ಚೌತಿಯ ದಿವಸ
ರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ-
ಮೌರಿ ರಭಸದಿ ಲಕ್ಷ್ಮೀಕಾಂತ
ಭೂರಿ ವೈಭವದಿ ಪೊರಟನೆತ್ತ ಯಾವ
ಕಾರಣವೆಂದು ಪೇಳೆಲೆ ಸತ್ಯ 1
ಊರ್ವಶಿ : ದೇವಿ ಕೇಳೆಲೆ ಸುಮ್ಮಾನದಿಂದ ಕುಲ-
ದೇವರ ಪೂಜೆಗೋಸುಗ ಬಂದ
ಪಾವನಮೂರ್ತಿಯಾದುದರಿಂದ ನಮ್ಮ
ಕಾವನು ಕರುಣಾಕಟಾಕ್ಷದಿಂದ2
ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ-
ನ್ನಾಥನಿಗ್ಯಾವ ಕುಲವು ಕಾಣೆ
ರೀತಿಯನರುಹಬೇಕೆಲೆ ಬಾಲೆ ಸರ್ವ
ಚೇತನಾತ್ಮನ ನಾಟಕದ ಲೀಲೆ3
ಊರ್ವಶಿ : ಪಾಂಡವರಾಯುಧಗಳನ್ನೆಲ್ಲ ಪೊತ್ತು-
ಕೊಂಡ ಕಾರಣದಿ ಪೂಜೆಗಳೆಲ್ಲ
ಕಂಡು ಪೊಗಳಲು ಕವಿಗು ಸಲ್ಲ ಇನ್ನು
ಪುಂಡರೀಕಾಕ್ಷನವನೆ ಬಲ್ಲ4
ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ-
ಭೋಜನಾಭನು ತಾಕ್ಷ್ರ್ಯನ ಮೇಲೆ
ರಾಜಬೀದಿಯೊಳ್ ಬರುವದೇನೆ ಇಂಥ
ಸೋಜಿಗವೇನು ಪೇಳೆಲೆ ಜಾಣೆ5
ಊರ್ವಶಿ : ಪಟಹ ಡಿಂಡಿಮವಾದ್ಯರವದಿಂದ ತಂ-
ಬಟೆನಿಸ್ಸಾಳರವದಿ ಬರುವ ಚಂದ
ಸಟೆಯಲ್ಲ ಕೇಳು ಕರುಣದಿಂದ ನಮ್ಮ
ಕಟಕ ರಕ್ಷಿಸಲು ಬರುವ ಗೋವಿಂದ6
ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ-
ಗಲಭೆಗಳಿಂದ ಪೋಗುವದೇನೆ
ನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ-
ಜಲಜನಾಭನ ಮಹಿಮೆಯ ಜಾಣೆ7
ಊರ್ವಶಿ :ಚಾಪಲನೇತ್ರೆ ಚೌತಿದಿನದಿ ಕೆರೆ-
ದೀಪವೆಂದೆನುತ ಭಕ್ತರು ಮುದದಿ
ಶ್ರೀಪರಮಾತ್ಮ ವಿಲಾಸದಿ ಭಕ್ತ-
ರಾಪೇಕ್ಷೆಗಳನು ಸಲ್ಲಿಸುವಂದದಿ8
ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ-
ಸ್ತೋಮ ಜೇನುಂಡೆ ಬಿರುಸು ಮಿಗಿಲು
ವ್ಯೋಮಕೇಶಗಳ ಪೊಗಳತೀರದು ಸರಿ
ಭೂಮಿಯೊಳ್ ಕಾಣೆನೆಂಬಂತಾದುದು9
ಅಮಮ ಇದೇನೆ ಇಂದಿನ ಲೀಲೆ ಜನ-
ರಮರಿಕೊಂಡಿಹರೇನಿದು ಬಾಲೆ
ಸಮವಿಲ್ಲ ಇಂತೀ ವೈಭೋಗಕ್ಕೆಲೆ ನ-
ಮ್ಮಮರಾವತಿಗಿಂತಧಿಕ ಬಾಲೆ10
ಊರ್ವಶಿ : ಸಾರ್ಥಕಾಗುವದು ಜನ್ಮವು ಕಾಣೆ ಸಕ-
ಲಾರ್ತಿ ಹರಣವಾಗ್ವದು ಜಾಣೆ
ಕೀರ್ತಿತರಂಗಮಾಗಿಹುದೇನೆ ಶೇಷ-
ತೀರ್ಥವೆಂದರೆ ಕೇಳಿದು ಪ್ರವೀಣೆ11
ರಂಭೆ : ಏಸು ದೊಡ್ಡಿತೆ ಕೇಳಲೆ ಬಾಲೆ ಅನಂ-
ತಾಸನದಂತೆ ಮರೆವುದಲ್ಲೇ
ನಾಸಿರ ದೀಪಸೋಪಾನದಲೆ ಮಹಾ-
ಶೇಷನಿಹನು ಮಧ್ಯದೊಳಿಲ್ಲೇ12
ಊರ್ವಶಿ : ಕರುಣಾಕರನು ನಮ್ಮೆಲ್ಲರನು ನಿತ್ಯ
ಪೊರೆಯಲೋಸುಗ ಬಂದನು ತಾನು
ಸುರುಚಿರ ಮಂಟಪವೇರಿದನು ಭೂ-
ಸುರರಿಂದ ವೇದಘೋಷವ ಕೇಳ್ವನು13
ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮ
ಸೃಷ್ಟಿಗೆ ಪೊಸತಾಗಿಹುದು ಕಾಣೆ
ಕಟ್ಟಿಸಿದವನು ಪುಣ್ಯೋತ್ತಮನು ಪರ-
ಮೇಷ್ಠಿ ಜನಕನ ಕೃಪೆಯಿನ್ನೇನು14
ಭಜಕರ ಮುಖದಿಂದೆಲ್ಲ ತಾನು ಭೂ-
ಭುಜನಾಗಿ ನಡೆಸುವನಿದನೆಲ್ಲನು
ನಿತ್ಯ ಸಾಕಾರವನು ತೋರಿ
ತ್ರಿಜಗವನೆಲ್ಲ ರಕ್ಷಿಸುತಿಹನು15
ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ-
ದೊಡೆಯ ಪೊರಡುವ ಕಾಲದಿ ಭಾರಿ
ಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥ
ಕಡು ಬೆಡಗನು ಉಸುರೆಲೆ ಬಾಲೆ16
ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮ
ತನುವಿಗೆ ಸೋಂಕಲದನೆಲ್ಲವ
ಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ-
ಧ್ವನಿಯೆಸಗಿದರು ಕೇಳಿದರಂದವ17
ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು-
ಬರುವನು ವೇದನಿನಾದದಲಿ
ವರರತ್ನ ಖಚಿತ ಮಂಟಪದಲ್ಲಿ ನಿಂತ
ನಿರವದಿ ಸುಖದಾಯಕನಲ್ಲಿ18
ಶರಣರ ಪಾಪ ಮನಕೆ ತಾರ ದುಡಿದ
ವರ ಭೇರಿಗೆರೆವ ಬಿಸಿನೀರ
ವರಲಕ್ಷ್ಮೀನಾರಾಯಣಧೀರ ಸುರು-
ಚಿರ ಸಿಂಹಾಸನವೇರಿದ ವೀರ19