ಒಟ್ಟು 1120 ಕಡೆಗಳಲ್ಲಿ , 91 ದಾಸರು , 794 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡೆಯಿಲ್ಲದೀ ಭವಾಂಬುಧಿಯ ದಾಂಟುವೊಡೆ ಜಗ ದೊಡೆಯ ಶ್ರೀಕೃಷ್ಣನೊಬ್ಬನ ನಂಬು ಮರುಳೆ ಪ ನೆಲೆಯಾದುದಿಲ್ಲ ತಾಯುದರ ಬಾಲತ್ವವಿದು ನೆಲೆಯಾದುದಿಲ್ಲ ಜವ್ವನವೆಂಬುದೂ ನೆಲೆಯಾದುದಿಲ್ಲ ಜರೆಯು ಚಕ್ಷುರಾಜಿಗಳು ಒಡಲು ನಿನಗೆ ಮರುಳೆ 1 ಹುಟ್ಟಿದನಳಿದನೇಕೆ ಜೀವ ನಿಜ ಜನನಿಯಲಿ ಹೊಟ್ಟೆಯಲಿ ಹೊತ್ತು ಹೆತ್ತುದಕೈಸಲೆ ಕೊಟ್ಟುಕೊಂಡುದಕೆ ಪಡೆದಿತ್ತು ಸುತರೆಂದೆನಿಸಿ ನೆಟ್ಟನೈದುವರು ನಿನಗೇನಹರು ಮರುಳೆ 2 ನೀನಳಿದ ಬಳಿದ ಸತಿಸುತರಿಗೇನ್ಹೇಳುವೆ ಏನಹರು ನಿನಗವರು ಮೃತವಾದ ಬಳಿಕಾ ದೀನನಹೆ ಬಯಲಮಮತೆಗಳೆಂದು ತಿಳಿದುಕೊ ನೀನೆತ್ತಲವರೆತ್ತಲಿಹರವರು ಮರುಳೆ 3 ಮಗನಾವ ತಂದೆಯಾವನು ಜೀವ ಜೀವರಿಗೆ ಮಗನು ತಂದೆಯು ಕರ್ಮವಾಸನೆಗಳಾ ಬಗೆಯಿಂದಲೀಶ್ವರನು ಜೀವಕೋಟಿಗಳ ಸೃಜಿಸೆ ಜಗದೊಳಾಡುವರು ನಿನಗೇನಹರು ಮರುಳೆ 4 ಅತಿಭಕ್ತನೆಂದು ವೈಕುಂಠ ವೇಲಾಪುರದ ಪತಿ ಅರ್ಜುನಗೆ ನಿರೂಪಿಸಿದರ್ಥವ ಮತಿಗೆಟ್ಟು ಬಿಟ್ಟು ನಾನಾ ದೈವದಡಿಗಳಿಗಾ ನತನಾಗಿ ಸಂಸಾರಿಯ[ಹೆ] ಇದೇಕೆ ಮರುಳೆ 5
--------------
ಬೇಲೂರು ವೈಕುಂಠದಾಸರು
ಕಥೆಕಾರ ದೇವಿಯೆಂದು ಕಥೆಯ ಹೇಳಿದ ತೆರದಲಿಮಿತಿಯಿಲ್ಲದ ಮೃಷೆ ಸಂಸಾರವದು ಇರುತಿಹುದು ಆಪರಿಯಲ್ಲಿ ಪ ಸತಿಯಂಬುವಳಾರು ತಾವಾರುಸುತರಿಂದ ಗತಿಯಾಗುವುದೆಲ್ಲಿಮಿತಿಯಿಲ್ಲದ ಬಹುಬಂಧು ಬಳಗಗಳುಬಹರೆ ತನ್ನ ಹಿಂದಲ್ಲಿ1 ಹಗೇವಿನ ಬತ್ತವು ಬಣಬೆಯ ಸೊಪ್ಪೆಯುಬಗೆ ಬಗೆವಸ್ತುವು ತಾನೆಲ್ಲಿಬಿಗುಮಿಗೆಯಾದ ದನಕರುವುಗಳುಬರಲಿಲ್ಲವು ತಾವಂದದಲ್ಲಿ 2 ತಳ್ಳಿಗೆ ತಳ್ಳಿ ಸುಳ್ಳು ಸಂಸಾರವುತೆಗೆಲೀಯದು ಈ ಬಗೆಯೆಲ್ಲಿಎಲ್ಲಕೆ ಮಂತ್ರವು ತಾ ಚಿದಾನಂದನುಎನಲಿಕೆ ಪಾಪವು ಇನ್ನೆಲ್ಲಿ 3
--------------
ಚಿದಾನಂದ ಅವಧೂತರು
ಕಪಾಲಧರ ತ್ರಯತಾಪರಿಹಾರ ಭ ಜಿಪೆ ಕಾಪಾಡು ಕೃಪೆ ಪಾಲಿಸಿ ಪ ಅಪಾರ ಪತಿವ್ರತಾಶಾಪವಿಮೋಚನ ಗೋಪ ಗೋಪತಿ ನಮಿತ ಗೋಪಾಲನೊಲಿಸೆನಗೆ ಅ.ಪ ಅಗಜಾವಲ್ಲಭ ಸುಗುಣರಘದೂರ ಜಗದೊಡೆಯ ಮಗುವಿನ ಮೊರೆ ಪಾಲಿಸು ವಿನುತ ಅಗಣಿತಾಗಣಿತಮಹಿಮೆ ಬಗೆದೆನ್ನ ನುಡಿಯಾಲಿಸು ನಗಧರ ಖಗರೂಢ ಜಗರಕ್ಷ ಹರಿನಾಮ ಅಗಣಿತ ಮತಿ ನೀಡೊ 1 ಅಜಭವಸುರ ನಮಿತ ರಜತಾದ್ರಿಮಂದಿರ ನಿಜಜ್ಞಾನ ದಯಮಾಡೊ ಮೃಡ ಗಜಚರ್ಮಾಂಬರ ಜಗದ ಗೋಜು ಮುಂದೆನಗೆ ಬೇಡೊ ಸುಜನ ಸಂರಕ್ಷಕ ಪಾದ ನಿಜಧ್ಯಾನ ಸ್ಥಿರಕೊಡೋ 2 ಮೃತ್ಯುವಿಜಯ ಸತ್ಯ ಚಿತ್ತ ನಿರ್ಮಲ ನಿತ್ಯ ಸತ್ಯರ ಸಖ್ಯ ನೀಡೊ ಸತ್ಯಸದ್ಭಕ್ತಿನಿತ್ತು ಮತ್ರ್ಯರಿಂದುಳಿಸೆನ್ನ ಚಿತ್ತ ಪರಿಶುದ್ಧ ಮಾಡೊ ಭಕ್ತವತ್ಸಲ ನಿಜಮುಕ್ತಿದಾಯಕ ಮಮ ಕರ್ತ ಶ್ರೀರಾಮನ ಭಕ್ತನೆಂದೆನಿಸೆನ್ನ 3
--------------
ರಾಮದಾಸರು
ಕಮಲನಾಭ ಹರುಷದಿಂದ ಖಗವಾಹನನ್ಹೆಗಲನೇರಿ ಬಗೆಬಗೆ ಶೃಂಗಾರವಾಗಿ ಬಂದ ರಂಗನು 1 ಅಂಬರ ಜರನಿರಿಗಳಲಿ ಕುಂದಣದುಡಿದಾರವ ಕಟ್ಟಿ ಚÉಂದುಳ್ಳ ಭುಜಕೀರ್ತಿ ಕರ್ಣಕುಂಡಲನಿಟ್ಟು2 ಶಂಖ ಚಕ್ರ ಕರಗಳಲ್ಲಿ ಕಂಕಣ ಭೂಷಣಗಳಿಂದ ಕಿಂಕಿಣಿ ನೂಪುರಗಳಿಂದ ಅಲಂಕಾರವಾಗಿ 3 ಕಸ್ತೂರಿ ಕೇಸರಿಯು ಗಂಧ ಬುಕ್ಕಿ ್ಹಟ್ಟು ಪರಿಮಳದ ಚೆಂದ ಕರ್ಪೂರ ತಾಂಬೂಲ ಬಾಯಲೊಪ್ಪುವ ರಂಗ 4 ನಿತ್ಯ ಸೂರ್ಯ ಪ್ರಕಾಶ ಮಲ್ಲಿಗೆ- ಮಾಲೆ ಮುಡಿದು ಹೊರಟ ಜಗದಮೋಹನ ರಂಗ5 ಸಾಲು ಸಾಲು ಮನೆಗಳಲಿ ಮೇಲು ಮೇಲುಪ್ಪರಿಗೆನೇರಿ ಬಾಲಕೃಷ್ಣ ಬರುವ ಭರವ ನೋಡುತ್ತಿದ್ದರು 6 ವಾರಿಗೆ ಸತಿಯೇರ ತನ್ನ ವಾರೆನೋಟದಿ ನೋಡುತ ಮಾರನಯ್ಯನು ಬಂದನು ತಾ ಬಜಾರ ಮಧ್ಯದಿ 7 ಚೆಲ್ವೆಯರೆಲ್ಲರು ಅರಳುಮಲ್ಲಿಗೆ ಕರದಲ್ಲಿ ಪಿಡಿದು ಫುಲ್ಲಾಕ್ಷನ ಮ್ಯಾಲೆ ನಗುತ ಚೆಲ್ಲುತಿದ್ದರು 8 ಯಾದವರೇಶನೆ ನಿನಗೆ ಭೇದವ್ಯಾಕೆನ್ನ ಮ್ಯಾಲೆ ನೀ ದಯಮಾಡೆನ್ನ ಮನೆಗೆನುತ ರಾಧೆ ಕರೆದಳು 9 ವಜ್ರದ ಗೊಂಬೆಯಂದದಿ ವೈಯಾರಿ ಮೆಲ್ಲನೆ ಬಂದು ಪದ್ಮನಾಭ ಬಾ ನಮ್ಮನೆಗೆನುತ ಭದ್ರೆ ಕರೆದಳು 10 ಅಂತರಂಗದಲ್ಲಿ ಕೋಟಿ ಪಂಥವ್ಯಾತಕೆನ್ನಮ್ಯಾಲೆ ಸಂತೋಷದಿ ಬಾರೆನುತ ಜಾಂಬವಂತಿ ಕರೆದಳು 11 ಸತ್ಯಭಾಮೆ ರುಕ್ಮಿಣಿದೇವಿ ಮಿತ್ರೆನೀಲಾ ಜಾಂಬವಂತಿ ಲಕ್ಷಣಾ ಕಾಳಿಂದಿ ಭದ್ರೆ ಕರೆಯುತಿದ್ದರು 12 ಇಷ್ಟುಮಂದಿ ಸತಿಯರೊಳಗೆ ನಿಷ್ಠುರವಾಗುವೆನೆಂದು ಎತ್ತ ಕಡೆಗೆ ಪೋಗಲೆಂದು ಶ್ರೀಕೃಷ್ಣ ನುಡಿದನು 13 ಹರಿಯ ಮಾತುಗಳನೆ ಕೇಳಿ ಸರುವರು ಸುಮ್ಮನೆ ನಿಲ್ಲೆ ಕರದಿ ವೀಣೆಯ ಪಿಡಿದು ಬಂದನು ಭರದಿ ನಾರದ 14 ಭಂಗ ಬಂದಿತೇನೊ ನಿನಗೆ ಇಂದೆನ್ನ ಹಿಂದೆ ಬಾರೆನುತ ನಾರಂದ ಕರೆದನು 15 ಕೇಳಿ ನಾರದರ ಮಾತು ತಾಳಲಾರದೆ ರುಕ್ಷ್ಮಿಣಿಯು ದಾನ ಒಯ್ದು ದಕ್ಕಿಸಿಕೊಂಡಿರೆಂದು ನುಡಿದಳು 16 ಅಕ್ಕನ ಮಾತಿನ ಬಾಣ ನೆಟ್ಟಿತು ಎನ್ನೆದೆಗೆ ಬಂದು ಕೃಷ್ಣ ನೀ ಕೇಳೊ ಕೇಳೆಂದು ನುಡಿದಳು ಭಾಮೆ 17 ಬಿಟ್ಟು ಬಾಣವ ಮಾಡಿ ಯುದ್ಧ ದಿಟ್ಟಳೆನಿಸುವುದೆ ಸಿದ್ಧ ಪೃಥಿವಿಯೊಳಗೆ ಬಾಣನಂದಿ ಎಂದು ಪ್ರಸಿದ್ಧಿ 18 ದಾರಿಗೆ ತೆಗೆಸಿದೆ ನೀನು ಮೋರೆಗಡ್ಡ ಮಂಡಿ ಪನ್ನಿ ಹೀನ ಕಾರ್ಯವ ಮಾಡಲು ನೀ ಅರಿಯೇನೆ ರುಕ್ಮಿಣಿ 19 ಗುಣನಿಧಿ ಗೋಪಾಲ ಹರಿಗೆ ಮಡದಿ ಎನಿಸುವುದೆ ಸರಿಯೆ ಮಣಿಯ ಕಳವು ಇಟ್ಟದ್ದು ನಿಮ್ಮ ಗುಣವ ನಾನರಿಯೆ 20 ಮಾಯಕಾರ್ತಿ ಮಾತುಗಳ ಅನ್ಯಾಯವೊ ನ್ಯಾಯವೊ ನಾನು ಬಾಯಬಿಟ್ಟರೇನುಳಿದೀತೆ ನಿನ ಮಾರ್ಯಾದೆ ರುಕ್ಮಿಣಿ 21 ಸಾಕು ಸತ್ಯಭಾಮೆ ನಿನಗೆ ಯಾಕೆ ಕೋಪ ಬಂದಿತೆಂದು ನಾಲ್ಕು ತೋಳಿಂದಪ್ಪಿಕೊಂಡನು ಶ್ರೀಕಾಂತ ನಗುತ 22 ಎಲ್ಲ ಸತಿಯರನು ತಾನಿದ್ದಲ್ಲಿಗೇ ಕರೆಸಿದ ಕೃಷ್ಣ ವಲ್ಲಭೆ ರುಕ್ಮಿಣಿಯ ಚರಣಕ್ಕೆ ಎರಗಿಸಿದನಾಗ 23 ರುಕ್ಮಿಣಿದೇವೇರ ತೊಡೆಯ ವಿಚಿತ್ರದ್ಹಲಿಗೆ ಮಂಚಮಾಡಿ ನಕ್ಷತ್ರದೊಳು ಚಂದ್ರನಂತೆ ಹೊಳೆಯುತ್ತಿದ್ದನು 24 ಆರ್ಯಳು ಎನ್ನ ಪಟ್ಟದ ಭಾರ್ಯಳು ರುಕ್ಮಿಣಿಯ ಮಾತು ಮೀರಬ್ಯಾಡಿರೆಂದೆನುತ ಸಾರಿ ಹೇಳಿದ 25 ಹಚ್ಚಿದ್ಹಗಲು ಬತ್ತಿಯಂತೆ ಹದಿನಾರು ಸಾವಿರ ಮಂದಿ ಭೀಮೇಶ ಕೃಷ್ಣನ ಚರಣಕ್ಕೆರಗಿ ನಗುತ ಕುಳಿತಿರಲು 26
--------------
ಹರಪನಹಳ್ಳಿಭೀಮವ್ವ
ಕರಪಿಡಿದು ಕಾಯೊ ಶ್ರೀ ಕರುಣಾಳು ಧನ್ವಂತ್ರಿ ವರ ವೆಂಕಟಾದ್ರಿವಾಸ ಪ. ತರಳೆ ಸೇವೆಯ ಕೊಂಡು ಪರಿಪರಿಯ ಬಗೆಯಿಂದ ವರ ಕೃಪೆಯ ಮಾಡೊ ಸ್ವಾಮಿ ಪ್ರೇಮಿ ಅ.ಪ. ಆವ ಪರಿಯಿಂದ ಜಗದೊಳು ನೋಡೆ ಕಾವರಿ ನ್ನಾವರುಂಟೆಲೊ ದೇವನೆ ಪಾವಮಾನಿಯ ಪ್ರೀಯ ಪರಿಪರಿಯ ಪಾಪ ಫಲ ದೀವಿಧದ ಬವಣೆಯನ್ನೇ ನೀ ವಿಚಾರಿಸಿ ಕಾಯೊ ನಿನ್ನ ಶರಣ್ಹೊಕ್ಕಮೇ- ಲಾವ ಸಂಶಯ ಕಾವನೇ ಪಾವಕನ ತೆರದಿ ಭಸ್ಮವ ಮಾಡಿ ದುಷ್ಕರ್ಮ ಜೀವಕ್ಹಿತ ಕೊಡು ಪ್ರೀತನೇ | ಇನ್ನೇ 1 ಸುರರ ವ್ಯಾಕುಲ ಬಿಡಿಸಿ ಅಮರ ಪಕ್ಷವ ವಹಿಸಿ ವರ ಸುಧೆಯನವರಿಗುಣಿಸೀ ದುರುಳ ಸಂಘವ ಕೊಲಿಸಿ ಸುರ ರಾಜ್ಯಸ್ಥಿರಪಡಿಸಿ ಪರಿಪರಿಯ ಸೌಖ್ಯ ಸುರಿಸೀ ಮೆರೆದೆಯೋ ಗುಣಸಿಂಧು ನಿನ್ನ ಸೇವಕಳೆಂದು ಪರಿಕರಿಸಿ ನೀನೀಕ್ಷಿಸೀ ಪರಿ ಕಾಣೆ ಹರಿಸು ಭಯ ಶ್ರೀ ನರಹರೇ | ಶೌರೇ 2 ಬರಿದು ಮಾಡದೆ ಎನ್ನ ಬಿನ್ನಪವ ಪೊರೆಯ ಬೇ- ಕರವಿಂದ ದಳ ನೇತ್ರನೇ ಗುರು ಹಿರಿಯರುಕ್ತಿಯಲ್ಲದೆ ಎನ್ನದೆಂಬುವೋ ಗರುವ ನುಡಿಯಲ್ಲ ನೀನೇ ಚರಣ ಸೇವಕರ ಪೊರೆವಂಥ ವಿಶ್ವಾತ್ಮಕನೆ ಪರಿಹರಿಸು ಕ್ಲೇಶಗಳನೇ ಕರುಣಿ ಶ್ರೀ ಗೋಪಾಲಕೃಷ್ಣವಿಠ್ಠಲ ಶೇಷ- ಗಿರಿನಿಲಯ ಭಕ್ತ ಪ್ರೀಯಾ | ಜೀಯಾ 3
--------------
ಅಂಬಾಬಾಯಿ
ಕರುಣಾದಿ ಪೊರೆಯನ್ನ ಪಾರ್ವತೀರಮಣ ಪುರಹರನೆ ಕರುಣಿಪುದೆಮಗೆ ಸುಜ್ಞಾನ ಈ ಪ ಧರಣಿಯೊಳು ಗೂಗಲ್ಲು ಕ್ಷೇತ್ರ ಸುಮಂದಿರನೆ ನಿನ್ನ ಅನುದಿನ ಅ.ಪ ದುರಿತ ಗಜ ಪಂಚಾಸ್ಯ ಕರಮುಗಿವೆ ನೆರೆನಂಬಿನಿನ್ನನು ಶೇವಿಸುವ ಶರಣರಿಗೆ ಸುರತರುವೆ ಜನಿಸಿರುವರೊಳು ಸರ್ವರಿಗೆ ಮನದಲಿ ಪ್ರೇರಿಸುವ ಗುರುವೆ ಗೂಗಲ್ಲಪ್ರಭುವೆ 1 ಭಾಗವತಸು ತಿಳಿಸೆನ್ನ ಮನಕೆ ಜಿತ ಮನೋಜಾತ 2 ಪರಿಪಾಲಿಸಲು ಶಿವನೆ ರಾಜಿಸುವ ಕೃಷ್ಣಾಕೂಲದಲಿ ನಿಂದಿರುವಿ ಶಂಕರನೇ ಜನಮೇಜಯಾಖ್ಯ ಪಾದ ಸುವಿಶಾಲ ಮಹಿಮನೇ 3 ನೀಡಿದೆಯೊ ಗೌತುಮ ಮನಮಂದಿರದಿ ಗೋ- ವಿಂದನಂಘ್ರಿಯ ಕಾಂಬುವೊ ಬಗೆಯ ತೋರೆನಗೆ ಜೀಯ4 ಶ್ರೀಶ್ವೇತಗಿರಿ ಸುಕ್ಷೇತ್ರ ಪಂಚ ಕ್ರೋಶಗನು ನೀನೆ ಸರ್ವೇಶ ಕಾರ್ಪರ ವಾಸಸಿರಿ ನರಕೇಸರಿಗೆ ಪ್ರಿಯನೇ ದುರ್ವಿಷಯದಲಿ ಅಭಿಲಾಷೆ ಪುಟ್ಟಿಸದಂತೆ ಶಶಿಧರನೆ ಸಿರಿವ್ಯಾಸಕುವರನೇ5
--------------
ಕಾರ್ಪರ ನರಹರಿದಾಸರು
ಕರುಣೆ ತೋರೋ ಕಣ್ಣ ತೆರೆದು ಗುರುವು ನೀನೆ ಗತಿಯು ನೀನೆ ಪ ತ್ವರದಿ ಜಪವ ಪೂರ್ಣ ಮಾಡಿ ಕರವ ಶಿರದಲಿಡುತ ಅ.ಪ. ಸಿರಿಯ ವರನ ಪರಮ ಭಕುತ ಸಿರಿದಮಣಿಗಳಲ್ಲಿ ನೀನು ಹಿರಿಯ ಅಹುದೊ ಜಗದ ಗುರುವೆ ಪರಮ ಕರುಣಾಕರನೆ ದೇವ 1 ಹರಿಯ ಆಜ್ಞದಂತೆ ನೀನು ಸರುವ ಪ್ರಾಣಿಗಳಲಿ ನಿಂದು ಹಿರಿದು ಜಪವನಾಚರಿಸಿ ಅವರು ಅರಿಯದಂತೆ ನಿರುತ ಪೊರೆವೆ 2 ಶರಧಿ ಮಥನದಿಂದ ಬಂದ ಗರಳನಂದು ಭುವನಗಳನು ಉರುಹುತಿರಲು ಹರಿಯ ಮನವ ಅರಿತು ನೀನು ಭರದಿ ಕುಡಿದೆ 3 ಪೊಗಳಲವೆ ನಿನ್ನ ಮಹಿಮೆ ಸುಗುಣಮಣಿ ಭಾರತಿಯ ಪತಿಯೆ ಅಗಜೆಯರಸನನ್ನು ಪೆತ್ತ ನಗಧರನ ಪ್ರೀತಿ ಪಾತ್ರ 4 ಅಜನಪದಕೆ ಅರುಹನಾದೆ ದ್ವಿಜ ಫಣೀಶಾದಿಗಳ ಗುರುವೆ ಭಜನೆಗೈವೆನೆಂತು ನಿನ್ನ ತ್ರಿಜಗವಂದ್ಯ ತ್ರಿಜಗಪೂಜ್ಯ 5 ತ್ರೇತೆಯಲಿ ಅಂಜನಿಯಳ ಪೂತ ಗರ್ಭದಿಂದ ಬಂದು ಪೋತನಾದ ರವಿಜನನ್ನು ಪ್ರೀತಿಯಿಂದ ಸಲಹಿದೆಯ್ಯ 6 ಅಂದು ಕಪಿಯ ವೃಂದವೆಲ್ಲ ಬಂದು ಶರಿಧಿ ತಟದಿ ನಿಂದು ಮುಂದೆ ದಾರಿ ಕಾಣದಿರಲು ಸಿಂಧುವನ್ನು ದಾಟಿ ಬಂದೆ 7 ಮಂಗಳಾಂಗಿ ಸೀತೆಯನ್ನು ಕಂಗಳಿಂದ ನೋಡಿ ಹಿಗ್ಗಿ ಅಂಗನೆಯ ಪಾದಕೆರಗಿ ಉಂಗುರವನಿತ್ತ ಧೀರ 8 ಫಲವ ಸವಿವ ನೆವದಿ ನೀನು ನಲಿದು ವನವ ಮುರಿದು ತುಳಿದೆ ಕಲಹಕಿಳಿದು ಬಂದ ಅಕ್ಷನ ಬಲಿಯಹಾಕಿ ಕುಣಿಯುತಿರ್ದೆ9 ಕುಲಿಶಧರನ ಗೆಲಿದ ವೀರ ಜಲಜಭವನ ಶರವ ಬಿಡಲು ಛಲದಿ ನೀನು ಅದನು ತಡೆದು ಮಲೆತು ನಿಂತ ಮಹಿಮಯುತನೆ 10 ವನಜಭವ ನಾಮನ ಕೇಳಿ ಕನಲಿ ಬಂದಾ ಶರಕೆ ಸಿಲುಕಿ ದನುಜ ಸಭೆಗೆ ಬಿಜಯಮಾಡಿ ಅನುವ ತಿಳಿದು ಬಂದ ದೇವ 11 ರಕ್ಕಸನ ಲೆಕ್ಕಿಸದೆ ಧಿಕ್ಕರಿಸಿ ಮಾತನಾಡಿ ಪಕ್ಕಿರಥನ ಬಲುಮೆಯನ್ನು ಹೆಕ್ಕಳಿಸಿ ನೀ ಪೊಗಳಿ ನಿಂದೆ 12 ಉಕ್ಕಿ ಬಂದ ರೋಷದಿಂದ ರಕ್ಕಸನು ಚರರ ಕರೆದು ಇಕ್ಕಿರಿವನ ಬಾಲಕುರಿಯ ತಕ್ಕ ಶಿಕ್ಷೆ ಮಾಡಿರೆನಲು 13 ಸುಟ್ಟಬಾಲ ನೆಗಹಿಕೊಂಡು ದಿಟ್ಟ ನೀನು ಪುರವನೆಲ್ಲ ಅಟ್ಟಹಾಸದಿಂದ ಮೆರೆದೆ 14 ಶರಧಿ ಹಾರಿ ಬಂದು ಸತ್ಯಸಂಧ ರಾಮಗೆರಗಿ ಇತ್ತು ಚೂಡಾಮಣಿಯನವನಾ ಚಿತ್ತ ಹರುಷಗೈದ ಧೀರ 15 ಹರಿಯು ತನ್ನ ಬೆರಳಿನಲ್ಲಿ ಗಿರಿಯನೆತ್ತಿ ನಿಂತನೆಂದು ಸರುವ ಗಿರಿಗಳನ್ನು ನೆಗಹಿ ಶರಧಿಗೊಡ್ಡಿ ಸೇತುಗೈದೆ 16 ಸುರರಿಗಮೃತವಿತ್ತನೆಂದು ಅರಸಿ ಸಂಜಿವನವ ನೀನು ಭರದಿ ತಂದು ಒರಗಿ ಬಿದ್ದ ಹರಿಯ ವೃಂದಕೆರೆದು ಮೆರೆದೆ 17 ಮಂದರಾದ್ರಿಯನ್ನು ಒಡೆಯ ಅಂದು ಬೆನ್ನಲಿ ಪೊತ್ತು ನಿಂದು ಸಿಂಧುವನ್ನು ಗೆಲಿದನೆಂದು ಬಂದೆ ಹಾರಿ ಲಂಕಪುರಿಗೆ 18 ಧರಣಿಧವಗೆ ನೆರಳಿನಂತೆ ಕಾಲ ಚರಿಸಿ ನೀನು ಅರಸಿನಂತೆ ಬಂಟನೆಂಬ ಕರೆಯವಾರ್ತೆ ಖರೆಯಗೈದೆ 19 ಕಾಲನೇಮಿ ಯತಿಯ ರೂಪ ಜಾಲದಿಂದ ವೇಳೆ ಕಳೆಯೆ ಶೀಲವಂತ ಅವನ ಸೀಳಿ ಬಾಲದಿಂದ ನಗವ ತಂದೆ 20 ವ್ಯಾಸಮುನಿಯ ಯಂತ್ರದಲ್ಲಿ ವಾಸವೆಂದು ತೂರಿಕೊಳುತ ದಾಸ ಜನರ ಆಸೆಗಳನು ಬೇಸರಾದೆ ನೀ ಸಲಿಸುವೆ 21 ನೀನು ಒಲಿಯೆ ರಾಮನೊಲಿವ ನೀನು ಮುನಿಯೆ ರಾಮ ಮುನಿವ ನಾನು ನಿನಗೆ ಅನ್ಯನಲ್ಲ ಸೂನುವಲ್ಲೇ ತಿಳಿದು ನೋಡೊ 22 ನಿನ್ನ ನಂಬಿ ಸರಮೆಯರಸ ಪನ್ನಗಾರಿರಥನ ಒಲುಮೆ- ಯನ್ನು ಪಡೆದು ಹರುಷವಾಂತು ಧನ್ಯನಾದ ಧರೆಯೆ ಮೇಲೆ 23 ನಿನ್ನ ಜರೆದ ಅವನ ಅಣ್ಣ ತನ್ನ ಬಂಧು ದೇಶ ಕೋಶ- ವನ್ನು ನೀಗಿಕೊಂಡು ಕೊನೆಗೆ ಮಣ್ಣುಗೂಡಿ ಪೋದನಯ್ಯ 24 ದಂತಿಪುರದ ದೊರೆಯೆ ಮಡದಿ ಕುಂತಿದೇವಿ ಕುವರನಾಗಿ ಕಂತುಪಿತನ ಮತವ ತಿಳಿದು ನಿಂತು ಖಳರ ಸದೆದ ಶೂರ 25 ಏಕಚಕ್ರ ನಗರದಲ್ಲಿ ಶೋಕ ಪಡುತಲಿರ್ದ ಜನರ ಕಾಕು ಬಕನ ಏಕಮುಷ್ಠಿಯಿಂದ ಕೊಂದೆ 26 ಕೀಚಕಾರಿ ನಿನ್ನ ಮಹಿಮೆ ಯೋಚನೆಗೆ ನಿಲುಕದಯ್ಯ ಯಾಚಿಸೂತಿ ದೀನನಾಗಿ ಮಾಚದಂತೆ ಸಲಹೊ ಸ್ವಾಮಿ 27 ಜರೆಯ ಸುತನ ಗರುವ ಮುರಿದು ಭರದಿ ಅವನ ತನುವ ಸೀಳಿ ಧರಣಿಧವರ ಸೆರೆಯ ಬಿಡಿಸಿ ಪರಮ ಹರುಷಗರೆದ ಧೀರ 28 ದುರುಳ ದುಶ್ಶಾಸನನ ಅಂದು ಧುರದಿ ಕೆಡಹಿ ಉರವ ಬಗೆದು ತಿರೆಯ ಹೊರೆಯ ಹರಿಸಿದಂಥ ಸರುವ ಪುಣ್ಯ ಹರಿಗೆ ಇತ್ತೆ 29 ಮಲ್ಲಯುದ್ಧದಲ್ಲಿ ನೀನು ಖುಲ್ಲ ದುರ್ಯೋಧನನ ತೊಡೆಗ ಸುರರು ನೋಡಿ ಫುಲ್ಲ ಮಳೆಯಗರೆದರಾಗ 30 ಸೃಷ್ಟಿಕರ್ತ ಕೃಷ್ಣ ನಿನ್ನ ಇಷ್ಟದೈವವೆಂದು ಅವನ ನಿಷ್ಠೆಯಿಂದ ಭಜಿಸಿ ಇಳೆಯ ಶಿಷ್ಟ ಜನರ ಕಷ್ಟ ಕಳೆದೆ 31 ಖಲರು ನಿನ್ನ ಬಲುಮೆ ನೋಡಿ ಗೆಲುವು ತಮಗೆ ಆಗದೆಂದು ಕಲಿಯುಗದಿ ವಿಪ್ರರಾಗಿ ಇಳೆಯ ಧವನ ಹಳಿಯುತಿರಲು 32 ಜಡಜನೇತ್ರ ನಿನ್ನ ಕರೆದು ಅಡಗಿಸಿವರವಾದವೆನಲು ನಡುವೆ ಮನೆಯು ಎಂಬ ದ್ವಿಜನ ಮಡದಿ ಗರ್ಭದಿಂದ ಬಂದೆ 33 ಯತಿಯು ನೀನೆಂದೆನಿಸಿಕೊಂಡು ಚ್ಯುತಿ ರಹಿತ ಪ್ರೇಕ್ಷರಿಂದ ಶ್ರುತಿಪುರಾಣ ವೇದಮಂತ್ರ ತತಿಗಳನು ಪಠಣಗೈದೆ 34 ಹರಿಯೆ ಹರನು ಹರನೆ ಹರಿಯೆಂ- ದುರುಳ ಖಳರ ಕರೆದು ಕರೆದು ಜರೆದು ಭರದಿ ಹರಿಯೆ ಶರಣೆಂದರುಹಿ ಮೆರೆದೆ 35 ಮಾಯ ಮತವ ಧಿಕ್ಕರಿಸಿ ನ್ಯಾಯ ಶಾಸ್ತ್ರವನ್ನು ರಚಿಸಿ ಕಾಯಭವನ ಪಿತನ ಹಳಿದ ನಾಯಿಗಳನು ಬಡಿದು ನಿಂದೆ 36 ಕೃತಕಭಾಷ್ಯ ರಚಿಸಿದಂಥ ದಿತಿಜರನ್ನಾನತರ ಮಾಡಿ ಗತಿಯ ತೋರಿ ಜನಕೆ ಸತ್ಯಾ- ವತಿಯ ಸುತನ ಒಲುಮೆ ಪಡೆದೆ 37 ಮಧ್ವಮತವ ಉದ್ಧರಿಸಿ ಶುದ್ಧವಾದ ಬುದ್ಧಿಗಲಿಸಿ ಹದ್ದುವಾಹನ ಮುದ್ದುಕೃಷ್ಣನ ಶ್ರದ್ಧೆಯಿಂದ ಬದ್ಧಗೈದೆ 38 ಅಷ್ಟಮಠವ ರಚನೆ ಮಾಡಿ ಶಿಷ್ಟಜನರ ಬಾಧೆ ಕಳದೆ ತುಷ್ಟರಾದ ದ್ವಿಜರು ನಿನ್ನ ಎಷ್ಟು ಪೊಗಳಿ ತೀರದಯ್ಯ 39 ದಾನಧರ್ಮವ ಮಾಡಲಿಲ್ಲ ಜ್ಞಾನಮಾರ್ಗ ಹಿಡಿಯಲಿಲ್ಲ ದೀನತನದ ಭವಣೆಯಿಂದ ನಾನು ಮರುಗಿ ಬಂದೆನೀಗ 40 ವಚನ ಮಾರ್ಗದಲ್ಲಿ ನಿನ್ನ ಪ್ರಚನೆ ಮಾಳ್ಪೆ ಕೇಳೊ ದೇವ ರಚಿಸಲಾರೆ ನಿಯಮಗಳನು ಉಚಿತ ತೋರಿದಂತೆ ಮಾಡೊ 41 ನಾರಸಿಂಹ ರಾಮಕೃಷ್ಣ ನಾರಿ ಸತ್ಯವತಿಯ ಮಗನ ಮೂರುತಿಗಳ ಹೃದಯದಲ್ಲಿ ಸೇರಿ ಭಜಿಪ ಭಾವಿ ಬ್ರಹ್ಮ 42 ವಾಯು ಹನುಮ ಭೀಮ ಮಧ್ವ ರಾಯ ನಿನ್ನ ನಂಬಿ ಬಂದೆ ಮಾಯ ಪಾಶದಿಂದ ಬಿಡಿಸಿ ಕೃಪಣ ಬಂಧು 43 ಜನುಮ ಜನುಮದಲ್ಲಿ ನೀನೆ ಎನಗಿ ಜನನಿ ಜನಕನಾಗಿ ಕನಸು ಮನಸುನಲ್ಲಿ ನಿನ್ನ ನೆನೆಸುವಂತೆ ಮತಿಯ ನೀಡೊ 44 ತುಂಗಭದ್ರ ತೀರ ವಾಸ ಭಂಗಬಾಳನು ಹೊರೆಯಲಾರೆ ಮಂಗಳಾಂಗ ಕಳುಹೊ ಎನ್ನ ರಂಗಈಶವಿಠಲ ಪುರಿಗೆ 45
--------------
ರಂಗೇಶವಿಠಲದಾಸರು
ಕರೆ ಕರೆ ಭವದೊಳು ಮುಳುಗಿರುವೆ ದುರಿತದೂರನೆ ದು:ಖ ತರ ತರ ವ್ಯಥೆಯಲಿ ಪ ಅಗಣಿತ ಮಹಿಮನೆ ಸುಗುಣಗಳನುದಿನ ಬಗೆ ಬಗೆ ಸ್ಮರಿಸುವ ಬಗೆ ಮರೆದು ಹಗಲಿರುಳೆನ್ನದೆ ನಿಗಮವೇದ್ಯನ ನಾಮ ಬಗೆ ಬಗೆ ಪೊಗಳಿ ಕೊಂಡಾಡಿ ಸ್ತುತಿಸದಲೆ 1 ಜನುಮ ಜನುಮದಲಿ ಜನಿಸಿ ಬರುವ ದು:ಖ ಕೊನೆಗಾಣದಾಗಿದೆ ಕರುಣಾನಿಧೆ ಅನಿಮಿಷರೊಡೆಯ ಶ್ರೀ ಘನ ಮಹಿಮನ ನಾಮ ಮನದಣಿ ಪೊಗಳಿ ಕೊಂಡಾಡಿ ಸ್ತುತಿಸದಲೆ2 ನಾನು ನನ್ನದು ಎಂಬ ಹೀನವೃತ್ತಿಗಳಿಂದ ಹಾನಿಯಾಯಿತು ಆಯು ಶ್ರೀನಿಧಿಯೆ ಜ್ಞಾನಿಗಳೊಡನಾಡಿ ಮೌನದಿಂದಿರದಲೆ ಶ್ವಾನಸೂಕರನಂತೆ ತಿರುಗಿ ಬಾಯ್ಬಿಡುತಲಿ 3 ರಂಗನ ಮೂರ್ತಿಯ ಕಂಗಳಿಂದಲಿ ನೋಡಿ ಭಂಗಗಳಳಿಯುವ ಹರಿದಾಸರ ಸಂಗದೊಳಿರಿಸು ಉತ್ತುಂಗ ಮಹಿಮಪಾಂಡು- ಭವ ಭಂಗ ಬಿಡಿಸೆನ್ನದೆ4 ಪಾದ ಪೊಂದಿ ಭವದಘ ವೃಂದವ ಕಳೆಯುವನೆಂದೆನ್ನುತ ಬಂಧಕ ಮೋಚಕನೆಂದರಿಯದೆ ಭವ ಬಂಧನದೊಳು ಸಿಕ್ಕಿ ಬಳಲಿ ಬಾಯ್ಬಿಡುತಲಿ5 ಪರಿ ಮೋಹ ಮಾತುಳಾಂತಕ ಕೃಷ್ಣ ಮಾತು ಮಾತಿಗೆ ಹರಿ ಹರಿ ಎನ್ನದೆ ಸೋತು ಬಂದೆನೊ ದೇವ ಮಾತರಿಶ್ವನಪ್ರಿಯ ಕೋತಿ ಬುದ್ಧಿಯ ಬಿಡಿಸೆಂದು ತುತಿಸದಲೆ 6 ಕಮಲ ಪತ್ರಾಕ್ಷ ಶ್ರೀ ಕಮಲಜಾತೆಯ ಪ್ರಿಯ ಕಮಲನಾಭ ವಿಠ್ಠಲ ವಿಠ್ಠಲ ಹರೇ ಸುಮನಸರೊಡೆಯ ಶ್ರೀ ಭ್ರಮರಕುಂತಳೆ ಪ್ರಿಯಶ್ರಮ ಪರಿಹರಿಸೆಂದು ನಮಿಸಿ ಸ್ತುತಿಸುವೆನು 7
--------------
ನಿಡಗುರುಕಿ ಜೀವೂಬಾಯಿ
ಕಲಿಪುರುಷನಿಗತಿಹರುಷ ಬಲುಸಜ್ಜನಗಳುಬಾಯ್ಬಾಯ್ಬಿಡುವುದು ಪ ಅಲಕ್ಷ್ಮೀರಮಣ ಅಖಿಲ ದುರ್ಗುಣಂ ಗಳಕೊಟ್ಟೆಲ್ಲರ ಗಾಳಿಗೆ ತೂರುವೆ ಅ.ಪ ರಾವಣಾಸುರಗೆ ಮಗನೆನಿಸಿ ದೇವತೆಗಳ ಸೆರೆಯಲ್ಲಿಡಿಸಿ ಭಾವಜ್ಞರನು ನಿರಾಕರಿಸಿ ಸಭಾಸ್ಥಾನಗಳ ಭಂಗಪಡಿಸಿ ಬಹುದುಃಖ ಪಡಿಸಿ ಪಾಂಡುಕುಮಾರರ ಪಾವನಿಯಿಂತೊಡೆಯೊಡೆದು ಬೀಳುತ ಬಗೆಯ ನೆನದುಯೀಗೆಮ್ಮ ಬಾಧಿಸುವೆ 1 ಆಗಮಗಳು ಸುಳ್ಳೆಂಬುವದು | ನಾ ಯೋಗಿಯೆಂದು ಹಿಗ್ಗುತಲಿಹುದು ಭಾಗವರತ ನಿಂದನೆಗೈದು | ನಿರ್ ಭಾಗ್ಯತನ್ನತಾನೆ ಪೊಗಳುವದು ಸಾಗರದಂತಿಹ ದುರಾಸೆಯೊಳಗಾ ವಾಗಲು ಜನ ಮುಳುಗುತ ತಿಳಿಯದೆ ಹಾಗರ್ವದಿ ನಿಷ್ಫಲವ ಪೊಂದುವರಿದು 2 ನೀತಿ ತಪ್ಪಿತಾವ್ನಡೆಯುವುದು | ದು ರ್ಜಾತಿಗಳುತ್ತಮರೆಂಬುವದು ಆತುರದಲಿಮನವಳುಕುವುದು | ಬಲು ಘಾತಕತನದಲಿತಿರುಗುವದು ಗಾತುರಸುಖವೇ ಮೊಕ್ಷವೆಂದು ವಿಷ ಯಾತಿಶಯದಿಯರಿಷಡ್ವರ್ಗಗಳೊಳು ರಾತಿರಿಪಗಲೆನ್ನದೆ ಬೀಳ್ವುದುನಿ ನ್ನಾತಗಳಿಂಗೆ ಸ್ವಭಾವಗುಣಂಗಳು 3 ಕ್ಷಾಮಡಾಂಬರಗಳ್ಹೆಚ್ಚುವದು | ನಿ- ಷ್ಕಾಮರ ಹಾಸ್ಯವಮಾಡುವದು ಕಾಮದಿಜನಗಳ ಬಾಧಿಪದು ನಿಷ್ಕಾರಣರೋಗದಿ ಸಾಯುವದು ಪಾಮರರೆಲ್ಲರು ಪಂಡಿತರಾವೆಂ- ದೀಮಹಿಯೊಳುಮನಬಂದಂತೆಸದಾ ತಾಮಸಗಳಬೋಧಿಸುತಲಿಜಗದೊಳು ದ್ರವ್ಯಾರ್ಜನೆಮುಖ್ಯಸಾಧನವೆಂಬುದು 4 ವಿಪರೀತ ಫಲಗಳಾಗುವುದು ಚಪಲಹೊಂದಿಚಿಂತಿಸುತಿಹುದು ಜಪಹೋಮಗಳನು ತ್ಯಜಿಸುವದು ಬಲುಜಾಡ್ಯಂಗಳನನುಭವಿಸುವದು ಉಪಕಾರಗಳನುಮಾಳ್ಪರಲ್ಲಿ ಪ್ರ ತ್ಯಪಕಾರಗಳೆಣಿಸುತಲಾವಾಗಲು ಕಾಲಕಳೆಯುತ ವೃಥಾನೋಯುವದು 5 ಶೂದ್ರರುವೇದವ ಪಠಿಸುವದು | ನಿರು ಪದ್ರವನುದಂಡಿಸುತಿಹುದು | ಹರಿ ರುದ್ರವಿಧಿಗಳದೂಷಿಪದು | ಅ- ಬದ್ಧವೆಬಲುರುಚಿಯೆಂಬುವದು ಕ್ಷುದ್ರಕುನಾಸ್ತಿಕಮತವನಂಬಿ ದೇ- ವದ್ರೋಹಗಳನುಮಾಡುತ ಬಾಯಲಿ ಇದ್ದದ್ದಾದರುಯಿಲ್ಲೆಂಬುವದು6 ಪರರೊಡವೆಗಳಪಹರಿಸುವದು | ನೆರೆ- ಹೊರೆಯಂತಿರಬೇಕೆಂಬುವದು ಗುರುವಿನಲ್ಲಿ ದ್ವೇಷವೆಣಿಸುವದು | ಸತಿ- ಯರುಪತಿಯಲಿದ್ವೇಷಿಸುತಿಹುದು ನಿರತವುಜೀವನಕಿಲ್ಲೆಂದುಬಳಲಿ ದುರ್ವಿದ್ಯಗಳಭ್ಯಾಸಿಸಿಕಡೆಯಲಿ ನರಕಂಗಳಿಗೆ ಪ್ರಯಾಣಮಾಡುವದು7
--------------
ಗುರುರಾಮವಿಠಲ
ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು ಪ ಜಲಜನಾಭನ ಕೃಪೆಯ ಪಡೆದವರು ಕೇಳಿ ಅ ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆಉತ್ತಮರ ಜೀವನಕೆ ದಾರಿಯಿಲ್ಲನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲಅರ್ಥ ಸಂಪನ್ನರಾಗನುಭವಿಸುತಿಹರು1 ಅತ್ತೆಯೇ ಸೊಸೆಯಾಗಿ ಸೊಸೆಯು ಅತ್ತೆಯು ಆಗಿಪುತ್ರ ಪಿತನಾಗಿ ಪಿತ ಪುತ್ರನಾಗಿಮತ್ತೆ ಗಂಡನಿಗೆ ಹೆಂಡತಿಯೆ ಗಂಡಳು ಆಗಿವರ್ತಿಸುವರಯ್ಯ ತಮಗೆದುರಿಲ್ಲವೆಂದು 2 ವೈರಿ ಸಿರಿ ಮದದಿ ಸೊಕ್ಕಿದರುಕಾವರಾರೈ ಸಾಧು ಸಜ್ಜನರನೀಗ3 ವೇದ ವಿಪ್ರರು ತಮ್ಮ ವೃತ್ತಿ ಸ್ವಾಸ್ಥ್ಯವ ಕಳೆದುಆಧಾರವಿಲ್ಲದೆ ತಿರಿದು ತಿಂಬುವರುಕಾದುವ ಶೂರರಿಗೆ ಕಾಸು ಕೊಡುವವರಿಲ್ಲಮೇದಿನಿಗೆ ಬೀಳ್ವ ಮಳೆ ಖಂಡಮಂಡಲವು 4 ಅನ್ನವಸ್ತ್ರಗಳಿಂದ ಚೆನ್ನಾಗಿ ಬಾಳುವರಭಿನ್ನ ತಂತ್ರವ ಮಾಡಿ ಕೆಡಿಸುತಿಹರುಗನ್ನಗತಕವ ಮಾಳ್ಪ ಗ್ರಾಮಣ್ಯಗಳ ಕಲಿತುಕುನ್ನಿಗಳು ಹೆಚ್ಚಿದರು ಕ್ರೂರ ಫಣಿಯಂತೆ 5 ಆಳಿದೊಡೆಯಂಗೆರಡು ಬಗೆಯುವಾತಗೆ ಒಳ್ಳೆಮಾಳಿಗೆಯ ಮನೆ ತುರುವು ಧನಧಾನ್ಯವುವೇಳೆವೇಳೆಗೆ ಬರುವ ಹೆಂಡತಿಯ ಲೆಕ್ಕಿಸದೆಸೂಳೆಯನು ನೆಚ್ಚಿ ಕಾಲವ ಕಳೆವರಯ್ಯ6 ಸೇರಿ ದ್ರೋಹವ ಮಾಳ್ಪ ಕ್ರೂರಕರ್ಮಿಗಳ ಮತಪೂರೈಸಿ ಕೊಡುವರರಸುಗಳೆಲ್ಲರುಧಾರಿಣಿಯ ಭಾರವನು ತಾಳಲಾರದೆ ದೇವಿಶ್ರೀರಾಮ ರಾಮೆಂದು ಶಿರವ ತೂಗುವಳು7 ಪತಿ ನೀನೆ ಗತಿಯೆನಲುಮುತ್ತೈದೆಗುಡುವುದಕೆ ವಸ್ತ್ರವಿಲ್ಲಮತ್ತೆ ವ್ಯಭಿಚಾರಿಣಿಗೆ ತೊಡಿಗೆ ಬಂಗಾರಗಳುವರ್ತನೆಯಿದೇನಯ್ಯ ಕಲಿಯುಗದ ಮಹಿಮೆ 8 ಪತಿವ್ರತೆಯರೆಂಬುವರು ಶತಸಹಸ್ರಕೊಬ್ಬರುಮಿತಿಮೀರಿ ಇಹರಯ್ಯ ಇತರ ಜನರುಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿಗತಿಗೆಟ್ಟು ಹೋಗುವರು ಮೂರು ತೊರೆದು 9 ಹರಿಹರರ ಪೂಜೆಗಳು ಹಗರಣಗಳಾದವುಉರಿ ಮಾರಿ ಚಾಮುಂಡಿ ಶಕ್ತಿಗಳಿಗೆಕುರಿ ಕೋಣ ನೈವೇದ್ಯ ಧೂಪದೀಪಗಳಿಂದಪರಮ ಭಕ್ತಿಯ ಸಲಿಸಿ ಪೂಜಿಸುವರಯ್ಯ10 ನಡೆವ ಕಾರ್ಯಗಳೆಲ್ಲ ನುಡಿಯಲೆನ್ನಳವಲ್ಲಒಡೆಯ ನೀನೇ ಬಲ್ಲೆ ಕಲಿಯುಗದ ಮಹಿಮೆತಡವ ಮಾಡಲಿ ಬೇಡ ತಾಳಲಾರದು ಲೋಕಮೃಡನ ವೈರಿಯ ಪೆತ್ತ ಆದಿಕೇಶವನೆ11
--------------
ಕನಕದಾಸ
ಕಲಿರಾಯ ಬಂದಿಹ ಕಲಿಯುಗದೊಳಗೆ ಬಲಿ ತೋರುವೆನೆನುತಲಿ ಪ ಯುಗತ್ರಯದಿ ಬಗೆ ಬಗೆ ಕಷ್ಯವ ಪಡುತಾ ಕೋ ಡಗನಂದದಿ ತನ್ಹ್ನಾಗೆಗಳಾ ಜೈಸದೆ ಅಡವಿಯೊಳಿರುತಾ ಯುಗ ನಾಲ್ಕವು ಬರಲು ಜಿಗಿಯುತ ಪಲ್ಗಳ ತೆಗೆಯುತ ತನ್ನಯ ಅಗಣಿತ ಮಹಿಮೆಯ ತೋರುವೆನೆನುತಲಿ 1 ಸತ್ಯ ಸೇರಿತು ಸತ್ಯಲೋಕವನು ನಿತ್ಯಕರ್ಮವು ತಾ ಹತ್ತಿತು ಸೂರ್ಯನ ವರ ರಥವನ್ನು ದೈತ್ಯನಾರ್ಭಟಕೆ ಶಾಸ್ತ್ರ ಹಾರಿ ಅಂತರದಲಿ ನೀಂತಿತು ಉತ್ತವು ಕ್ಷಾರಾಣವೃತಪ್ಪಾಯಿತು (?) 2 ಸ್ನಾನವು ಮನಿಯಲಿ ಅಡಗೀತು ಮೌನ ಜಪ ತಪಗಳು ಹಾನಿಯಾದವು ಕಾನನದೋಳು ನಿಂತು ಅನುಮಾನವು ಹೆಚ್ಚಿತು ದೀನನಾಥಮ್ಮಾ ಹನುಮೇಶವಿಠಲನ 3
--------------
ಹನುಮೇಶವಿಠಲ
ಕಷ್ಟಗಳ ಪರಿಹರಿಸೊ ಶ್ರೇಷ್ಠ ಮಾರುತಿಯೇ ಭ್ರಷ್ಟನಾದೆನು ಭಂಡ ಸಂಸಾರದಲ್ಲೀ ಪ ಸ್ವಾರ್ಥವೆನ್ನುವ ದುಃಖ ಸಾಗರದಿ ಮುಳುಗಿದ್ದು ಸ್ವಾರ್ಥಕೋಸುಗ ಹೀನ ಕೃತ್ಯಗಳ ಗÉೈದೂ ಅರ್ಥವನು ಗಳಿಸುತ್ತ ತುಂಬಿದೆನು ಈ ವಡಲ ವ್ಯರ್ಥವಾಯಿತು ಜನ್ಮ ಸಾರ್ಥವನು ಮಾಡೋ1 ನಿರುತದೀ ಧರ್ಮ ಕರ್ಮಗಳ ತೊಲಗಿದೆನು ಭವದಿ ಸುಖವೆಲ್ಲವೂ ಮಾಯವಾಯಿತು ದೇವಾ ಶರಣರಿಗೆ ತಂದೆ ನೀನೆಂದು ಮೊರೆಹೊಕ್ಕೇ 2 ಪರಹಿತವ ಬಯಸದಲೆ ಕೇಡು ಬಗೆದೆನು ನಿತ್ಯ ಪರಸತಿಯಪೇಕ್ಷಿಯಲಿ ನಿರುತನಾಗಿದ್ದೇ ಅರಿತೆನೀಗಲೆ ನಾನು ಸರ್ವ ನಶ್ವರವೆಂದು ನರಹರಿಯ ನೀರೆರೆಯೊ ಈ ಬಾಡು ಶಶಿಗೇ 3 ಭಕ್ತವತ್ಸಲನೆಂಬ ಬಿರುದ ಪೊತ್ತಿಹೆ ನೀನು ಭಕ್ತಿಯಲಿ ನಾ ನಿಂನ ಸೇವೆ ಮಾಡುವೆನು ಭಕ್ತದಾಯಕಯಂನ ಹಸಿವೆ ತೃಷೆಗಳ ನೀಗಿ ಮುಕ್ತಿಯನು ನೀಡೆನಗೆ ಚನ್ನಕೇಶವನೇ 4
--------------
ಕರ್ಕಿ ಕೇಶವದಾಸ
ಕಾಂತಾಮಣಿ ಶ್ರೀ ರುಕ್ಮಿಣಿ ಪ ವದನ ಸುಶೀಲೆ ಮೃಗಮದ ಫಾಲೆ ಸದಯೆ ನೀ ಭಕ್ತರ ಮುದದಿ ಪಾಲಿಸು ಇನ್ನು 1 ----------------------- ----------------------- 2 ಜಗದ ಜನನಿಯೆ ನೀ ಬಗೆ ಬಗೆಯಿಂದಲಿ ನಗೆ ಮುಖ ಪ್ರಾಣನಾಥ ವಿಠಲನ ಬದಿಯೊಳಿಪ್ಪೆ 3 (ಸೂಚನೆ:ಈ ಪದದ ಎರಡನೇ ನುಡಿ ದೊರೆತಿಲ್ಲ _ಸಂ.)
--------------
ಬಾಗೇಪಲ್ಲಿ ಶೇಷದಾಸರು
ಕಾದಿರುವೆನೋ ಕೃಷ್ಣ ಕಾದಿರುವೆನೋ ಪ ಮೋದಕ ನಿನ್ನ ನೆನಪಿನ ದೇಗುಲದಲ್ಲಿ ಆದಿನ ಕಾದಿದ್ದ ರಾಧೆ ಶಬರಿಯೊಲು ಅ.ಪ ಹಗಲಿರುಳೂ ನಿನ್ನ ಸ್ಮರಣೆಯ ಮಾಡುತ ಬಗೆಬಗೆಯಲು ನಿನ್ನ ಬಾಹ್ಯದಲೂ ನಿನ್ನ ನಗಧರ ಕಾಣಲು ಕಾದಿಹೆನೋ ಚ- ನ್ನಿಗ ನಿನ್ನ ನೆನೆನೆನೆದು ಹಾಡುವೆನೋ 1 ನನ್ನೀ ಸ್ಮರಣೆಯ ನುಡಿ ನುಡಿಯಲ್ಲೂ ಚಿನ್ಮಯ ನೀ ಕುಣಿದಾಡುತಿಹೆ ನನ್ನಯ ಪೂಜೆಯ ಆಡಿ ಅಡಿಯಲ್ಲೂ ಎನ್ನಯ್ಯ ಸಾಮೀಪ್ಯವಾಗಿರುವೆ 2 ಜಾಜಿಪುರಿಯ ಚೆನ್ನಕೇಶವ ನಿನ್ನ ಮೋಜಿನ ಚಿತ್ರವ ಚಿತ್ತದಿ ನಿಲಿಸಿಹೆ ಈಜಿಸಬೇಡಯ್ಯ ಸಾಕು ಸಂಸಾರ ಪಾದ ತೋರೊ ಪವಡಿಸುವೆ3
--------------
ನಾರಾಯಣಶರ್ಮರು
ಕಾಮಾನ ಜನನಿಯೆ ಸೋಮಾನ ಸೋದರಿ ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ ನೇಮಾದಿಂದಲಿ ಹರಿ ನಾಮಾವ ನುಡಿಸುತ ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ || ಮತ್ತನಾಗದೆ ಭವದಿ ಉತ್ತುಮನೆನಿಸುತ ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ 1 ದೇಶಕಾಲದಿನೀನು ಶ್ರೀಶಗೆ ಸಮಳಮ್ಮ ನಾಶಮಾಡುತ ದೋಷ ದಾಸಾನು ಎನಿಸಮ್ಮ || ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ ವಾಸುದೇವನಲ್ಲಿ ಆಸೇಯ ನೀಡಮ್ಮ 2 ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ || ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ3 ಹರಿಯಂತೆ ಅವತಾರ ನಿರುತನೀ ಮಾಡುತ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ || ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ 4 ಅಕ್ಷರ ರೂಪಳೆ ಈಕ್ಷಿಸುಕರುಣದಿಂದ ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ || ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ ಅಕ್ಷಯ ಮಾಡಿ ಜ್ಞಾನ ಮೋಕ್ಷಾವ ಕೊಡಿಸಮ್ಮಾ5 ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ || ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ ಲೋಕನಾಯಕ ಹರಿಯ ಏಕಾಂತದಲಿ ತೋರೆ6 ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ ನಿತ್ಯ ಪೊಗಳಿ ಹಿಗ್ಗುವೆ ಮಾತೆ || ಜಗವೆಲ್ಲ ಕುಣಿಸುತ ನಗುತಲೀಲೆಯಿಂದ ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ 7 ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ || ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ 8 ಸಾಗರನ ಮಗಳೆ ಆಗಮರೂಪಳೆ ಹೋಗೀಸುಲಿಂಗವ ಸಾಗಿಸಿಗುಣಕಾರ್ಯ || ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ ಆಗು ಮಾಡಿಸು ಹರಿ ಗೀತೆಗಳೆನ್ನಿಂದ 9 ಮರುತ ದೇವನ ಪಿತನ ಉರದಲಿ ವಾಸಿಪಳೆ ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು || ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ ಸಾರಸ ದಳನಯನೇ 10 ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ ನವನೀತ ಧರಿಸೀಹ || ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ 11
--------------
ಕೃಷ್ಣವಿಠಲದಾಸರು