ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ
ಚರಣಾಬ್ಜದಲಿ ಭಕುತಿ ವಿಷಯದಿ ವಿರಕುತಿ ಪ
ಬಿಂಬನೇ ಸರ್ವ ಪ್ರಯೋಜನವ ಮಾಡಿ ಪ್ರತಿ
ಬಿಂಬರಿಗೆ ತತ್ಫಲಗಳೀವ ಕಾವ
ಬಿಂಬನೆ ಸ್ವತಂತ್ರ ಪ್ರತಿಬಿಂಬಾ ಸ್ವತಂತ್ರತಮ
ನೆಂಬ ಸುಜ್ಞಾನ ಪೂರ್ವಕ ನಿನ್ನ ಭಜಿಪ ಸುಖ 1
ಕಾರ್ಯ ಕಾರಣ ಅಂಶಿ ಅಂಶಾವತಾರ ಅಂ
ತರ್ಯಾಮಿ ವ್ಯಾಪ್ಯ ವ್ಯಾಪಕ ಪ್ರೇರಕ
ಪ್ರೇರ್ಯ ಬಾಧಕ ಬಾಧ್ಯ ಪೋಷ್ಯ ಪೋಷಕ ರೂಪ
ಆರ್ಯರಿಂದರಿತು ಅನುದಿನದಿ ಸುಖಿಸುವ ಭಾಗ್ಯ 2
ತಾರತಮ್ಯದ ಜ್ಞಾನ ದುರ್ವಿಷಯಗಳಲಿ ಸ
ದ್ವೈರಾಗ್ಯ ಹರಿದ್ವೇಷಿಗಳಲಿ ದ್ವೇಷಾ
ಸೂರಿಗಳ ಸಂಗ ಗುಣರೂಪಕ್ರಿಯೆಗಳನು ಸುವಿ
ನಿತ್ಯ ಅನುಮೋದ ಬಡುವಂತೆ 3
ಮಿಂದೋದಕಗಳೆಲ್ಲ ಮಜ್ಜನವು ದೇಹಾನು
ಬಂಧಿ ಜನರೆಲ್ಲ ನಿನ್ನ ಪರಿವಾರವು
ನಿಂದ್ಯ ಕರ್ಮಗಳೆಲ್ಲ ಪಾದುಕಗಳೆಂಬ ಅನು
ಸಂಧಾನ ಮನಕೆ ನಿತ್ಯದಲಿ ಬರುವಂತೆ4
ಚೇತನಾಚೇತನಗಳೆರಡು ಪ್ರತಿಮೆಗಳು ಸಂ
ಪ್ರೀತಿಯಲಿ ಸುರಕ್ಷಿಸುವುದು ಪೂಜೆ
ಈ ತನುವೆ ಸದನವೆಂದರಿತು ನಿತ್ಯದಿ ಜಗ
ನ್ನಾಥ ವಿಠ್ಠಲನೆಂಬ ವಿಷಯವೇ ಮುಖವೆಂದು 5