ಒಟ್ಟು 2482 ಕಡೆಗಳಲ್ಲಿ , 110 ದಾಸರು , 1780 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯೆತ್ತಿದರೆ ಕೇಶವ ನಾರಾಯಣಗೆ ಪ. ಶಾಶ್ವತವೀವ ಮಾಧವ ವಾಸವವಂದ್ಯ ಗೋವಿಂದಗಾರತಿಯನೆತ್ತಿದರೆ ಅ.ಪ. ದ್ವಾಪರ ರಹಿತ ಶ್ರೀವಿಷ್ಣುವಿಗೆ ಅಪಾರ ಮಧುಸೂದನಗೆ ಪಾಪರಹಿತ ತ್ರಿವಿಕ್ರಮಗಾರತಿಯನೆತ್ತಿದರೆ1 ಸಾಧುಸೇವಿತ ವಾಮನಗೆ ಶ್ರೀಧರ ಹೃಷೀಕೇಶನಿಗೆ ಆದಿಮೂರುತಿ ಪದ್ಮನಾಭಗಾರತಿಯನೆತ್ತಿದರೆ 2 ದÁಮೋದರ ವಾಲುಳ್ಳವಗೆ(?) ಪ್ರೇಮದಿ ಸಂಕರ್ಷಣಗೆ ಕಾಮಿತಾರ್ಥವನೀವ ವಾಸುದೇವಗಾರತಿಯನೆತ್ತಿದರೆ 3 ಅನಿರುದ್ಧ ಪುರುಷೋತ್ತಮಗೆ ವಿನಯದಿಂದಲಿ ಅಧೋಕ್ಷಜಗಾರತಿಯನೆತ್ತಿದರೆ 4 ನರಸಿಂಹರೂಪನಾದವಗೆ ವರದ ಮೂರುತಿ ಅಚ್ಯುತಗೆ ಅರಿಭಯಂಕರ ಜನಾರ್ದನಗಾರತಿಯನೆತ್ತಿದರೆ 5 ಉಪೇಂದ್ರನೆಂದೆನಿಸಿಕೊಂಡವಗೆ ಅಪಾರಮಹಿಮ ಶ್ರೀಹರಿಗೆ ಗೋಪಾಲಮೂರುತಿ ಶ್ರೀಕೃಷ್ಣಗಾರತಿಯನೆತ್ತಿದರೆ 6 ಚತುರವಿಂಶತಿಮೂರುತಿಗಳಾ ಅತಿಶಯ ಧವಳವ ಪಾಡೆ ಸಿರಿ ಹಯವದನ 7
--------------
ವಾದಿರಾಜ
ಆರಮ್ಮ ಮುರಲಿಯನೂದುವನುಮಾರ ಸುಂದರ ಸುಖ ಸಾರುವ ಜಗಕೆ ಪ ಪುಂಡರೀಕಾಕ್ಷನು ಹಿಂಡುಗೋವ್ಗಳ ಕಾಯ್ದುಕಂಡ ಕಂಡವರನ್ನು ಕರೆಯುತಾನೆಚೆಂಡು ಬಗರಿ ಗೋಲಿ ಗುಂಡುಗಳನೆ ಕಟ್ಟಿತಂಡ ತಂಡವಾಗಿ ಪೋದನಮ್ಮ 1 ತಾಯಿ ಕಟ್ಟಿರುವಂಥಾ ತೋರ ಬುತ್ತಿಯ ಗಂಟುತೂಗುತ ಯಮುನೆಯ ತೀರದಲ್ಲೇತೋರ ಉಪ್ಪಿನಕಾಯಿ ಬುತ್ತಿಗಳನೆ ತಿಂದುತೀರಿದವರಿಗೆಲ್ಲಾ ತಾ ಕೊಡುವಾ 2 ಇಂದಿರೇಶನು ಕೊಟ್ಟ ತಿಂದ ಉಪ್ಪಿನಕಾಯಿಆನಂದಬಟ್ಟರು ಗೋಪನಂದನರುಹಿಂದಿನ ಪುಣ್ಯವು ಬಂದೊದಗಿತು ಎಂದುತಿಂದ ಎಂಜಲನಿಟ್ಟ ಇಂದಿರೇಶ3
--------------
ಇಂದಿರೇಶರು
ಆರಿಗಾರು ಇಲ್ಲವಯ್ಯ ಆರಿಗಾರು ಇಲ್ಲವಯ್ಯ ಪ ಮಡದಿಯೆಂಬಳು ಯಾಕೆಬಿಡದೆ ಪಂಕ್ತಿಯ ಊಟ ಎಂಬ ಭಾವ ಮೈದುನನೇಕೆಪಡದ ತಂದೆ ತಾಯಿ ಏಕೆ ಪಡಿತತ್ವ ಯಾಕೆಬಡಿಯುತ ಯಮನೀಗ ಒಯ್ಯೆ ಬಿಡಿಸಿಕೊಂಬರಿಲ್ಲ 1 ಅಣ್ಣತಮ್ಮನು ಯಾಕೆ ಅಳಿಯನು ಯಾಕೆಬಣ್ಣದ ಬಾಳು ತಾನೇಕೆ ಬಂಧುಗಳದೇಕೆಚಿನ್ನಕೊಪ್ಪರಿಗೆ ಯಾಕೆ ಚಿತ್ರಮನೆಯಾಕೆಕಣ್ಣ ಕಟ್ಟಿ ಕಾಲನೆಳೆಯ ಕಾವರಾರು ಇಲ್ಲವಯ್ಯ2 ಆರ ನಂಬಿದರು ನಿನ್ನಕಡೆ ಹಾಯಿಪರಿಲ್ಲನೂರು ಬಾರಿ ತಿಳಿದು ನೋಡು ನಿನ್ನೊಳಗೆಲ್ಲಧೀಧೀ ಚಿದಾನಂದ ಹೊಂದೆಯುಕ್ತಿಯಹುದೆಲ್ಲಬಾರೆ ಜನನ ಮರಣಕೆ ಸಂದೇಹವಿಲ್ಲ 3
--------------
ಚಿದಾನಂದ ಅವಧೂತರು
ಆರು ಕೊಟ್ಟರು ಕೊಟ್ಟರಾರುಂಡರಾರಿಲ್ಲಿಬೇರೆ ನಾ ನೀ ನಾನೆಂದು ಕೆಡುವುದೀ ಲೋಕ ಪಕಾಲ ಚ್ಟೇಸಿತು ಕರ್ಮವು ಕೊಟ್ಟಿತೀ ಕಿವಿಗಳಾಲಿಸಿತು ಕಂಡಿತಕ್ಷಿಗಳೆಂದಿತಂಘ್ರಿಲೀಲೆಯಲಿ ಕೈಪಿಡಿಯುತಾ ಘ್ರಾಣಿ ಘ್ರಾಣವೀ ಲೋಲ ಚಿತ್ತವನುಸಂಧಾನಗೆಯ್ತು 1ಪ್ರಾಣ ಒಳಕೊಂಡಿತನ್ನವನು ಸಂಕಲ್ಪಿಸಿತುದೀನ ಮನಮತಿಗೆ ನಿಶ್ಚಯವಾುತೂತಾನಿದರೊಳಾರು ಕೊಂಬವನೊ ಕೊಡುವನೊ ದುರಭಿಮಾನದಿಂ ಕೆಡುತಿಹರು ನೀನು ನಾನೆಂದು 2ಭಾನು ಜಲದಲಿ ಪೊಳೆಯಲದರ ಕಂಪಾದಿಗಳುಭಾನುವಿನದೆಂದು ಭ್ರಮಿತರು ಬಗೆವ ತೆರದಿಜ್ಞಾನಮಯ ನಾದಾತ್ಮ ಹಮ್ಮಿನೊಳ್ಪೊಳೆಯಲಜ್ಞಾನದಿಂದೀ ರಾಸಿ ನಾನೆನ್ನುತಿಹರೊ 3ಈಯನಿರ್ವಚನೀಯ ಜೀವತ್ವವೆಂದರಿದುಕಾಯದಲಿ ಕೂಟಸ್ಥ ಸತ್ಯವೆಂದೂಮಾಯದಿಂದ ತೋರಿ ತಾನೀ ವಿಶ್ವಪುಸಿ ಎಂದುಹೇಯ ಭೋಗದಲನಾಸಕ್ತನಾಗಿರದೆ 4ತಾನು ನಿರ್ಲೇಪನೆಂದರಿಯದೆ ಶರೀರಾಭಿಮಾನದಿಂ ಗೋಪಾಲ ಯತಿಯ ಚರಣವನೂಸಾನುರಾಗದಲಿ ಸೇವಿಸದೆ ಮಿಥ್ಯಾವಿಷಯದೀನತೆಯನೈದಿ ರಾಗಾದಿಗಳ ಬಿಡದೆ 5
--------------
ಗೋಪಾಲಾರ್ಯರು
ಆರು ಬಲ್ಲರು ಹರಿಹರಾದಿಗಳ ಮಹಿಮೆಯನು ಪ ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲಅ ಶೌರಿ 1 ಬಲಿಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ-ಗಿಲ ಕಾಯ್ದನಚ್ಯುತನು ಅನುಗಾಲದಿಬಲು ಭುಜನು ಬಾಣಾಸುರನ ಗೃಹ ದ್ವಾರವನುಬಳಸಿ ಕಾಯ್ದನು ಹರನು ವರವ ತಾನಿತ್ತು 2 ಭೋಗಿಶಯನನು ಆಗಿ ಭೋಗಿಭೂಷಣನಾಗಿವಾಗೀಶನಾಗಿ ಸೃಷ್ಟಿಸ್ಥಿತಿಲಯಕ್ಕಾಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆಕಾಗಿನೆಲೆಯಾದಿಕೇಶವನ ಮಹಿಮೆಯನು 3
--------------
ಕನಕದಾಸ
ಆರೇನು ಮಾಡುವರು ಅವನಿಯೊಳಗೆ | ಕರ್ಮ ಫಣಿಯಲ್ಲಿ ಬರೆದುದಕೆ ಪ ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು | ಸತಿ ತನ್ನ ಕುಣಿಸ್ಯಾಡಲು ನಿಜದಿ || ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು | ಆಡಿದ ಮತುಗಳು ಅಖಿಳಿರು ನಿಜವೆನಲು 1 ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ | ತಲೆಗೆ ತನ್ನ ಕೈ ಪೆಟ್ಟು ತಾಕಿದರೆ || ಹೆರಳು ಹಾವಾದರೆ ಗೆಳೆಯ ರಿಪುವಾದರೆ | ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ 2 ಹೆತ್ತ ತಾಯಿ ಹಿಡಿದು ಮಕ್ಕಳಿಗೆ ವಿಷ ಹಾಕಿದರೆ | ಪೆತ್ತ ತಂದೆಯು ಹೊರಗೆ ಮಾಡಿದರೆ || ತೊತ್ತು ಅರಸಿಗೆ ಪ್ರತ್ಯುತ್ತರವನಾಡಿದರೆ | ಕತ್ತಲೆ ಬೆನ್ನಟ್ಟಿ ಕರಡ್ಯಾಗಿ ಬಂದರೆ 3 ಕಣ್ಣವೊಳಗಿನ ಗೊಂಬಿ ಕಾದ ಬಂದರೆ | ಹೆಣ್ಣಿನ ಹರಟೆ ಹೆಚ್ಚಾದರೆ | ಅನ್ನವನು ಉಣ್ಣಲು ಅಜೀರ್ಣವಾದರೆ | ಪುಣ್ಯಕ್ಷೇತ್ರಗಳಲ್ಲಿ ಪಾಪ ಅಟ್ಟಿಸಿದರೆ 4 ಏರಿ ಕುಳಿತ ಕುಂಬಿ ಎರಡಾಗಿ ಮುರಿದರೆ | ವಾರಿಧಿಗಳು ಮೇರೆ ಮೀರಿದರೆ || ಆರಿದ ಇದ್ದಲಿಗಳು ಅಗ್ನಿಯಾದರೆ | ನಮ್ಮ ವಿಜಯವಿಠ್ಠಲನಿರುವ ತನಕ 5
--------------
ವಿಜಯದಾಸ
ಆಲಿಸು ಮನುಜಾ ಮಾಯಾಕಾರ್ಯಕೆ ಮೋಸಹೋಗಲು ಬೇಡಾ ವಿಚಾರಿಸು ತೋರಿಕೆಯು ಪುಸಿಯಹುದು ಈ ಪ ಜಗದೊಳು ತೋರುವ ಅಘಟಿತಘಟನೆ ಮಿಗಿಲೆನಿಸುತಲಿಹುದೋ ಗಡಾ ಅಘಟಿತಘಟನೆಯೆ ಜ್ಞಾನವದೆಂದು ಬಗೆಯುತ ನೀ ಕೆಡಬೇಡ 1 ಸಿದ್ಧಿಯ ಫಲವದು ಅಘಟಿತಘಟನೆ ಬುದ್ಧಿವಂತನೆ ತಿಳಿ ನೀ ಶುದ್ಧ ಚೈತನ್ಯದಿ ಮಾಯೆಯದಿಲ್ಲೈ ಸಿಧ್ದಿ ಮಾಯೆಯ ಮಗಳು 2 ಜ್ಞಾನಸಿದ್ಧಿಗಳ ಭೇದವನರಿಯುತ ಜ್ಞಾನಿಯಾಗೆಲೊ ಮನುಜಾ ನಾನಾಪರಿಯಿಂ ಪೇಳಿದನಿದನಾ ಜ್ಞಾನಿ ಶಂಕರಗುರುರಾಯಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಆವ ಬಗೆಯಲಾದರು ಕರುಣದಿ ದೇವ ಕೃಪೆದೋರೋ ಪ. ಭಾವ ಭಕುತಿಯಲಿ ತೋಯಜಾಕ್ಷನೆ ನಿನ್ನ ಕಾವ ಕರುಣಿಯೆಂದು ಭಾವಿಸಿ ಕರೆವೆನು ಅ.ಪ. ವಿಪ್ರರಾಗಮವಾದರೂ ಸರಿ ಕ್ಷಿಪ್ರದೊಳವನ ಸಂಗದಿ ಅಪ್ಪಾ ನೀ ನೆರೆಯುವ ಸಪ್ಪಳಾ ತೋರುತ ಬಪ್ಪೆ ಎಂದೆನೆವೆನು ಅಪ್ಪ ತಿಮ್ಮಪ್ಪನೇ 1 ಮಕ್ಕಳೊಳಗಾದರೊ ನಿನ್ನಯ ಆಟ ಪಕ್ಕನೆ ತೋರೋ ದೇವನೆ ಚಿಕ್ಕ ಕೃಷ್ಣನೆ ನಿನ್ನ ರೂಪವ ನೆನೆಯುತ ಪರಿ 2 ಮನೆಗೆಲಸದೊಳು ನಿನ್ನಯ ಧ್ಯಾನ ತನು ಮನ ನೆನೆಯುತಲಿ ದಿನದಿನದಲಿ ಸುಖ ದುಃಖದೊಳು ಮನಸಿಜಪಿತ ನಿನ್ನ ನೆನಸುವ ಪರಿಯಲಿ 3 ಹಿರಿಯರಾಗಮವಾಗಲು ನಾನವರೊಳು ಕಿರಿಯಳಂದದಿ ಇರುವ ಪರಿ ಮನವನಿತ್ತೂ ಪೊರೆ ಕರುಣಾಳು ಕರಣ ಶುದ್ಧಳಾ ಮಾಡಿ ಕರೆ ನಿನ್ನ ಬಳಿಗೆ 4 ಕನಸಲಾದರೂ ನಿನ್ನ ಮನಸಿಜಪಿತನೆ ಮನನ ಮಾಡುತ ನೆನೆಯುವ ಘನಕೃಪೆಯಿತ್ತು ಎನ್ನ ಜನುಮ ಸಾರ್ಥಕಗೊಳೆ ಈತನು ನಿನಗರ್ಪಿಸಿಹೆ ದಿನಮಣಿ ಶ್ರೀ ಶ್ರೀನಿವಾಸ 5
--------------
ಸರಸ್ವತಿ ಬಾಯಿ
ಆವ ಸಿರಿಯಲಿ ನೀನು ಎನ್ನ ಮರೆತೆದೇವ ಜಾನಕೀರಮಣ ಪೇಳು ರಘುಪತಿಯೆ ಪ ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆಶರಧಿಗೆ ಸೇತುವೆಗಟ್ಟಿದೆನೆನ್ನುವಾ ಸಿರಿಯೆಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ 1 ಕಡಲೊಳಗೆ ಮನೆಮಾಡಿ ಮಲಗಿದೆನೆಂಬಾ ಸಿರಿಯೆಮೃಢ ನಿನ್ನ ಸಖನಾದನೆಂಬ ಸಿರಿಯೆಬಿಡದೆ ದ್ರೌಪದಿ ಮಾನ ಕಾಯ್ದೆನೆಂಬಾ ಸಿರಿಯೆದೃಢವಾಗಿ ಹೇಳೆನಗೆ ದೇವಕೀ ಸುತನೆ2 ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆಕಾಮ ನಿನ್ನ ಸುತನಾದನೆಂಬ ಸಿರಿಯೆಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ 3 ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆಹನುಮ ನಿನ್ನ ಬಂಟನಾದನೆಂಬ ಸಿರಿಯೆಬಿನುಗು ದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆಅನುಮಾನ ಮಾಡದೆ ಪೇಳೊ ನರಹರಿಯೆ 4 ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿಪಂಥವೇ ನಿನಗಿಚಿದು ಆವ ನಡತೆಕಂತುಪಿತ ಕಾಗಿನೆಲೆಯಾದಿಕೇಶವ ರಂಗಚಿಂತೆಯನು ಬಿಡಿಸಿ ಸಂತೋಷವನು ಪಡಿಸೊ5ಚಿ
--------------
ಕನಕದಾಸ
ಆವ ಸೇವೆಯಿಂದ ನಿನ್ನುತ್ತೀರ್ಣಾಗುವರೋ | ಭೋಕ್ತ ಗುರು ಮಹಿಪತಿ ನಿಮ್ಮ ಶರಣರು ಪ ಒಡಲೊಳಗಿದ್ದ ಶಿಶು ಹೊರಗ ಬಂದ ಮ್ಯಾಲ ಒಡ ಮೂಡುವದು ನೋಡಿ ಜನನಿ ಮೋಹಾ ಪೊಡವಿಯೊಳಿಹನ ಕರೆದೊಡಲೋಳಿಟ್ಟುಕೊಂಡು ಕುಡಿಸಿ ಬೋಧಾಮೃತವ ಸಲಹುವ ಗುರುಮಾತಾ 1 ಸತಿಯಲಿ ವೀರ್ಯವನಿಟ್ಟು ಬೆಳಸಿ ಘನ ಯುತನಾದರಾಗ ತಂದೆಯ ಮೋಹವು ಕ್ಷಿತಿಯೊಳು ನಿಜವೀರ್ಯ ಕಳಿಯದೆ ಮೂಢ ಭಕ್ತಿರಿಗೊಲಿದು ಬೀರುವ ದಯ ಗುರು ತಂದೆ 2 ತನುವ ನಿರ್ಮಿಸಲು ತಾ ತನುವಿನೊಡೆಯ ನೀನು ಮನವ ನೀಡಲು ಚೇತನಾತ್ಮ ನೀನು ಧನವ ನೀಡಲು ಇಹ ಪರವೀವ ಧೊರಿ ನೀನು ನೆನೆವರ ಶ್ರಯಧೇಯ ಕಾಯೋ ನಂದನ ಪ್ರಭು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆವಪರಿಯಿಂದಲಾದರೂ ರಾಮನಾಮವನು ಆವ ಪರಿಯಲಿ ನೆನೆದು ಸುಖಿಯಾಗು ಮನವೆ ಪ ಪಿತನಾಜ್ಞೆ ಲಕ್ಷಿಸದೆ ದೃಢದಿ ಪ್ರಹ್ಲಾದನು ಅತಿಶಯದಿ ಹರಿಯ ಧ್ಯಾನವ ಮರೆಯದೆ ಮತಿಗೇಡಿಯಾದ ಮಗನೆನುತ ಕುಲಗೆಡಿಸೆ ಶ್ರೀ ಪತಿಯು ತಾ ಬಂದು ಕಾಯ್ದುದೇ ಸಾಕ್ಷಿ 1 ದೋಷಹಿತನಾದ ದಶಶಿರನ ಒಡಹುಟ್ಟಿ ಕೇಶವನ ಧ್ಯಾನವನು ಮರೆಯದಿರಲು ಸಾಸಿರ ರಾಮಕಥೆಯುಳ್ಳನಕಾ ವಿ- ಭೀಷಣಗೆ ಸಾಮ್ರಾಜ್ಯವಿತ್ತುದೇ ಸಾಕ್ಷಿ 2 ಗಂಡರೈವರು ಸುತ್ತ ಕೆಲದಲಿರಲಾ ಸತಿಯ ಲಂಡ ದುಶ್ಶಾಸನ ಹಿಡಿದೆಳೆಯುತಿರಲು ಪುಂಡರೀಕಾಂಬಕನೆ ಸಲಹೆನಲು ಕರೆಯಲು ದ್ದಂಡನಾಭನೆ ಬಂದು ಕಾಯ್ದುದೇ ಸಾಕ್ಷಿ 3 ಯುದ್ಧಕೆ ನಡೆದಾಗ ಹಂಸಧ್ವಜಸುತನು ತನ್ನ ಬೇ ಕಾದ ಸತಿಯ ಆಜ್ಞೆಯ ನಡೆಸಲು ಪಿತನು ಕಾದೆಣ್ಣೆ ಕೊಪ್ಪರಿಗೆಯೊಳಗೆ ಸುಧನ್ವನ ಹಾಕೆ ಹರಿ ಕಾಯ್ದನೆಂಬುದ ಲೋಕವರಿದುದೆ ಸಾಕ್ಷಿ 4 ಉರ್ವಿಯೊಳು ವಿಪ್ರಜನ್ಮದಿ ಜನಿಸಿದಜಮಿಳಗೆ ಪೂರ್ವಸಂಚಿತ ಪಾಪಶೇಷವಿರಲು ಓರ್ವ ಸತಿಗಾಗಿ ಚಂಡಾಲತಿಯೊಳಗಾಗಿರೆ ಗೀರ್ವಾಣಪುರಿ ಲಕ್ಷ್ಮೀಶನೊಲಿದುದೇ ಸಾಕ್ಷಿ 5
--------------
ಕವಿ ಲಕ್ಷ್ಮೀಶ
ಆವಭೇಧವಿಲ್ಲದವನೆ ನಿಜಜ್ಞಾನಿಯು ತನು ಭಾವವರಿತು ನಡೆಯುವನೆ ನಿಜ ಭಾಗವತನು ಪ ಮಾನ ಅಪಮಾನ ಸಮಕಾಣುವನೆ ಸಜ್ಜನನು ತಾನು ತನ್ನದೆಂಬ ಮಾಯವಳಿದವನೆ ಸಾಧು ಏನು ಕೊಟ್ಟರು ಒಲ್ಲೆನೆಂಬುವನೆ ಸನ್ಯಾಸಿ ದೀನರನು ಕಂಡು ಮನಮರುಗುವನೆ ಭಕ್ತ 1 ನಿಜಧರ್ಮವರಿಯದ ಪಾಮರನೆ ಶೂದ್ರನು ನಿಜವಾಕ್ಯಗಳ ಕೇಳಿ ಅಳಿವವನೆ ಭವಿಯು ಸುಜನರಿಗೆ ತಲೆಬಾಗಿ ನಡೆವವನೆ ಸಿದ್ಧಾಂತಿ ಕುಜನರ ಮಾತಿಗೊಳಪಡುವವನೆ ನರಕಿ 2 ಪಿಡಿದ ವ್ರತನೇಮಗಳ ಬಿಡದವನೆ ಕಡುಗಲಿ ಜಡದೇಹ್ಯಮೋಹವನು ತೊಡೆದವನೆ ಸತ್ಯ ಬಂಟ ಜಗದೊಳಗೆ ಒಡೆಯ ಶ್ರೀರಾಮನಡಿ ದೃಢಯುತನೆ ಮುಕ್ತ 3
--------------
ರಾಮದಾಸರು
ಆವುದು ಸ್ಥಿರವೆಲೋ ಮನವೆ ಇದು ಮಾಯವು ಕಾಣೆಲೊ ಪ ಆವದು ಸ್ಥಿರವೆಲೋ ಮಾಯವಿದೆಲ್ಲವು ಭಾವದಿ ಕುದಿಯುತ ನೋಯುವಿ ಯಾಕೆಲೊ ಅ.ಪ ಅರ್ಥವೆಂಬುವುದೆಲ್ಲ ವ್ಯರ್ಥವು ಮೃತ್ಯು ತಿಳಿಯೆ ನಿಖಿಲ ಅರ್ತುವಿಚಾರಿಸು ಸಾರ್ಥಕವಾವುದು ಮರ್ತುಕೆಡದೆ ಭವನಿರ್ತದಿಂ ಗೆಲೆಯೆಲೊ 1 ಸತಿಸುತರಿವರೆಲ್ಲ ಹಿತವಿರಲತಿ ಸೇವಿಪರೆಲ್ಲ ಗತಿಸಲು ಭಾಗ್ಯವು ಹಿತದೋರಿದವರೇ ಅತಿಜರೆಯುತ ನಿನ್ನ ವ್ಯಥೆಯ ಬಡಿಪರೆಲೊ 2 ಒಂದಿನ್ಹೋಗ್ವುದಂತು ತಪ್ಪದು ನೋಯುವುದ್ಯಾಕಿಂತು ಇಂದು ನಾಳೆನ್ನದೆ ತಂದೆ ಶ್ರೀರಾಮನ ಬಂಧುರಂಘ್ರಿಗಳಿಗ್ಹೊಂದಿ ನೀ ಸುಖಿಯಾಗೊ 3
--------------
ರಾಮದಾಸರು
ಆವುದೊಳ್ಳೆಯದೊ ನಿನ್ನಂಗ - ಚೆಲುವದೇವ ಬಂಕಾಪುರದ ಲಕುಮಿ ನರಸಿಂಗ ಪ ಜಗದೊಳಗೆ ತಾನು ತಂದೆಯ ಮಾತು ಕೇಳದಾಮಗನು ಇಹ ಪರಕೆ ಸಲುವ ಪ್ರಾಜ್ಞನೆ ?ಬಗೆಗೊಳಿಸಿ ಪ್ರಹ್ಲಾದ ಪಿತನೊಡಲ ನಿನ್ನ ಕೂ-ರುಗುರಿನಿಂ ಬಗೆಸಿದಾತಂಗೆ ಮುಕುತಿಯನೀವೆ 1 ಪೊಡವಿಯೊಳು ಅಣ್ಣನಾಜ್ಞೆಯ ಮೀರಿ ನಡೆಯುತಿಹಒಡಹುಟ್ಟಿದವಗೆ ಕೈವಲ್ಯವುಂಟೆ ?ದೃಢದಲಿ ವಿಭೀಷಣಾಗ್ರಜನನ್ನು ಬಾಣದಲಿಕೆಡಹಿಸಿದ ಬಳಿಕವಗೆ ಸ್ಥಿರಪಟ್ಟ ಕಟ್ಟಿದೆ2 ರೂಢಿಯಲಿ ಗುರುದ್ರೋಹವನು ಮಾಡಿದವನ ಮೊಗನೋಡಿದಾಗಲೆ ಪ್ರಾಯಶ್ಚಿತ್ತವುಂಟುನೋಡಿದಾಗಲೆ ಬೃಹಸ್ಪತಿಸತಿಗೆ ಅಳುಪಿದನಸೂಡಿದಾತನ ಸ್ನೇಹವನು ಮಾಡಿಕೊಂಡಿರ್ಪೆ 3 ದೇಶದೊಳು ವಂಶಕಂಟಕರೆನಿಸಿದವರೊಳಗೆಭಾಷಣವ ಮಾಡಬಪ್ಪುದೆ ಪ್ರಾಜ್ಞರು ?ಬೇಸರಿಸದೆ ಕೌರವರ ಕೊಂದ ಪಾಂಡವರ ಸಂ-ತೋಷದಲಿ ಪಕ್ಷಿಕರ ಮಾಡಿಕೊಂಡಿರ್ಪೆ 4 ಪೊಡವಿಪತಿ ಕೇಳು ಶ್ರೀ ಆದಿಕೇಶವನೆ ಹಿಂ-ಗಡೆಯಲ್ಲಿ ಮನೆಯ ಕಟ್ಟಿಸಬಾರದೆ ?ಬಿಡೆಯವಿಲ್ಲದೆ ಸಭಾಮಧ್ಯದಲಿ ಹೆಂಡತಿಯತೊಡೆಯ ಮೇಲ್ಕುಳ್ಳಿರಿಸಿಕೊಂಡಿರ್ಪ ಹಿರಿಯತನ 5
--------------
ಕನಕದಾಸ
ಆಳ್ವಾರ್-ಆಚಾರ್ಯ ಸ್ತುತಿಗಳು ನೀರಾಟವ ನೋಡಿದೆ ನೀರಜಾಕ್ಷನ ರಾಣಿ ಗೋದಾದೇವಿಯ ಪ ಶ್ರೀವಿಲ್ಲಿಪುತ್ತೂರ ಶ್ರೀತುಳಸಿವನದಲ್ಲಿ ಶ್ರೀವಿಷ್ಣುಚಿತ್ತರಾ ಪುತ್ರಿಯೆಂದೆನಿಸಿ ಸುಪುತ್ರಿಯೆಂದೆನಿಸಿ ಶ್ರೀ ದೇವಿ ತಾನುದಿಸೆ ಬೇಗ ತೀವ್ರ ಹರುಷದಿಂ ಬೆಳೆಯುತ್ತಲಿದ್ದಾಳಲು 1 ಪುತ್ರಿಗೆ ತಕ್ಕಂಥ ವರವಿಲ್ಲವೆನುತಾಲೆ ಚಿತ್ತದೊಳಗೆ ಯೋಚಿಸಿದ ಆಳ್ವಾರರು ಪೆರಿಯಾಳ್ವರರು ಭಕ್ತವತ್ಸಲನಾ ವರಿಸಬೇಕೆನುತಾನೆ ಅರ್ಥಿಯಿಂದಲೆ ನೀರಾಟವನೆನೆದಾಳು 2 ಶ್ರೀಶವಾಸನೆಗಳ ಭಾವಿಸೀ | ಗೊಲ್ಲ ವಾಸನೆಗಳ ಭಾವಿಸೀ ವಾಸುದೇವನಾ ವರಿಸಬೇಕೆನುತಾಲೆ ಉ ಲ್ಲಾಸದಿಂದಲೆ ಹೆಂಗಳ ಕೂಡೆ ಪೊರಟಾಳು 3 ಮುತ್ತು ಮಾಣಿಕದಾಭರಣವನಿಟ್ಟು ಸುತ್ತೆಣೆ ಗಂಟನ್ಹಾಕಿ ದೇವಿ ಸುತ್ತೆಣೆ ಗಂಟನ್ಹಾಕಿ ಉತ್ತಮನಾಗಿದ್ದ ಪುಷ್ಪಗಳನೆ ಮುಡಿದು ಚಿತ್ತದೊಳೊಲ್ಲಭನಪ್ಪಣೆಗೊಂಡು ಪೊರಟಾಳು 4 ಮಾರ್ಗಶಿರ ಮಾಸದಿ ಪೊತ್ತೊಂದು ದಿವಸಾದಿ ಬೇಗ ತಾ ಪೊರಟೂ ಮಹಾಲಕ್ಷಿ ತಾ ಪೊರಟ ಳಾಗ ಬೀದಿಯನು ಸುತ್ತಿ ಮಂಟಪದಲಿ ನಿಂದು ಮಂಗಳಾರತಿಯನೆತ್ತೀ ಮಾರು ವಸ್ತ್ರವ ತೆಗದಾರು 5 ದಂತಧಾವನ ಮಾಡಿ ಕಂತುಪಿತನರಸೀಗೆ ಅಂತರಂಗದ ಭಕ್ತರು ಬೇಗ ಅಂತರಂಗದ ಭಕ್ತರು ಸಂತೋಷದಿಂದಲೆ ಮುಖವನ್ನು ತೊಳೆದು ಶ್ರೀ ಕಾಂತಗೆ ವಸ್ತ್ರದಿಂ ಮುಖವನೊರೆಸಿದಾರು 6 ಭಾಪು ಛತ್ರಿಚಾಮರ ಸೂರೆಪಾನವಾ ಜನ ಬೀಸಿ ಗೋಪಿ ಮುಕ್ತಿದಾಯಕಿಗಾಗ ಮುಕ್ತಿದಾಯಕಿಗಾಗ ದರ್ಪಣವನು ತೋರಿ ಕಂದರ್ಪನ ಮಾತೆಗೆ ಧೂಪ ದೀಪ ಕರ್ಪೂರದಾರತಿಯೆತ್ತಿದರು 7 ಬೇಗಾದಿಲಕ್ಷಿಗೆ ಆಭರಣ ಸಡುಲಿಸಿ ಆಗ ಮುಡಿಯ ಬಿಚ್ಚಿ ದೇವೀಗೆ ಆಗ ಮುಡಿಯ ಬಿಚ್ಚೀ ಬೇಗಾದಿಂ ಕಂಮೆಣ್ಣೆ ಕಸ್ತೂರಿತೈಲ ಮೈಗೆ ತಾಳಮೇಳದ ಗತಿಯಿಂದಲೊತ್ತಿದ್ದರೂ 8 ಶ್ವೇತವರ್ಣದ ದಿವ್ಯ ನಾಗವಲ್ಲಿಗಳಿಂದ ಖ್ಯಾತಿ ಪಡೆದಿರುವಾ ಕ್ರಮುಕಾ ಬೇಗ ಖ್ಯಾತಿ ಪಡೆದಿರುವಕ್ರಮುಕಾ ನೂತನವಾದ ಕರ್ಪೂರವರ್ಣಗಳಿಂದ ಜಗ ನ್ಮಾತೆಗೆ ತಾಂಬೂಲವ ನೀಡಿದರೂ 9 ಸಣ್ಣವಾದ್ಯದೊಳಗೆ ನುಡಿಸೇ ಬೇಗ ವಾದ್ಯದೊಳಗೆ ನುಡಿಸÉೀ ಹಣೆಯೊಳಗೆ ಬಾಚಿ ಮಣಿಗಂಟನಿಕ್ಕಿ ಉಳಿದ ಎಣ್ಣೆ ಭಕ್ತರಿಗೆಲ್ಲ ಯಿತ್ತಾರು 10 ಮಿಂದು ಮಡಿಯನುಟ್ಟು ಚಂದದಿಂದಲೆ ದೇವಿ ತಂದ ನೈವೇದ್ಯವುಂಡೂ ಬೇಗ ನೈವೇದ್ಯವುಂಡು ಬಂದ ಭಕ್ತರಿಗೆಲ್ಲ ತೀರ್ಥಪ್ರಸಾದವಿತ್ತು ಮಂದಗಮನೆ ತನ್ನ ಮಂದಿರಕೆ ನಡೆದಾಳು 11 ಬೈತಲೆಗೆ ರಾಗಟೆ ಹೆರಳಿಗೆ ಭಂಗಾರಗೊಂಡೆಯವ ನಿತ್ತು ಪಾನುಪಟ್ಟಿಯು ಮುತ್ತಿನಬಟ್ಟೆ ಕಟ್ಟಿ ಬೇಗ ಮುತ್ತಿನಬಟ್ಟೆ ಕಟ್ಟಿ ಕತ್ತುರಿ ಬಾವುಲಿ ಕಮಲಸರಗಳೂ ಮುತ್ತಿನ ಮೂಗುತಿ ಮುಕುರಾವನಿಟ್ಟಳೂ 12 ಹಾರಪದಕ ಹಸ್ತಕಡಗ ಹರಡಿ ವಂಕಿ ಶೀರೆಕುಪ್ಪಸ ತೊಟ್ಟೂ ಬೇಗ ಶೀರೆಕುಪ್ಪಸ ತೊಟ್ಟು ಅಂದುಗೆ ಇಂದೀರಾದೇವಿ ತಾನಿಟ್ಟು ಬಂದಳು ಆಗಾ 13 ಭಾಷ್ಯಕಾರರು ಮೊದಲಾದ ಭಕ್ತರುಯೆಲ್ಲ ಲಕ್ಷ್ಮಿದೇವಿಗೆ ಆಗ ಭಾಗ್ಯಲಕ್ಷ್ಮಿಗೆ ಆಗಾ ಭಾರಿ ಯಾ ಶೀರೆ ಕುಪ್ಪುಸವನಿತ್ತು ಪುಷ್ಪ ಮರ್ಯಾದೆಗಳ ಮಾಡೀ ಕರೆತಂದರು ಬೇಗಾ 14 ಮಂದಗಮನೆ ಅಂದು ಗೋವಿಂದನ ಎದುರಲ್ಲಿ ಆ ನಂದದಿಂದಲೆ ಕುಳಿತೂ ಬೇಗ ಆನಂದದಿಂದಲೆ ಕುಳಿತು ಚಂದದಿಂ ಮಲ್ಲಿಗೆಮಾಲೆಯ ಕಳುಹಲು ಮಂದರೋದ್ದರ ತನ್ನಾ ಮಡಿದೀಗೆ ಕಳುಹಿದ 15 ಕೂಡಾರವಲ್ಲಿಯೆಂತೆಂಬೊ ದಿವಸದಲ್ಲಿ ಕೂಡಿ ಮನ್ನಾರುರಂಗನಾ ಬೇಗ ಮನ್ನಾರುರಂಗನಾ ಕ್ಷೀರಾನ್ನ ಭೋಜನಂಗಳ ಮಾಡಿದರು ಭೋಗಿಯ ದಿನದಿ ಕಲ್ಯಾಣವ 16 ಮಕರ ಸಂಕ್ರಾಂತೀಲಿ ಮಂದರೋದ್ದಾರ ಸಹಿತ ಚೊಕ್ಕ ಪಲ್ಲಕ್ಕಿಯೇರಿ ಬೇಗ ಚೊಕ್ಕ ಪಲ್ಲಕ್ಕಿಯೇರಿ ಪಕ್ಕ ಮೆರವಣಿಗೆಯಲಿ ಬಂದು ಹರುಷದಿಂದ ವೆಂಕಟಕೃಷ್ಣನ ಎಡದಲ್ಲಿ ಕುಳಿತಾಳು 17
--------------
ಯದುಗಿರಿಯಮ್ಮ