ಬೇಡಿಕೊಂಬೆನೆ ವರವ ನಾ ನಿನ್ನ ಮಾಲಕ್ಷ್ಮಿತಾಯಿ
ಮಾಡಿ ದಯವನು ನೋಡೆ ನೀ ಎನ್ನ
ಪಾಡಿ ಕೊಂಡಾಡುವೆನು ಪಂಚಗಂಗಾ ತೀರದಲಿ
ಕರವೀರ ವಾಸಿಯೆ ಪ
ಒದೆಯುತಿರಲು ಆ ಪಾದದಿ ಬಂದು ಪದುಮಾಕ್ಷ ಮುನಿಯ
ಮುದದಿ ಮನ್ನಿಸಿ ಕಳುಹುತಿರೆ ಕಂಡು
ಒದಗಿ ಬಂದ ಕೋಪದಿಂದ
ಯದುನಾಥನ ಎದೆಯಿಳಿದು ಬೇಗನೆ
ಕದನ ಮಾಡುತ ಕೊಲ್ಲಾಪುರವನು
ಸದನ ಮಾಡಿದೆ ಸುಂದರಾಂಗಿಯೆ 1
ಬಿಟ್ಟು ನಿನ್ನ ವೈಕುಂಠದಿ ಹರಿಯು ಇಳಿದು ಅಂಜನಾ
ಬೆಟ್ಟದಲಿ ನಿಂತಿದ್ದನೆ ಬಂದು
ಪಟ್ಟದರಸಿಯು ನೀನು ಜನಕನ
ಪುತ್ರಿಯಾದ ಕಾಲದಲಿ
ಕೊಟ್ಟ ವಚನವ ನಡೆಸಿ ಪತಿಗೆ ನೀ
ಪತ್ನಿಮಾಡಿದೆ ಪದ್ಮಾವತಿಯ 2
ರಮ್ಯವಾದ ರಜತ ಹೇಮಗಳು ಗುಡಿಗೋಪುರಗಳು
ನಿನ್ನಶಿರ ಶೃಂಗಾರಾಭರಣಗಳು ಅಮ್ಮ
ತ್ರಿಜಗದಂಬಾ ನಿನ್ನ
ಮುಖ ಒಮ್ಮೆ ನೋಡಲು ಧನ್ಯರಾಗೋರು
ಬ್ರಹ್ಮನಪಿತನರಸಿ ಎನಗೆ ನೀ
ರಮ್ಮೆಪತಿಪಾದಾಂಘ್ರಿ ತೋರಿಸೆ 3
ಪಕ್ಷಿವಾಹನನ್ವಕ್ಷಸ್ಥಳದಲ್ಲಿ ಆವಾಸವಾಗಿ ಲಕ್ಷ್ಮಿ
ನೀ ಅಧ್ಯಕ್ಷಳಾಗಿದ್ದು
ಇಕ್ಷುಚಾಪನ ಜನನಿ ಕರವೀರ
ಕ್ಷೇತ್ರದಲಿ ಪ್ರತ್ಯಕ್ಷಳಾಗಿ
ಮೋಕ್ಷಾಪೇಕ್ಷಿಗಳಾದ ಜನರಿಗೆ
ರಕ್ಷಿಸಿ ವರಗಳ ಕೊಡುವ ಮಾತೆಯೆ4
ನೇಮದಿಂದಲಿ ನಮಿಸುವೆನು ನಿನಗೆ ಮಾಲಕ್ಷ್ಮಿತಾಯಿ
ಪ್ರೇಮದಿಂದಲಿ ಪಾಲಿಸಿ ನೀನು
ಶ್ಯಾಮವರ್ಣನ ದಿವ್ಯ ಸಾಸಿರ
ನಾಮ ನಾಲಿಗೆಲಿರಲು ನಿಲಿಸಿ
ಭೂಮಿಗೊಡೆಯ ಭೀಮೇಶಕೃಷ್ಣನ
ಧಾಮದ ದಾರಿಗಳ ತೋರಿಸೆ 5