ಹಸಿದು ನಾ ಬಳಲಲೇಕೋ ಈಸಮಯದಲ್ಲಿ
ಬಿಸಿಯೂಟ ಮಾಡುವೆನು ಪ
ಹಸನಾದ ಶೇಷಶಯನ ನಾಮದಡುಗೆಯು
ವಸುಮತೀಧವ ನಾಮರಸಾಯನವಿರೆ ಅ.ಪ
ಹರಿ ಹರಿ ಪರಮಾನ್ನವು ದುರಿತಾರಿ ಶೌರಿ
ಕರಿಗಡುಬು ಗರುಗೊಬ್ಬಟ್ಟು
ನರಸಿಂಹ ವಾಮನ ಅಂಬೊಡೆ ಹೂರಿಗೆಗಳು
ಕರಿವರದ ರವೆಯುಂಡೆ ಸಜ್ಜಿಗೆಯಿರಲು 1
ದುಷ್ಟಮರ್ದನನೆನ್ನುವ ಇಷ್ಟವಾದ
ಹುಳಿಸಾರು ಮೊಸರುಗಳು
ವಾಸುದೇವ ಸಣ್ಣಕ್ಕಿಯನ್ನವು
ಮಾಧವ ಬೆಣ್ಣೆಕಾಯ್ಸಿದ ತುಪ್ಪವಿದೆ 2
ನಾರಾಯಣನೆನ್ನುವ ಸಾರವಾದ
ಹುಳಿಯನ್ನ ಮೊಸರನ್ನವು
ಸಾರಸಾಕ್ಷ ಶ್ರೀಶ ಕ್ಷೀರ ಸಕ್ಕರೆಯಿದ್ದು
ಮಾರಜನಕನೆಂಬ ಹಪ್ಳಳುಪ್ಪಿನಕಾಯಿರೆ3
ಪರಿಪರಿಯನ್ನಗಳು ಸರಿಯಾಗಿ ಭಕ್ಷ್ಯ
ಕರಿದೆಡೆ ಮಾಡಿರಲು
ಅರಿತು ಸವಿಯನೋಡಿ ಮರೆಯದೆ ಭುಂಜಿಸಿ
ನಿರುತ ನಿಜಾನಂದ ಪಡೆಯದೆ ಬರಿದೆ 4
ಗೋಪಾಲನೆಂದೆಂಬೊ ಸೀಪಿನ ಎಳನೀರು
ಸೀ ಪಾನಕವಿಹುವು
ತಾಪತ್ರಯಹರ ಹೆಜ್ಜಾಜಿಕೇಶವ
ಆಪದುದ್ಧಾರಕನೆಂಬಮೃತವುಣದೆ 5