ಸ್ವಸುಖ ನೋಡಿ ಸದ್ಗುರು ಕೃಪೆಯಿಂದ
ವಿಶ್ವತೋಮುಖ ತೋರುವ ತಾಂ ಗೋವಿಂದ ಧ್ರುವ
ಏನೆಂದ್ಹೇಳಲಯ್ಯ ಅನುಭವದ ಮಾತು
ಖೂನಾಗ್ಯಾದೊಂದೇ ಶಾಶ್ವತ
ಆನಂದೋಭರಿತ ಸ್ವಾನಂದ ಸುಖ
ತಾನೆ ಆಗ್ಯದೆ ಸನ್ಮತ ಘನಬೆರೆದು ನೋಡುವದೀ ಸುಪಥ 1
ಮಲಕಿನ ಮನುಜರು ಮನವಿಡಬಲ್ಲರೇ
ನಾಲ್ಕು ವೇದ ಸಾರುದಕ
ಒಮ್ಮೆಯಾದರ ನಿಲುಕಿಸಿ ನಿಜ ನೋಡಿದರಸಾಧ್ಯ
ಬೆಳಕೆ ಆಗ್ಯದ ನೋಡಿ ತಿಳಿಕೊಂಡರೆ 2
ಗುರುವಿನಿಂದಧಿಕಿಲ್ಲ ಅರಿತುಕೊಳ್ಳಿರೊ ಖೂನ
ಪರಮಗತಿಯ ಸಾಧನ
ಸುತತ್ವ ಜ್ಞಾನ ಬೆರೆದು ಮಹಿಪತಿ ಪೂರ್ಣ
ಸದ್ಗುರು ಚರಣಕೆರಗಿ ಮನ ಪಡೆವದೀ ದಯಕರುಣಾ 3