ನೀ ಬುದ್ಧಿ ಕೊಡದಿರಲು ಮನುಜ ಪಶುವೊ ಜೀವ ಪಶುವೊ ಪ
ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ಅ.ಪ
ಜಡಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದು
ಒಡೆಯಾ ನಮ್ಮೆತ್ನವೇ ಸತ್ಯ ಪೇಳೊ
ಕಡುನಿದ್ರೆಯಲಿ ಜೀವ ನಿಶ್ಚೇತನಾಗಿರಲು
ಬಿಡದೆ ದಿನದಿನದಲ್ಲಿ ಎಚ್ಚರಿಕೆ ಯಾರಿಂದ 1
ಸೃಷ್ಟಿಗೆ ಬರಲಿನ್ನು ಜೀವ ಯತ್ನವು ಉಂಟೆ
ಸೃಷ್ಟಿ ಸ್ಥಿತಿ ಲಯ ಕರ್ತ ನೀನೆ ತಿಳಿಯೊ
ಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾನಿರಲು
ಸೃಷ್ಟಿಯಲಿ ನಮ್ಮೆತ್ನ ಕಲ್ಪಿಸುವುದುಂಟೆ 2
ಇಂತಿರಲು ನಿಜತತ್ವ ಎಂಥ ಶಕ್ತಿಯು ನಮಗೆ
ಸ್ವಾಂತ ಮಂಗಳ ಸುಗುಣ ನಿಧಿಯೆ ಪೇಳೊ
ಭ್ರಾಂತಿ ಜೀವನ ಬಿಡಿಸಿ ಜಯೇಶವಿಠಲ
ಶಾಂತಿ ಪಾಲಿಸು ನಮಗೆ ಅಂತರಾತ್ಮಕ ದೇವ3