ಒಟ್ಟು 3141 ಕಡೆಗಳಲ್ಲಿ , 118 ದಾಸರು , 2209 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಹೊಕ್ಕೆನು ಶಿವನ ತೋರಯ್ಯಾ ಸದ್ಗುರುರಾಯಾ ಪ ಅಂಗದ ಮೇಲೆಯು ಲಿಂಗದಂತಿಹುದೆಂದು ಮಂಗಲಾತ್ಮನ ತಿಳಿಯುವದೀನ್ಯಾಯಾ ಸದ್ಗುರುರಾಯಾ 1 ದುನಿಯಾಕೇ ಬೀಚಮೊತುಮ್ ಬಡೇ ಸಾಬ ಮನಮೊರೆ ಸಾಬ ತುಮ್‍ಆಯಾ ಸದ್ಗುರುರಾಯಾ 2 ಜಮ ನಮೋ ಸ್ಥಲಮೋ ಎಕದಿಸತಹೈ ರಮತಠಡೇ ಮೋರಾ ಪೀಯಾ ಸದ್ಗುರುರಾಯಾ 3 ಪರಮಾತ್ಮಾ ಪಿವಳಾ ಕೀಂ ಧವಳಾ ಮೀ ನೇಣೇ ಗುರುನಾಥಾ ಪಡೇನ ತುಝ್ಯಾ ಪಾಯಾಂ ಸದ್ಗುರುರಾಯಾ 4 ವರ ಸಚ್ಚಿದಾನಂದ ಬ್ರಹ್ಮದಿಂದೆಸೆವ ಗುರುವಿಮಲಾನಂದಾ ಪ್ರಿಯಾ ಸದ್ಗುರುರಾಯಾ 5
--------------
ಭಟಕಳ ಅಪ್ಪಯ್ಯ
ಶಶಿಮುಖಿ ಜಾನಕಿ ರಮಣ ವಸುಧೆಯೊಳಗೆ ನಿಮ್ಮ ಭಜನೆಯ ಮಾಡುವರ ಶಿಶುವುಯೆಂದು ತಿಳಿದು ಶೀಘ್ರದಿ ರಕ್ಷಿಸೊ ಪ ಪಶುಪತಿ ರಕ್ಷಕ ಪಾವನ ಮೂರ್ತಿ ಪಶುಪಾಲಕನಾದ ಪರಮಾತ್ಮ ಕುಸುಮಜನನು ಅತಿಕರುಣದಿ ನೀನು ಕುಶಲದಿ ಪಡೆದ ಗುಣವಂತಾ ಹಸ ಮೀರಿನಡೆವಂತ ಅನೇಕ ದುಷ್ಟ ಅಸುರರ ಛೇದಿಸಿದ ಬಲವಂತಾ ದಶದಿಕ್ಕಿನೊಳಗೆ ದಾರನು ಕಾಣೆನೊ ದಶವಂತನು ನಿನಗಾರು ಸರಿಹಾರೊ 1 ಪಿತೃವಾಕ್ಯ ಪರಿಪಾಲನೆ ಮಾಡಿದ ಪುತ್ರನು ಅನಿಸಿದ ಪುಣ್ಯನಿಧಿ ಪತಿ ಧರ್ಮವ ಸರ್ವದಾ ನಡೆಸುವ ಸತ್ಯಮೂರ್ತಿ ಸೌಭಾಗ್ಯನಿಧಿ ಶತದ್ರೋಹಿಯಾಗಿ ಸೀತೆಯ ಒಯ್ದನ ಶತಮುಖನಯ್ಯನ ಸಂಹರಿಸಿದಿ ಸತತ ವಿಭೀಷಣ ಭಕ್ತಿಯಿಟ್ಟ ಸಲುವಾಗಿ ಲಂಕೆಯ ಧಾರೆಯನೆರದೀ 2 ಯಾದವ ಕುಲಪತಿ ಯಶೋದೆನಂದನ ವ್ಯಾಧನ ರಕ್ಷಿಸಿದಿ ವಿಶ್ವೇಶ ಬಾಧಕ್ಕೆ ಒಳಗಾಗಿ ಕರಿಕೂಗಲು ಮಕರಿ ಬಾಧೆಯ ತಪ್ಪಿಸಿದ ಪರಮೇಶಾ ಸಾಧು ಸಜ್ಜನ ಸರ್ವರ ಸಲಹುವ ಸಾಧು ಗುಣಾನಂದ ಸರ್ವೇಶಾ ಮಾಧವ `ಸಿರಿಹೆನ್ನೆ ವಿಠಲ' ನಿನ್ನಯ ಮೋದವ ತೋರೋ ಜಗದೀಶಾ 3
--------------
ಹೆನ್ನೆರಂಗದಾಸರು
ಶಶಿವದನೇರೆಲ್ಲ ದಿವಸಿವ್ರತವ ಮಾಡಿರೇ ಶಶಿಧರನ ಮಡದಿಯಾ ಭಜಿಸಿ ಪಾಡಿರೇ ಪ ಕತ್ಲೆರಾಯನ ಪತ್ನಿಯೂ | ಸುಪುತ್ರನ್ನ ಪಡೆಯಲೂ ಇತ್ತಳು ವಸ್ತ್ರಗಳನ್ನು ಚೆಂದದಿ ದ್ವಿಜರಿಗೆ ಕೊಡಲೂ ಪಡೆದಳು ಪುತ್ರನಾ ಬುಧರು ಕಾಳಿಂಗ ನೆಂದು ಕರೆದರು ಪರಿ ಪರಿವಿಧದಿಂದ ರಾಜರು ಹರುಷಗರೆದರೂ 1 ಗಿರಿಕಾನನದಿ ಚಲಿಸಿ | ಮೃಗವ ಸಂಹರಿಸೀ ಬಾಲಕನೂ | ಬರುತಿರಲು ಬಾಲಕನು ವ್ಯಾಘ್ರದ ದನಿಕೇಳಿ ಮೂರ್ಛೆಗೈದು ಮೃತನಾದನು 2 ಮೃತನಾದ ಸುತಗೆ | ಸತಿಯ ಕೊಡಬೇಕೆಂದು ಸಾರಿಸಿದ ಸತತ ದ್ರವ್ಯ ಕೊಡುವೆನೆಂದು ಮಾತ ನಾಡಿದೆ ದ್ವಿಜನಸುತನ ಸತಿಯ ತ್ಯಜಿಸಿ ಹೋಗಿರಲು ನಿಜಸುತಗೆ ಭಗಿನಿಯ ಕೊಡುವೆನೆಂದು ನುಡಿದಾನು 3 ಬೆಳ್ಳಿ ಬಂಗಾರ ಸಹಿತ ನಮಗೆ ಇರುವೋದೂ ಕನ್ನಿಕೆಗೆ ಮಾಂಗಲ್ಯ ಬಂಧನ ಮಾಡಿಹೋದಾರು 4 ರಾಜನು ಹೋಗುವಾಗ | ಸೊಸಿಯಮನೆಗೇಳೆಂದನು ಪತಿಯ ಬಿಟ್ಟು ಹ್ಯಾಂಗೆ ಮನೆಗೆ ಬರುವೋದೆಂದಳು ಪತಿಯ ಬಿಟ್ಟು ಬಂದರೆ ಪತಿವ್ರತವು ಇರುವೋದೆ ಹಿತವು ಬಯಸಿ ಬಂದರೆ ಸದ್ಗತಿಯು ದೊರೆವುದೇ 5 ಒಂದು ದಿನ ಸುಂದರಿ ಬಂದವರ ಕೇಳಿದಳು ಇಂದು ದಿವಸಿ ವ್ರತವು ಅಂದರು ಹಿಂದೆ ಗೌರಿಪೂಜಿಸಿದೆ ಮುಂದೆ ವ್ರತವನು ಬಂಧು ಬಳಗೆ ಇಲ್ಲದಲೆ ಮಾಡುವುದೇನು 6 ನಾರುಬತ್ತಿ ನೀರು ಎಣ್ಣೆ ಗೌರಿಗೆ ಮಾಡಿದಳು ಅಪಾರ ಸದಿಗೆ ಮುರಿದುಗೌರಿ ಪೂಜಿಸಿದಳು ಹರತಾ ಭಂಡಾರ ಒಡೆದು ಹರುಷಗರೆದನು ವರ ಕಾಳಿಂಗ ಕ್ಷಣ ದೊಳೆದ್ದು ಮಾತಾಡಿದನು ಪತಿಯಸಹಿತಾಗಿ ತಮ್ಮ ಗೃಹಕೆ ಬಂದರು ಸತತ ನಾರಸಿಂಹನ ಸ್ಮರಣೆ ಮಾಡಿದರು 7
--------------
ಓರಬಾಯಿ ಲಕ್ಷ್ಮೀದೇವಮ್ಮ
ಶಾಂತಿಯ ಕರುಣಿಸೊ ಈ ಮನಸಿಗೆ ಶಾಂತಿಯ ಕರುಣಿಸೊ ಪ ಶಾಂತಿಕರುಣಿಸಿ ನಿನ್ನಂತರಂಗದಿ ನಿಮ್ಮ ಚಿಂತೆ ಇರಿಸು ಕರುಣಾಂತರಂಗ ಹರಿಅ.ಪ ವಿಲಸಿತಮತಿ ಕೊಡೊ ಮನವು ಚಲಿಸದಪದ ನೀಡೋ ಸುಲಭದಿ ತವಪಾದ ಒಲಿಸಿ ನಲಿಯುವ ದಾಸರೊಳಗೆ ಕೂಡಿಸಿ ಎನ್ನ ನೊಲಿದು ರಕ್ಷಣೆಮಾಡೊ 1 ಹಲುಬಾಟ ದೂರಮಾಡೊ ಎನ್ನಯ ಪ್ರಳಯ ಗುಣೀಡ್ಯಾಡೊ ಗಲಿಬಿಲಿ ಸಂಸಾರದೊಲಿಮಿಲಿ ಬಳಲುವ ಹೊಲೆಮತಿ ಕಳೆದೆನ್ನ ಸಲಹೆಲೊ ಜ್ಞಾನದಿ 2 ಮರೆಯ ಬೇಡ ಎನ್ನ ಕರುಣಾ ಭರಣ ಭಕ್ತಪ್ರಾಣ ಹರಿವ ಜಗದಿ ಎನ್ನ ಪರಿಪರಿ ನೋಯ್ಸದೆ ಪರಮಮುಕ್ತಿಯನಿತ್ತು ಪೊರೆಯೊ ಶ್ರೀರಾಮ3
--------------
ರಾಮದಾಸರು
ಶಾಮ ಸುಂದರ ಪ್ರೇಮವÀ ತೋರೆಲೊ ಪ ತಾಮಸವಿಲ್ಲದೆ ಕಾಮಿತಗಳ ನೀಡೊ ಅ.ಪ ಹಿಂದೆ ಅಜಮಿಳ ಒಂದನರಿಯದೆ ಕಂದನನ್ನು ನಾರಾ ಎಂದು ಕರೆಯಲು ಬಂಧುವೆಂದರಿತು ಮಂದಹಾಸದಿಂದ ಬಂದು ರಕ್ಷಿಸಿದೆ ಎಂದು ಕೇಳಿರುವೆ 1 ಕ್ರೂರ ಶಾಸನ ನಾರಿ ದ್ರೌಪದಿಯ ಸೀರೆ ಸೆಳೆದು ಮಾನ ಸೂರೆಗೊಳುತಿರೆ ಸಾರಿ ಕೂಗಲು ಭೂರಿದಯವನು ತೋರಿರುವೆ ಎಂದು ಕೋರಿರುವೆ ನಿನ್ನ 2 ಮುನ್ನ ಮಾಡಿದ ಎನ್ನ ಪಾಪಗಳಿಗೆ ಖಿನ್ನನಾಗಿರುವೆ ಎನ್ನ ಮನದಲಿ ಮನ್ನಿಸುತ್ತ ಸುಪ್ರಸನ್ನನಾಗಿ ಸದಾ ಎನ್ನ ಹೃದಯ ಶುದ್ಧಿಯನ್ನೆ ಮಾಡಿ ಪೊರೆಯೊ 3
--------------
ವಿದ್ಯಾಪ್ರಸನ್ನತೀರ್ಥರು
ಶಿವ-ಪಾರ್ವತಿ ಅಗಜೆ ನಿನ್ನೊಗತನಕೆ ಜಗ ನಗುವುದೇ ನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ ಪ ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡ ತೊಟ್ಟ ತೊಗಲುಡುಗೆ ತಲೆಯೋಡು ಕೈಯ ಭೂತೇಶ ಬಲು ಸಿಟ್ಟಿನವನಂಗಸಂಗ ಬಯಸಬಹುದೆ 1 ಆರುಮೊಗದವನೊಬ್ಬ ಆರ್ತಜನು ಮೊಲೆಪಾಲು ಕಾರಿ ಕಡುಮುನಿದು ಕಂಡರೆ ಸೇರರು ಊರಿಗುಪಕಾರಿ ಒಡಲಹರಕ ಗಜಮುಖನು ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ 2 ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ ಭುವನದೊಳಗಾವಲ್ಲಿ ಕಾಣೆನಿನ್ನು ಕವಿಜನಗಳೇನೆಂದು ಬಣ್ಣಿಸಿದರೊ ತಿಳಿಯೆ ಭವದೂರ ಶ್ರೀದವಿಠಲರಾಯ ಬಲ್ಲ 3
--------------
ಶ್ರೀದವಿಠಲರು
ಶಿಶುಗಳಪರಾಧಕೆ ಶಿಕ್ಷೆ ಕಣ್ಣೀಲಲ್ಲದೇ ಯಶವ ಬಡಿಗೋಲವನು ಎತ್ತುವರೇ ರಂಗಾ ಪ ಇಲಿಗೆ ಹೆಬ್ಬುಲಿಯಾಕೆ|ಮೊಲಕೆ ಮದಗಜವ್ಯಾಕೆ| ಕಳೆತ ಹಣ್ಣಿಗೆ ಮತ್ತೆ ಕರಗಸ್ಯಾಕೆ| ಕಲೆ ಬಿದ್ದ ಕನ್ನಡಿಗೆ ಗುದ್ದಲಿಯ ತರಲೇಕೆ| ಗುಳಲಿ ಕಾಯಿಗೆ ಹೊತ್ತಗಲ್ಲ ವ್ಯಾಕೆ 1 ಹಳ್ಳಗೆ ಹಡಗವ್ಯಾಕೆ|ಕೊಳ್ಳಿಗೆ ಕೊಡ ಜಲವ್ಯಾಕೆ| ಮುಳ್ಳು ಮುರಿದುದಕ ಮೊನೆ ಹಾರಿ ಯಾಕೆ| ಮಲ್ಲಿಗೆ ಹೋವಿಗೆ ಬಂಧ ಹಗ್ಗದಲ್ಯಾಕೆ| ಹಲ್ಲಿ ಬೆದರಿಸೆ ಹೊಡೆವ ಭೇರಿಯಾಕೆ 2 ಜ್ಞಾನಹೀನರ ನಮ್ಮ ತಪ್ಪನೆಣಿಸಿದುರಿತ| ಮೊನೆಗಾಣಿಸುತ ಬನ್ನಿ ಬಡಿಸುವುದುಚಿತವೇ| ದೀನವತ್ಸಲ ತಂದೆ ಮಹಿಪತಿ ಸುತ ಪ್ರಭುವೇ| ನ್ಯೂನಾರಿಸದೇ ನಿನ್ನವನೆಂದು ಸಲಹೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುಭ ಮಂಗಲಂ |ಮಂಜುಕರ ಲಾಲಿತ ಕುರಂಗಗೆ ||ಮಂಗಲ ಮೌನಿ ಮಾನಸ ಸಂಗಗೆ |ಮಂಗಲಂ ಮಂದಿರೀಕೃತ ಶೈಲಶೃಂಗಗೆಮಂಗಲಂ ಮಲ್ಲಿಕಾರ್ಜುನ ಲಿಂಗಗೆ ಪ ಚಾರು ಕಪರ್ದಿಗೆ ಗುಹ ಗಣಾಧಿಪ ಗುರುಗೆ | ಗೋರಾಜ ವಾಹನಗೆ |ಗಿರಿಜಾಂತರಂಗ ವಾರಿಜಭೃಂಗಗೆ 1 ಕರ್ಪೂರ ಗೌರಗೆ ಕಲ್ಪಾಂತವೀರಗೆ | ಕಾಲಾಗ್ನಿ ಕಿಲಕಾಲಿತ ಮಾರಗೆ |ಕಾಕೋಲ ಕಂಧರಗೆ ಕಾಶೀ ವಿಹಾರಗೆ |ಕಾಕೋದರಾಭರಣ ಕಮನೀಯಗೆ 2 ವಿಧು ಶಕಲಾಧಾರಿಗೆ ವಿಶ್ವಹಿತಕಾರಿಗೆ ವಿಯದಟನ ವಿಕಟ ಪುರ ಸಂಹಾರಿಗೆ | ವಿಮಲ ವಿದ್ಯಾನಿಧಿಗೆ |ವಿಧಿವಂದ್ಯ ರುಕ್ಮ ಪಾಡುಕ ಪಾದಗೆ 3 ಮಾಧವ |ಮಂಗಳ ಕರತರಂಗನ | ಅರಿತತಿ ಭಂಗವ ಬಿಡಿಸುತಕಂಗಳ ಸದೋದಿತ ರುಕ್ಮ 4
--------------
ರುಕ್ಮಾಂಗದರು
ಶುಭವೀವ ನಿರುತದಲಿ ಮಂದಹಾಸಾ ಪ ಅಭಯಗಿರಿಯ ವಾಸಾ ಶ್ರೀ ಶ್ರೀನಿವಾಸ ಅ.ಪ. ಧೇನಿಪರ ಮನ ಚಿಂತಾಮಣಿಯೋ | ದೇವ | ನೀನೆ ಗತಿಯೆಂಬುವರ ಧಣಿಯೋ || ಜ್ಞಾನಮಯ ಸುಖದ ಸಂದಣಿಯೋ | ಪುಣ್ಯ | ಕಾನÀನವಾಸ ಸುರರ ಖಣಿಯೋ 1 ವಜ್ರ ಪಂಜರನೋ | ದೇವ | ದುರುಳರಿಗೆ ವೀರ ಜರ್ಝರನೋ || ದುರಿತಕದಳಿಗೆ ಕುಂಜರನೋ | ವರಕಲ್ಪ ಕಲ್ಪ ವಿಚಲನೋ 2 ಪರಮೇಷ್ಠಿ ಶಿವರೊಳಗೆ ಯಿಪ್ಪ | ದೇವ | ಮರುತನ್ನ ಹೆಗಲೇರಿ ಬಪ್ಪಾ || ಶರಣರಿಗೆ ವರವೀಯುತಿಪ್ಪಾ | ಸಿರಿ ವಿಜಯವಿಠ್ಠಲ ತಿಮ್ಮಪ್ಪಾ 3
--------------
ವಿಜಯದಾಸ
ಶುಭವೆನ್ನಿರೆ ಎಲ್ಲ ಶುಭವೆನ್ನಿರೆ ಪ ಅಭಯ ಹಸ್ತದಿ ಉಭಯಕುಶಲ ಕಾಯುವ ಹರಿಗೆ ಅ.ಪ ಆಲದೆಲೆಯ ಮೇಲೆ ಪವಡಿಸಿ ಬಂದ ಹಾಲುತನದ ಬದುಕ ಭೂಮಿಗೆ ತಂದ ಹಾಲುಗಲ್ಲದ ಮುದ್ದÀು ಕೃಷ್ಣನು ಬರುತಿಹ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 1 ನಟ್ಟನಡುರಾತ್ರಿಯಲಿ ದಿಟ್ಟ ಕಾವಲಿನಲ್ಲಿ ದಟ್ಟ ಕತ್ತಲನೆಲ್ಲ ಜಗದಿಂದ ಜಾಡಿಸುತ ಬಟ್ಟ ಬೆಳಕನು ಬೀರಿ ಮೂಡುತಿಹ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ2 ಅಷ್ಟಮಿಯ ದಿನದಂದು ರಂಗವಲ್ಲಿಯ ಮೇಲೆ ಇಷ್ಟತಿಂಡಿಗಳನಿಷ್ಟಿಷ್ಟೆ ಮೆಲ್ಲಲು ಪುಟ್ಟ ಹೆಜ್ಜೆಯನಿಟ್ಟು ಬರುತಿರುವ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 3 ರುಕುಮಾಂಗದನ ತಂತ್ರ ಫಲಿಸದಂತಳಿಸಿ ರುಕುಮಿಣಿಯ ಮನಗೆದ್ದು ರಥದ ಮೇಲಿರಿಸಿ ಅಕ! ಅಲ್ಲಿ ಬರುತಿಹ ಮದುವಣಿಗ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 4 ಚೆಲುವ ಚೆನ್ನಿಗ ನಮ್ಮ ಜಾಜೀಪುರೀಶಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 5
--------------
ನಾರಾಯಣಶರ್ಮರು
ಶೇಷ ಪರ್ಯಂಕ ಶಯನ ವಿಷಯದಭಿ ಲಾಷೆ ಪರಿಹರಿಸಿ ಕಾಯೋ ಪ ರೆನದೆ ಮನೆಮನೆ ತಿರುಗಿದೆ ಅನಿಮಿಷೋತ್ತಂಸ ನಿನ್ನ ಪಾದವೊಂ ದಿನ ಭಜಿಸಿದವನಲ್ಲವೋ 1 ಹರಿ ಗುರುಗಳನು ನಿಂದಿಪ ನೀಚರನು ಸರಿಸಿ ಅವರನು ಸ್ತುತಿಸಿದೆ ಪೊರೆಯಲೋಸುಗ ಉದರವ - ಜನರಿಂದ ಹರಿದಾಸನೆನಿಸಿಕೊಂಡೆ 2 ಭಗವಂತ ನಿನ್ನ ಗುಣವ ವರ್ಣಿಸದೆ ಭಗವತಿಯರವಯವಗಳಾ ಸೊಗಸಿನಿಂದಲಿ ವರ್ಣಿಸಿ ಎನ್ನ ನಾ ಲಗೆ ಎರಡು ಮಾಡಿಕೊಂಡೆ 3 ಸರ್ವಪ್ರಕಾರದಲ್ಲಿ ಹಗಲಿರುಳು ದುರ್ವಿಷಯಕೊಳಗಾದೆನೋ ಶರ್ವಾದಿ ವಂದ್ಯ ಚರಣಾ ನೀನೊಲಿ ದುರ್ವಿಯೊಳು ಸಲಹ ಬೇಕು 4 ಉಪರಾಗ ಪರ್ವಗಳಲಿ ಸ್ನಾನ ಜಪ ತಪ ಅನುಷ್ಠಾನ ಜರಿದು ನೃಪರ ಮಂದಿರವ ಕಾಯ್ದು ಧನವ ತಂ ದುಪ ಜೀವಿಸಿದೆನೊ ಜೀಯಾ 5 ವೇದ ಶಾಸ್ತ್ರಾರ್ಥಗಳನು ತಿಳಿದು ಸ ನ್ಮೋದ ಬಡದಲೆ ಕುಶಾಸ್ತ್ರ ಓದಿ ಪಂಡಿತನೆನಿಸಿದೆ ಕೀರ್ತಿ ಸಂ ಪಾದಿಸಿದೆ ವ್ಯರ್ಥ ಬಾಳಿದೇ 6 ವೈರಾಗ್ಯ ಪುಟ್ಟಲಿಲ್ಲ ಘೋರ ಸಂ ಸಾರದೊಳು ಮಗ್ನನಾದೆ ಸೂರಿಗಳ ಮಧ್ಯದಲ್ಲಿ ಬುಧನಂತೆ ತೋರುವೆನು ನೋಳ್ಪ ಜನಕೆ 7 ನಾ ಮಾಡ್ದ ಪಾಪರಾಶಿ ಎಣಿಸಲ್ಕೆ ತಾಮರಸಭವಗಸದಳ ಸ್ವಾಮಿ ಎನಗೇನು ಗತಿಯೋ ಭಾರವಾದೆ ಈ ಮಹಿಗೆ ಪ್ರತಿದಿನದಲೀ 8 ಭೂತ ಸಂಬಂಧದಿಂದ ಬಹುವಿಧದ ಪಾತಕವೆ ಸಮನಿಸಿದವೋ ದಾತೃನೀ ಕಡೆ ಗೈದಿಸೋ ಭವದಿ ಜಗ ನ್ನಾಥ ವಿಠ್ಠಲ ಕೃಪಾಳೋ 9
--------------
ಜಗನ್ನಾಥದಾಸರು
ಶೋಕವ್ಯಾತಕೆ ಮನವೆ ನಿನಗೆ ಇನ್ನು ಪ. ಈ ಕುಮಾರಕ ನಿನಗೆ ಗತಿಯ ವಿಧಿಸುವನೇನೊ ಅ.ಪ ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠ ಪಿತೃ ಪಾರ್ಥಾದಿ ಮಹಧೀರರು ಇಷ್ಟು ಮಂದಿರಲಾಗಿ ಅಭಿಮನ್ಯು ಪ್ರಾಣವನು ಬಿಟ್ಟು ಹೋಗಲು ಒಬ್ಬರಾದರುಳುಹಿದರೇನೊ 1 ವಸಿಷ್ಠ ಮುನಿಪರಿಗೆ ನೂರುಮಂದಿ ಸುತರು ಅಸಮ ಸಾಸಿಗರು ಮಹ ಶೀಲಜ್ಞರು ಕುಶಲದಿಂದಿರುತಿರ್ದು ಅ-ಕಾಲ ಮೃತ್ಯುವಿನ ವಶರಾಗಿ ಪೋದರು ನೋಡಿ ಅಚ್ಚರಿಯ2 ಇಂಥವರಿಗೀ ರೀತಿ ನಿನಗಾವ ಸ್ವಾತಂತ್ರ್ಯ ಸಂತೋಷವನು ತೊಡೋ ಮನಸಿನಲ್ಲಿ ಕಂತು ಜನಕ ನಮ್ಮ ವಿಜಯವಿಠ್ಠಲನಂಘ್ರಿ ಸ್ವಾಂತದಲ್ಲಿ ನೆನೆನೆನೆದು ಸುಖಿಯಾಗು ಮನವೆ3
--------------
ವಿಜಯದಾಸ
ಶೌರಿ ಬಾರೋ ಭಕ್ತರ ದೊರೆ ಬಾರೋ ಬಾಬಾ ಮನೆಗೆ ಪ ಚಾರುತರ ನವರತುನದ ಶೃಂ- ಗಾರ ರಥದೊಳು ಕುಳಿತು ಬೇಗನೇ ಭೇರಿ ವಾದ್ಯಗಳೆಲ್ಲ ಮೊಳಗಲು ನಾರಿ ರುಕ್ಮಿಣಿ ಭಾಮೆ ಸಹಿತಅ.ಪ ಸುರರು ಅಸರರು ಕೂಡಿ ಶರಧಿಯ ಮಥಿಸಲು ಭರದಿ ಪುಟ್ಟಲು ಸುಧೆಯು ಪರಮ ಹರುಷದಿಂದ ದೊರಕಿತಮೃತವೆಂದು ಅಸುರರೆಲ್ಲರು ಬರಲು ಬೆರಗಾಗಿ ಸುರರೆಲ್ಲ ಉಪಾಯವನರಿಯದೆ ಗಗನ ನೋಡುತಿರಲು ತ್ವರದಿ ಶ್ರೀಹರಿ ಅವರ ನೋಡುತ ಪರಿಪರಿಯ ಆಭರಣ ಪೀತಾಂ- ಬರಗಳಿಂದಲಂಕರಿಸಿ ಸುಂದರ ತರುಣಿ ರೂಪವ ಭರದಿತಾಳಿದೆ 1 ಹರಿಯ ಸ್ತ್ರೀರೂಪವ ಪರಶಿವ ಸ್ಮರಿಸುತ ಮರಳಿ ನೋಡಲಪೇಕ್ಷಿಸೆ ಪರಿ ಪ್ರಾರ್ಥಿಸೆ ಪರಮಾತ್ಮ ನುಡಿದನು ಇದುತರವಲ್ಲೆನುತ ಉರಗ ಭೂಷಣನ ಪ್ರಾರ್ಥನೆ ಸಲಿಸುವೆನೆಂದು ತರುಣಿಯಾದನು ಹರಿಯು ಪರಮಸೂಕ್ಷ್ಮದ ವಸನ ವಡ್ಡ್ಯಾ- ಣಗಳಲಂಕರಿಸುತ್ತ ವನದೊಳು ಚರಿಸುತಿರೆ ಹರ ಬೆರಗಾಗಿ ಹಿಂದೋ- ಡುತಲಿ ಬರೆ ಮರೆಯಾದ ದೇವನೆ 2 ಹಿಂದೆ ದೈತ್ಯನು ಬಹುಚಂದದಿ ತಪಗೈದು ಕಂದುಗೊರಳನ ಮೆಚ್ಚಿಸೇ ಬಂದನಾಗಲೇ ಶಂಭು ಇಂದುವರ ಬೇಡೆನಲು ವಂದಿಸಿ ಬೇಡಿದ ವರವ ತಾನು ಅಂದು ವರಗಳ ಕೊಟ್ಟು ಹಿಂದಿರುಗಲು ಶಿವನು ಹಿಂದೆ ಬೆನ್ನಟ್ಟಿದ ರಕ್ಕಸನೂ ಹಿಂದÀುರಗದಲೆ ಓಡುತಲೆ ಶ್ರೀ ತಂದೆ ಕಮಲನಾಭ ವಿಠ್ಠಲ ನೆಂದು ಮೊರೆಯಿಡೆ ಕೇಳಿ ತ್ವರದಲಿಬಂದು ರಕ್ಷಿಸಿ ಕಾಯ್ದ ಶ್ರೀಹರಿ 3
--------------
ನಿಡಗುರುಕಿ ಜೀವೂಬಾಯಿ
ಶೌರಿ ಬಾರೋ ಶ್ರೀಹರಿ ಪ ಬಾರೋ ಬಾರೋ ಕರುಣಾನಿಧಿ ನಿನ್ನನು ಬಾರಿ ಬಾರಿಗೆ ಸಿರಬಾಗಿ ನಮಿಸುವೆನು ಅ.ಪ ಮಾರನಯ್ಯನೆ ಮಂಗಳರೂಪ ತೋರೊ ಬೇಗನೆ ಸಾರಸಾಕ್ಷ ಸನ್ಮಂಗಳ ಮಹಿಮನೆ ತೋರೋ ನಿನ್ನ ಮಹಾ ಮೀನರೂಪವನು 1 ಸುಂದರಾನನ ಚಂದಿರವದನ ಮಂದಹಾಸನೆ ದುರಿತ ಕಳೆವಂದದಿ ಬೆನ್ನಿಲಿ ಮಂದರವೆತ್ತಿದ2 ಆದಿದೈತ್ಯನು ಭೂದೇವಿಯಪಹಾರ ಗೈದನು ಆ ದಿತಿಜರ ಸಂಹಾರ ಮಾಡಲು ನೆಲ ವರಾಹ ಬೇಗ 3 ಕಂದನಾಡಿದ ಆ ನುಡಿ ಕೇಳಿಯಾನಂದ ತಾಳಿದ ಮಂದರೋದ್ಧರ ಮುಚುಕುಂದ ವರದ ಸುರ- ಗಂಗೆಯ ಪಿತ ನರಸಿಂಗರೂಪದಿ 4 ಬಾಲರೂಪದಿ ಬೇಡಿದ ದಾನ ಭೂಮಿ ಮಾತ್ರದಿ ಬೇಡಿದುದನೆ ಕೊಟ್ಟಾಮಹೀಪಾಲನ ದೂಡಿ ಪಾತಾಳಕ್ಕೆ ಬಾಗಿಲ ಕಾಯ್ದೆ 5 ಶೂರ ರಾಜರ ಸಂಹಾರ ಮಾಡಿ ತೋರಿ ಶೌರ್ಯವ ಸಾಗರಶಯನಗೆ ತೋರಿ ಪರಾಕ್ರಮ ಶೂಲಿಯ ಧನುವಿತ್ತೆ ರೇಣುಕಾತ್ಮಜ 6 ವಾನರಾಧಿಪ ಹಗಲಿರುಳು ಭಕ್ತಿಮಾಡಿ ಧ್ಯಾನಿಪ ಶ್ರೀ ಮಾನಿನಿಯಳ ಕೈಪಿಡಿಯುತ ಅಯೋಧ್ಯದಿ ಮೆರೆದ ಶ್ರೀರಾಮ ಚಂದಿರನೆ 7 ಪಾಂಡುನಂದನ ಮಾಡಿದ ನಿನ್ನ ಬಂಡಿ ಬೋವನ ಸಂದೇಹಿಸದಲೆ ಅಂದು ಅವರ ಮನೆ ಎಂಜಲ ಬಳಿದ ಮುಕುಂದನೆ ಬೇಗದಿ 8 ಮಂಗಳಾತ್ಮಕ ತ್ರಿಪುರರ ಮದ ಭಂಗನಾಶಕ ಮಂಗಳಮಹಿಮ ವಿಹಂಗವಾಹನ ಸುರ ಸಂಗೀತಲೋಲ ಕೃಪಾಂಗ ದಯಾನಿಧೆ 9 ತೇಜಿಯನೇರುತ ಸುಜನರು ಮಾಳ್ಪಪೂಜೆಗೊಳ್ಳುತ ರಾಜೀವಾಕ್ಷ ರಕ್ಕಸ ಸಂಹಾರಕ ಅ- ಪಾರ ಮಹಿಮ ರಥವೇರುತ ತವಕದಿ 10 ಕಂಜಲೋಚನ ಕಮಲಾಯತಾಕ್ಷ ಮಂಜುಭೂಷಣ ಕಂಜದಳಾಂಬಕ ಕಮಲನಾಭ ವಿಠ್ಠಲಝಗಝಗಿಸುವ ಮದ್ಹøದಯ ಮಂಟಪಕೇ 11
--------------
ನಿಡಗುರುಕಿ ಜೀವೂಬಾಯಿ
ಶ್ರಯಧೇನು ಬಂತು ಮನಿಗೆ ದಯ ಕರುಣದಿಂದೊಲಿದು ಸರ್ವಾರ್ಥಗರೆವುತಲಿ ಧ್ರುವ ತನ್ನಿಂದ ತಾನೊಲಿದು ಚೆನ್ನಾಗಿ ತೋರ್ವಿಳಿದು ಭಿನ್ನವಿಲ್ಲದೆ ನೋಡಿ ಹಂಬಲಿಸುತ ಉನ್ನತೋನ್ನತ ಮೋಹ ಮೊಳಿಯೊಳಮೃತ ತುಂಬಿ ಪುಣ್ಯಧಾರಿಂದೊರಗಿ ಭೋರಿಡುತಗಲೆರವುತಲಿ 1 ಸುರಸ ಸಾರಾಯದನುಭವ ಬೆರಸಲಾಗಿ ತಾಂ ವರ ಮಹಾಕೃಪೆ ಘನದೊಳವಿನಿಂದ ಧರೆಯೊಳಾನಂದ ಸುಖ ಸಾರಿಡುತ ಪೂರ್ಣ ಇರ್ಹುಳಗಲೆನದೆ ಸರ್ವಪತಿ ಯಿಂದ್ಹರುಷಗರೆವಾ 2 ಬೆಳಗಿ ತನ್ನರ ಬೆಳೆಸಲಾಗಿ ಸದ್ವಸ್ತು ತಾಂ ತಿಳಿದು ಶ್ರಯಧೇನಾಗಿ ಬಂತು ಬಳಿಗೆ ಕಳವಳಿಸಿ ಕರುಣ ಕಟಾಕ್ಷದಿಂದಲಿ ನೋಡಿ ಎಳೆಗರುವ ಮಹಿಪತಿಗಮೃತನುಣಿಸಿಕೊಳಲಾಗಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು