ಎಷ್ಟು ಪರೀಕ್ಷಿಸಿ ನೋಡುವೆಯೋ ಇನ್ನು
ಎಷ್ಟು ಶೋಧಿಸೆ ನಿನಗಿಷ್ಟವೋ ರಂಗಾ ಪ
ಹಣವಿರುವನಕ ಕುಣಿಕುಣಿದು ಮೆರೆದೆನೊ
ಹಣವನಪಾತ್ರಕೆ ಮಣಿದು ಕಳೆದೆನೋ
ಋಣವಮಾಡಿ ಯೆನ್ನ ಬಣಗುಹೊಟ್ಟೆಯ ಹೊರೆದೆ
ಉಣಲುಡಲಿಲ್ಲದೆ ನೋಡದವೋಲಲೆದೇ 1
ಹೆಣ್ಣು ಹೊನ್ನು ಮಣ್ಣು ಕಣ್ಣಿಗಿಂಪಾಗಲು
ಬಣ್ಣಿಸಿ ಭಾಗ್ಯವನುಣ್ಣಲು ಬಯಸಲು
ಬೆಣ್ಣೆಯಂತಿದ್ದುದು ಸುಣ್ಣವಾಯಿತೊ ದೇವ
ಕಣ್ಣು ಮಂಜಾಗಿ ಮೈಗಿಣ್ಣು ಮುರಿಯಿತಿನ್ನು 2
ಬಹು ಜನುಮದಿ ಸಂಗ್ರಹಿಸಿದ ಪಾತಕ
ಬೃಹದಾಕಾರವಾಗಿದ್ದು ರಂಗಯ್ಯ
ಅಹಿಶಯನನೆ ನಿನ್ನ ಮಹಿಮೆಯಿಂದೆಲ್ಲವು
ದಹಿಸುವುದೆಂದು ನಂಬಿದೆ ಮಾಂಗಿರೀಶ 3