(ನಾರದ ಪ್ರಾರ್ಥನೆ)
ನಾರದ ಮುನಿಯ ನಂಬಿರೋ ಸಜ್ಜನರೆಲ್ಲ ಪ.
ನಾರದ ಮುನಿಯ ನಂಬಿ ಸೇರಿ ರಮೇಶನ
ಘೋರದುರಿತ ಪರಿಹಾರಗೊಳಿಸುವಂಥ ಅ.ಪ.
ಫಾಲದಿ ತಿಲಕ ನಾಮವು ಕಂಠದ ಮೇಲೆ
ಜೋಲುವ ತುಳಸಿ ಮಾಲೆಯು
ತಾಳ ವೀಣೆಗಳಿಂದ ಕಾಲಾನುಗುಣಸ್ವರ
ಮಾಲೆ ತೋರುತ ಲಕ್ಷ್ಮೀಲೋಲನ ವಲಿಸಿದ 1
ವೇದೋಪನಿಷತ್ತುಗಳಗಾಂಧರ್ವ ವಿದ್ಯ
ಹಾದಿಲಿ ತರಲು ಬಲ್ಲ
ಬೋಧಿಪ ಪರತತ್ವ ವಾದವ ಸುರಕಾರ್ಯ
ಸಾಧಿಸಿ ಹರಿಯ ಪ್ರಸಾದಕೆ ಪಾತ್ರನಾದ 2
ಪ್ರಲ್ಹಾದ ಧ್ರುವ ದ್ರೌಪದಿ ಮುಖ್ಯ ವೈಷ್ಣವ
ರೆಲ್ಲರೀತನ ದಯದಿ
ಎಲ್ಲ ಠಾವಲಿ ಲಕ್ಷ್ಮೀವಲ್ಲಭನಿಹನೆಂಬ
ಸೊಲ್ಲ ತಿಳಿದು ಪರಮೋಲ್ಲಾಸ ಪಡೆದರು 3
ದೇವಾಸುರರ ಬಳಿಗೆ ಪೋಗುವ ತನ್ನ
ಭಾವಾ ತೋರನು ಕಡೆಗೆ
ಆವಾವ ಜನಕನುವೀವ ಮಾತುಗಳಾಡಿ
ಪಾವನಾತ್ಮಕ ಹರಿ ಸೇವಾಫಲವ ಕೊಂಬ 4
ಬಂದನು ಕಲಿಯುಗದಿ ದಾಸರೊಳು
ಪುರಂದರ ನಾಮದಲೀ
ಮಂದಮತಿಯ ಕಳೆವಂದದಿ ಪ್ರಾಕೃತ
ದಿಂದ ವೆಂಕಟಪತಿಯಂದವ ತಿಳಿಸಿದ 5