--------ಹರಿಯೆನ್ನ ಕೂಡಿಸೊ ಬಿಡದಿನ್ನು
ಕೂಡಿಸು ಕೃಪಾನಿಧಿಯೆ ಕೂಡಿಸೆನ್ನ ಧೊರಿಯೆ ಪ
ಉದಯದಲಿ ಏಳುತಲಿ ಊರ್ವೀಶ ನಿಮ್ಮಸ್ಮರಣೆ
ಹೃದಯದಲಿ ಅನುಗಾಲ ಉಚಿತನಾಗಿ
ಪದುಮನಾಭ ನಿಮ್ಮ ಪಾದವನೆ ಪೂಜಿಸುವ
ಸದಮಲ ಜ್ಞಾನಿಗಳ ಸಂಗದೊಳಗೆ ಎನ್ನ 1
ನಿತ್ಯನೇಮ ವ್ರತದಲ್ಲಿ ಬೇಕಾಗಿ ಇರುತಲಿ
ಅತ್ಯಂತ ಪುರುಷ ಆನಂದದಲ್ಲಿ
ಕರ್ತೃ ನೀನಲ್ಲದೆ ಸರ್ವೋತ್ತಮರು ದಾರೆಂದು
ನಿತ್ಯ ನೀನೆಂದು ತಿಳಿಯುವ (ತಿಳಿಸುವ ) ಆತ್ಮಕರಸಂಗ 2
ಅನುದಿನವು ನಿಮ್ಮ ಧ್ಯಾನ ಮನದಲ್ಲಿ ಮರೆಯದೆ
ದಿನಗಳನು ಕಳೆವಂಥಾ ದ್ವಿಜೋತ್ತಮರಾ
ಅನುಸರಿಸಿ ಅವರನನು ಅತಿಮೋದದಿಂದ ಬೆರೆದು
ವನಜನಾಭನೆ ನಿಮ್ಮ ಭಜನೆ ಮಾಡುವರ ಸಂಗ 3
ವೇದಶಾಸ್ತ್ರಾದಿಗಳ ಭೇದಗಳನರಿತು ಸತ್ಯ
ಬೋಧಗುರು ಕರುಣದಲಿ ಪೂರ್ಣರಾಗಿ
ಸಾಧು ಸಜ್ಜನರಾದಂಥ ಸತ್ಪುರುಷರಾ ಸಂಗ 4
ಉಪವಾಸವನೆ ಮಾಡಿ ಉಚಿತ ಕರ್ಮಗಳಿಂದ
ತಪಗಳನೆ ಮಾಡುವಂಥ ಧನ್ಯಜನರಾ
ಸುಫಲಂಗಳನೆ ಪಡೆದು ಸೂತುತಲಿ ಇರುವರಾ
ಅಪರಿಮಿತ ಮಹಿಮ ನಿನ್ನ ಹಾಡಿ ಪಾಡುವರಸಂಗ 5
ಪರಮಾತ್ಮ ನಿನ್ನ ಮಹಿಮೆ ಭಾವದಲಿ ಶೋಧಿಸಿ
ಪರಿಪರಿಯಲಿರುವಂಥ ಭಾವಜ್ಞರಾ-
ಚರಣೆಯನು ಮಾಡಿ ನಿಮ್ಮ ಸೇವೆಯನು ಮಾಡುವಂಥ
ಪರಮ ಭಕ್ತರಾದ ಪುಣ್ಯವಂತರ ಸಂಗ 6
ಗಂಗಾದಿ ಸಕಲ ತೀರ್ಥಂಗಳನು ಆಚರಿಸಿ
ಅಂಗಾದಿ ದೋಷವ ಕಳೆದ ಅಧಿಕ ಜನರಾ
ಸಂಗಸುಖ ಅಬ್ಧಿಯೊಳು ಸಂತತವು ಬೆರೆವಂಥರಂಗ ' ಹೊನ್ನ ವಿಠ್ಠಲ’ ರಾಯ ಗೋವಿಂದ 7