ಬರುತಾದೋ ಪದ ಬರುತಾದೋ ಪ
ಪದುಮನಾಭನ ದಿವ್ಯಸದಮಲಪಾದದ
ವಿಧವಿಧ ಮಹಿಮೆಯಯ ಪೊಗಳಿ ಬಾಳುವ ಪದ ಅ.ಪ
ಛಂದಸ್ಸು ಮೀಮಾಂಸೆ ಅಂದದ ಯತಿಗಣ
ಒಂದು ನಾನರಿಯದೆ ಸಂದೇಹಮಿಲ್ಲದೆ
ಮಂದರಧರನಡಿ ಒಂದೇ ತ್ರಿಭುವಿಗೆ ಮಿಗಿ
ಲೆಂದು ಪಾಡುತಲಾನಂದ ಪಡೆಯುವ ಪದ 1
ಸಕಲರು ತೆಗೆದಿಟ್ಟ ಅಕತಪಚಟಯೆಂಬ
ವಖಿಲಮಂ ಗಣಸದೆ ಪ್ರಕಟಮಿನಿತಿಲ್ಲದೆ
ಅಕಟಕಟೆನ್ನುತ ನಿಖಿಲವ್ಯಾಪಕನಂಘ್ರಿ
ಭಕುತಿಯಿಂ ಭಜಿಸುತ ಮುಕುತಿ ಪಡೆಯುವ ಪದ 2
ಅಳುಕದೆ ಲೌಕಿಕ ತಿಳೆಸುಖಕೆಳಸದೆ
ಮಲಿನದಿ ಸಿಲ್ಕದೆ ಚಲನವಲನಿಲ್ಲದೆ
ಜಲಜಾಕ್ಷ ಭಕ್ತರ ಸುಲಭ ಶ್ರೀರಾಮನಂ
ಒಲಿಸಿ ಪ್ರಾರಬ್ಧವ ಗೆಲಿದು ನಲಿಯುವ ಪದ 3