ಒಟ್ಟು 1080 ಕಡೆಗಳಲ್ಲಿ , 104 ದಾಸರು , 883 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಗತಿ ಎನಗಿನ್ನು ಏನು ಗತಿಯೋ ನೀನು ಸಿರಿ ಕೃಷ್ಣ ಪ ಕಾಯ ಮೊದಲಾದ ಬದುಕುಗಳೆಲ್ಲ ಸ್ಥಿರತರಗಳಲ್ಲೆಂದು ತೋರಿಸಲು ಪರಮ ಭಕುತಿಯು ಪುಟ್ಟಿ ಮೊದಲೆ ನಾ ನಿನ್ನ ಪದ ಮರೆದು ಬಿಡುವೆನು ತಡಿಯದೇ ಕರುಣಿ 1 ಹೀಗೆ ತೋರದೆ ಪೋದರೆ ಎನಗೆ ಹಂಬಲವು ಆಗುವುದು ಸತ್ಯಲೋಕಗಳ ತನಕ ಭೋಗಗಳು ಕೊಟ್ಟರೆ ಮರೆವೆ ಅದರಿಂದ ನಾ ಕೂಗುವೆನು ಕೊಡದಿದ್ದರೆ 2 ಪಾಮರನ ಮಾಡಲೆನ್ನನು ತಿಳಿಯದಲೇವೆ ಸೀಮೆ ಇಲ್ಲದ ಪಾಪ ಮಾಡುವೆನೊ ಪ್ರೇಮದಲಿ ಪಾಂಡಿತ್ಯ ನೀಡಿದರೆ ಭಕುತ ಜನ ಸ್ತೋಮ ನಿಂದಿಸುವೆನಯ್ಯಾ 3 ಧನದಿಂದ ಹೀನನ್ನ ಮಾಡೆ ಲೋಕದಲಿನ್ನು ಜನರು ಕೊಡುವುದು ಎಲ್ಲ ಎನಗೆ ಕೊಡಲೆಂಬೆ ಧನವು ನೀ ಕೊಡಲು ಬಲು ಮದದಿಂದ ಕೆಟ್ಟು ಸ- ಜ್ಜನಕೆ ಕಾಸೊಂದು ಕೊಡಿನೊ 4 ಏಸು ಪರಿಯಲಿ ಪೇಳಿದರು ಕೇಳೆನ್ನ ನಿಜ ವಾಸನಿಯು ತನಗೆ ತಾನಿಟ್ಟಾಹದೈ ವಾಸುದೇವವಿಠಲ ನೀ ಎನ್ನಯ ಮನದಲ್ಲಿ ವಾಸವನು ಮಾಡಿ ಬೋದÉೈಸದನಕೆÀ5
--------------
ವ್ಯಾಸತತ್ವಜ್ಞದಾಸರು
ಏನು ಮರುಳಾಗುವೆಯೇ ಎಲೆಮಾನವ ನಿನ್ನ ಮಾನಿನಿಯ ಗುಣಕೆ ನೀ ಹಿಗ್ಗಿ ಹಿಗ್ಗಿ ಪ ದಾನ ಧರ್ಮಗಳ ಕೊಡಬೇಕೆಂದರೊಡ ಬಡಲು ಹೀನ ಗುಣಗಳನೆ ತಾ ಸೇವಿಸುವಳು ಜ್ಞಾನ ಮೋಕ್ಷಾದಿಗಳ ಹಾದಿಯನುಕಟ್ಟಿ ಭವ ಕಾನನವನೆ ಹೊಗಿಸಿ ತೊಳಲಿಸುವಳು 1 ನರಕವನು ತನ್ನಲ್ಲಿ ನೆಲೆಮಾಡಿ ಕೊಂಡಿಹಳು ಪರಿಪರಿಯ ಮೋಹಗಳ ಬೀಸುತಿಹಳು ಸ್ಮರನ ಬಾಣವ ಮಾಡಿ ಸಾಲು ಗೊಲೆಕೊಲ್ಲುವಳು ಅರಿಯದವರಂತೆ ಮಿಣ್ಣಗೆ ಇರುವಳು 2 ತನ್ನಮನ ಬಂದಂತೆ ಚರಿಸುವಳು ಪಗಲಿರುಳು ಕನ್ನಗೊಯ್ಕರ ವೋಲು ಕೊರೆಯುತಿಹಳು ಭಿನ್ನಭಾವದಿ ನಡೆದು ಮನೆಯ ಪಾಲ್ಮಾಡುವಳು ಕಣ್ಣಿನೊಳು ಕಂಡೊಡವೆಗಳನಿರಿಸಳು 3 ಸುದತಿ ಯಾಕಾರೆ ಯಾಗಿಹಳು ನೋಯೆ ನುಡಿವಳು ಕಂಡ ಕಂಡವರೊಳು ಹೋಯೆಂದು ಕೂಗುವಳು ಶಿಕ್ಷಿಸಳು ನಿನ್ನನುರೆ ಬಾಯೊಳಗೆ ಭಯಬಿಡಿಸಿ ಹಾಗಿಸುವಳು 4 ಕಾಮ ಕ್ರೋಧಾದಿಗಳ ಕೀಲ ಬಲಗೊಳಿಸುವಳು ಪ್ರೇಮ ಗೆಡಿಸುವಳೆಲ್ಲ ಬಾಂಧವರನು ಭೂಮಿಯೋಳಗಧಿಕ ಭೀಮನ ಕೋಣೆ ಲಕ್ಷ್ಮೀಪತಿಯ ನೆನೆನೆನೆದು ಸಖಿಯಾಗು ಕಂಡ್ಯಾ 5
--------------
ಕವಿ ಪರಮದೇವದಾಸರು
ಏನು ಮಾಡಲಿಯನ್ನ ಮನಸಿನಟ್ಟುಳಿ ಘನ | ನೀನೆ ನಿಲಿಸೋ ಹರಿಯೇ ದೊರೆಯೆ ಪ ಪರಮ ಪಾವನ ನಿನ್ನ ಚರಿತವ ಕೇಳದು | ಬರಡ ಮಾತಿಗೆ ಪ್ರೇಮಾ ನೇಮಾ 1 ಸಿರಿವರ ಮೂರ್ತಿಯನು ನೋಡಲೊಲ್ಲದು | ಸತಿಯರ ರೂಪಕೆಳಸುವದು ಹರಿದು 2 ಸಂತರ ಚರಣಕೆರಗಿ ಬಿಗಿದಪ್ಪದು | ಭ್ರಾಂತ ಜನರೊಳಗೆ ಸಂಗಾ 3 ಹರಿಯಂದೊದರಲು ನಾಲಿಗೆ ಬಾರದು | ಪರನಿಂದೆ ಜಪಿಸುವದು ಸರಿದು 4 ಸಿರಿ ಚರಣಾರ್ಪಿತ ತುಲಸಿಯ ಸೇರದು | ಪರಿಮಳದಲಿ ಬೋಗಿಲಿ ಸಾಗಿ 5 ಗುರು ಮಹಿಪತಿ ಪ್ರಭು ನಿನ್ನೆಚ್ಚರಿದಿ ಮನ | ವಿರಿಸಿಯನ್ನನುಳಹೋ ಸಲಹೋ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ವಿನೋದವಿದು ನಮ್ಮ ಶ್ರೀ ನಿಲಯನ ಗುಣಗಾನ ಮಾಡುವುದು ಪ ಮಾನಸ ಮಂದಿರದಲಿ ಶ್ರೀ ಕೃಷ್ಣನ ಕಾಣಲು ಬಯಸುವ ಜನಕೆ ವಿಧಾನ ಅ.ಪ ಶಾಸ್ತ್ರ ವಿಚಾರ ಶ್ರೋತೃ ವಿಹಾರ ಶ್ರೋತೃ ಜನಕೆ ಇದು ಪರಮಾಧಾರ1 ಶ್ರೀಶನ ನೋಟ ಭೂಸುರ ಕೂಟ ದಾಸ ಜನಕೆ ಇದು ಭೂವೈಕುಂಠ 2 ವೇದ ಸುಘೋಷ ವಾದ್ಯದ ಹರ್ಷ ಸಾಧುಜನಕೆ ಇದು ಬಲು ಸಂತೋಷ 3 ಸಿಕ್ಕಿತು ಕಾಂತಿ ಹೊಕ್ಕಿತು ಶಾಂತಿ ಭಕ್ತ ಪ್ರಸನ್ನನು ಬಿಡಿಸಿದ ಭ್ರಾಂತಿ4
--------------
ವಿದ್ಯಾಪ್ರಸನ್ನತೀರ್ಥರು
ಏನು ಸುಕೃತವೋ ಮಧುರಾ ನಗರಕೆ ಪ ಗಾನಲೋಲ ಹರಿ ತಾ ನೆಲೆಸಿಹುದು ಅ.ಪ ವರ ವಿಭವಗಳುಳ್ಳ ಪುರಗಳಂತಿರಲು ಪರಮ ಪುರುಷ ಹರಿ ವಿರಾಜಿಸುತಿರಲು 1 ಭೂಪ ನಗರಗಳಿಗೀ ಪರಿಯುಂಟೆ ಗೋಪಾಲಕ ಹರಿ ಕಾಪಾಡುತಿಹುದು 2 ಸುಮನಸಪುರವಾದ ಅಮರಾವತಿಗುಂಟೆ ಕಮಲನಯನ ಹರಿ ಸಮಾಗಮವು ಸದಾ 3 ದಿವಿಜರೊಡೆಯ ಹರಿ ಭುವಿಯಲಿ ಅರಿಸಿ ಅವತರಿಸುತ ತನ್ನ ಪ್ರವಾಸಗೈದುದು 4 ನಿರುಪಮ ಆನಂದಪೂರ್ಣ ಪ್ರಸನ್ನನು ಪರಿಪರಿ ವಿಧದಲಿ ವಿರಾಜಿಸುತಿರಲು 5
--------------
ವಿದ್ಯಾಪ್ರಸನ್ನತೀರ್ಥರು
ಏನೆಂದು ಕೊಂಡಾಡಿ ಸುತ್ತಿಸೆಲೊ ನಿನ್ನಾ ಪ ದಾನವಾಂತಕ ಕೃಷ್ಣ ಆನಂದ ಗುಣ ಪೂರ್ಣ ಅ.ಪ. ಮತ್ಸರೂಪಿಯೆ ನಿನ್ನ ಉತ್ಸಹದಿ ಕರೆಯಲಾಕುತ್ಸಿತನ ಸೊಲ್ಲ ನೀನೆತ್ತ ಕೇಳುವಿಯೋ |ಮತ್ಸ್ಯಕೇತನ ಜನಕ | ಮತ್ಸರವ ಕಳೆಯಯ್ಯಸಚ್ಚಿದಾನಂದಾತ್ಮ | ಚಿತ್ಸುಖಪದನೇ 1 ಕೂರ್ಮರೂಪಿಯೆಂದು | ಪೇರ್ಮೆಯಲಿ ಕರೆಯಲಾಭರ್ಮ ಗರ್ಭನ ಪಿತನೆ | ಗಿರಿಯ ಧರಿಸಿರುವೇ |ನಿರ್ಮಲಾತ್ಮಕನೆ ಯೆನಗೆ | ನಿರ್ಮಮತೆ ನೀಡಯ್ಯಾ ಊರ್ಮಿಳಾಪತಿ ಭ್ರಾತೃ | ಪರಮ ಮಂಗಳನೇ 2 ವರಹ ರೂಪಿಯೆ ನಿನ್ನ | ಕರೆಯುವುದು ಹೇಗಯ್ಯಾ ಕೋರೆ ದಾಡಿಯ ಮೇಲೆ | ಧರೆಯೆ ಧರಿಸಿರುವೇ | ವಾರೆ ನೋಟದಿ ಯೆನ್ನ | ಪರಿಕಿಸೀ ಪೊರೆಯಯ್ಯಾಧೀರ ಭೂವರಹ ವರ | ಧರಣಿ ಪರಿಪಾಲಾ 3 ನಾರಸಿಂಹನೆ ನಾನು | ಕರೆಯಲಾಪನೆ ನಿನ್ನಘೋರರೂಪವ ನೋಡಿ | ದೂರ ಸಾರುವರೋವಾರಿಜಾಕ್ಷಿಯು ಬಂದು | ಘೋರ ಪ್ರಹ್ಲಾದನ್ನಚಾರು ತವ ಚರಣದಲಿ | ಇರಿಸಬೇಕಾಯ್ತು 4 ದಧಿ | ವಾಮನನೆ ಬಾರೆಂದುಸಾಮಸನ್ಮುತ ನಿನ್ನ | ನಾಮಗಳ ನೆನೆಯೆಲಾ |ಭೂಮಿ ಬೇಡುವ ನೆವದಿ | ಬಲಿಯ ಭೂಮಿಗೆ ತುಳಿದೆಸೀಮೆ ಮೀರಿದ ಮಹಿಮ | ಮರ್ಮವಿನ್ನೆಷ್ಟೋ | 5 ಪರಶುರಾಮನೆ ನಿನ್ನ | ಕರೆಯಲಾರೆನು ನಾನುದುರುಳ ಕ್ಷತ್ರಿಯರ | ಶಿರಗಳನೆ ತರಿದೂ |ಭಾರಿ ಪರಶುವಿನಿಂದ | ವರಮಾತೆ ಶಿರ ತರಿದಿಸರಿ ಕಾಣೋ ಇದು ನಿನಗೆ | ಪರಮ ಪಾವನ್ನಾ 6 ರಾಮ ರೂಪಿಯೆ ನಿನ್ನ | ಆ ಮಹಾ ಮಹಿಮೆಗಳಸೀಮೆಗಾಣಳು ಲಕುಮಿ | ಪಾಮರನಿಗಳವೇ |ಆ ಮರಾ ಈ ಮರಾನೆಂದ ಆ | ಪಾಮರನ ಪೊರೆದುಆ ಮಹಾತ್ಮನ ಗೈದ | ಪರಿಯೆನ್ನ ಮಾಡೋ 7 ಕೃಷ್ಣ ಕೃಷ್ಣಾ ಎಂದು ಕರೆಯುವೆನೆ ನಾ ನಿನ್ನಕಷ್ಟದೊಳು ಸಿಲುಕಿರುವೆ | ಗಿರಿಯನ್ನೆ ಪೊತ್ತು |ವೃಷ್ಟಿಕುಲ ಸಂಪನ್ನ | ಕೃಷ್ಣ ಮೂರುತಿ ನೀನುಇಷ್ಟ ಭಕುತರ ಮನೋ | ಭೀಷ್ಟ ಸಲಿಸುವಿಯಾ 8 ಬುದ್ಧ ದೇವನೆ ಎನಗೆ ಸ | ದ್ಭುದ್ಧಿ ಕೊಡು ಎಂದುಬುದ್ಧಿ ಪೂರ್ವಕವಾಗಿ ನಿನ್ನ ಕರೆಯಲಾ |ಬುದ್ಧಿಯಿಂದಲಿ ನೀ | ಭೋಧಿಸಿದೆ ದುಶ್ಯಾಸ್ತ್ರಬೌದ್ಧ ನಿನ್ನನು ಪೊದ್ದು | ಬುಧರ ಪಾಡೇನೊ 9 ಕಲ್ಕಿ ಕಲ್ಕೀ ಎಂದೇ ಕರೆಯಲಾಪೆನೆ ದೇವಾಶುಲ್ಕ ಮೇಲಾಗಿಹುದು ಕಲಿಯುಗದೊಳು |ಉಲ್ಕ ಮುಖ ಮೊದಲಾದ | ಕಲ್ಕಿರಾಜರು ನಿನ್ನಕಲ್ಕ್ಯಾತ್ಮ ಸತ್ಯ ತವ | ವ್ರತವ ಮಾಳ್ಪರು ಬಿಡದೆ 10 ಸರ್ವರೂಪಾತ್ಮಕನೆ | ಸರ್ವ ವ್ಯಾಪಕ ಸ್ವಾಮಿಸರ್ವಜಿತು ಸರ್ವಾತ್ಮ ಸರ್ವೇಶನೇ |ಶರ್ವಾರಿ ವಂದ್ಯ ಗುರು | ಗೋವಿಂದ ವಿಠಲನೇಗುರು ಹೃದಂಬರದಲ್ಲಿ | ತೋರಿ ಪೊರೆಯನ್ನ 11
--------------
ಗುರುಗೋವಿಂದವಿಠಲರು
ಏನೆಂದು ನುಡಿವೆ ನಿನ್ನವರಂತೆ ಕೇಡು ಬುದ್ಧಿ ಎನ್ನೊಳಗಿಲ್ಲ - ಗುಣಹೀನರಲ್ಲದ ಈ ನರರ ಪಾಲಿಪ ಬುದ್ಧಿ ನಿನ್ನೊಳಗಿಲ್ಲ ಪ ತರಳ ಪ್ರಹ್ಲಾದನಂದದಿ ನಿನ್ನ ರೂಪನು ಕೆಡಿಸಲಿಲ್ಲನರನಂತೆ ಬಂಡಿಬೋವನ ಮಾಡಿ ನಿನ್ನ ದುಡಿಸಲಿಲ್ಲಪರಾಶರನಂತೆ ನದಿಯೊಳಿದ್ದ ಹೆಣ್ಣ ಕೂಡಲಿಲ್ಲಗರುಡನಂದದಿ ನಿನ್ನ ಪೊತ್ತು ತಿರುಗಲಿಲ್ಲ 1 ಅನುದಿನ ಚರಿಸಲಿಲ್ಲಬಿನಗು ಬೇಡತಿಯಂತೆ ಸವಿದುಂಡ ಹಣ್ಣ ತಿನಿಸಲಿಲ್ಲಇನಕುಲ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲಘನ ಪಾತಕದಜಮಿಳನಂತೆ ನಾರಗ ಎನ್ನಲಿಲ್ಲ2 ಕದನದೊಳು ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲವಿದುರನ ತೆರನಂತೆ ಸದನವ ಮುರಿದು ನಿನ್ನ ಬೆರೆಯಲಿಲ್ಲಮದಗಜದಂತೆ ಮಕರಿಗೆ ಸಿಲ್ಕಿ ಒರಲಲಿಲ್ಲಗದರಿ ಶಿಶುಪಾಲನಂದದಿ ನಿನ್ನನುಪೇಕ್ಷಿಸಿ ಜರೆಯಲಿಲ್ಲ3 ಬುವಿಯೊಳು ಬಲಿಯಂತೆ ದಾನವ ನೀಡಲಿಲ್ಲಭವನಂತೆ ಶ್ಮಶಾನದಿ ಮನೆಮಾಡಿ ಸ್ಮರಿಸಲಿಲ್ಲತವ ಪುಂಡರೀಕನಂತೆ ಹಲಗೆಯಿಟ್ಟಿಗೆ ಮೇಲೆ ನಿಲಿಸಲಿಲ್ಲಭುವನದೊಡೆಯ ನೆಲೆಯಾದಿಕೇಶವನ ಮರೆಯಲಿಲ್ಲ4
--------------
ಕನಕದಾಸ
ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ರಂಗನ ಮಹಿಮೆಯ ಏನೆಂದ್ಹೇಳಲಿ ಪ ಘನ್ನಸಿರಿವಿಧಿ ಧ್ಯಾನಕೆ ನಿಲುಕದ ಅಗಣಿತ ಮಹಿಮೆಯ ಅ ಎಲ್ಲವ ಬಲ್ಲನು ಎಲ್ಲವ ಮಾಡುವ ಎಲ್ಲರ ಒಡೆಯನು ಇಲ್ಲದ ಸ್ಥಳವಿಲ್ಲ ಬಲ್ಲವರಿಲ್ಲವೆ ಫುಲ್ಲನಾಭನ ನಲ್ಲನು ಲಕ್ಷ್ಮಿಗೆ ಗೊಲ್ಲನು ಆದನೆ 1 ಅಂಗನೆ ಲಕ್ಷ್ಮಿಯ ಸೊಗಸಿಗೆ ನಿಲುಕದ ಅಂಗನೆ ಇಲ್ಲದೆ ಮಗನನು ಪಡೆದವ ಹಿಂಗದ ತಾನೆ ಅಂಗನೆ ಯಾದವ ರಂಗನ ಗೋಕುಲ ಹೆಂಗಳ ಕೂಡಿದನೆ2 ತಂದೆಯ ಕೊಂದನು ಕಂದನ ಸಲಹಿದ ಕಂದನ ಕೊಂದನು ತಂದೆಯ ಸಲಹಿದ ಬಂಧುಗಳೆನ್ನದೆ ಕೊಂದನು ವಂಶವ ತಂದೆಯು ಇಲ್ಲದೆ ಕಂದನು ಆಗುವನೇ 3 ದಾನವ ನೀಡಿದ ದಾನಿಯ ತುಳಿದನು ಮಾನವ ತೆಗೆದಾ ಹೀನನ ಸಲಹಿದ ದೀನರ ಸಲಹುವ ದಾನವರಳಿವನು ಜ್ಞಾನಿಗಮ್ಯನು ಮಾನಸ ಹಂಸನ 4 ಹಸಿವೆಯ ಅರಿಯದ ಅಸಮದೇವನು ಸೊಸಿಯು ನೀಡಿದ ಶಾಖವ ತಿಂದನೆ ಪಶುಪತಿ ಋಷಿಯನು ವಶವಾಗಿ ಮಾಡಿದ ಮಾಸದಮಹಿಮನು 5 ನಾಲ್ಮೊಗನಯ್ಯನು ಸುಳ್ಳನು ಹೇಳುತ ಕಳ್ಳನು ಆದನು ಗೊಲ್ಲರ ಭಕ್ತರಿಗೆ ಮೆಲ್ಲನೆ ಕುರುಕುಲ ಎಲ್ಲವ ಸವರಿದ ಬಲ್ಲಿದ ಕೃಷ್ಣಗÉ ಇಲ್ಲವೆ ಸಮರಧಿಕ 6 ಜಗವನು ಮಾಡುವ ಜಗವನು ಪಾಲಿಪ ಜಗವನು ಅಳಿಸುವ ಮಗುವಾಗಿ ಬಂದನೆ ಜಗಜೀವ ಭಿನ್ನನು ಜಗದೊಳು ವ್ಯಾಪ್ತನು ನಗುತಲಿ ಬಾಯಲಿ ಜಗವನು ತೋರಿದನೆ7 ಯಾಗವ ನಡೆಸಿದ ಯಾಗವ ಕೆಡಿಸಿದ ಯೋಗವ ಚರಿಸುತ ಯೋಗವ ಬೋಧಿಪನೆ ಬಾಗುವ ಭಕ್ತರ ನೀಗುವ ಕಲುಷವ ಆಗಮವಂದಿತ ಸಾಗರಶಯನನೆ8 ಹತ್ತವತಾರವ ನೆತ್ತಿದ ಮಹಿಮನು ಉತ್ತಮ ಭಕುತರ ತೆತ್ತಿಗನಾದನೆ ಬತ್ತಲೆ ಶಿಶುವಾಗಿ ಬಿತ್ತಿದ ಮೋಹವ ಬೆಸ್ತರಕುವರಿಗೆ ಆತ್ಮಜನಾದವನೆ9 ಚಕ್ರವಪಿಡಿದವ ನಕ್ರನ ತರಿದವ ಶಕ್ರನಕಾಯ್ದವ ವಕ್ರೆಯ ಕೂಡಿದನೆ ರಕ್ಕಸಯವನನ ಠಕ್ಕಿಲಿ ಅಳಿಸುತ ಭಕ್ತನಪೊರೆದಾ ಯುಕ್ತಗಳೊಡೆಯನೆ 10 ನಾರೆಂದೊದರಿದ ಉರುತರ ಪಾಪಿಯ ಭರದಿಂಪೊರೆಯೊ ಕರುಣಾಸಾಗರನೆ ನರಹರಿದೇವನು ಪರಿಪರಿರೂಪನು ಪರಿಪರಿಲೀಲೆಗೆ ಮೇರೆಯೆ ಇಲ್ಲಾವೇ 11 ವಾರಿಯಲಾಡುವ ಭಾರವ ಹೊರುವಾ ಕೋರೆಯ ತೀಡುವ ಘೋರವ ತೋರುವನೇ ವೀರರತರಿಯುವ ಕ್ರೂರರಸವರುವ ಜಾರನು ಆಗುವ ವೈರಿಗಳ್ವಂಚಿಪ ಏರುವ ತೇಜಿಯನೆ 12 ಅದ್ಬುತ ರೂಪವ ಕದನದಿ ತೋರಿದ ಬದರಿಯನಿಲಯಗೆ ತುದಿಮೊದಲಿಲ್ಲಾವೆ ಉದರದಿ ಮಗುವನು ಮುದದಿಂಸಲಹಿದ ಮುದಮುನಿ ಪ್ರಿಯನು ಹೃದಯದಿ ವಾಸಿಪನೆ 13 ವಿಷವನು ಕುಡಿದಾ ವೃಷಭವಾಹನ ಅಸುರನ ಭಯದಿಂ ಘಾಸಿಲಿ ಓಡುತಿರೇ ಮೋಸದಿ ಯುವತಿಯ ವೇಷವ ಧರಿಸುತ ಪಶುಪತಿ ಸಲಹಿದನೇ 14 ಭರದಿಂ ರಥವೆತ್ತಿ ನರನಂ ಕಾಯ್ದನು ಧರಣಿಯ ಒತ್ತುತ ಕುರುಪನ ಕೆಡಹಿದನೇ ಮರೆಸುತ ರವಿಯನು ಪೊರೆದನು ಚೇಲನ ಸುರವರಪೋಷಕ ಸಿರಿಪತಿ ಚದುರನ 15 ಗಂಗೆಯಪಡೆದ ಮಂಗಳ ಮಹಿಮನು ಹಿಂಗದೆ ಗೋಪರ ಸಂಗಡ ಆಡಿದನೇ ತಿಂಗಳ ಬೆಳಕಲಿ ಶೃಂಗರ ಸೊಬಗನು ಹೆಂಗಳ ಕೂಡುತ ಸಂಗೀತ ಪಾಡಿದನೆ 16 ಕಾಳಿಯ ಫಣೆಯಲಿ ಕಾಳಿಂದೀಶನು ತಾಳಕೆ ಕುಣಿಯುತ ಕೊಳಲನ್ನೂದಿದನೆ ಘೂಳಿಗಳಳಿಯುತ ನೀಲಳತಂದವ ಊಳಿಗ ಮಾಡಿದನೇ 17 ನಾರಿಯು ಮೊರೆಯಿಡೆ ಸೀರೆಯನೀಡಿದ ವಾರಿಜಾಕ್ಷನು ಸೀರೆಯ ಚೋರನೆ ನೀರೊಳು ಮುಳುಗಿದ ಪೋರರಿಗೆಲ್ಲ ತೋರಿದ ಜಗವನು ಸೂರಿಗಳೊಡೆಯನೆ 18 ಗರುಡನ ಏರುವ ಧರಣಿಯ ರಮಣನು ಏರುತಹುಡುಗರ ತುರುಗಳ ಕಾಯ್ದನೆ ಮಾರನಪಡೆದ ಮುರಹರಕೃಷ್ಣನು ಗಿರಿಯನು ಎತ್ತುತ ಹರುಷವ ಬೀರಿದನೇ 19 ಶೃತಿಗಳು ಪೊಗಳುವ ವ್ಯಾಪ್ತನ ನಿತ್ಯನ ಪಾತಕ ಹೋಗುವುದೇ ಅಂತಕ ಗತಿ ಮತಿ ಪ್ರೇರಕ ದಾತನು ಎಂತೆನೆ ಪ್ರೀತಿಲಿ ಸಲಹುವನೆ 20 ಮಜ್ಜಿಗೆ ಕಡೆಯುವ ರಜ್ಜುವಿನಿಂದಲಿ ಮೂರ್ಜಗನಯ್ಯನು ಕಟ್ಟಿಸಿಕೊಂಡಾನೆ ಲಜ್ಜೆಯ ಬಿಡುತಲಿ ಗೆಜ್ಜೆಯ ಕಟ್ಟುತ ಘರ್ಜಿಸಿ ಪಾಡಲು ಹೆಜ್ಜೆಯ ತೋರುವನೆ 21 ದಾಸರ ಪೋಷಿಪ ಶೇಷಗಿರೀಶನ ವಿಶೇಷವೆ ಬಣ್ಣಿಸೆ ಶೇಷಗೆ ಆಗದೆ ದೋಷವು ಇಲ್ಲದ ವಾಸುದೇವನೆ ತೋಷವ ನೀಡುವ ಸಾಸಿರ ನಾಮಕನೆ22 ಜಯಮುನಿ ಅಂತರ ವಾಯುವಿನಲ್ಲಿಹ ಜಯಕೃಷ್ಣವಿಠಲನು ಜೀಯನೆ ಜಗಕೆಲ್ಲ ನಯಭಯದಿಂದಲಿ ಹಯಮುಖನೊಲಿಸಲು ಭಯವನು ಹರಿಸುತ ನ್ಯಾಯದಿ ಪಾಲಿಪನೇ 23
--------------
ಕೃಷ್ಣವಿಠಲದಾಸರು
ಏಸುಪರಿ ಈಸಬೇಕೋ ಶ್ರೀಶದಾಸನೇ ಮತ್ತೂರೇಶ ಭವಸಾಗರದಿ ಏಸುಪರಿ ಈಸಬೇಕೋ ಪ ಕೂಸಿನಂಕದಿ ಬಾವು ಘಾಸಿಸುವ ಜ್ವರತಾಪನೋಸರಿಸಲೇಶ ಸಮಯದಿಯೊದಗಲು ಲೇಶವಾದರು ಮಗುವಿನಾಸೆ ಇರದಿರೆ ಪ್ರಾಣೇಶನೇ ಗತಿಯೆನಲು ಲೇಸುಮಾಡಿದೆ ಸ್ವಾಮಿ1 ಎನಿತೆಂದು ಹೇಳಲ್ಯ ನಿನಗೆ ಮನದಳಲು ನೀಗಲಸದಳವಾಗಿ ಬಳಲುವೆನು ತನುವಿನೀ ಸಂಕಟವ ತೊಲಗಿಸೈ ಜವದಿ 2 ದುರಿತ ದೂರಪುದು ಭರದಿ ಎನ್ನೊಡೆಯ ಶ್ರೀರಾಮ ಪೊರೆವಾ ಭವ ಕಿಚ್ಚಿನಿಂದುದ್ಧರಿಸಿ ಎನ್ನನು ನರಸಿಂಹವಿಠ್ಠಲನ ನೆನೆಯೆ ಜಿಹ್ವೆಗನಿಸೊ 3
--------------
ನರಸಿಂಹವಿಠಲರು
ಏಳಲಾರದ ಘಟವೇ ನೀ ಬೆಟ್ಟ ಹತ್ತೋದು ದಿಟವೇ ಪ ನಾಳಿನ ಬಾಳನು ಪೇಳಲಾಗದ ನೀ ಮೇಲೆಯೋ ಜಂಭದ ಕೋಳಿಯೊ ಯೋಚಿಸು 1 ತಡೆಯಲು ಸಾಧ್ಯವೆ ಕಡಲನು ಕರದಲಿ 2 ತ್ರಾಣವಿದ್ದರೆÀ ಸದಾ ಕಾಣರೆ ಸುಖವನು ಪ್ರಾಣ ಪ್ರಸನ್ನನು ಒಲಿಯುವ ತನಕ 3
--------------
ವಿದ್ಯಾಪ್ರಸನ್ನತೀರ್ಥರು
ಒಂದು ದಿನ ನಾರದಮುನಿ ಗೋಕುಲದಿ ಇಂದಿರೇಶನ ಲೀಲೆಯಾ ನಿಂದು ನಭದಲಿ ನೋಡುತಾ | ಮೈಯುಬ್ಬಿ ಬಂದನಾ ವೈಕುಂಠಕೆ 1 ಸಿರಿದೇವಿ ಸಖಿಯರೊಡನೆ | ವನದಲ್ಲಿ ಪರಿಪರಿಯ ಕ್ರೀಡೆಯೊಳಿರೇ ಅರವಿಂದ ನಯನೆಯನ್ನೂ | ಕಂಡನಾ ಸುರಮುನಿಯು ಸಂಭ್ರಮದಲೀ 2 ಜಗನ್ಮೋಹನಾಕಾರಳೂ | ಶ್ರೀ ಹರಿಯ ಜಗ ಸೃಷ್ಟಿಗನುಕೂಲಳೂ ಬಗೆ ಬಗೆಯವತಾರಳೂ | ಕ್ಷಣ ಹರಿಯ ಅಗಲದಂತಿರುತಿಪ್ಪಳೂ 3 ಹರಿಗೆ ಗುಣದಿಂ ಕಿರಿಯಳೂ | ಮತ್ತೆಲ್ಲ ಪರಿಯಲ್ಲಿ ಹರಿಗೆ ಸಮಳೂ ಶರಣೆಂದವರ ಕಾಯ್ವಳೂ | ಬೊಮ್ಮಾದಿ ಸುರರ ಸೃಜಿಸುವ ಶಕ್ತಳೂ 4 ನಾಕ ಸ್ತ್ರೀಯರನೆ ಕೂಡೀ | ವನದಲ್ಲಿ ಲೋಕನಾಯಕಿ ರಮಿಸುತಾ ಶ್ರೀಕಾಂತನಗಲದವಳೂ | ಮುನಿಗೆ ತ ನ್ನೇಕರೂಪವ ತೋರ್ದಳೂ 5 ನೊಡಿ ನಮಿಸಿದನು ಸಿರಿಯಾ | ಹರಿಗುಣವ ಹಾಡಿ ಪಾಡಿದನು ಮೈಯ್ಯಾ ಮೂಡೆ ರೋಮಾಂಚ ಕೈಯ್ಯಾ | ಮುಗಿಯುತಲಿ ನೋಡಿದನು ಸಿರಿಯ ದಣಿಯಾ 6 ಪಲ್ಲವಾಧರೆ ನಗುತಲಿ | ತನ್ನ ಕರ ಪಲ್ಲವದಿ ಕೃಪೆಯ ಮಾಡೀ ಎಲ್ಲಿಂದ ಬಂದೆ ಮುನಿಪಾ ವಿಷಯವೇ ನೆಲ್ಲ ಪೇಳೆಂದೆನ್ನಲೂ 7 ಏನ ಪೇಳುವೆನೆ ತಾಯೆ | ನಿನ ಪತಿಯ ನಾನಾ ವಿಧ ಚರ್ಯೆಗಳನೂ ನಾನರಿಯಲಾರೆ ನಮ್ಮಾ | ನವನೀತ ಚೋರನಾಗಿರುವನಮ್ಮಾ 8 ನಾಕ ಭೂಲೋಕ ತಿರುಗೀ | ಭುವಿಯೊಳಗೆ ನಾ ಕಂಡೆ ಗೋಕುಲವನೂ ಹೇ ಕಮಲೆ ಕೇಳು ಅಲ್ಲೀ | ನಿನ ಪತಿಯು ಆಕಳಾ ಕಾಯುತಿಹನೂ 9 ಬಿಟ್ಟು ವೈಕುಂಠವನ್ನೂ | ಪ್ರಾಯ ಸತಿ ದಿಟ್ಟೆ ನಿನ್ನನು ತೊರೆದನೂ ಹುಟ್ಟಿ ಗೊಲ್ಲರ ಕುಲದಲೀ | ಬೆರತನಾ ಕೆಟ್ಟ ಹೆಂಗಳೆಯರಲ್ಲಿ 10 ನಳಿನಜಾಂಡವ ಸಾಕುವಾ | ಜಗದೀಶÀ ಗೋಪಿ ಬೈ ಗಳನು ತಾ ಕೇಳುತಿಹನೂ 11 ಮದನಮೋಹನರೂಪನೂ | ಗೊಲ್ಲತೆರ ಅಧರಾಮೃತವ ಸವಿವನೂ ಎದೆ ಗಂಟು ಪಿಡಿಯುತಿಹನೂ | ಚಂಡೆಂದು ಗದರಿಸಲು ನುಡಿಯುತಿಹನೂ 12 ಸಂಪೂರ್ಣ ಕಾಮ ತಾನು | ವನದಲ್ಲಿ ಗುಂಪು ಸ್ತ್ರೀಯರ ಕೂಡ್ವನೂ ಸಂಪನ್ನ ಭೋಗಿಸುವನೂ | ಕೊಳಲ ಪಿಡಿ ದಿಂಪುಗಾನವ ಗೈವನೂ 13 ವನದ ಸೊಬಗೇನುಸುರುವೇ | ಶ್ರೀರಮಣಿ ದನಕರುವ ಕಾಯುತ್ಹರಿಯಾ ವನವನವ ತಿರುಗುತ್ತಿರೇ | ಕೊಳಲ ಧ್ವನಿ ವನವೆಲ್ಲ ತುಂಬಿರುತಿರೇ 14 ತಿಳಿಯುದಕ ಯಮುನೆ ಮಳಲು | ದಿಣ್ಣೆಯಲಿ ಕೊಳಲೂದೆ ಹರಿ ಕೇಳಲೂ ಮೊಳೆತವಾ ಬಂಜೆ ಮೋಟೂ | ಮೃಗಪಕ್ಷಿ ಕುಳಿತು ಮೈಮರೆತು ಕೇಳೇ 15 ಓಡಿ ಬರುತಲಿ ತುರುಗಳೂ | ಬಾಲವ ಲ್ಲಾಡಿಸದೆ ಕಣ್ಣುಮುಚ್ಚಿ ಮಾಡಿಟ್ಟ ಪ್ರತಿಮೆಯಂತೆ | ಕಾಣುತಿರೆ ಆಡಿಸದೆ ಸರ್ಪ ಹೆಡೆಯಾ 16 ಶೃಂಗಾರ ಕೊಳಲನೂದೆ | ಜಡ ಚೇತ ನಂಗಳಾಗುತ ಚಿಗುರಲೂ ಅಂಗ ಮರೆಯುತ ಜೀವಿಗಳ್ | ಜಡದಂತೆ ಕಂಗಳನುಮುಚ್ಚಿನಿಲ್ಲೆ 17 ಅಷ್ಟ ಐಶ್ವೈರ್ಯದಾತಾ | ನಾರಿಯರ ತುಷ್ಟಿಪಡಿಸುತಲಿ ಖ್ಯಾತಾ ಶಿಷ್ಟ ಜನರನು ಪೊರೆಯುತಾ | ರಕ್ಕಸರÀ ಹುಟ್ಟಡಗಿಸುವನು ವಿಹಿತಾ 18 ಪೇಳಲಳವಲ್ಲವಮ್ಮಾ | ಶ್ರೀ ಹರಿಯ ಲೀಲೆ ಜಾಲಗಳ ಬ್ರಹ್ಮಾ ನೀಲಗಳರರಿಯರಮ್ಮಾ | ಆನಂದ ತಾಳಿದೆನು ಕೇಳೆ ರಮ್ಮಾ 19 ಇಷ್ಟು ಗೋಕುಲದಿ ನೋಡೀ | ಕಾಣದಿ ನ್ನೆಷ್ಟೋ ಎನ್ನುತಲಿ ಪಾಡೀ ಗುಟ್ಟು ಪೇಳಲು ಬಂದೆನೂ | ಸಿರಿದೇವಿ ಸಿಟ್ಟಾಗಬೇಡವಿನ್ನೂ 20 ಪರನಾರಿಯರ ಬೆರೆಯುತಾ | ಶ್ರೀ ಕೃಷ್ಣ ಮರೆತು ನಿನ್ನನು ಸುಖಿಸುತಾ ಪರಿ ಯೊಚಿಸಮ್ಮಾ | ಆಜ್ಞೆ ಕೊಡು ತ್ವರಿತದಲಿ ಪೋಪೆನಮ್ಮಾ 21 ಹರಿಚÀರ್ಯವೆಲ್ಲ ಕೇಳಿ | ಶ್ರೀ ತರುಣಿ ಪರಮ ಆನಂದ ತಾಳೀ ಬೆರಗಾದ ಪರಿತೋರುತಾ | ಮುನಿವರಗೆ ಪರಿ ಏನು ಮುಂದೆ ಎನಲೂ 22 ಸನ್ನುತಾಂಗನ ಕೂಡಲೂ | ಭೂತಳದಿ ಇನ್ನೇನುಪಾಯವೆನಲೂ ಪನ್ನಂಗ ವೇಣಿ ಉದಿಸೂ | ಭೀಷ್ಮಕಗೆ ಇನ್ನು ನೀ ಕುವರಿ ಎನಿಸೂ 23 ಎಂತೆಂತು ಹರಿಯಚರ್ಯೆ | ಸಿರಿಕಾಂತೆ ಅಂತಂತು ನಿನ್ನ ಚರ್ಯೆ ಸಂತೋಷಪಡಿಸಿ ಎಮ್ಮಾ | ಸಲಹಮ್ಮ ಶಾಂತೆ ನಾ ಪೋಪೆನಮ್ಮಾ 24 ಮತ್ತೊಮ್ಮೆ ನೋಳ್ಪೆನೆಂದೂ | ಗೋಕುಲದ ಹತ್ತಿರದಿ ನಭದಿ ನಿಂದೂ ಸುತ್ತು ಮುತ್ತಲೂ ನೊಡಲೂ | ಸಿರಿದೇವಿ ವ್ಯಾಪ್ತಳಾಗಲ್ಲಿ ಇರಲೂ 25 ವನದಿ ಹರಿವಕ್ಷದಲ್ಲೀ | ಸಿರಿದೇವಿ ಘನ ವೇಣೂರೂಪದಲ್ಲೀ ವನಲಕ್ಷ್ಮೀರೂಪದಲ್ಲೀ | ಗೋಪಿಯರ ಪ್ರಣಯ ಪ್ರಕಾಶದಲ್ಲೀ 26 ಎಲ್ಲೆಲ್ಲಿ ಸೌಂದರ್ಯವೋ | ಉಲ್ಲಾಸ ಎಲ್ಲೆಲ್ಲಿ ವೈಭವಗಳೋ ಎಲ್ಲೆಲ್ಲಿ ಹರಿಲೀಲೆಯೋ | ಸಿರಿದೇವಿ ಅಲ್ಲಲ್ಲಿ ತಾನಿರುತಿರೆ 27 ಸಿರಿ ಹರಿಯ ಚರಿಯ ನೊಡಿದ ಪ್ರತಾಪಾ ಧರೆಗಿಳಿದು ನಮಿಸಿ ನಿಂದಾ | ಕ್ಷಮಿಸೆಂದು ಸಿರಿ ಹರಿಗೆ ಸ್ತೋತ್ರಗೈದಾ 28 ಸಿರಿಹರಿ ವಿಯೋಗವಿಲ್ಲಾ | ಆವಾವÀ ಕಾಲ ದೇಶದಲ್ಲೀ ಅರಿಯದಜ್ಞಾನ ನುಡಿಯಾ | ಮನ್ನಿಸೋ ಮಾಯಾ 29 ಜಯ ಜಯತು ಸುರವಂದ್ಯನೇ ಜಯ ಜಯತು ದುಷ್ಟಹರಣ | ಗುಣ ಪೂರ್ಣ ಜಯ ಜಯತು ಶಿಷ್ಟ ಶರಣಾ30 ಸ್ತುತಿಸುತಂಬರಕಡರಿದಾ | ಸುರಮುನಿಪ ಚ್ಯುತದೂರನತಿ ವಿನೋದಾ ಪತಿತರನು ಕಾಯ್ವ ಮೋದಾ | ಸುಖತೀರ್ಥ ಯತಿಗೊಲಿದು ಉಡುಪಿಲ್ನಿಂದಾ 31 ಆಪಾರ ಮಹಿಮ ಶೀಲಾ | ಸರ್ವೇಶ ಗೋಪಿಕಾ ಜನ ವಿಲೋಲಾ ಆಪನ್ನ ಜನರ ಪಾಲ | ಗುರುಬಿಂಬ ಗೋಪಾಲಕೃಷ್ಣವಿಠಲಾ 32
--------------
ಅಂಬಾಬಾಯಿ
ಒಂದು ದಿನದಲಿ ಇಂದಿರೇಶನು ಚಂದದಿಂದಲಿ ವನಕೆ ಬಂದನು ಸುಂದರಾಂಗನು ಗೋಪ ವೃಂದದಿ ನಿಂದು ಕೊಳಲನು ಸ್ವರವಗೈದನು 1 ಕೊಳಲ ಧ್ವನಿಯನು ಕೇಳುತಾಕ್ಷಣ ಖಗಮೃಗಂಗಳು ಮಯ್ಯ ಮರತವು ತರುಣಿ ಮಣಿಯರು ಮನೆಯ ಕೆಲಸಕೆ ಮರತು ಮಯ್ಯನು ತೆರಳಿ ಬಂದರು 2 ಕೊಳಲ ಧ್ವನಿಯನು ಕೇಳಿ ಗೋಪೇರು ನಳಿನನಾಭನ ಬಳಿಗೆ ಬಂದರು ನಳಿನಮುಖಿಯರ ನೋಡಿ ಕೃಷ್ಣನು ಮುಗುಳುನಗೆಯಲಿ ಮಾತನಾಡಿದನು 3 ನಾರಿಮಣಿಯರೆ ರಾತ್ರಿ ವೇಳೆಯು ಈಗ ಇಲ್ಲಿಗೆ ಬಂದಿರೇತಕೆ ಮಾರನಯ್ಯನ ಮಾತುಕೇಳುತ ಮಡದಿ ಮಣಿಯರು ನುಡಿದರಾಗಲೆ4 ಬಾಲಕೃಷ್ಣನೆ ನಿನ್ನ ಕೊಳಲಿನ ಈಗಲೆಮ್ಮಯ ಮನವು ಹರುಷಿಸೆ ಬೇಗ ನಿನ್ನನು ಬೇಡಿಕೊಂಬೆವೊ 5 ಇಂತು ಕೃಷ್ಣನು ಸರಸವಾಡುತ ನಿಂತನವರಿಗೆ ಹರುಷ ತೋರುತ ಚಿಂತೆಯೆಲ್ಲವ ಬಿಟ್ಟು ಗೋಪೇರು ಅಂತರಾತ್ಮನ ಭಜಿಸುತಿದ್ದರು 6 ಏನು ಪುಣ್ಯವೊ ನಮ್ಮದೆನುತಲಿ ದಾನವಾರಿಯ ಸ್ಮರಿಸುತಿದ್ದರು ನಾರೇರೆಲ್ಲರ ನೋಡಿ ಕೃಷ್ಣನು ಬೇಗದಿಂದಲಿ ಅಂತರ್ಧಾನನಾದನು 7 ಸ್ಮರನ ಪಿತನನು ಸ್ಮರಿಸಿಪಾಡುವ ತರುಣಿಯರಿಗೆ ಮೈ ಸ್ಮರಣೆ ಮರೆತಿರೆ ಭರದಿ ಕಂಗಳ ತೆರೆದು ನೋಡಲು ಮುರಳೀಧರನ ಕಾಣದಲೆ ಚಿಂತಿಸಿ 8 ಜಾಜಿ ಸಂಪಿಗೆ ಸೂಜಿ ಮಲ್ಲಿಗೆ ರಾಜೀವಾಕ್ಷನ ಕಾಣಲಿಲ್ಲವೆ ಬಿಳಿಯ ಮಲ್ಲಿಗೆ ಎಳೆಯ ತುಳಸಿಯೆ ನಳಿನನಾಭನ ಸುಳಿವು ಕಾಣಿರಾ 9 ಸರಸದಿಂದಲಿ ಹರಿವ ಯಮುನೆಯೆ ಪಾದ ಕಾಣೆಯಾ ಚಿಗರಿ ಮರಿಗಳೆ ನಿಮ್ಮ ಕಂಗಳು ನಳಿನನಾಭನ ಸುಳವು ಕಾಣವೆ 10 ಯಾರ ಕೇಳಲು ಹರಿಯ ಕಾಣರು ನಾರಿಮಣಿಯರೆ ನಾವೆ ಕರೆಯುವ ಮುದ್ದು ಕೃಷ್ಣನೆ ಪದ್ಮನಾಭನೆ ಶ್ರದ್ಧೆಯಿಂದಲಿ ನಿಮ್ಮ ಭಜಿಪೆವೊ 11 ಜಯತು ಜಯತು ಶ್ರೀ ಲಕ್ಷ್ಮೀ ರಮಣನೆ ಜಯತು ಜಯತು ಶ್ರೀ ಗರುಡಗಮನನೆ ಜಯತು ಜಯತು ಶ್ರೀ ಉರಗಶಯನನೆ ಜಯತು ಜಯತು ಶ್ರೀ ಪರಮ ಪುರುಷನೆ 12 ಜಯತು ಜಾಹ್ನವಿಜನಕÀ ಶ್ರೀಶನೆ ಜಯತು ಭಕ್ತರ ಭಯವಿನಾಶನೆ ಜಯತು ಪಾವನ ಪುಣ್ಯ ಚರಿತನೆ ಜಯತು ಜಯತು ಲಾವಣ್ಯರೂಪನೆ 13 ಎಳೆಯ ಚಿಗುರಿನಂತಿರುವ ಪಾದವು ರುಳಿಯ ಗೆಜ್ಜೆಯು ಕಾಲಪೆಂಡೆಯು ಎಳೆಯ ಪಾದದಿ ಹೊಳೆವ ಪೈಜನಿ ಘಲಿರು ಘಲಿರು ಎಂದೆನುತ ಮೆರೆವುದು 14 ಪುಟ್ಟ ನಡುವಿಗೆ ಪಟ್ಟೆ ಮಡಿಗಳು ಇಟ್ಟ ಚಲ್ಲಣ ಪುಟ್ಟ ಕೃಷ್ಣಗೆ ಉಡುಗೆಜ್ಜೆಯು ಗಂಟೆ ಸರಪಳಿ ಒಪ್ಪಿ ಮೆರೆಯುವ ಕಾಂಚಿಧಾಮವು 15 ಚತುರ ಹಸ್ತದಿ ಶಂಖುಚಕ್ರವು ಗದೆಯು ಪದುಮವು ಹೊಳೆಯುತಿರುವುದು ಕಡಗ ಕಂಕಣ ತೋಳ ಬಾಪುರಿ ವಜ್ರದೊಂಕಿಯು ಮೆರೆಯುತಿರುವುದು 16 ಕೌಸ್ತುಭ ವೈಜಯಂತಿಯು ಸುರಗಿ ಸಂಪಿಗೆ ಸರಗಳೊಲಿಯುತ ಎಳೆಯ ತುಳಸಿಯ ಸರಗಳೊಪ್ಪುತ ಜರದವಲ್ಲಿಯು ಜಾರಿ ಬೀಳಲು 17 ವÀಕ್ಷ ಸ್ಥಳದಿ ಶ್ರೀಲಕ್ಷ್ಮಿ ಒಪ್ಪಿರೆ ರತ್ನ ಪದಕಗಳೆಲ್ಲ ಶೋಭಿಸೆ ಮಕರ ಕುಂಡಲ ರತ್ನದ್ಹಾರಗಳಿಂದ ಒಪ್ಪಿರೆ 18 ಗುರುಳು ಕೂದಲು ಹೊಳೆವೊ ಫಣೆಯಲಿ ತಿಲುಕ ಕಸ್ತೂರಿ ಶೋಭಿಸುತ್ತಿರೆ ಎಳೆಯ ಚಂದ್ರನ ಪೋಲ್ವ ಮುಖದಲಿ ಮುಗುಳು ನಗೆಯು ಬಾಯ್ದಂತ ಪಂಕ್ತಿಯು 19 ಪದ್ಮನೇತ್ರಗಳಿಂದ ಒಪ್ಪುತ ಪದ್ಮ ಕರದಲಿ ಪಿಡಿದು ತಿರುವುತ ಪದ್ಮಲೋಚನೆಯನ್ನು ನೋಡುತ ಪದ್ಮನಾಭನು ಕೊಳಲನೂದುತ 20 ರತ್ನ ಮುತ್ತಿನ ಕಿರೀಟ ಶಿರದಲಿ ಮತ್ತೆ ನವಿಲಿನ ಗರಿಗಳೊಪ್ಪಿರೆ ಹಸ್ತಿ ವರದನು ಎತ್ತಿ ಸ್ವರವನು ಮತ್ತೆ ಕೊಳಲನು ಊದೊ ದೇವನೆ 21 ಸುಂದರಾಂಗನೆ ಮಂದಹಾಸನೆ ಮಂದರೋದ್ಧರ ಬಾರೋ ಬೇಗನೆ ಇಂದಿರೇಶನೆ ಇಭರಾಜವರದನೆ ರಂಗನಾಥನೆ ಬಾರೊ ಬೇಗನೆ22 ಮದನ ಮೋಹನ ಪಾರಮಹಿಮನೆ ಬಾರೊ ಬೇಗನೆ ಶ್ರೀರಮಾಪತೆ ಶ್ರೀ ನಿಕೇತನ ವಾರಿಜಾಕ್ಷನೆ ಬಾರೊ ಬೇಗನೆ 23 ಹೀಗೆ ಗೋಪೇರು ಮೊರೆಯನಿಡುತಿರೆ ಮಂಗಳಾಂಗನು ಬಂದನೆದುರಿಗೆ ಧ್ವಜ ವಜ್ರಾಂಕುಶ ಪದ್ಮ ಪಾದವು ಅಡಿಯನಿಡುತಿರೆ ಧರಣಿ ನಲಿವಳು 24 ಹರಿಯ ನೋಡುತ ಪರಮ ಹರುಷದಿ ತರುಣಿಮಣಿಯರು ಹರುಷ ಪಡುತಲಿ ಪರಮ ಮಂಗಳ ಚರಿತ ದೇವಗೆ ಸ್ವರವನೆತ್ತಿ ಮಂಗಳವ ನುಡಿದರು 25 ಶುಭ ಕಂಬು ಕಂಠಗೆ ಮಂಗಳಂ ಮಹಾ ಮಾರನಯ್ಯಗೆ ಮಂಗಳಂ ಮಹಾ ಮುದ್ದುಕೃಷ್ಣಗೆ ಮಂಗಳಂ ಜಯ ಮಂಗಳಾಂಗಗೆ 26 ಕಮಲ ಮುಖಿಯರು ನಮಿಸಿ ಕೃಷ್ಣಗೆ ಸರಸವಾಡುತ ಹರುಷ ಪಡುತಲಿ ಕಮಲನಾಭ ವಿಠ್ಠಲನ ಕೂಡುತ ಮನದಿ ಸುಖವನು ಪಡುತಲಿದ್ದರು 27
--------------
ನಿಡಗುರುಕಿ ಜೀವೂಬಾಯಿ
ಒಂದೆ ಸಾಕೆನಗೆ ನಿನ್ನಯ ಸೇವೆಯೊಂದೆ ಸಾಕೆನಗೆ ಪಒಂದೆ ಸಾಕು ನಿನ್ನಯ ಸೇವೆ ನಿರತವುಮಂದರಧರ ಶ್ರೀ ವೆಂಕಟರಮಣನೆ ಅ.ಪದೇವಕಿನಂದನನೆ ಎನ್ನನು ನೀಕಾವ ಕೃಪಾಕರನೆಭಾವಜನಯ್ಯನೆ ಭಾನುಪ್ರಕಾಶನೆದೇವರದೇವ ಶ್ರೀ ವೆಂಕಟರಮಣನೆ 1ವಾರಿಧಿರೂಪವಾದ ಭವದೊಳು ಮುಳುಗಿದಾರಿಗಾಣದೆ ುಹೆನುತೋರಿಸಿ ದಾರಿಯ ಜ್ಞಾನದ ನಾಮೆಂಸೇರಿಸು ತಡಿಯ ಶ್ರೀ ವೆಂಕಟರಮಣನೆ 2ತಿರುಪತಿುಂದ ಬಂದು ತರುಣನಾಗಪುರದೊಳು ಗುರು ರೂಪಲಿಕರುಣದಿಂದ ನಾರಾಯಣದಾಸನಿಗೆ ಬೇಗಸ್ಥಿರಸುಖ'ೀವ ಶ್ರೀ ವೆಂಕಟರಮಣನೆ 3
--------------
ನಾರಾಯಣದಾಸರು
ಒಂದೇ ಬೇಡುವೆ ನಿನ್ನನು ನಿನ್ನಡಿಗಳನೆಂದಿಗು ನೆನೆವುದನು ಪ. ಒಂದೇ ಬೇಡುವೆನು ಮುಕುಂದ ಇದರ ಬಲ ದಿಂದ ಸರ್ವಾರ್ಥವ ಹೊಂದುವ ಮನದಿಂದ ಅ.ಪ. ಪಾತಕಗಳನೆಲ್ಲ ಪರಿಹರಿಸುವ ದುರ್ವಿ- ಘಾತಕವೈರ ಕತ್ತರಿಸುವುದು ಶ್ರೀಕರುಣಿಯ ಸನ್ನಿಧಾನವನಿರಿಸುವ ಆತತಾಯಿಗಳ ಭಂಗಿಸಿ ಬಾಧೆ ಪಡಿಸುವ 1 ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ ತುಂಬಿದ ಜನರೊಡನಾಡುವಾಗ ನಂಬಿದ ಸತಿಯೊಳು ನಯನುಡಿ ನುಡಿವಾಗ ಅಂಬುದನಿಭ ನಿನ್ನ ಹಂಬಲಗೊಳುವುದ 2 ನಡೆವಾಗ ನುಡಿವಾಗ ಮಡಿಯನುಟ್ಟಿರುವಾಗ ಪೊಡವಿ ಪಾಲಕರೊಡನಾಡುವಾಗ ಕಡಲಶಯನ ನಿನ್ನ ನೆನೆವರೆ ನಾಚಿಕೆ ಕಾಲ ದೃಢದಿಂದ ಸ್ಮರಿಸುವ 3 ಖೇದ ಮೋದಗಳೆಂಬ ಭೇದವಿಡದೆ ಯಾವಾ- ಗಾದರು ಸರಿಯಾಗಿ ಸ್ಮರಿಸುವರ ಕಾದುಕೊಂಡಿರುವಂಥ ಕರುಣಿಯೆಂಬುದರಿಂದ- ಗಾಧ ಮಹಿಮೆ ನಿನ್ನ ಹಾದಿ ತೋರಿಸುವುದ 4 ಶ್ರಮವಿಲ್ಲದೆ ಸ್ಮøತಿ ಭ್ರಮಣೆ ಬಿಡಿಸುವ ಶ್ರೀ- ರಮಣ ವೆಂಕಟಗಿರಿ ನಾಯಕನೆ ನಮಿಸಿ ಬೇಡವೆನೆಂಬ ಮಮತೆಯಿರಿಸಿ ನಿನ್ನ ಕಮನೀಯಪದಕಲ್ಪದ್ರುಮ ನೆರಳಿರಿಸೆಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ಒಬ್ಬನೆ ದಾಸ ಹುಟ್ಟಿದವನಿವ | ನೊಬ್ಬನೆದಾಸ ಪ ಸೂರಿ ತಾಯಿತಂದೆಗಳಿಂದಾಯಿತು ಅ.ಪ ನಾಲ್ಕು ವರ್ಷದವರೆವಿಗೂ ಮಾತಾಪಿತರು ಪಾಲನೆಗೈದರು ಬಳಿಕ ಕಾಲಾಧೀನವನೈದಿದರವರಾ ಮೇಲೆ ನಡೆದ ಕಥೆಯನು ಬಿನ್ನೈಸುವೆ 1 ದ್ವಾದಶ ವರುಷ ಪರಿಯಂತವು ಮಾತುಳನ ಗೃಹದಿ ಬೆಳೆದು ಪಾದವೂರದೆ ದೇಶವÀ ತಿರುಗುತ- ಲಾದುದು ಇಪ್ಪತ್ತುನಾಲ್ಕು ವರುಷವು 2 ಶ್ರೀರಮಣ ಗುರುದ್ವಾರದಲಿ ಇಪ್ಪತ್ತು ಮೂರನೆಯ ವರುಷದಲಿ ಸಾರವ ತಿಳುಹಿಸಿ ಅನುಗ್ರಹಿಸಿದನ- ಪಾರ ಸುಗುಣನಿಧಿ ಕೈಪಿಡಿದೆನ್ನನು 3 ಹರಿನಾಮಬಲದಿಂದಲಿಪ್ಪತ್ತೈದು ವರುಷದ ಮೊದಲು ಸುಕೃತದಿಂ ಹರಿಸೇವೆಗಳಿಂ ನೆರೆದ್ರವ್ಯಗಳಿಸಿ ನಲವತ್ತು ವರುಷವಾಯಿತು 4 ನಲವತ್ತೊಂದನೆ ವರ್ಷಮೊ- ದಲು ಬಲು ಜನಗಳ ಬೇಡಿ ಕಳೆದಿತು ಐವತ್ತಾರು ವರ್ಷಗಳು 5 ಮಧ್ವರಾಯರೆ ನಮ್ಮ ತಂದೆಯು ಮಧ್ವರಾಯರೆ ನಮಗೆ ಗುರು ಮಧ್ವರಾಯರೆ ಉದ್ಧಾರಕರ್ತರು ಪದ್ಮನಾಭಗತಿ ಪ್ರೀತ್ಯಾಸ್ಪದರು 6 ಬೆಂಡಾಗಿರುವುದು ಶರೀರ- ಧರ್ಮವು ಬೇರೊಬ್ಬರ ಕಾಣೆ ಉಂಡುಟ್ಟು ತೆಗೆಯುವ ವಿಷಯದಿ ಊರಿನವರ ದೂರುವುದಿನ್ಯಾಕೆ 7 ಹರಿನಾಮದ ಬಲದಿಂದ ಗಳಿಸಿದುದು ಹರಿಗೆ ಪ್ರೀತಿಯಾಯಿತು ಪರರು ವ್ಯರ್ಥವಾಗಸೂಯೆ ಪಟ್ಟರೆ ದುರಿತವ ಪ್ರಯೋಜನವು ಸತ್ಯವಿದು 8 ಏನು ಕೋರುವುದು ಸಾಕು ಸೀತಾಪತಿ ಗುರುರಾಮವಿಠ್ಠ- ಲನ ಸೀಮೆ ಈಗಲು ಮುಂದಕು ಇರಬೇಕು9
--------------
ಗುರುರಾಮವಿಠಲ