ಸಕಲವೆಲ್ಲವು ಶಿವನ ಲಿಂಗದೊಳಗಡಗಿದುದು
ಲಿಂಗವೆ ಮಾಲಿಂಗವಾಗಿ ತೋರುವುದು ಪ
ಭಕುತಿಕರು ಮಮತೆಯೊಳು ಸ್ಥಾಪಿಸಿಯೆ ಅರ್ಚಿಸಲು
ಸುಕೃತಫಲವನು ಅಳೆವ ಕೊಳಗವನು ಕಾಣೆ ಅ.ಪ
ಆ ಮಹಾ ಸಹಸ್ರನಾಮದೊಳಗತ್ಯದಿಕ
ಸೊಮೇಶನೆಂದೆಂಬ ಸ್ವಾಮಿಯನು ಕಂಡು
ಸೋಮವಾರದ ದಿವಸ ಸಾಮರುದ್ರವ ಜಪಿಸಿ
ನೇಮದಿಂ ಪೂಜಿಸಲು ಕಾಮಿತದ ಫಲವು 1
ಇನ್ನೇನ ವರ್ಣಿಸುವೆ ಈಶ ನಿನ್ನಯ ಮಹಿಮೆ
ಉನ್ನಂತವಾಗಿ ಜಗದೊಳು ಚರಿಸಿತು
ಪನ್ನಗೇಶನ ಬಲದ ಪಶ್ಚಿಮದ ದೆಸೆಯೊಳ್ ಪ್ರ-
ಸನ್ನವಾದನು ಸೋಮನಾಥನೆಂದೆನುತ2
ಪಾದ ಪ್ರತ್ಯಕ್ಷವಾಗಿಯೆ
ಸೋಮೇಶನೆಂದೀಗ ತಾ ಮೆರೆದುದು
ಭುಕ್ತಿ ಮುಕ್ತಿಯನಿತ್ತು
ಪ್ರೇಮದಿಂ ಸಲಹುತ್ತ ಕಾಮಿತಾರ್ಥವನೀವ 3
ಲೋಕೋಪಕಾರಕ್ಕೆ ಸೋಮೇಶ ನೀ ಬಂದೆ
ಗೋಕರ್ಣ ಶ್ರೀಶೈಲ ಕಾಶಿ ರಾಮೇಶ್ವರವು
ಬೇಕೆಂಬುದಿಲ್ಲಿನ್ನು ಎನ್ನ ಭೀತಿಯ ಗಿರಿಯ
ಕುಲಿಶ ನೀನು ಜಗದೀಶ 4
ಜೋಕೆಯೊಳು ಮನದೊಳಗೆ ಅಡಗಿಸಿಯೆ ಭಜಿಸಿದರೆ
ಯಾಕೆ ಮನದೊಳು ಬಿಡುವೆ ಶಿವನಾಮವನು ನೀನು
ಏಕೆ ಕಡೆಯಲಿ ಕೆಡುವೆ ಮರುಳು ಜೀವನವೆ 5
ಸಡಗರದಿ ಸರ್ವವೂ ನಿನ್ನಲ್ಲಿ ಅಡಗಿದುದು
ಜಡೆಯೊಳಗೆ ಅಡಗಿದುದು ಪೊಡವಿಗುತ್ತಮ ನದಿಯು
ಉಡುಪತಿಯು ಅಡಗಿದನು ಊಧ್ರ್ವ ಫಣೆಯೊಳಗೆ
ಪಿಡಿಯೊಳಗೆ ಅಡಗಿದುದು ವೇದ ಮೃಗರೂಪಾಗಿ 6
ಕಿಚ್ಚು ಅಡಗಿತು ಅವನ ಅಚ್ಚ ಹಣೆಗಣ್ಣಿನೊಳು
ಮುಚ್ಚಿ ತೆರೆವಕ್ಷಿಯೊಳು ಮೂಜಗದ ಬೆಳಕು
ಬಿಚ್ಚಿಟ್ಟಿ ವಿಷಕಂಠದೊಳು ಲೋಕವನು
ಎಚ್ಚರಿಪ ಮಂತ್ರಗಳು ಬಾಯೊಳಗಡಗಿದುದು 7
ಶುದ್ಧ ಸ್ಫಟಿಕ ಥರದ ಕಾಯಕಾಂತಿಗಳುಳ್ಳ
ಬದ್ಧುಗೆಯ ದಾರದಂದದಿ ಉರಗನೊಪ್ಪುಗಳು
ಉದ್ದಿಶ್ಯವಾಗಿ ಭಜಿಸಿದ ಭಕ್ತರುಂಡಗಳು
ತಿದ್ದಿಟ್ಟಿ ಆಭರಣ ತಿರಿಶೂಲಧರಣ 8
ಪುಲಿಕರಿಯ ಪೊಳವುಗಳು ನಳನಳಿಪ ವಸನಗಳು
ಹೊಳೆವ ಮುಖತೇಜಗಳು ನಳಿನನೇತ್ರಗಳು
ನಲಿವಗಣ ಕೋಟಿಗಳ ಮಧ್ಯದೊಳು ಕೈಲಾಸ
ಇಳಿದು ಬಂದನು ನಮ್ಮ ಬಳಿಗೆ ಸೋಮೇಶ 9
ನಾಸಿಕದಿ ಕೌಮಾರಿಗವಧಿಯಾಗಿಹ ಸ್ಥಳ ವಿ-
ಶೇಷವಾಗಿಹ ಶುದ್ಧ ರೌಪ್ಯಪುರದೊಳಗೆ
ಭೂಸುರೋತ್ತಮಗೊಲಿದು ಭೂರಿಭಾಗ್ಯವನಳೆದು
ವಾಸವಾದೆಯೊ ಜಗದೀಶ ಸೋಮೇಶ 10
ಭಾಳನೇತ್ರನೆ ನೀಲಕಂಠ ಶೂಲಾಸ್ಥಿಧರ
ಕಾಲರುದ್ರ ವ್ಯಾಳಭೂಷ ಸರ್ವೇಶ
ಲಾಲಿಸೈ ಬಿನ್ನಪವ ಪಾಲಿಸೆನ್ನನು ಬೇಗ
ಬಾಲಕನು ಅಲ್ಲವೇ ಭಕ್ತಸುರಧೇನು 11
ಸಾರಿ ನೋಡಿರೊ ಮೂರು ಲಿಂಗವನು ನೀವೀಗ
ಧಾರುಣಿಯಳೊಂದು ಶಿವಲಿಂಗವನು ಬೇಗ
ಮೇರುವಿಗೆ ಸಮವಾದ ಹೇಮವನು ವಿಪ್ರರಿಗೆ
ಧಾರೆಪೂರ್ವಕವಾಗಿ ಇತ್ತ ಫಲ ಒದಗುವುದು 12
ಶಿವನ ಪೂಜೆಯೆ ಭಕ್ತಿ ಶಿವನ ಪೂಜೆಯೆ ಮುಕ್ತಿ
ಶಿವಮಂತ್ರವೆ ಶಕ್ತಿ ಶಿವನೆ ಪರಶಕ್ತಿ
ಶಿವನಾಮವನು ಭಜಿಸಿ ಸಿರಿಯ ಪಡೆದನು ಹರಿಯು
ಶಿವನ ಮರೆಯದೆ ಭಜಿಸು ಇಹಪರವ ಸೃಜಿಸು13
ನಿನ್ನನೇ ನಂಬಿದೆನು ಉನ್ನತಾನಂತೇಶ
ಮನ್ನಿಸಿ ದಯದೋರು ಚಂದ್ರಮೌಳೀಶ
ಇನ್ನು ಭಯವಿಲ್ಲೆನೆಗೆ ಹರಸೆನ್ನ ಸೋಮೇಶ
ಎನ್ನೊಡೆಯ ಶ್ರೀಕೃಷ್ಣ ವರಾಹತಿಮ್ಮಪ್ಪ 14