷಯ ಪ್ರಪಂಚಕ ಹೇಸಿ ತಾ ಜರೆವುದು ಕುಸುಮನಾಭನ ಸೇವೆ ಇಚ್ಛಿಸುವದು 27 ಒಮ್ಮೆ ಸರಸ್ವತಿ ಕೂಡ ಸರಸಾಡೇನೆಂಬುದು ಒಮ್ಮೆ ಲಕ್ಷುಮಿ ಕೂಡ ಲೋಲಾಡೇನೆಂಬುದು ಒಮ್ಮೆ ಪಾರ್ವತಿ ಕೂಡ ಪವಡೀಸೆನೆಂಬುದು ಒಮ್ಮೆ ಏನುನೊಲ್ಲ್ಯೆನೆಂಬುದು 28 ಹೇಳೇನೆಂದರೆ ನಿನ್ನ ಬಯಕಿಯ ಉಲ್ಹಾಸ ತಿಳಿಯದಿನ್ನೊಬ್ಬರಿಗ ಗರ್ಭದ ಸುವಾಸ ಉಲವುತದೆ ನಿನ್ನೊಳು ಸುಪ್ರಕಾಶ ಥಳಥಳಗುಡುತಿಹ್ಯ ಬಾಲವೇಷ 29 ಧನ್ಯ ಧನ್ಯ ನಿನ್ನ ಗರ್ಭಹೊಳುವ ಹೊಂಬಣ್ಣವು ಒಡಲು ನಿನ್ನ ಪುಣ್ಯ ಪಾವನ್ನವು ಧನ್ಯ ಧನ್ಯ ನಿನ್ನ ದರುಷಣದ ಜೀವನವು ಧನ್ಯ ಧನ್ಯ ನಿನ್ನ ಕಂಡ ಜನರ ಜೀವಪ್ರಾಣವು 30 ಭಾವೆ ನಿನ್ನಿಂದ ಖ್ಯಾತಿಪಡೆದ ಪ್ರಹ್ಲಾದನು ದೇವ ದೇವ ಬಂದು ಸ್ತಂಭದೊಳು ಮೂಡಿದನು ಆವಾವ ಠಾವಿನೊಳು ಬಂದು ರಕ್ಷಿಸಿದನು ಜೀವ ಜೀವ ತಾನೆ ಅಗಿ ಪ್ರಾಣನುಳಹಿದನು 31 ನಿನ್ನ ಬಲಗೊಂಡು ದ್ರೌಪದಿಯ ಖ್ಯಾತಿಪಡೆದಳು ಪುಣ್ಯ ಉಳ್ಳ ಮಹಿಮನಂಘ್ರಿ ಕಣ್ಣಾರ ಕಂಡಳು ಚೆನ್ನಾಗಿ ಬಂದು ಸ್ವಾಮಿ ಲಜ್ಜೆಗಾಯ್ದು ಸಭೆಯೊಳು ಬಣ್ಣ ಬಣ್ಣ ವಸ್ತ್ರ ಪೂರಿಸಿದಾನೇಕಗಳು 32 ಸ್ತುತಿಯು ಮಾಡಲು ನಿನ್ನ ಯತಿಮುನಿಗಳವಲ್ಲ ಗತಿಯ ಪಡೆದರು ಸಕಲ ಮುನಿಜನರೆಲ್ಲ ಅತಿ ಹರುಷವು ಕೂಡಿದರು ಜಗದೊಳಗ್ಯಲ್ಲ ಹಿತದೋರುತಿದೆ ವಸ್ತು ಮಯವೆಲ್ಲ 33 ಹೊಳೆವ ಸುಳಿವ ಚೆಲುವ ನಿನ್ನೊಳಗ ನಲುವನೆ ಕಳವಿಲೊಯಿದ ವೇದನುಳುಹಿದವನು ಬೆಳೆವನೆ ಭಾರ ತಾಳಿದವನು ಉಲುವನೆ ನೆಲವ ಗೆದ್ದ ಬಲಿಯು ನಿನ್ನೊಳಗೆ ಒಲುವನೆ 34 ಸೀಳಿ ದೈತ್ಯನ ಕೊಂದ ಶೂರ ಘಮಗುಡತಾನೆ ಅಳದು ಭೂಮಿಯ ಕೊಂಡು ಬೆಳದವ ಬರುತಾನೆ ತಿಳಿದು ಪಿತರ ಸೂಡುಕೊಂಡವ ಬರುತಾನೆ ಬಲುಪರಾಕ್ರಮದವ ತೋಳುತಾನೆ 35 ತಾಂ ಸಂಚರಿಸ್ಹ್ಯಾನ ನಿನ್ನೊಳಗ ಮೂಡಿ ಬರುತಾನೆ ಬ್ಯಾಗೆ ನಗುತ ಬರುತಾನೆ ಈಗ ಕೈಯಗೊಟ್ಟು ಬರುತಾನೆ ನಿನಗೆ 36 ಸಾಧೀಸಿ ಕೇಳೆ ಕಿವಿಗೊಟ್ಟು ಒದುಗುವ ತಾಂ ಇದರಿಟ್ಟು ಉದಿಯವಾಗುವ ದಯವಿಟ್ಟು ಸದ್ಬಕ್ತರಿಗೆ ಕೈಯಗೊಟ್ಟು 37 ಹುಟ್ಟುವ ಶಿಶುವಿನ ಘಟಣಿಯ ಬಹಳ ಗುಟ್ಟೊಡಿಯಲು ತಾಂ ಮುಟ್ಟನು ತಾಳ ಕಟ್ಟುವ ದೈತ್ಯರ ದಿಟ್ಟ ಮಾ ಸಾಳ ದೃಷ್ಟಿಸಿ ನೋಡುವ ನಿಷ್ಠರ ಮೇಳ 38 ಶಿಶುವಿನ ಲಕ್ಷಣ ಬಲು ಅಗಾಧ ಪರಿ ಮಾಟವು ಋಷಿಗಳ ಬೋಧ ಹಸು ನೀರಡಿಸರವುದು ಶ್ರೀಪಾದ ಬಸುರಿನ ಬಯಕಿದು ಬಲುಸುಸ್ವಾದ 39 ಘಮಗುಡುತದೆ ಅನಾಹತದ ಧ್ವನಿಯು ಕ್ರಮ ತಿಳಿವದು ಸುಯೋಗದ ಮನಿಯು ಧಿಮಿಗುಡುತದ ಆನಂದದ ಖಣಿಯು ಭ್ರಮ ಬಿಡಿಸುವ ಘನ ಚಿಂತಾಮಣಿಯು 40 ಹುಟ್ಟಿ ಬರುತಾನಿವ ಶಿಷ್ಟರ ಮನಿಲಿವ ದುಷ್ಟ ಮರ್ದನ ದೇವ ನಿಷ್ಠರಿಗೆ ಕಾವ ಎಷ್ಟೆಂದ್ಹೇಳಲವ್ವ ಸೃಷ್ಟಿಗಧಿಕನಿವ ಮುಟ್ಟಿ ಮುದ್ರಿಸುವ ದಿಟ್ಟೆದೆ ಕೂಸವ್ವ 41 ವರ್ಣಿಸಲಾಗದು ಶಿಶುವಿನ ವಿವರಣ ದಣಿಯಿತು ಕೊಂಡಾಡಿ ವೇದಸುಪುರಾಣ ಖೂನ ತಿಳಿಯದು ತಾನು ಶಾಸ್ತ್ರಕ ಸಂಪೂರ್ಣ ದ್ಯಾನ ಮೋನಕ ದೂರಗಮ್ಯ ಸ್ಥಾನ 42 ಗುಟ್ಟು ತಿಳಿಯದ ವಸ್ತು ಹುಟ್ಟಿಬಾಹುದು ಕೇಳಿ ಉಂಟಾಗುವದು ನಿನ್ನೊಳು ನೆನದಾಗಳೆ ಘಟ್ಯಾಗಿ ಅನುಭವಿಸುತ ನೀನೆ ಬಾಳೆ ದೃಷ್ಟಿಯೊಳೀಗುಟ್ಟು ಆರೀಗ್ಹೇಳೆ 43 ಬಸುರು ಬಯಕೆಂಬುದು ಹೆಸರಿಸಲಳವಲ್ಲ ಹಸನಾಗಿ ಅನುಭವಿಸುವ ಪುರುಷನೆ ಬಲ್ಲ ವಾಸುದೇವನ ಕಾಣದಿಹ್ಯದೆ ಕಣ್ಣಲ್ಲ ಆಸಿ ಅಳಿದವರೆ ತಾಂ ತಿಳಿದರೆಲ್ಲ 44 ಹುಟ್ಟುವ ಲಕ್ಷಣ ಕೇಳೆ ನೀ ಕಿವಿಗೊಟ್ಟು ಮುಟ್ಟಿ ಮುದ್ರಿಸಿಹ್ಯ ಗುರು ಕಟಾಕ್ಷವ ಕೊಟ್ಟು ಇಟ್ಟುಕೊ ಈ ಮಾತು ಆರಿಗ್ಹೇಳೆ ಬಿಟ್ಟು ಗಂಟು ಕಟ್ಟಿದ ಮಾತು ಹೇಳೆಬಿಟ್ಟು 45 ಆಲಕ್ಷವೆಂಬ ಸುನಕ್ಷತ್ರದಲಿ ಪುಟ್ಟಿ ಸುಲಕ್ಷಣದಲಿ ಬರುತಾನೆ ಜಗಜಟ್ಟಿ ನೆಲಯುಗೊಂಡಾಡಿಸಿ ಮನಮುಟ್ಟಿ 46 ಜನ್ಮನಾಮೆಂಬುದು ಕೂಸಿನ ನಿರ್ಗುಣ ಸಮಸ್ತರಿಗೆ ನಡವ ನಾಮವೆ ಸಗುಣ ಬ್ರಹ್ಮಾನಂದದಿ ಲೋಲ್ಯಾಡುವ ಪರಿಪೂರ್ಣ ಕಮಲನಯನ ಸ್ವಾಮಿ ರಮಾರಮಣ 47 ಕೂಸು ಎಂದರ ತಾನು ಕೂಸು ಎನಲಾಗದು ವಾಸವಾಗ್ಯಾಡುದು ವಿಶ್ವಲಿದು ಹೆಸರನೇಕಪರಿಯಲಿ ಕರಿಸಿಕೊಂಡು ಲೇಸು ಲೇಸಾಗಿ ತಾ ಆಡುವುದು 48 ಹಿಂದ ಅಡಿದ ಆಟ ಮಂದದೆ ಆಡುದು ಎಂದಿಗ್ಯದರ ಗುಟ್ಟು ತಿಳಿಯಗುಡುದು ಒಂದಿಸಿದವರ ತನ್ನೊಳು ಕೂಡಿಕೊಂಬುದು ಒಂದೆ ವಸ್ತುವಾಗಿ ತೋರುವುದು 49 ಹೇಳುವೆ ಕೇಳೆ ಶಿಶುವಿನ ಆಟ ತಿಳಿಯಲು ಜಗದೊಳು ಬಲು ಅವ್ಹಾಟ ನೆಲಿ ತಿಳಿದವರಿಗೆ ತೋರುದದು ನೀಟ ನಲಿನಲಿದಾಡುವ ಸಲಲಿತದಾಟ 50 ಒಮ್ಮೆ ನೀರನೆ ಚಲಿಪಿಲಿ ಮಾಡುವ ಒಮ್ಮೆ ಬಾಗಿ ಜಗನೆಗುವ ಒಮ್ಮೆ ಹಲ್ಲಿಲೆ ಬೇರನೆ ಅಗಳುವ ಒಮ್ಮೆ ಬರುತಲಿ ಗುರುಗುಡುವ 51 ಒಮ್ಮೆ ಬಲು ಗಿಡ್ಡಾಗಿ ತೋರುವ ಒಮ್ಮೆ ಪರಾಕ್ರಮ ಹಿಡುವ ಒಮ್ಮೆ ವನದೊಳಗಾಡುತ ಹೋಗುವ ಒಮ್ಮೆ ಕಡವ ಬೆಣ್ಣೆಯ ಮೆಲುವ 52 ಒಮ್ಮೆ ಬತ್ತಲೆ ತ್ರಿಪುರದಲಿ ಸುಳಿವ ಒಮ್ಮೆ ಏರುವ ತಾ ಹಯವ ಒಮ್ಮೊಮ್ಮಾಗುವ ತಾನೆವೆ ಸಗುಣವ ಒಮ್ಮೊಮ್ಮಾಗುವ ನಿರ್ಗುಣವ 53
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೊಳ್ಳೇಗಾಲದ ಲಕ್ಷ್ಮೀನಾರಾಯಣ ಯನ್ನ ಸೊಲ್ಲ ಲಾಲಿಸಿ ಬೇಗ ಸಲಹು ದೇವಾ ಖುಲ್ಲ ಮಾನವನೆಂದು ತಲ್ಲಣಗೊಳಿಸೋರು ಭವನಾವಾ ಪ ಓಡಿಬಂದೆನೊ ನಿನ್ನ ನೋಡಬೇಕೆನುತಲಿ ಗಾಡಿಕಾರದೇವ ತ್ವರೆಯಿಂದ ದೂಡಬ್ಯಾಡೊ ನನ್ನ ಪಾದ ಮುಕುಂದಾ 1 ಅಭಯವ ನೀಡಯ್ಯಾ ಇಭರಾಜವರದನೆ ಉಭಯ ಸುಖಪ್ರದ ನೀನೆಂದು ಅಭಿನಮಿಸುವೆನಯ್ಯ ಶಬರಿಯಂಜಲನುಂಡು ಬುಜೆಗಧವಕೊಂಡಿ ವಿಬುಧವಂದಿತನೆ2 ಮೆರೆಯುವಿ ನೀ ಬಲು ಉರಗರಾಜಶಾಯಿ ವರವಿಪ್ರನಿಕರದಿಂ ಪೂಜೆಗೊಂಡು ಥರಥರದಲಿ ನೀ ಪೊರಹಿದೆ ಭಕ್ತರ ಮರೆಯಬ್ಯಾಡ ನನ್ನ ಶಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಕೋಪಿಸದಿರು ಸ್ವಾಮಿ ಶ್ರೀ ನರಸಿಂಹ ಪ. ಕೋಪಿಸದಿರು ಕರುಣಾಪಯೋನಿಧಿಯೆ ಮ- ಹಾಪರಾಧಗಳನು ಲೇಪಗೊಳಿಸದಿರು ಅ.ಪ. ಮಧ್ವ ವಲ್ಲಭ ನಿನ್ನ ಸೇವೆಯ ನಡಸುವ ಮಧ್ಯ ಮಧ್ಯದೊಳೆದ್ದು ಹೋದ ತಪ್ಪು ಶುದ್ಧಿಯಿಲ್ಲದ ತಪ್ಪು ಸೂಕ್ತಿ ಪಾಠಗಳೊಳಾ- ಬದ್ಧ ಬರುವ ತಪ್ಪೆನಿದ್ದರು ಕ್ಷಮಿಸಿನ್ನು 1 ಸಂಸಾರ ಲಂಪಟನಾಗಿ ಬಳಲುವೆನು ಕಂಸಾರಿ ನಿನಗಿನ್ನು ಪೇಳ್ವದೇನು ಹಂಸವಾಹನ ಪೀಠ ಹಲಧರನನುಜನೆ ಸಂಶಯಿಸದೆ ಎನ್ನ ಕಾಯೊ ಕಮಲನಾಭ 2 ಪತಿತಜನರಿಗಧಿಪತಿಯಾಗಿರುವೆ ನಾನು ಮತಿಹೀನನೆಂಬುದ ಬಲ್ಲಿ ನೀನು ಪಾದ ಪದ್ಮವೆ ಇನ್ನು ಗತಿ ಎಂದು ನಂಬಿದನ ಮೇಲೆ ಮುನಿಸಿನ್ನೇನು 3 ಪಾತಕ ಕಡಲೊಳು ಪೊರಳುತ ನೆರಳುತ ಯಾತರಿಂದಲು ಏಳಲಾರದಿನ್ನು ಶ್ರೀ ತರುಣಿಯವರ ನಿನ್ನ ಸೇರಿದ ಜಗ ನ್ನಾಥ ದಾಸರ ಪಾದದವಲಂಬಗೊಂಡೆನು 4 ಶ್ರೀಶ ಶೇಷಗಿರೀಂದ್ರ ವಾಸ ನಿನ್ನನೆ ನಂಬಿ ದಾಸ ಕೂಟದಿ ಸೇರಿಕೊಂಡಿಹೆನು ಣಾ ಸಮುದ್ರನೆ ಎನ್ನ ಕಾವದುಚಿತವಿನ್ನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಕೋಲು ಉತ್ಸವಗೀತೆ ಕೋಲುವ ನೋಡುವ ಬನ್ನಿ ಶ್ರೀರಂಗನಾಯಕಿಯ ಕೋಲುವ ನೋಡುವ ಬನ್ನಿರೆಲ್ಲ ಪ ಚಪ್ಪರವನು ಶÀೃಂಗರಿಸಿ ಪಟ್ಟುಪೀತಾಂಬರದ ಮೇಲೆ ಕಟ್ಟುಗಳಿಂದ ವಿಸ್ತರಿಸಿ ಕದಳಿಯಕೊನೆ ಕಬ್ಬು ತೆಂಗಿನ ಫಲಗಳ ವಿಧವಿಧವಾಗಿ ಶೃಂಗಾರ ಮಾಡಿದರು 1 ಭಾದ್ರಪದ ಕನ್ಯಾಮಾಸದಲ್ಲಿ ಶುದ್ಧಪಾಡ್ಯದಲ್ಲಿ ಭದ್ರೆ ಶ್ರೀರಂಗನಾಯಕಿಯು ಬಂದು ಮಜ್ಜನವನು ಮಾಡಬೇಕೆನುತಲೆ ಮೂದ್ರ್ವಾರಮಧ್ಯದಲಿ ತಾ ನಿಂದಳು 2 ತಂದು ಹರವಿದರು ಬತ್ತವ ವಿಸ್ತಾರವಾಗಿ ತಂದಿಟ್ಟು ಕರ್ಪೂರಬಟ್ಟಲುಗಳು ತುಂಬಿ ಕಲ್ಪೋಕ್ತ ದಿಂದಲೆ ಪೂಜೆಯ ಮಾಡಿದರು 3 ಎಂಭತ್ತೊಂಬತ್ತು ಬಟ್ಟಲಲ್ಲಿ ಇರುವ ಉದಕವನು ರಂಭೆಗಭಿಷೇಕವ ಮಾಡೆ ಗಂಧವ ಅಂಬೆ ಶಿರದೊಳು ಧರಿಸಿ ಪೂಮಾಲೆಯ [ಸಂಭ್ರಮದಿ]ಧರಿಸಿ ನಿಂದಳು ದೇವಿ 4 ಸುಖನಿಧಿ ಪದ್ಮಾನಿಧಿಗೆ ಹಣ್ಣಿನ ಹರಿವಾಣವ ಶಂಕೆ ಇಲ್ಲದೆ ಭಕ್ತರು ಪಿಡಿದು [ನಿಂತಿರುವ] ಶಂಖನಾದವು ತಾಳಮೇಳ ವಾದ್ಯಗಳಿಂದ ಪಂಕಜಮುಖಿಗಭಿಷೇಕವ ಮಾಡಿದರು 5 ಪುಷ್ಪದ ಮಂಟಪದಲ್ಲಿ ಪುರುಷೋತ್ತಮನ ಒಪ್ಪವಾದ ಅಶ್ವವ ತಂದಿರಿಸಿದರು ಆನಂದದಿ ಕಲ್ಪೋಕ್ತದಿಂದಲೆ ಪೂಜೆ ನೈವೇದ್ಯವ ಮಾಡಿ ಒಪ್ಪುವ ಕಂಕಣವನು ಕಟ್ಟಿದರಾಗ 6 ರತ್ನದ ಕಿರೀಟವಿಟ್ಟು ಲಲಾಟದಲ್ಲಿ ಮತ್ತೆ ತಿದ್ದಿದ ಕಸ್ತೂರಿಬಟ್ಟು ರತ್ನದ ಪದಕವು ಇಟ್ಟು ಕೊರಳೊಳು ಇಂದಿರೆ ವಂದಾಳು 7 ಮಧ್ಯದ ಕೊಟ್ಟಿಗೆಯಲ್ಲಿ ವಿಪ್ರರು ಕೈಕಟ್ಟಿ ನಿಂದು ಸೇವೆಯ ಮಾಡುತಿರಲು ಅರ್ತಿ ಯಿಂದಲೆ ಧೂಪದೀಪ ನೈವೇದ್ಯದಿ ಲಕ್ಷ್ಮೀ ದೇವಿಗೆ ಪೂಜೆಯ ಮಾಡಿದರು 8 ಭೇರಿ ದುಂದುಭಿ ವಾದ್ಯಗಳಿಂದ ತಾಳಮೇಳವು [ನಾರಿಯರ] ರ ಸಾಲುಗಳಿಂದ ಬಾಣ ಬಿರುಸು ಮತಾಪು ಅಗರುಬತ್ತಿ [ಗಳ ನಡುವೆ] ನಾರಾಯಣನರಾಣಿ ಕೋಲುವಿನಲ್ಲಿ 9 ಛತ್ರಿಚಾಮರ ಸೂರೆಪಾನ ಪಿಡಿಯೆ ಮದ ಹಸ್ತಿಗಳು ಮಾಡುವ ಸಲಾಮು ಸುತ್ತಿ ದೀವಟಿಗೆಯು ತುತ್ತೂರಿ ನಾದವು ಮತ್ತಧಿಕಾರಿಗಳು ಮಂಟಪದಲಿ 10 ಆರುದಿವಸದಲ್ಲೊರೆಗೊಂಡು ಪಾನುಪಟ್ಟಿಯು ಸೂರ್ಯಚಂದ್ರರು ಮುತ್ತಿನಬಟ್ಟು [ಆ]ರಾಗಟೆಹೆರಳು ಭಂಗಾರಗೊಂಡೆಗಳಿಟ್ಟು ವ ಯ್ಯಾರದಿಂದಲೆ ಬಂದಳು ಮಂಟಪಕೆ 11 ಸಪ್ತದಿನದಲಿ ಲಕ್ಷ್ಮೀದೇವಿಗೆ ಉತ್ರಾಜಿಮಾಲೆ ಹಸ್ತವಡಗೆ ಹರಡಿವಂಕಿ ದಕ್ಷಿಣ ಹಸ್ತದಿ ರತ್ನದಹಂಸವು ವಾಮ ಹಸ್ತವ ಮೊಣಕಾಲಿನೊಳಿಟ್ಟಳು 12 ಅಂದುಗೆ ಗೆಜ್ಜೆ ಮುಂಗೈಮುರಾರಿ ಉಂಗುರವು ಕುಂದಣದ ಪಾಗಡವಿಟ್ಟು ಹಿಂದಿನತೋಳಿಗೆ ಬಂದಿ ತಾಯಿತನಿಟ್ಟು ಕುಂದಣದ ಮಂಟಪದಲಿ ಕುಳಿತಳು 13 ಅಷ್ಟಮ ದಿವಸದಲ್ಲಂದು ಸೃಷ್ಟಿಗಿರೀಶ್ವರಿಗೆ ಕಟ್ಟಿದರು ಕಲ್ಕೀತುರಾಯಿ ದೃಷ್ಟಿಯಬಟ್ಟು ರತ್ನದ ಕುಂಡಲ [ಇಟ್ಟು] ಮತ್ತರಗಿಣಿಯನು ಮಾತಾಡಿಸುತ 14 ಮುಕ್ತಿದಾಯಕಿಗೆ ಮೂರು ಪಾವಡೆಯನುಡಿಸಿ ಮತ್ತೆ ವಡ್ಯಾಣವನಿ[ಡಲು] ರತ್ನದ ಹಸ್ತದಿ ಅಭಯವ ಕೊಡುತ [ನಿಂತಳು] ಮೊರ್ನೋಮಿಯ ಮಂಟಪದಲ್ಲಿ 15 ಮುಂದೊಂಭತ್ತು ದಿನದಲ್ಲಿ ರಂಭೆರಂಗನಾಯಕಿಯು ಮಿಂದು ಮಡಿಗಳ ತಾನುಟ್ಟು ಚಂದದಿ ನೈವೇದ್ಯವ ಭಕ್ತರಿಗಿತ್ತು ಬಂದು ಆಸ್ಥಾನದಿ ನಿಂದಳು ದೇವಿ 16
--------------
ಯದುಗಿರಿಯಮ್ಮ
ಕೋಲು ಕೋಲೆ ಕೋಲು ಕೋಲನ್ನ ಕೋಲೆ ಮೂಲೆ ಮೂಲೆಯ ಹೊಕ್ಕು ಅಡಗಿರ್ದ ಕೋಲೆ ಪ ಕೆಂಜಿಗ ಉಡನು ಬಂದು ಮುಂಚಿಕವಲ ಕೊಟ್ಟು ಅಂಚೆಡೆಗಳನೆಲ್ಲ ಸುಲಿದರ್ದ ಕೋಲೆ 1 ಆನೆ ಕುದುರೆಯಿಲ್ಲ ಸೇನೆ ಬಹಳವಿಲ್ಲ ಏನೆಂದು ಬೆಸಗೊಂಬರಿಲ್ಲದ ಕೋಲೆ 2 ಮುನಿಯ ಭಾವನದಂಡು ಮನೆ ಮನೆಗಳ ಹೊಕ್ಕು ಧನಕನಕಂಗಳ ಸುಲಿದಿರ್ದ ಕೋಲೆ 3 ಮಕ್ಕಳು ಮರಿಗಳು ವೃದ್ಧ ಜವ್ವನರನ್ನು ದಿಕ್ಕುದಿಕ್ಕಿನ ಕಾನಿಗಟ್ಟಿದ ಕೋಲೆ 4 ಜನರನ್ನು ತರಿದು ಸುಲಿದು ಕರುಗಳ ತರುಗಳ ಹಿಂಡನು ಹೊಡೆದಿರ್ದ ಕೋಲೆ 5 ಕೊಟ್ಟ ಕಣ್ಣಿಯನೆಲ್ಲ ಕಿತ್ತೊಯ್ದು ಸೂಸ್ಯಾನು ಪಟ್ಟೆ ಪೀತಾಂಬರಗಳ ನೊಯ್ದ ಕೋಲೆ 6 ಕಾಣಿ ಜೀವರನೆಲ್ಲ ಹಾಡಿ ಹಿಳಿದು ಹಿಪ್ಪೆಹೀರಿದ ಕೋಲೆ 7 ಇಟ್ಟವಡವೆ ವಸ್ತು ಇಟ್ಟಲ್ಲಿ ಇಲ್ಲದೆ ಕೆಟ್ಟು ಜನರು ಹೊಟ್ಟೆ ಹೊಡಕೊಂಬರು 8 ಉಟ್ಟು ತೊಟ್ಟುದನೆಲ್ಲ ಸುಲಿದುಬೆತ್ತಲೆ ಮಾಡಿ ಬಿಟ್ಟು ಮನೆಗೆ ಬೆಂಕಿ ಕೊಟ್ಹೋದ ಕೊಲೆ 9 ಕೆಲರ ತಲೆಯ ಕುಟ್ಟಿ ಕೆಲರು ಸುಲಿದು ಬಿಟ್ಟು ಕೆಲರಿಗೆ ಮುರುವಾಳ ವಿಕ್ಕಿದ ಕೋಲೆ 10 ಅಟ್ಟಡಿಗೆಯ ನುಂಡು ಇಟ್ಟೊಡವೆಯ ಕೊಂಡು ಕುಟ್ಟಿ ಖಂಡವ ಚೂರು ಮಾಡಿದ ಕೋಲೆ 11 ಉಪ್ಪಿನಕಾಯಿ ಕೊಡ ತುಪ್ಪ ತೈಲದ ಪಾತ್ರೆ ಜಪ್ಪಿ ವಡೆದು ನೆಲ ಕುಣಿಸಿದ ಕೋಲೆ 12 ಚಿನ್ನ ಚಿಗುರು ಬೆಳ್ಳಿ ಕಂಚು ತಾಮ್ರಗಳನ್ನು ನುಣ್ಣಗೆ ಹೊರೆಗಟ್ಟಿ ಹೊತ್ತೊಯ್ದ ಕೋಲೆ 13 ಉಣ್ಣ ಉಡಲಿಕ್ಕಿಲ್ಲ ಹೊನ್ನು ಕೈಯೊಳಗಿಲ್ಲ ಎಣ್ಣೆ ಬೆಣ್ಣೆಗೆ ಬಾಲ ನಳಿಸಿದ ಕೋಲೆ 14 ಮುಂಜ ಮುಚ್ಚಲಿಕಿಲ್ಲ ಗಂಜಿಗೆ ಲವಣಿಲ್ಲ ಸಂಜೆ ದೀಪಕೆ ತೈಲವಿಲ್ಲದೆ ಕೋಲೆ 15 ಅತಿಥಿಗಿಕ್ಕಲಿಲ್ಲ ಪ್ರತಿಮೆ ಪೂಜೆಗಳಿಲ್ಲ ವ್ರತನೇಮಗಳನು ಕಟ್ಟಿರಿಸಿದ ಕೋಲೆ 16 ತೆಪಕಾರನ ಪದಾರ ಕಾಲಟದೊಳು ಜಪ ತಪಗಳಿಲ್ಲದೆ ಕೊಳ ತನ್ನಿಸಿದ ಕೋಲೆ 17 ನಗರದ ಕೋಲೆದ್ದು ತೆಪರಾರ ಮೇಲ್ಬಿದ್ದು ಜಿಗಿದು ಹಿಂದಕೆ ಜಾರಿ ಜುಣುಗಿದ ಕೋಲೆ 18 ಹಿಂದಣ ಬೆಳೆಮಣ್ಣ ಕೂಡಿತು ಕುಳಿಯಲಿ ಮುಂದಣ ದುದುರಿತು ಹಣ್ಣಾಗಿ ಕೋಲೆ 19 ಕೆಳಗು ಮೇಲಕು ದಂಡು ಬಳಪ್ರಾಂತ ದೊಳುದಂಡು ನೆಲೆಗೊಂಡು ಜನರು ತಲ್ಲಣಿಪರು ಕೋಲೆ 20 ಸುಬ್ಬರಾಯನ ವೀರಭದ್ರನ ಪ್ರಸಾದ ಸರ್ವಜನರ ಬಾಯ್ಗೆ ಬಿತ್ತಣ್ಣ ಕೋಲೆ 21 ನರರೂಪ ಧರಿಸಿ ಲಕ್ಷ್ಮೀಶನು ಹೊಯ್ಸೂವ ಕೋಲೆ 22
--------------
ಕವಿ ಪರಮದೇವದಾಸರು
ಕೋಲು ಕೋಲೆನ್ನ ಕೋಲೆ ಪ ಅಂಜಾನೆ ಗಿರಿಯಲ್ಲಿ | ಸಂಜೀವರಾಯ ಸಹ ಕಂಜನಾಭನಿರುವ | ಅಂಜಿಕ್ಯಾತಕಮ್ಮ 1 ಮೂಡಲು ಗಿರಿವಾಸ | ನಾಡಿಗೊಡೆಯನೆಂದು ಪಾಡುವವರ ದೋಷ | ಓಡಿಸುವನಮ್ಮ 2 ವೆಂಕಟರಮಣನು | ಕಿಂಕರ ಜನಗಳ ಸಂಕಟಗಳ ಕಳೆವ | ಶಂಕೆ ಇಲ್ಲವಮ್ಮ 3 ಈಶ ಶ್ರೀನಿವಾಸ | ದಾಸ ಜನರ ಪೋಷ ರಾಶಿ ದೋಷ ಸುಟ್ಟು | ಲೇಸುಗೈವನಮ್ಮ 4 ಮತ್ಸ್ಯ ಮೂರುತಿ ತ | ನ್ನಿಚ್ಛೆಯಿಂದಲಿ ಬಲು ತುಚ್ಛ ದೈತ್ಯನನು | ಕೊಚ್ಚಿ ಬಿಸುಟನಮ್ಮ 5 ಅಮಿತ ಭಾರ ಪೊತ್ತು ಸುಮನಸರಿಗಮೃತ | ಮಮತೆಲಿತ್ತನಮ್ಮ 6 ಕ್ರೋಡಾಕಾರನಾಗಿ | ರೂಢಿಚೋರನಾದ ಹೇಡಿ ರಕ್ಕಸನ | ತೀಡಿ ಕೊಂದನಮ್ಮ 7 ಘೋರ ರೂಪ ಕೊಂಡು | ಕ್ರೂರ ರಕ್ಕಸನ ದೋರೆ ಕರುಳಕಿತ್ತು | ಪೋರನ ಪೊರೆದನಮ್ಮ 8 ಪುಟ್ಟ ಪೋರನಾಗಿ | ಬೆಟ್ಟದಂತೆ ಬೆಳೆದು ದಿಟ್ಟ ಬಲಿಯ ಶಿರವ | ಮೆಟ್ಟಿ ತುಳಿದನಮ್ಮ 9 ತಾತನ ನುಡಿ ಕೇಳಿ | ಕಾತರನಾಗದೆ ಮಾತೆಯ ಶಿರವನ್ನು | ತಾ ತರಿದಿಟ್ಟನಮ್ಮ 10 ಸೀತೆಯ ಬಿಡಿಸಲು | ಸೇತುವೆಯನು ಕಟ್ಟಿ ಭೂತನನ್ನು ಕೊಂದು | ಖ್ಯಾತಿಗೊಂಡನಮ್ಮ 11 ದ್ವಾರಕಪತಿ ತಾನು | ನಾರಿ ಪಾಂಚಾಲೆಯು ಕೋರಿದ ಕ್ಷಣದಲ್ಲಿ | ಸೀರೆಯ ನೇದನಮ್ಮ 12 ಚಿತ್ತಜನಯ್ಯನು | ಅತ್ತಿತ್ತ ಅಲೆಯುತ ಬೆತ್ತಲೆ ನಾರಿಯರ | ಮುತ್ತುಗೊಂಡನಮ್ಮ 13 ಜಲಜನಾಭನು ತಾ | ಕಲಿಗಾಲ ಕಡೆಯಲ್ಲಿ ಹಲವು ಪಾಪಿಗಳನು | ಫಲದಿ ಕೊಂದನಮ್ಮ 14 ಮುಟ್ಟಿ ಭಜಿಸುವರಿಗೆ | ಇಷ್ಟವಾದ ವರವಕೊಟ್ಟನು ರಂಗೇಶ | ವಿಠಲ ಕೇಳಮ್ಮ 15
--------------
ರಂಗೇಶವಿಠಲದಾಸರು
ಕೋಲು ಕೋಲೆನ್ನಕೋಲೆ ಕೋಲು ಕೋಲೆನ್ನಕೋಲೆ ಸದ್ವಸ್ತುವಿನ ಬಲಗೊಂಬೆಕೋಲೆ ಧ್ರುವ ಕೋಲುನಿಕ್ಕುತ ಬನ್ನಿ ಬಾಲೇರೆಲ್ಲರು ಕೂಡಿ ಮ್ಯಾಲ್ಯೆ ಮಂದಿರದ ಹಾದೀಲಿ ಕೋಲೆ ಮ್ಯಾಲೆ ಮಂದಿರದೊಳು ಬಾಲಮುಕುಂದತಾನು ಲೋಲ್ಯಾಡುತ ಒಳಗಿದ್ದಾನೆ ಕೋಲೆ 1 ಆದಿಗಿಂತಲ್ಯದೆ ಹಾದಿ ಅನಾದಿಯು ಸಾಧಿಸ ಬನ್ನಿ ಒದಗಿನ್ನು ಕೋಲೆ ಸಾಧಿಸಿ ಬರಲಿಕ್ಕೆ ಸಾಧ್ಯವಾಗುತಲ್ಯಾದೆ ಭೇದಿಸಿ ನೋಡಿ ಮನದಲಿ ಕೋಲೆ 2 ಕಣ್ಣಿನೊಳಿಹ್ಯ ಬೊಂಬೆಕಾಣಬರುತ್ತದೆ ಜಾಣ್ಯೇರು ನೀವು ತಿಳಕೊಳ್ಳಿಕೋಲೆ ಜಾಣ್ಯೇರು ನೀವು ಕಾಣದೆ ಹೋಗಬ್ಯಾಡಿ ಜಾಣ್ರಿಸುತ್ಹಾನೆ ಸದ್ಗುರು ಕೋಲೆ 3 ಸದ್ಗುರುಪಾದಕೆ ಸದ್ಭಾವವಿಟ್ಟು ನೀವು ಸದ್ಭೋಧ ಕೇಳಿ ಸಾಧಿಸಿ ಕೋಲೆ ಸಾಧಿಸಿ ಕೇಳಿ ನೀವು ಬುಧಜನರೊಡಗೂಡಿ ಚದುರತನದಲಿ ಅತಿ ಬ್ಯಾಗೆ ಕೋಲೆ 4 ಅರಹುವೆಂದ ಸೀರೆಯನುಟ್ಟು ಕುರವ್ಹೆಂಬ ಕುಪ್ಪಸಲಿ ಇರವಂತಿ ಪುಷ್ಪಲಿ ಮುಡಿದಿನ್ನು ಕೋಲೆ ಮುಡಿದು ಬರಲು ಪೂರ್ಣ ಒಡಗೂಡಿ ಬರುತಾನೆ ಬಡವನಾ ಧಾರಿ ಬಲಗೊಂಬೆ ಕೋಲೆ5 ಬಲಗೊಂಬೆ ಸಾಧನವು ನೆಲೆಗೊಂಡು ಮಾಡಬೇಕು ವಲವ್ಹಾಂಗ ತಾನೆ ಶ್ರೀಹರಿ ಕೋಲೆ ಶ್ರೀಹರಿ ಮುಂದೆ ನೀವು ಸೋಹ್ಯ ತಿಳಿದುಬನ್ನಿ ಸಾಹ್ಯಮಾಡುವ ಇಹಪರಕೆ ಕೋಲೆ 6 ದಾತ ಮಹಿಪತಿಸ್ವಾಮಿ ಸಹಕಾರನೊಬ್ಬ ಶ್ರೀಪತಿಕೋಲೆ ಶ್ರೀಪತಿಸ್ತುತಿ ಕೊಂಡಾಡಲಿಕ್ಕೆ ಪೂರ್ಣ ಭುಕ್ತಿ ಮುಕ್ತಿಯ ನೀಡು ತಾನೆ ಕೋಲೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೋಲೆಂದು ಪಾಡಿರೆ ಕೋಮಲೆಯರೆಲ್ಲ ಅಮ್ಮಯ್ಯಬಾಲೆಯರು ಅರಿಷಿಣ ಕುಂಕುಮ ಹಚ್ಚಿಹೊಯಿದಾರಮ್ಮಯ್ಯ ಕೋಲ ಹೊಯಿದಾರಮ್ಮಯ್ಯ ಪ. ಹಿಂಡು ನಾರಿಯರೆಲ್ಲ ಕೂಡಿ ದುಂಡು ಗಟ್ಟುತ ಕೊಂಡಾಡಿ ಕೃಷ್ಣನ ಕೋ¯ ಹೊಯಿದಾರಮ್ಮಯ್ಯ 1 ಹಸ್ತ ಕಡಗ ಹರಡಿ ದೋರೆ ಹವಳ ಕಂಕಣಹಸ್ತಿಗಮನೆಯರು ಎತ್ತಿ ಕೋಲ ಹೊಯಿದಾರಮ್ಮಯ್ಯ 2 ವಾಲೆ ಮೂಗುತಿ ಮುದ್ದು ಸುರಿಯುತ್ತಜತ್ತಾಗಿ ಜಾಣೆಯರು ಕೋಲ ಹೊಯಿದಾರಮ್ಮಯ್ಯ 3 ನಳಿನ ಮುಖಿಯರಿಟ್ಟ ಕೋಲ ಹೊಯಿದಾರಮ್ಮಯ್ಯ 4 ಮಲ್ಲಿಗೆ ಸಂಪಿಗೆ ಮುಡಿದ ನಲ್ಲೆಯರೆಲ್ಲರುನಮ್ಮ ಫುಲ್ಲನಾಭನ ಪಾಡಿ ಕೋಲ ಹೊಯಿದಾರಮ್ಮಯ್ಯ5 ಚವರಿ ರಾಗಟೆ ಚಲ್ವಗೊಂಡ್ಯ ಛಂದಾಗಿ ಒಪ್ಪುತಚದುರೆಯರು ಛಂದಾಗಿ ಕೋಲ ಹೊಯಿದಾರಮ್ಮಯ್ಯ 6 ಭಾರ ಧರಿಸುತ ರಘುವೀರನ ಕೊಂಡಾಡಿ ಕೋಲ ಹೊಯಿದಾರಮ್ಮಯ್ಯ 7 ನಡುವಿಗೆ ಒಡ್ಯಾಣವಿಟ್ಟು ನಾರಿಯರೆಲ್ಲರು ತಮ್ಮ ಬಡನಡಬಳುಕುತ ಕೋಲ ಹೊಯಿದಾರಮ್ಮಯ್ಯ8 ಉಟ್ಟ ಪೀತಾಂಬರ ಕಾಲಿಗಿಟ್ಟ ಗೆಜ್ಜೆಯುನಮ್ಮ ಧಿಟ್ಟರಮಿಅರಸನೆಂದು ಕೋಲ ಹೊಯಿದಾರಮ್ಮಯ್ಯ9
--------------
ಗಲಗಲಿಅವ್ವನವರು
ಗಳಿಸಿದೆ ನಾಕಳತಿ ತಿಳಿಯದೆ ನಿನ್ನಳತಿ ಅಳೆದು ಹಾಕಿ ತೊಳಲಿ ಬಳಲಿದೆ ಚಿತ್ತ ಹೊಲತಿ 1 ಏಸು ಜನ್ಮ ತಾಳಿ ಹೆಸಲಿಲ್ಲ ಮೂಳಿ ಘಾಸಿಯಾದೆ ಸೋಶಿಲಿನ್ನು ಆಶಿಯಲಿ ಬಾಳಿ 2 ವಿಷಯದಾಶಿವಳಗ ವಶವನೀಗೊಂಡಲಗ ಪಶುವಿನಂತೆಗಳದಿ ಜನ್ಮವ್ಯಸನದಾಶಿ ಕೆಳಗೆ 3 ಏನ ನೀನಾದರ ಜ್ಞಾನಹೀನನಾದರೆ ಭಾನುಕೋಟಿ ತೇಜನ ನೀ ಶರಣು ಪುಗು ಇನ್ನಾರೆ 4 ಪಿಡಿದು ನಿಜಖೂನ ಪಡೆದುಕೋ ಸುಜ್ಞಾನ ಬಿಡದೆ ಸಹಲುತ್ಹಾನೆ ಮಹಿಪತಿಯ ಸ್ವಾಮಿ ಪೂರ್ಣ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಾಂಜ ಸೇದುವ ಬನ್ನಿ, ತಿಳಿವಿನ ಗಾಂಜ ಸೇದುವ ಬನ್ನಿಗಾಂಜ ಸೇದಿದರೆ ನಿಮಗೆ ಭವವಿಲ್ಲ ವೆನ್ನಿ ಪ ಅವಗುಣವೆಂಬ ಭೂಮಿ ಶೋಧಿಸಿ ಅಗೆತ ಮಾಡಿದ ಗಾಂಜಸವನಿಸಿದ ಖೂರಾಕು ಹಾಕಿದ ಸತ್ವವಾದ ಗಾಂಜ1 ಸಾಧನೆ ಎಂಬ ನೀರು ಕಟ್ಟಿದ ಸಡಕು ಆದ ಗಾಂಜಭೇದವೆಂಬ ಕಳೆಯ ಕೆತ್ತಿದ ಬೋಧವೆಂಬ ಗಾಂಜ 2 ಭಜನೆ ಭಾವದಿಂದ ಬೆಳೆದ ಬಡಕು ಆದ ಗಾಂಜಕುಜನವೆಂಬ ಎಲೆಗಳ ಚಿವುಟಿದ ಕಡಕು ಆದ ಗಾಂಜ 3 ನಾನು ಎಂಬ ಹೂವು ಉದುರಿದ ನೊಣ ಹಾರದ ಗಾಂಜಜ್ಞಾನವೆಂಬ ಗೊಂಡೆಗಳಳಿದ ಘನ ತಾನಾದ ಗಾಂಜ 4 ಏನೇನ ಅರಿವು ಎಲ್ಲ ಅಡಗಿದ ಏಕವಾದ ಗಾಂಜತಾನೆ ಚಿದಾನಂದ ಸದ್ಗುರು ವಾದ ತಾನೆ ತಾನಾದ ಗಾಂಜ5
--------------
ಚಿದಾನಂದ ಅವಧೂತರು
ಗುಡಿಯ ತುಂಬ ದೇವರ ಕಂಡೆ | ಅಡಿಯಿಡಗೊಡದೆನ್ನ ಹಿಡಿಕೊಂಡಿತಕ್ಕ ಪ ಕೈಯಿಲ್ಲ ಕಾಲಿಲ್ಲ ಮೂಗಿಲ್ಲ ಮಾರಿಲ್ಲ | ಮೈಯೆಲ್ಲ ನೋಡಲು ಮರಿಯಾದೆ ಇಲ್ಲ | ಸೈಯೆನಿಸಿ ಜಗಕೆಲ್ಲಕೆ ಮಿಗಿಲಾದ ದೇವರು | ವೈಯಾರ ಇಲ್ಲದೆ ಸಿಕ್ಕಿತಕ್ಕ 1 ಹೆಣ್ಣಲ್ಲ ಗಂಡಲ್ಲ ಹಣ್ಣಲ್ಲ ಕಾಯಲ್ಲ | ಹೂವಿಲ್ಲದೆ ಪೂಜೆಗೊಂಡಿಹುದಕ್ಕ | ಪೂಜೆಯ ಮಾಡುವ ಪೂಜಾರಿಯ ನುಂಗಿತು | ಮೂಜಗದೊಳು ಇದು ಸೋಜಿಗವೆನ್ನಿ 2 ಅರಿತು ನೋಡಲು ಬೆರೆತು ನಿಂತಿಹುದಲ್ಲ | ಮರೆತು ಹೋಯಿತು ನಾನೆಂಬುವದೆಲ್ಲ | ಗುರುತವ ಬಲ್ಲದು ಗುರು ಭವತಾರಕ | ಭಜಕರ ಹೊರತು ತಿಳಿಯದು ಜನಕೆ 3
--------------
ಭಾವತರಕರು
ಗುರು ಮುಖ್ಯಪ್ರಾಣದರಸನೆ ನೀ ಎನ್ನ ಕರುಣಿಸು ಕೃಪೆಯಿರಿಸು ಪ. ನಿತ್ಯ ಪರಿಪೂರ್ಣನಾಗುತ ಪರಮಾತ್ಮನ ಮತಕನುಸರಿಸಿ ಧರೆಗೆ ಭಾರವಾದ ದುರುಳರ ವಧೆಗೈದ ಮರುತಾತ್ಮಜ ಮನೋಹರ ಮೂರುತಿಯಾದ 1 ರಾಮನಪ್ಪಣೆಯಿಂದ ಆ ಮಹಾಂಬೋಧಿಯ ಭೀಮ ವಿಕ್ರಮನುರೆ ದಾಂಟಿ ಬಂದು ರಾಮಣೀಯಕರವಾದ ರಾಮಮುದ್ರಿಕೆಯನ್ನು ತಾ ಮಣಿಯುತ ಸೀತಾ ಮಾನಿನಿಗಿತ್ತ 2 ಆ ಮಹಾಲಕ್ಷ್ಮಿಯ ನೇಮವ ಕೈಗೊಂಡು ತಾಮಸಿಚರರ ನಿರ್ನಾಮಗೈದು ಹೇಮಲಂಕೆಯನುರೆ ಹೋಮವಗೈಯುತ ಚೂಡಾಮಣಿ ತಂದಿತ್ತ 3 ಕ್ರೂರ ಕೌರವಕುಲ ಘೋರ ಕಾನನಕೆ ಕು- ಠಾರನಾಗುತಲಿ ಸಂಹಾರಗೈದು ವಾರಿಜಾಕ್ಷನ ಕೃಪೆಯಿಂದ ಮಾಗಧನನ್ನು ಚೀರಿದ ಕುಂತಿಕುಮಾರ ಮೂರ್ಲೋಕದ 4 ಹರಿ ಸರ್ವೋತ್ತಮನೆಂದು ಧರೆಗೆ ಸಾರುತ ಬಂದು ವರ ವೈಷ್ಣವಮತ ಸ್ಥಿರವ ಮಾಡಿ ಧರಣಿಯೊಳಗೆ ತಾತ್ವರ್ಯನಿರ್ಣಯವೆಂಬ ಪರಮ ಗ್ರಂಥವಗೈದ ಗುರು ಮಧ್ವಾಚಾರ್ಯನೆ 5 ಇಂತೀ ಮೂರವತಾರವಾಂತು ದಾನವರಿಂಗೆ ಸಂತಾಪಗೈದ ಮಹಾತುಮನೆ ಚಿಂತಿತಾರ್ಥವನೀವ ಚಿಂತಾಮಣಿ ಎಂದು ಸಂತತ ಭಜಿಪೆನು ಶಾಂತ ಹುನುಮಂತನೆ 6 ಶ್ರೀ ರಾಘವ ಲಕ್ಷ್ಮೀನಾರಾಯಣನ ಪಾದ- ಚಾರಕನಾದ ಗಂಭೀರನಿಗೆ ನೀರಜಾಂಡದೊಳಾರು ಸಮಾನರು ಕ್ಷಿರಸಾಗರಶಯನ ನೀನೊಬ್ಬನಲ್ಲದೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಗುರು ಮುಖ್ಯಪ್ರಾಣದರಸನೆ ನೀ ಎನ್ನ ಕರುಣಿಸು ಕೃಪೆಯಿರಿಸು ಪ. ನಿತ್ಯ ಪರಿಪೂರ್ಣನಾಗುತ ಪರಮಾತ್ಮನ ಮತಕನುಸರಿಸಿ ಧರೆಗೆ ಭಾರವಾದ ದುರುಳರ ವಧೆಗೈದ ಮರುತಾತ್ಮಜ ಮನೋಹರ ಮೂರುತಿಯಾದ 1 ರಾಮನಪ್ಪಣೆಯಿಂದ ಆ ಮಹಾಂಬೋಧಿಯ ಭೀಮ ವಿಕ್ರಮನುರೆ ದಾಂಟಿ ಬಂದು ರಾಮಣೀಯಕರವಾದ ರಾಮಮುದ್ರಿಕೆಯನ್ನು ತಾ ಮಣಿಯುತ ಸೀತಾ ಮಾನಿನಿಗಿತ್ತ 2 ಆ ಮಹಾಲಕ್ಷ್ಮಿಯ ನೇಮವ ಕೈಗೊಂಡು ತಾಮಸಿಚರರ ನಿರ್ನಾಮಗೈದು ಹೇಮಲಂಕೆಯನುರೆ ಹೋಮವಗೈಯುತ ಚೂಡಾಮಣಿ ತಂದಿತ್ತ 3 ಕ್ರೂರ ಕೌರವಕುಲ ಘೋರ ಕಾನನಕೆ ಕು- ಠಾರನಾಗುತಲಿ ಸಂಹಾರಗೈದು ವಾರಿಜಾಕ್ಷನ ಕೃಪೆಯಿಂದ ಮಾಗಧನನ್ನು ಚೀರಿದ ಕುಂತಿಕುಮಾರ ಮೂರ್ಲೋಕದ 4 ಹರಿ ಸರ್ವೋತ್ತಮನೆಂದು ಧರೆಗೆ ಸಾರುತ ಬಂದು ವರ ವೈಷ್ಣವಮತ ಸ್ಥಿರವ ಮಾಡಿ ಧರಣಿಯೊಳಗೆ ತಾತ್ವರ್ಯನಿರ್ಣಯವೆಂಬ ಪರಮ ಗ್ರಂಥವಗೈದ ಗುರು ಮಧ್ವಾಚಾರ್ಯನೆ 5 ಇಂತೀ ಮೂರವತಾರವಾಂತು ದಾನವರಿಂಗೆ ಸಂತಾಪಗೈದ ಮಹಾತುಮನೆ ಚಿಂತಿತಾರ್ಥವನೀವ ಚಿಂತಾಮಣಿ ಎಂದು ಸಂತತ ಭಜಿಪೆನು ಶಾಂತ ಹುನುಮಂತನೆ 6 ಶ್ರೀ ರಾಘವ ಲಕ್ಷ್ಮೀನಾರಾಯಣನ ಪಾದ- ಚಾರಕನಾದ ಗಂಭೀರನಿಗೆ ನೀರಜಾಂಡದೊಳಾರು ಸಮಾನರು ಕ್ಷಿರಸಾಗರಶಯನ ನೀನೊಬ್ಬನಲ್ಲದೆ 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ